ಅಮ್ಮನನ್ನು ಪ್ರೀತ್ಸೋದು ಹೇಗೆಂದು AI ಹೇಳಬಹುದು, ಆದರೆ, AI ಇಂದ ಅಮ್ಮನನ್ನು ಪ್ರೀತಿಸೋಕೆ ಆಗಲ್ಲ: ಸುಧಾಮೂರ್ತಿ

Published : Jan 30, 2025, 05:56 PM ISTUpdated : Jan 30, 2025, 06:18 PM IST
ಅಮ್ಮನನ್ನು ಪ್ರೀತ್ಸೋದು ಹೇಗೆಂದು AI ಹೇಳಬಹುದು, ಆದರೆ, AI ಇಂದ ಅಮ್ಮನನ್ನು ಪ್ರೀತಿಸೋಕೆ ಆಗಲ್ಲ: ಸುಧಾಮೂರ್ತಿ

ಸಾರಾಂಶ

ಜೈಪುರ ಸಾಹಿತ್ಯ ಉತ್ಸವದಲ್ಲಿ ಸುಧಾ ಮೂರ್ತಿ ಅವರು ಎಐ ಬಗ್ಗೆ ಮಾತನಾಡಿದರು. ಎಐ ತಂತ್ರಜ್ಞಾನದಲ್ಲಿ ಸಹಾಯಕವಾಗಿದ್ದರೂ, ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಕಥೆ ಹೇಳುವುದು ಹೃದಯದಿಂದ ಬರುತ್ತದೆ, ಎಐನಿಂದ ಅಲ್ಲ ಎಂದು ಅವರು ಹೇಳಿದರು.

ಜೈಪುರ (ಜ.30): ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಗುರುವಾರ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಡೆದ ಸಂವಾದದಲ್ಲಿ ಅವರು ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ವೇಳೆ ಭವಿಷ್ಯದ ದಿನಗಳಲ್ಲಿ ಎಐನಿಂದ ಆಗಬಹುದಾದ ಅಪಾಯಗಳ ಬಗ್ಗೆ ಹುಡುಗಿಯೊಬ್ಬಳು ಪ್ರಶ್ನೆ ಮಾಡಿದ್ದರು. ಇಂದಿನ ಜಗತ್ತಿನಲ್ಲಿ ದಿನನಿತ್ಯದ ವಿಚಾರಗಳಲ್ಲಿ ಎಐ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಆದರೆ, ಎಐನಿಂದ ಕಥೆ ಹೇಳುವಂಥ ಕಲೆ ಅಥವಾ ಶೈಲಿ ಬದಲಾಗಬಹುದೇ ಎಂದು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರ ನೀಡಿದ ಸುಧಾಮೂರ್ತಿ, 'ನಿನಗೆ ಎಷ್ಟು ವಯಸ್ಸು' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಹುಡುಗಿ ನನಗೆ 16 ವರ್ಷ ಎಂದಾಗ, ಬಹುಶಃ ನೀನು ನಿನ್ನ ತಾಯಿಯ ಪ್ರಶ್ನೆಯನ್ನು ಕೇಳುತ್ತಿದ್ದೀಯ. ಇರಲಿ ಹಾಗಿದ್ದರೂ ಇದಕ್ಕೆ ಉತ್ತರ ನೀಡುತ್ತೇನೆ ಎಂದು ಉತ್ತರ ನೀಡಲು ಆರಂಭಿಸಿದರು.

ಹೌದು ನೀನು ಹೇಳಿದ ಹಾಗೆ ಎಐ ತುಂಬಾ ಶಕ್ತಿಶಾಲಿ. ಇದು ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದ ಸಹಾಯ ಮಾಡುತ್ತದೆ. ಎಐನಿಂದ ನಿನ್ನ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಮುಂದೇನಾಗಲಿದೆ ಅನ್ನೋದನ್ನ ಪ್ರೆಡಿಕ್ಟ್‌ ಕೂಡ ಮಾಡಬಹುದು. ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬಲ್ಲುದು. ಆದರೆ, ಕಥೆ ಅನ್ನೋದು ಬರೋದು ಹೃದಯದಿಂದ. ಕ್ರಿಯಾಶೀಲತೆ ಅನ್ನೋದು ಬರೋದು ಹೃದಯದಿಂದ ಎಂದು ಹೇಳಿದರು.

