
ಯಶಸ್ವಿ ದಾಂಪತ್ಯ ಹಾಗೂ ದೀರ್ಘ ದಾಂಪತ್ಯಕ್ಕೆ ಪ್ರತಿ ನಿತ್ಯದ ಪರಿಶ್ರಮ, ಪ್ರಯತ್ನ ಮುಖ್ಯ. ದಂಪತಿ ಇಡೀ ದಿನ ಬ್ಯುಸಿಯಾಗಿರ್ತಾರೆ. ಮನೆ, ಮಕ್ಕಳು, ಕೆಲಸ ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವ ಜೋಡಿಗೆ ಪರಸ್ಪರ ಸಮಯ ನೀಡಲು ಸಾಧ್ಯವಾಗೋದಿಲ್ಲ. ಆದ್ರೆ ನಿಮಗಾಗಿಯೇ ಮಾರ್ನಿಂಗ್ ಇದೆ ಅನ್ನೋದನ್ನು ಮರೆಯಬೇಡಿ. ಬೆಳಿಗ್ಗೆ ನೀವು ನಿಮ್ಮ ಅಭ್ಯಾಸದಲ್ಲಿ ಕೆಲ ಬದಲಾವಣೆ ಮಾಡಿಕೊಂಡಲ್ಲಿ ದಾಂಪತ್ಯ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಮುಕ್ತ ಸಂವಹನದ ಜೊತೆಗೆ ಪ್ರೀತಿ, ಮೆಚ್ಚುಗೆ ನಿಮ್ಮ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ, ಗೌರವವನ್ನು ಹೆಚ್ಚಿಸುವ ಜೊತೆಗೆ ಬಲವಾದ ಅಡಿಪಾಯವನ್ನು ನೀಡುತ್ತದೆ. ನಾವಿಂದು ದಂಪತಿ ಮಾರ್ನಿಂಗ್ ಹೇಗಿರಬೇಕು ಎಂಬುದನ್ನು ಹೇಳ್ತೇವೆ.
ಎರಡು ಮ್ಯಾಜಿಕ್ (Magic) ಪದ ಬಳಕೆ ಮಾಡಿ : ಅಕ್ಕಪಕ್ಕದ ಮನೆಯವರು ಬೆಳಿಗ್ಗೆ ಎದುರಿಗೆ ಬಂದ್ರೆ ಗುಡ್ ಮಾರ್ನಿಂಗ್ (Good Morning ) ಅನ್ನೋದನ್ನು ನಾವು ಮರೆಯೋದಿಲ್ಲ. ಬೆಳಿಗ್ಗೆ ಹಾಸಿಗೆಯಿಂದ ಏಳುವ ಮೊದಲೇ ವಾಟ್ಸ್ ಅಪ್ (WhatsUp ) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗುಡ್ ಮಾರ್ನಿಂಗ್ ಸಂದೇಶವನ್ನು ರವಾನೆ ಮಾಡಿರ್ತೇವೆ. ಆದ್ರೆ ಪಕ್ಕದಲ್ಲಿರುವ ಸಂಗಾತಿಗೆ ಗುಡ್ ಮಾರ್ನಿಂಗ್ ಹೇಳೋದಿಲ್ಲ. ಪ್ರತಿ ದಿನ ನಮ್ಮ ಜೊತೆಗೇ ಇರುವ ಕಾರಣ ನಾವವರಿಗೆ ಹೆಚ್ಚು ಆದ್ಯತೆ ನೀಡೋದಿಲ್ಲ. ಆದ್ರೆ ನಿಮ್ಮ ದಾಂಪತ್ಯ ಗಟ್ಟಿಯಾಗ್ಬೇಕೆಂದ್ರೆ ನೀವು ನಿಮ್ಮ ಸಂಗಾತಿಗೆ ಪ್ರತಿ ದಿನ ಬೆಳಿಗ್ಗೆ ಶುಭೋದಯ ವಿಶ್ ಮಾಡಿ. ಈ ಶುಭಾಶಯಗಳು ಸಕಾರಾತ್ಮಕ ಆರಂಭವನ್ನು ನೀಡುತ್ತದೆ. ಇಬ್ಬರ ಮಧ್ಯೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ.
