ಬಹಳ ಬಾರಿ ಯುವತಿಯರು ಯುವಕರಿಗೆ ಆಕರ್ಷಕವಾಗಿರಬೇಕೆಂದು ಮಾಡುವ ಕೆಲ ಕೆಲಸಗಳು, ಪೂರ್ತಿ ಉಲ್ಟಾ ಪರಿಣಾಮ ಬೀರುತ್ತಿರುತ್ತವೆ. ಅಂಥ ನಡೆನುಡಿಗಳು ಯಾವುವು ಅಂಥ ಕೇಳಿದ್ರೆ ಆಶ್ಚರ್ಯಪಡ್ತೀರಿ.
ನೀವು ಅವರನ್ನು ಆಕರ್ಷಿಸಬೇಕೆಂದೇ, ಅವರಿಗೆ ಆಸಕ್ತಿರವಾಗಿ ಕಾಣಿಸಬೇಕೆಂದೇ ಅಂಥದೊಂದು ವರ್ತನೆ ತೋರಿರುತ್ತೀರಿ, ಅಂಥದೊಂದು ಕೆಲಸ ಮಾಡಿರುತ್ತೀರಿ. ಆದರೆ, ಯಾರನ್ನು ಆಕರ್ಷಿಸಬೇಕೆಂದಿರುತ್ತೀರೋ ಅವರಿಗೆ ನಿಮ್ಮ ಆ ನಡೆಯೇ ಇಷ್ಟವಾಗದೆ ಹೋಗುತ್ತಿರಬಹುದು. ಇಂಥವು ಬಹಳಷ್ಟು ಆಗುತ್ತಿರುತ್ತವೆ, ಆದರೆ ಹುಡುಗಿಯರ ಗಮನಕ್ಕೆ ತಾವೆಲ್ಲಿ ಎಡವುತ್ತಿದ್ದೀವೆಂದೇ ಗೊತ್ತಿರುವುದಿಲ್ಲ. ಯಾವುದು ಹುಡುಗರಿಗೆ ಅನಾಕರ್ಷಕವಾಗಿ ಕಾಣಿಸುತ್ತದೆಂದು ಗೊತ್ತಿದ್ದರೆ ಅವುಗಳಿಂದ ದೂರ ಉಳಿಯಬಹುದಲ್ಲವೇ?
ಮಿಣಮಿಣ ಮೇಕಪ್ ಮಣಗಟ್ಟಲೆ
ನೀವು ಮುಖವನ್ನು ಕಲೆರಹಿತವಾಗಿಸಲು, ಬಿಳಿಯಾಗಿ ಕಾಣಬೇಕೆಂದು ಕನ್ಸೀಲರ್, ಫೌಂಡೇಶನ್, ಐಶಾಡೋ, ಐಲೈನರ್, ಮಸ್ಕಾರಾ, ಲಿಪ್‌ಸ್ಟಿಕ್, ಬ್ಲಶ್ ಹೀಗೆ ಬಹಳಷ್ಟನ್ನು ಬಳಿದುಕೊಳ್ಳಬಹುದು. ಆದರೆ, ಹೀಗೆ ದಪ್ಪಗೆ ಮೇಕಪ್ ಮಾಡಿಕೊಳ್ಳುವುದು ಬಹಳಷ್ಟು ಹುಡುಗರಿಗೆ ಇಷ್ಟವಾಗುವುದಿಲ್ಲ. ಅದು ಅವರ ಅಟೆನ್ಷನ್ ಸೆಳೆಯಬಹುದು. ಆದರೆ, ಆಕರ್ಷಿಸುವುದಿಲ್ಲ. ಬದಲಿಗೆ ಸಿಂಪಲ್ ಆಗಿರುವುದು, ಸಿಂಪಲ್ ಆಗಿ ಸಿಂಗಾರ ಮಾಡಿಕೊಳ್ಳುವುದು ಹೆಚ್ಚು ಸೆಳೆಯುತ್ತದೆ.
