ಸಂಬಂಧ ಚೆನ್ನಾಗಿರಬೇಕು ಎಂದು ನಾವೆಲ್ಲರೂ ನಮ್ಮವರ ಕೆಲವು ವರ್ತನೆಗಳನ್ನ ಕಂಡೂ ಕಾಣದಂತೆ ವರ್ತಿಸುತ್ತೇವೆ. ಅನೇಕ ವರ್ತನೆಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ, ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಕೆಲವು ಸ್ವಭಾವಗಳನ್ನು ಸಹಿಸಿಕೊಳ್ಳುವುದು ಸಾಧ್ಯವೇ ಆಗುವುದಿಲ್ಲ.
ಸಾಮಾನ್ಯವಾಗಿ ನಾವೆಲ್ಲರೂ ನಮ್ಮವರ ಬಗ್ಗೆ ಮೃದು ಧೋರಣೆ ಹೊಂದಿರುತ್ತೇವೆ. ಪತಿ, ಪತ್ನಿ, ತಂದೆ-ತಾಯಿ, ಅಣ್ಣ-ತಮ್ಮ, ತಂಗಿ-ಅಕ್ಕಂದಿರ ಬಗ್ಗೆ ಬೇರೆಯದೇ ಭಾವನೆಯಲ್ಲಿರುತ್ತೇವೆ. ಹೊರಗಿನವರೊಂದಿಗೂ, ಮನೆಯವರೊಂದಿಗೂ ನಮ್ಮ ವರ್ತನೆ ಬೇರೆ ರೀತಿಯಲ್ಲಿರುವುದೇ ಇದಕ್ಕೆ ಸಾಕ್ಷಿ. ಬೇರೆಯವರು ಏನಾದರೊಂದು ನಮಗಾಗದ ವರ್ತನೆ ಮಾಡಿದಾಗ ಸಹಿಸಿಕೊಳ್ಳದ ನಾವು ನಮ್ಮವರ ಹಲವಾರು ಅಪಸವ್ಯಗಳ ಬಗ್ಗೆ ಕಂಡೂ ಕಾಣದಂತೆ ಸುಮ್ಮನಿರುತ್ತೇವೆ. ಸಂಬಂಧ ಚೆನ್ನಾಗಿರಬೇಕು ಎನ್ನುವ ಆಶಯದೊಂದಿಗೆ ಪ್ರೀತಿಪಾತ್ರರ ಹಲವಾರು ವರ್ತನೆಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ, ಎಷ್ಟೇ ಮೃದು ಹೃದಯಿಗಳಿಗೂ ಸಹಿಸಿಕೊಳ್ಳುವುದಕ್ಕೆ ಒಂದು ಮಿತಿ ಎನ್ನುವುದಿರುತ್ತದೆ. ಎಷ್ಟೇ ಪ್ರೀತಿಪಾತ್ರರಾದರೂ ಕೆಲವರ ವರ್ತನೆ, ಧೋರಣೆ, ಸ್ವಭಾವಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಎಂಥ ದಯಾಪೂರ್ಣ ವ್ಯಕ್ತಿಯೂ ಸಹಿಸಿಕೊಳ್ಳಲು ಸಾಧ್ಯವಿಲ್ಲದ ಕೆಲವು ಅಂಶಗಳು ಪತಿ ಅಥವಾ ಪತ್ನಿಯಲ್ಲಿ ಇರದ್ದಿರಬಹುದು. ಅವು ಸಂಬಂಧವನ್ನು ಹಾಳುಮಾಡುವುದು ಮಾತ್ರವಲ್ಲ, ಆ ವ್ಯಕ್ತಿಯಿಂದಲೂ ದೂರ ಓಡುವಂತೆ ಮಾಡುತ್ತವೆ. ಅವರ ಬಗ್ಗೆ ನಮಗೆ ಎಷ್ಟೇ ಕರುಣೆ, ಸಹಾನುಭೂತಿ ಇದ್ದರೂ ಅವರ ಸ್ವಭಾವ ಸಹಿಸಿಕೊಳ್ಳಲು ಅಸಾಧ್ಯವಾಗಿಬಿಡುತ್ತದೆ. ಅಂತಹ ಪ್ರಮುಖ ಗುಣಗಳನ್ನು ಅರಿತುಕೊಳ್ಳುವುದು ಬೆಟರ್.