'ಒಂದು ಶನಿವಾರ ನನಗೆ ಕೊಡ್ತಿಯಾ..?': ಪತ್ನಿ ಧನಶ್ರೀನ ಹೀಗೆ ಪ್ರಪೋಸ್ ಮಾಡಿ ಪಟಾಯಿಸಿದ ಚಹಲ್!
ಇದಲ್ಲದೆ ಕಚೇರಿಗೆ ಅಥವಾ ಮನೆಯಿಂದ ಹೊರಗೆ ಹೋಗುವ ವೇಳೆ ಸಂಗಾತಿಗೆ ಬೈ ಹೇಳೋದನ್ನು ಮರೆಯಬೇಡಿ. ಇದು ಅವರಿಗೆ ನೀವು ಎಷ್ಟು ಮಹತ್ವ ನೀಡ್ತೀರಿ ಎಂಬುದನ್ನು ಹೇಳುತ್ತೆ. ಇಡೀ ದಿನ ಅವರಲ್ಲೊಂದು ಖುಷಿ ಮನೆ ಮಾಡಿರುತ್ತದೆ.
ಬೆಡ್ ಟೀ/ ಕಾಫಿ/ ಉಪಹಾರ ಒಟ್ಟಿಗೆ ಇರಲಿ: ಮಧ್ಯಾಹ್ನ ಇಬ್ಬರೂ ಒಟ್ಟಿಗೆ ಆಹಾರ ಸೇವನೆ ಮಾಡೋದು ನಗರ ಪ್ರದೇಶಗಳಲ್ಲಿ ಸಾಧ್ಯವಿಲ್ಲ. ರಾತ್ರಿ ಕೂಡ ಅನೇಕರಿಗೆ ಇದು ಸಾಧ್ಯವಾಗೋದಿಲ್ಲ. ಬೆಳಿಗ್ಗೆ ಸಮಯ ಹೊಂದಿಸಿಕೊಂಡು ಇಬ್ಬರೂ ಒಟ್ಟಿಗೆ ಉಪಹಾರ ಸೇವನೆ ಮಾಡ್ಬಹುದು. ಒಂದ್ವೇಳೆ ಅದಕ್ಕೆ ಟೈಂ ಇಲ್ಲ ಎನ್ನುವವರು ಬೆಡ್ ಟೀಯನ್ನಾದ್ರೂ ಒಟ್ಟಿಗೆ ಸೇವನೆ ಮಾಡಿ. ಈ ಸಮಯದಲ್ಲಿ ಇಬ್ಬರು ಒಟ್ಟಿಗೆ ಕುಳಿತು ಮಾತನಾಡ್ಬಹುದು. ಇದು ನಿಮ್ಮನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತದೆ. ಸಂಬಂಧಕ್ಕೊಂದು ಅರ್ಥ ನೀಡುತ್ತದೆ. ಇಬ್ಬರ ಮಧ್ಯೆ ಅರ್ಥಪೂರ್ಣ ಮಾತು, ತಮಾಷೆ, ನಗು ಇಬ್ಬರನ್ನು ಸಂಪರ್ಕಿಸುತ್ತದೆ. ನಿಮ್ಮ ಆಲೋಚನೆ, ಯೋಜನೆಗಳನ್ನು ಹಂಚಿಕೊಳ್ಳಲು ಇದು ಒಳ್ಳೆ ಅವಕಾಶ. ನೀವು ಹೀಗೆ ಮಾಡಿದಲ್ಲಿ ಭಾವನಾತ್ಮಕ ಬಂಧ ಬಲಗೊಳ್ಳುತ್ತದೆ.