ನಿನ್ನ ತಾಯಿಯನ್ನು ನೀನು ಎಷ್ಟು ಪ್ರೀತಿ ಮಾಡ್ತೀಯಾ ಅಥವಾ ನಿನ್ನ ತಾಯಿ ನಿನ್ನನ್ನು ಎಷ್ಟು ಪ್ರೀತಿ ಮಾಡ್ತಾಳೆ? ಜಗತ್ತಿನ ಯಾವ ಎಐನ ಆಲ್ಗೋರಿದಮ್‌ ಕೂಡ ಇದನ್ನು ಹೇಳಲು ಸಾಧ್ಯವಿಲ್ಲ. ಖುಷಿಯಾದಾಗ ಕಣ್ಣೀರು ಬರುತ್ತದೆ. ದುಃಖವಾದಾಗಲೂ ಕಣ್ಣೀರು ಬರುತ್ತದೆ. ಎಐ ನಿನ್ನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಾವನೆಗಳಿಗೆ ಯಾವುದೆಲ್ಲಾ ಕನೆಕ್ಟ್‌ ಆಗಿರುತ್ತದೆಯೋ ಅದನ್ನು ಎಐ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಎಐ ಅನ್ನೋದು ಭಾವನೆಗಳಿಲ್ಲದ ಒಂದು ತಂತ್ರಜ್ಞಾನ. ಆದರೆ, ಇದು ಕೆಲಸ ಕಾರ್ಯಗಳಲ್ಲಿ ಬಹಳ ಪರ್ಫೆಕ್ಟ್‌. ತಂತ್ರಜ್ಞಾನ ಬಾಧ್ಯತೆಯ ಮಷಿನ್‌. ಇವುಗಳನ್ನು ಹವಾಮಾನ ಮುನ್ಸೂಚನೆಗೆ, ಕೃಷಿ, ವಿನ್ಯಾಸ ಸೇರಿದಂತೆ ಇತರ ಕೆಲಸಗಳಲ್ಲಿ ಬಳಸಿಕೊಳ್ಳಬಹುದು. ಹಲವು ಆಧುನಿಕ ವಿಚಾರಗಳನ್ನು ಇವುಗಳಲ್ಲಿ ಮಾಡಬಹುದು. ಆದರೆ, ಇದನ್ನು ಹೃದಯದ ಬದಲಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಹೃದಯ ಅನ್ನೋದೇ ಭಿನ್ನ, ಮೆದುಳು ಅನ್ನೋದೇ ಭಿನ್ನ ಎಂದು ಹೇಳಿದ್ದಾರೆ.

ಮಕ್ಕಳು ಅಮ್ಮನನ್ನು ನೋಡಿ ಇದನ್ನೆಲ್ಲಾ ಕಲೀತಾರೆ ಅಂತಾರೆ ಸುಧಾ ಮೂರ್ತಿ! 

ಹನುಮಂತ ಸಂಜೀವಿನಿ ತಂದ ಕಥೆಯನ್ನು ಹೇಳುವ ಮೂಲಕ ಜೀವನದಲ್ಲಿ ಕಷ್ಟಗಳು ಬಂದಾಗ, ಕಷ್ಟಗಳಿಗಿಂತ ಎತ್ತರವಾಗಿ ನಾವು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರ. ಕಷ್ಟ ಬಂದಾಗ ಕಷ್ಟದ ಬಗ್ಗೆಯೇ ಯೋಚನೆ ಮಾಡೋದನ್ನ ಬಿಡಬೇಕು. ಕಷ್ಟಗಳು ಯಾರಿಗೆ ಇರೋದಿಲ್ಲ. ಅದಕ್ಕಿಂತಲೂ ಮೀರಿದ ವಿಚಾರಗಳ ಬಗ್ಗೆ ನಾವು ಗಮನ ನೀಡಬೇಕು ಎಂದಿದ್ದಾರೆ. ನಾವು ಬದುಕು ಬಂದಂತೆ ಸ್ವೀಕರಿಸೋದನ್ನ ಕಲಿಯಬೇಕು ಎಂದರು.

ಮಹಾಕುಂಭ ಮೇಳದಲ್ಲಿ ಸುಧಾ ಮೂರ್ತಿ, ಮೂರು ದಿನ ಪುಣ್ಯ ಸ್ನಾನ, ಪಿತೃಗಳಿಗೆ ತರ್ಪಣ ಅರ್ಪಿಸುವ ಸಂಕಲ್ಪ

ಕಾಲಿನ ಗಾಯದ ನಡುವೆಯೂ ಸಂವಾದದಲ್ಲಿ ಮಾತನಾಡಿದ ಸುಧಾ ಮೂರ್ತಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಸಂವಾದ ಆರಂಭಕ್ಕೂ ಮುನ್ನ ವೇದಿಕೆಯ ಮೇಲಿನ ಕುರ್ಚಿಯನ್ನು ಅಡ್ಜಸ್ಟ್‌ಮೆಂಟ್‌ ಮಾಡುವ ವೇಳೆ ಕೆಲ ಕಾಲ ಅವರು ನಿಂತುಕೊಂಡಿದ್ದರು. ಈ ವೇಳೆ ಶಿಕ್ಷಕಿಯಾಗಿದ್ದ ನನಗೆ ನಿಲ್ಲೋದು ಶಿಕ್ಷೆಯಲ್ಲ. ಅದು ವಿದ್ಯಾರ್ಥಿಗೆ ಮಾತ್ರವೇ ಶಿಕ್ಷೆ ಎಂದಾಗ ಸಂವಾದ ನಗೆಗಡಲಲ್ಲಿ ತೇಲಿತು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