• ಸತ್ಯವನ್ನು ತಿರುಚುವುದು (Twisting Truth)
ಸಂಬಂಧವನ್ನು (Relation) ಬೆಸೆಯುವುದೇ ನಂಬಿಕೆ (Trust) ಎಂಬ ಮುಲಾಮು. ನಂಬಿಕೆ ಇಲ್ಲವಾದರೆ ಸಂಬಂಧಕ್ಕೆ ಭದ್ರ ಅಡಿಪಾಯವೇ ಇರುವುದಿಲ್ಲ. ಕೆಲ ಜನರು ಸತ್ಯವನ್ನು ತಮ್ಮ ಪರಿಸ್ಥಿತಿ, ಮನಸ್ಥಿತಿಗೆ ತಕ್ಕಂತೆ ತಿರುಚುವುದು ಕಂಡುಬರುತ್ತದೆ. ಅವರು ನೇರಾನೇರ ಸುಳ್ಳು (Lie) ಹೇಳುತ್ತಾರೆ. ಅವರ ಈ ವರ್ತನೆಯಿಂದ ಸಂಬಂಧದಲ್ಲಿ ನಂಬಿಕೆ ಕುಸಿಯುತ್ತದೆ. ಮೃದು ಹೃದಯಿಗಳು (Kind Hearted) ಅವರಿಂದ ಅಸ್ಥಿರ ಹಾಗೂ ಅಸೌಖ್ಯದ ಭಾವನೆಯಿಂದ ಬಳಲುತ್ತಾರೆ. ಅವರು ಏನೇ ಹೇಳಿದರೂ ನಂಬಿಕೆ ಮೂಡುವುದಿಲ್ಲ. ಇದು ಭಾವನಾತ್ಮಕವಾಗಿ, ಮಾನಸಿಕವಾಗಿ ಭಾರೀ ಬಳಲಿಕೆ ಉಂಟು ಮಾಡುತ್ತದೆ.
Relationship Tips: ಪ್ರತಿ ಪುರುಷನೂ ಶ್ರೀರಾಮನ ದಾರೀಲಿ ನಡೆದ್ರೆ ಆದರ್ಶ ಪತಿಯಾಗೋದು ಸುಲಭ
undefined
• ವಕ್ರ ಮಾತುಕತೆ (Communication)
ಆರೋಗ್ಯಪೂರ್ಣ, ಪ್ರಬುದ್ಧ (Mature) ಮಾತುಕತೆ, ಸಂವಹನ ಸಂಬಂಧಕ್ಕೆ ಅತ್ಯಗತ್ಯ. ಆದರೆ, ನಿಮ್ಮೊಂದಿಗೆ ಇರುವವರ ಮನಸ್ಥಿತಿ ಚಿಕ್ಕ ಮಕ್ಕಳ ಹಾಗಿದ್ದರೆ ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಸಹಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಪ್ರಬುದ್ಧ ಸಂಗಾತಿಯೊಂದಿಗಂತೂ ಜೀವನ ಸಾಗಿಸುವುದು ಕಷ್ಟ. ತಮ್ಮ ಭಾವನೆಗಳನ್ನು ನೇರವಾಗಿ ಹೇಳದಿರುವುದು, ಮಾತುಮಾತಿಗೆ ಸಿಟ್ಟು ಮಾಡಿಕೊಳ್ಳುವುದು, ನೀವೇನೋ ಹೇಳಿದರೆ ತಾವೇನೋ ತಿಳಿದುಕೊಳ್ಳುವುದು ಇಂತಹ ಅಪ್ರಬುದ್ಧ ಗುಣಗಳನ್ನು ಸಹಿಸಿಕೊಳ್ಳುವುದು ಅಸಾಧ್ಯವಾಗಿಬಿಡುತ್ತದೆ.