ಇನ್ಮುಂದೆ ಸಂಗಾತಿಯೇ ಬೇಕಾಗಿಲ್ಲ ಮಾರುಕಟ್ಟೆಗೆ ಬರಲಿದೆ AI ಸೆಕ್ಸ್ ರೋಬೋಟ್!
ಕೃತಜ್ಞತೆ ಸಲ್ಲಿಸಿ : ಸಂಗಾತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ಜೀವನದಲ್ಲಿ ಅವರ ಉಪಸ್ಥಿತಿಯನ್ನು ಅಂಗೀಕರಿಸಲು ಮತ್ತು ಪ್ರಶಂಸಿಸಲು ಇದು ಒಳ್ಳೆಯ ಸಮಯ. ಧನ್ಯವಾದ, ಮೆಚ್ಚುಗೆ ಮಾತುಗಳನ್ನು ನೀವು ಪತ್ರದ ಮೂಲಕ, ಸಣ್ಣ ಚೀಟಿಯಲ್ಲಿ ಇಲ್ಲವೆ ಸಂದೇಶದಲ್ಲಿ ಕಳುಹಿಸಬಹುದು.
ಈ ಚಟುವಟಿಕೆಯನ್ನು ಒಟ್ಟಿಗೆ ಮಾಡಿ : ಬೆಳಿಗ್ಗೆ ವ್ಯಾಯಾಮ, ಧ್ಯಾನ, ವಾಕಿಂಗ್ ಸೇರಿದಂತೆ ಯಾವುದೇ ಕೆಲಸ ಮಾಡುವಾಗ್ಲೂ ನೀವು ಒಟ್ಟಿಗೆ ಸೇರಿ ಮಾಡಿ. ಬೆಳಿಗ್ಗೆ ಮಧುರ ಸಂಗೀತವನ್ನು ಇಬ್ಬರೂ ಕುಳಿತು ಕೇಳ್ಬಹುದು.
ಪ್ರೀತಿ ವ್ಯಕ್ತಪಡಿಸೋದು ಮುಖ್ಯ : ದಾಂಪತ್ಯ ಎಷ್ಟೇ ಹಳೆಯದಾಗಿರಲಿ ಪ್ರೀತಿ ವ್ಯಕ್ತಪಡಿಸೋದು ಮುಖ್ಯ. ತಬ್ಬಿಕೊಂಡು, ಚುಂಬಿಸಿ ಅಥವಾ ಕೈ ಹಿಡಿದು ಹೀಗೆ ನಿಮ್ಮದೇ ವಿಧಾನದಲ್ಲಿ ನೀವು ದೈಹಿಕ ಪ್ರೀತಿಯನ್ನು ನಿಮ್ಮ ಸಂಗಾತಿಗೆ ತೋರಿಸಿ. ದೈಹಿಕ ಸ್ಪರ್ಶವು ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇಬ್ಬರ ಮಧ್ಯೆ ನಿಕಟತೆ ಹೆಚ್ಚಿಸುತ್ತದೆ.
ಗುಣಮಟ್ಟದ ಸಮಯ ಕಳೆಯಿರಿ : ಬೆಳಿಗ್ಗೆ ನೀವು ಸಂಗಾತಿ ಜೊತೆ ಗುಣಮಟ್ಟದ ಸಮಯ ಕಳೆಯಿರಿ. ಸಂಗಾತಿ ಮಾತುಗಳನ್ನು ಕೇಳಿ. ನೀವು ಹೇಳಬೇಕಾದ ಸಂಗತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಹೇಳಿ. ದಿನಚರಿಯ ಬಗ್ಗೆ ಚರ್ಚಿಸಿ. ಬೆಳಿಗ್ಗೆ ನೀವು ಮಾಡುವ ಈ ಸಣ್ಣ ಸಣ್ಣ ಕೆಲಸಗಳು ನಿಮ್ಮ ದಾಂಪತ್ಯಕ್ಕೊಂದು ಮೆರಗು ನೀಡುತ್ತವೆ ಎಂಬುದನ್ನು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.