undefined
ಅತಿಯಾದ ಮೇಕ್‌ಓವರ್
ಯಾರಾದರೂ ಹುಡುಗ ನಿಮ್ಮನ್ನು ಇಷ್ಟಪಟ್ಟರೆ ನೀವು ಹೇಗಿರುವಿರೋ ಹಾಗೆಯೇ ಇಷ್ಟಪಟ್ಟಿರುತ್ತಾನೆ. ನೀವು ಅವರಿಗಾಗಿ ಬದಲಾಗುವುದನ್ನು ಅವನು ಬಯಸುವುದಿಲ್ಲ. ಹುಡುಗರಿಗೆ ತಾನು ಹೇಗೇ ಇದ್ದರೂ ಆ ಬಗ್ಗೆ ಕಾನ್ಫಿಡೆನ್ಸ್ ಆಗಿರುವ ಆತ್ಮವಿಶ್ವಾಸ ಆಕರ್ಷಕವೆನಿಸುತ್ತದೆಯೇ ಹೊರತು, ಕೀಳರಿಮೆಯಿಂದಾಗಿ ತನ್ನ ಅಂದಚೆಂದ ಬದಲಾಯಿಸಿಕೊಳ್ಳಲು ಪ್ಲ್ಯಾಸ್ಟಿಕ್ ಸರ್ಜರಿ ಮೊರೆ ಹೋಗುವುದು, ತೂಕ ಇಳಿಸಲು ಅಥವಾ ಏರಿಸಲು ಅತಿಯಾದ ಡಯಟ್ ಮೊರೆ ಹೋಗುವುದು, ಬೆಳ್ಳಗಾಗಬೇಕೆಂದು ಕಂಡ ಕಂಡ ಕ್ರೀಂಗಳನ್ನೆಲ್ಲ ಹಚ್ಚುವ ವ್ಯಾಧಿ- ಹೀಗೆ ತನ್ನನ್ನು ತಾನಿರುವಂತೆಯೇ ಒಪ್ಪಿಕೊಳ್ಳದ ಹುಡುಗಿಯನ್ನು ಹುಡುಗರಾದರೂ ಏಕೆ ಒಪ್ಪುತ್ತಾರೆ?
ಗಾಸಿಪ್ ಮಾಡುವುದು
ನಿಮ್ಮ ಗೆಳೆಯರು, ನೆಂಟರಿಷ್ಟರು, ಸಹೋದ್ಯೋಗಿಗಳು ಮುಂತಾದವರ ಕುರಿತ ಇತ್ತೀಚಿನ ಗಾಸಿಪ್, ಹಗರಣಗಳು, ಕತೆಗಳನ್ನು ನಿಮ್ಮಿಷ್ಟದ ಹುಡುಗನೊಂದಿಗೆ ಹೇಳುವಾಗ ನಾನೇನೋ ಬಹಳ ಆಸಕ್ತಿಕರ ವಿಷಯ ಹೇಳುತ್ತಿದ್ದೀನಿ ಎಂಬ ಮನಸ್ಥಿತಿ ನಿಮ್ಮದಾಗಿರಬಹುದು. ಆದರೆ, ಗಾಸಿಪ್ ಹೊಡೆವ ಹುಡುಗಿ ಎಂದರೆ ಬಹುತೇಕ ಹುಡುಗರಿಗೆ ಇಷ್ಟವಾಗುವುದಿಲ್ಲ. ನೀವು ಅವನೊಂದಿಗೆ ಮಾತಾಡಲು ವಿಷಯ ಬೇಕು ಎಂದುಕೊಂಡು ಹೇಳುತ್ತಿರಬಹುದು, ಆದರೆ ಇತರರ ಬಗ್ಗೆ ಅತಿ ಕುತೂಹಲದ ಕತೆ ಹೇಳುವುದು ಒಳ್ಳೆಯ ಅಭ್ಯಾಸವಲ್ಲ. ಇದು ನಿಮ್ಮಲ್ಲಿ ಸೆಲ್ಫ್ ಎಸ್ಟೀಮ್ ಕಡಿಮೆ ಇರುವುದನ್ನು ತೋರಿಸುತ್ತದೆ. ತಮ್ಮನ್ನು ಮೇಲೆ ಎಂದು ತೋರಿಸಿಕೊಳ್ಳಲು ಇತರರ ಬಗ್ಗೆ ಕೀಳುಕತೆಗಳನ್ನು ಹೇಳುವ ಹುಡುಗಿಯರು ಆಕರ್ಷಕವೆನಿಸುವುದಿಲ್ಲ. ಬದಲಿಗೆ ತಮ್ಮ ಬಗ್ಗೆಯೂ, ಇತರರ ಬಗ್ಗೆಯೂ ಒಳ್ಳೆಯದು ಮಾತಾಡುವವರು ಎಲ್ಲರಿಗೂ ಇಷ್ಟವಾಗುತ್ತಾರೆ.
