ಇಂದು ಎಲಾನ್ ಮಸ್ಕ್‌ರಷ್ಟು ಯಶಸ್ವಿ ವ್ಯಕ್ತಿ ಇನ್ಯಾರೂ ಇರಲಾರರು. ಅವರು ಬದುಕು ಹಾಗೂ ವೃತ್ತಿಯಲ್ಲಿ ಸಕ್ಸಸ್ ಪಡೆಯುವುದು ಹೇಗೆ ಅನ್ನುವ ಬಗ್ಗೆ 6 ಸೂತ್ರಗಳನ್ನು ಇಲ್ಲಿ ನೀಡಿದ್ದಾರೆ.
ಇಲಾನ್ ಮಸ್ಕ್ (Elon Musk) ಇಂದು ಅಮೆರಿಕದ ಮಾತ್ರವಲ್ಲ ಜಾಗತಿಕ ಯಶಸ್ವೀ ಉದ್ಯಮಿಗಳಲ್ಲಿ ಒಬ್ಬರು. ಜಗತ್ತಿನ ಟಾಪ್ ಟೆನ್ ಶ್ರೀಮಂತರ ಪಟ್ಟಿ ಮಾಡಿದರೆ ಅದರಲ್ಲಿ ಅವರಿರುತ್ತಾರೆ. ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುವುದರಲ್ಲಿ ಅವರು ಹೆಸರುವಾಸಿ. ಲಕ್ಷಾಂತರ ಮಂದಿಗೆ ಹೀಗೆ ಪರಿಶ್ರಮಿಸಲು ಅವರು ಸ್ಫೂರ್ತಿ. ಒಬ್ಬ ವ್ಯಕ್ತಿ ಜೀವನದಲ್ಲಿ ಹಾಗೂ ವೃತ್ತಿಯಲ್ಲಿ ಹೇಗೆ ಯಶಸ್ವಿಯಾಗುತ್ತಾನೆ? ಈ ಬಗ್ಗೆ ಇಲಾನ್ ಮಸ್ಕ್ ನೀಡುವ 6 ಸೂತ್ರಗಳು ಇಲ್ಲಿವೆ (Elon Musk Tips for Success). ಇವು ಸ್ವತಃ ಅವರು ನಂಬಿ ಆಚರಿಸಿದ ಸೂತ್ರಗಳು, ಆದ್ದರಿಂದಲೇ ಅವರು ಗೆದ್ದಿದ್ದಾರೆ ಎನ್ನಲು ಮರೆಯುವುದಿಲ್ಲ.
1. ಪುಸ್ತಕಗಳನ್ನು ಓದಿ (Read Books)
ಪುಸ್ತಕಗಳನ್ನು ಓದುವುದರಿಂದ ನಮ್ಮ ಭಾಷೆ ಉತ್ತಮಗೊಳ್ಳುತ್ತದೆ. ನಮ್ಮ ತಿಳಿವಳಿಕೆ ವರ್ಧಿಸುತ್ತದೆ. ಯಾರೂ ನಿಮಗೆ ಕಲಿಸದ ಅನೇಕ ವಿಷಯಗಳ ಬಗ್ಗೆ ನಮಗೆ ಜ್ಞಾನ ಮತ್ತು ಮಾಹಿತಿ ಸಿಗುತ್ತದೆ. ಇಲಾನ್ ಮಸ್ಕ್ ತಮ್ಮ ಬಾಲ್ಯದಲ್ಲಿ ವಿಶ್ವಕೋಶವನ್ನು ಓದುತ್ತಿದ್ದರಂತೆ. ಸಾಧ್ಯವಾದಷ್ಟು ಮಾಹಿತಿಯನ್ನು ಹೀರಿಕೊಳ್ಳಲು ಪ್ರಯತ್ನಿಸಿ. ಜೊತೆಗೆ ಯೋಗ್ಯವಾದ ಸಾಮಾನ್ಯ ಜ್ಞಾನವೂ ಇರಬೇಕು ಎನ್ನುತ್ತಾರೆ. ಪುಸ್ತಕಗಳು ನಮ್ಮನ್ನು ಚಿಂತಿಸುವಂತೆ, ಸಮಸ್ಯೆಗಳು ಉಂಟಾದಾಗ ನಮ್ಮದೇ ಪರಿಹಾರಗಳನ್ನು ಕಂಡುಕೊಳ್ಳುವಂತೆ ಪ್ರಚೋದಿಸುತ್ತವೆ. ಆದ್ದರಿಂದಲೇ ಪುಸ್ತಕ ಓದುವಿಕೆ ಮುಖ್ಯ.
ಇದನ್ನೂ ಓದಿ: Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!