• ಕಲ್ಲುಬಂಡೆಯಂಥವರು
ಯಾವುದೇ ಸಂಬಂಧ ಚೆನ್ನಾಗಿರಲು ಇಬ್ಬರ ಪ್ರಯತ್ನವೂ (Effort) ಬೇಕಾಗುತ್ತದೆ. ನೀವೊಬ್ಬರೇ ಪ್ರತಿಬಾರಿಯೂ ಪ್ರಯತ್ನಿಸುವುದು ಕೊನೆಕೊನೆಗೆ ಅಸಹ್ಯವೆನಿಸಲು ಶುರುವಾಗುತ್ತದೆ. ಕೆಲವು ಜನ ಯಾವುದಕ್ಕೂ ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ಇದ್ದುಬಿಡುತ್ತಾರೆ. ತಮ್ಮದೇ ಪ್ರಪಂಚದಲ್ಲಿದ್ದುಕೊಂಡು ಸಂಬಂಧಗಳ (Relation) ಅರಿವೇ ಇಲ್ಲದಂತೆ ವರ್ತಿಸುತ್ತಾರೆ. ಮನೆಕೆಲಸದ ಹಂಚಿಕೆಯಿಂದ ಹಿಡಿದು, ಭಾವನಾತ್ಮಕ (Emotional) ಪ್ರಯತ್ನಗಳವರೆಗೆ ಅವರು ಶೂನ್ಯವಾಗಿರುತ್ತಾರೆ. ಅಂಥವರೊಂದಿಗೆ ಏಗುವುದು ಮೃದು ಹೃದಯಿಗಳಿಗೆ ಕಷ್ಟವಾಗುತ್ತದೆ.
• ನಿರಂತರ ಟೀಕೆ (Criticism)
ರಚನಾತ್ಮಕ ವಿಮರ್ಶೆಗಳು ಸಂಬಂಧದಲ್ಲಿ ಅಗತ್ಯ. ಆದರೆ, ಅನಗತ್ಯವಾಗಿ ಎಲ್ಲದಕ್ಕೂ ಟೀಕೆ ಮಾಡುವುದು, ಪ್ರಗತಿಗೆ ಅಡ್ಡಿಯಾಗುವಂತಹ ಮಾತುಗಳನ್ನಾಡಿ ಕುಗ್ಗಿಸುವ ಸ್ವಭಾವ ನಮ್ಮವರಲ್ಲಿದ್ದರೆ ಸಹಿಸಿಕೊಳ್ಳುವುದು (Tolerate) ಭಾರೀ ಕಷ್ಟ. ಅಪಾರವಾಗಿ ಟೀಕಿಸುವವರು ಯಾರೊಂದಿಗೂ ಉತ್ತಮ ಸಂಬಂಧ ಇಟ್ಟುಕೊಳ್ಳುವುದಿಲ್ಲ. ನೀವು ಎಷ್ಟೇ ಸಹಿಸಿಕೊಳ್ಳುವ ಗುಣ ಹೊಂದಿದ್ದರೂ ಇಂಥವರನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ.
Mental Health Tips: ಆತಂಕದ ಸಮಸ್ಯೆಯೇ? ಆತಂಕ ಬೇಡ, ದಿನವೂ ಆರೇ ಕೆಲಸ ಮಾಡಿ ಆರಾಮಾಗಿರಿ
• ನಕಾರಾತ್ಮಕತೆ (Negativity) ಸಹಜವೇ?
ಜೀವನದ ಎಲ್ಲ ಹಂತಗಳಲ್ಲೂ ನಕಾರಾತ್ಮಕತೆಯನ್ನೇ ಕಾಣುವವರು ಅದೊಂದು ಸಹಜವೆನ್ನುವ (Normal) ಭಾವನೆಯಲ್ಲಿರುತ್ತಾರೆ. ಆದರೆ, ಸಕಾರಾತ್ಮಕ ಮೃದು ಹೃದಯಿಗಳಿಗೆ ಅಂಥವರೊಂದಿಗೆ ಏಗುವುದು ಸಾಧ್ಯವೇ ಇಲ್ಲ. ಏಕೆಂದರೆ, ಯಾವುದೇ ಸುಖ (Happy) ಅವರನ್ನು ನಿಜವಾಗಿ ಖುಷಿಪಡಿಸಲು ಸಾಧ್ಯವಿಲ್ಲ. ಎಲ್ಲಡೆಯೂ ಅವರು ನಕಾರಾತ್ಮಕತೆಯನ್ನೇ ನೋಡುತ್ತಾರೆ. ನಾವೆಲ್ಲರೂ ಕೆಟ್ಟ ದಿನಗಳನ್ನು ಕಂಡಿರುತ್ತೇವೆ. ಆದರೆ, ಅದನ್ನೇ ಸದಾಕಾಲ ಜಪಿಸುವುದಿಲ್ಲ. ಆದರೆ, ಯಾರಾದರೂ ಹೀಗೆ ಮಾಡುತ್ತಿದ್ದರೆ ಅವರೊಂದಿಗೆ ಒಡನಾಟ ಕಷ್ಟವಾಗುತ್ತದೆ.