ಸ್ವಂತಕ್ಕಾಗಿ ಸಮಯ ಕೊಡದವರು
ನೀವು ಸಂಬಂಧದಲ್ಲಿ ಖುಷಿಯಾಗಿರಬಹುದು, ಆದರೆ, ನಿಮ್ಮ ಹುಡುಗ 24/7 ನಿಮ್ಮ ಜೊತೆಯೇ ಇರಬೇಕು, ಮಾತಾಡುತ್ತಿರಬೇಕು ಎನ್ನುವಂಥ ನಿರೀಕ್ಷೆಗಳನ್ನು ತೋರಿದರೆ ಅದು ಹುಡುಗರಿಗೆ ಇಷ್ಟವಾಗುವುದಿಲ್ಲ. ಎಲ್ಲರಿಗೂ ವೈಯಕ್ತಿಕ ಸಮಯ ಬೇಕಾಗುತ್ತದೆ. ಹುಡುಗಿಯೂ ಕೂಡಾ ತನ್ನ ಖಾಸಗಿ ಸಮಯವನ್ನು ತೆಗೆದುಕೊಂಡು ಅದನ್ನು ತನ್ನ ಹವ್ಯಾಸಗಳಿಗಾಗಿ ಬಳಸುತ್ತಿದ್ದರೆ, ಇತರರೊಂದಿಗೆ ಬೆರೆಯಲು ಬಳಸುತ್ತಿದ್ದರೆ ಅಂಥ ಹುಡುಗಿ ಹೆಚ್ಚು ಆಕರ್ಷಕವೆನಿಸುತ್ತಾಳೆ.
ನಿಮಗೆ ಕೇಕ್ ಇಷ್ಟವಿರಬಹುದು. ಹಾಗಂಥ ಇಡೀ ದಿನ ಅದನ್ನೇ ತಿನ್ನಲು ಸಾಧ್ಯವಿಲ್ಲ ಅಲ್ಲವೇ?
ಓವರ್ ಕಾನ್ಫಿಡೆನ್ಸ್
ಆತ್ಮವಿಶ್ವಾಸ ಇಲ್ಲದ್ದು ಎಷ್ಟು ಅನಾಕರ್ಷಕವೋ, ಅತಿಯಾದ ಆತ್ಮವಿಶ್ವಾಸವೂ ಅಷ್ಟೇ ಅನಾಕರ್ಷಕವೆನಿಸುತ್ತದೆ. ನೀವು ಖಂಡಿತಾ ನಿಮ್ಮನ್ನು ನಂಬಬೇಕು, ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಕು- ಆದರೆ ಅದನ್ನು ಅತಿಯಾಗಿ ಶೋ ಆಫ್ ಮಾಡುವುದು, ಇಲ್ಲವೇ ಅತಿಯಾದ ಆತ್ಮವಿಶ್ವಾಸ ಹುಡುಗರಿಗೆ ಟರ್ನ್ ಆಫ್ ಆಗಿರುತ್ತದೆ. ತಮ್ಮನ್ನು ತಾವು ಅತಿಯಾಗಿ ಹೊಗಳಿಕೊಳ್ಳುವವರಿಗೆ ಅದರ ಬಗ್ಗೆ ಇತರರು ತೋರುವ ನಕಾರಾತ್ಮಕ ಪ್ರತಿಕ್ರಿಯೆಗಳು ಅರಿವಿಗೇ ಬಾರುವುದಿಲ್ಲ ಎಂದು ಅಧ್ಯಯನಗಳೂ ತಿಳಿಸಿವೆ. ಯಾವ ಹುಡುಗರಿಗೂ ನೀವೆಷ್ಟು ಅದ್ಭುತ ಎಂದು ಬಾಯಿ ಬಿಟ್ಟು ಹೇಳುವ ಅಗತ್ಯವಿರುವುದಿಲ್ಲ. ಅದನ್ನವರೇ ಕಂಡುಕೊಳ್ಳುತ್ತಾರೆ.
ಜೀವನದಲ್ಲಿ ಆಸೆ, ಗುರಿಗಳಿಲ್ಲದಿರುವುದು
ನಿಮಗೆ ಜೀವನದಲ್ಲಿ ಯಾವುದೇ ನಿರ್ದಿಷ್ಟ ಗುರಿ ಇಲ್ಲದೆ, ಸುಮ್ಮನೆ ಒಳ್ಳೆಯ ಹುಡುಗನನ್ನು ಮದುವೆಯಾಗಿ ಆರಾಮಾಗಿರಬೇಕು ಎಂಬಷ್ಟೇ ಕನಸಿದ್ದರೆ ಅದು ಯಾವ ಹುಡುಗರಿಗೂ ಆಕರ್ಷಕವೆನಿಸುವುದಿಲ್ಲ. ಬದಲಿಗೆ ನಿಮ್ಮದೇ ಆದ ಸ್ವಂತ ಗುರಿಗಳು, ಆಸೆಕನಸುಗಳಿರಬೇಕು, ಅವನ್ನು ತಲುಪಲು ಪ್ರಯತ್ನ ಹಾಕುತ್ತಿರಬೇಕು, ಸಾಧಿಸುವ ಛಲವಿರಬೇಕು. ಅಂಥ ಹುಡುಗಿಯರು ಹುಡುಗರಿಗೆ ಇಷ್ಟವಾಗುತ್ತಾರೆ. ತಮ್ಮ ಮೇಲೆ ಪೂರ್ತಿ ಅವಲಂಬನೆ ಬಯಸುವವರಲ್ಲ. ಹೆಗಲಿಗೆ ಹೆಗಲು ಕೊಡುವ ಸಾಮರ್ಥ್ಯದ ಹುಡುಗಿಯರು ಅವರಿಗಿಷ್ಟ. ಅದರಲ್ಲೂ ಆತನಿಗೆ ತನ್ನ ಜೀವನದ ಬಗ್ಗೆ ಸ್ಪಷ್ಟತೆ ಇದ್ದಾಗಲಂತೂ ಆತ ಕನಸಿರದ, ಗುರಿಯಿರದ, ಗೊಂದಲದ ಗೂಡಾಗಿರುವ ಹುಡುಗಿಯನ್ನು ಬಯಸಲು ಸಾಧ್ಯವೇ ಇಲ್ಲ.
ಎಕ್ಸ್ ಬಗ್ಗೆ ಕೆಟ್ಟ ಮಾತುಗಳು
ಎಕ್ಸ್ ಬಗ್ಗೆ ಕೆಟ್ಟ ಮಾತುಗಳನ್ನಾಡುವುದರಿಂದ ನೀವು ಅವನನ್ನು ದ್ವೇಷಿಸುತ್ತೀರಿ, ಮತ್ತೆ ಆತನ ಬಳಿ ಹೋಗಲು ಸಾಧ್ಯವೇ ಇಲ್ಲ ಎಂಬಂಥ ಇಂಪ್ರೆಶನ್ನನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರಬಹುದು. ಆದರೆ ಹೊಸ ಹುಡುಗನಿಗೆ ಈ ನಿಮ್ಮ ವರ್ತನೆ ನಿಮ್ಮ ಬಗ್ಗೆಯೇ ಕೆಟ್ಟ ಚಿತ್ರಣ ಕಟ್ಟಿಕೊಡುತ್ತದೆ. ಅಲ್ಲದೆ, ನೀವಿನ್ನೂ ಅವನ ನೆನಪಲ್ಲೇ ಓಡಾಡುತ್ತಿರುವಂತೆ ತೋರುತ್ತದೆ. ಬದಲಿಗೆ ಹಳೆಯದರ ಬಗ್ಗೆ ಮಾತನಾಡದಿರಿ, ಮಾತನಾಡಿದರೂ ಒಳ್ಳೆಯದಷ್ಟನ್ನೇ ಆಡಿ.