2. ನೆಟ್‌ವರ್ಕಿಂಗ್ ಮುಖ್ಯ (Networking)
ನೀವು ಮನೆಯಲ್ಲಿ ಕುಳಿತು ವೃತ್ತಿಪರ ಉದ್ಯೋಗಗಳನ್ನು ಮಾಡಲು ಸಾಧ್ಯವಿಲ್ಲ. ವೃತ್ತಿಪರವಾಗಿ ನಿಮಗೆ ಸಹಾಯ ಮಾಡುವುದರ ಜೊತೆಗೆ ವ್ಯಕ್ತಿಯಾಗಿ ಬೆಳೆಯುವುದರಲ್ಲಿ ನಿಮ್ಮ ನೆಟ್‌ವರ್ಕಿಂಗ್ ಒಂದು ಪ್ರಮುಖ ಭಾಗ. "ಜೀವನದ ಹಲವು ಮಗ್ಗುಲುಗಳ, ಹಲವು ವೃತ್ತಿಗಳ ಜನರೊಂದಿಗೆ ಮಾತನಾಡಿ. ವಿವಿಧ ಕ್ಷೇತ್ರಗಳು, ಉದ್ಯೋಗಗಳು ಮತ್ತು ಕೌಶಲ್ಯಗಳ ಜೊತೆಗೆ ಬೆರೆಯಿರಿ. ಎಲ್ಲವನ್ನೂ ಕಲಿಯಿರಿ" ಎಂಬುದು ಮಸ್ಕ್ ನೀಡುವ ಸಲಹೆ.
3. ನಿಮ್ಮದೇ ಕೊಡುಗೆ ಕೊಡಿ (Contribution)
ನಿಮ್ಮ, ನಿಮ್ಮ ಕುಟುಂಬದ ಒಳಿತಿಗೆ ಪರಿಶ್ರಮಿಸಿ. ಜೊತೆಗೆ ಸಮಾಜಕ್ಕೂ ಕೆಲವು ಕೊಡುಗೆ ನೀಡಲು ಯತ್ನಿಸಿ. ಯಶಸ್ವಿ ಜನರು ತಾವು ಸಮಾಜದಿಂದ ಪಡೆದುದನ್ನು ಮಾತ್ರವಲ್ಲದೆ ಅದಕ್ಕಿಂತ ಹೆಚ್ಚು ಸಮಾಜಕ್ಕೆ ಹಿಂತಿರುಗಿಸಬೇಕು. ಸಮಾಜಕ್ಕೆ ಧನಾತ್ಮಕ ನಿವ್ವಳ ಕೊಡುಗೆಯನ್ನು ನೀಡಲು ಯತ್ನಿಸಿ. ಕಾರ್ಪೊರೇಟ್‌ಗಳು ತಮ್ಮದೇ ಆದ ಸಮಾಜ ಸೇವಾ ಗುರಿಗಳನ್ನು ಹೊಂದಿರುವಂತೆ, ವ್ಯಕ್ತಿಗಳೂ ತಮ್ಮಿಂದ ಸಾಧ್ಯವಾದ ಕಾಯಾ ವಾಚಾ ಮನಸಾ ಸೇವೆಯನ್ನು ಸಮಾಜಕ್ಕೆ ಮಾಡಬೇಕು. ಆಗ ನಿಮ್ಮ ವ್ಯಕ್ತಿತ್ವ ಹಾಗೂ ನೆಟ್‌ವರ್ಕಿಂಗ್ ಬೆಳೆಯುತ್ತದೆ.
4. ಉಪಯುಕ್ತನಾಗಲು (Useful) ಪ್ರಯತ್ನಿಸಿ
ನಿಮ್ಮ ಸುತ್ತಲಿನ ಪ್ರಪಂಚಕ್ಕೆ ನೀವು ಉಪಯುಕ್ತರಾಗಿರುವುದು ಮುಖ್ಯ ಎಂದು ಇಲಾನ್ ಹೇಳುತ್ತಾರೆ. ನಿಮ್ಮ ಕುಟುಂಬದವರಿಗೆ, ನಿಮ್ಮ ಸಹೋದ್ಯೋಗಿಗಳಿಗೆ, ಜಗತ್ತಿಗೆ ಉಪಯುಕ್ತವಾದ ಕೆಲಸಗಳನ್ನು ಮಾಡಿ ಎನ್ನುತ್ತಾರೆ. ಒಬ್ಬ ಸಾಮಾನ್ಯ ಸೆಲೆಬ್ರಿಟಿ ಕೂಡ ಜನರ ಮನರಂಜಿಸುವ ಕೆಲಸ ಮಾಡುತ್ತಾನೆ. ನೀವು ಸ್ವಂತ ದುಡಿಮೆ ಮಾಡಿದರೂ ಅದರಲ್ಲಿ ಸಮಾಜವನ್ನು ಇನ್ನಷ್ಟು ಬೆಟರ್ ಆಗಿಸುವ ಯಾವುದಾದರೂ ಉಪಯುಕ್ತತೆ ಇರಬೇಕು.
ಇದನ್ನೂ ಓದಿ: Elon Musk vs Putin ಚಾಲೆಂಜ್ ಗೆದ್ದವರಿಗೆ ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್‌ಗೆ ನೇರ ಸವಾಲು ಹಾಕಿದ ಎಲಾನ್ ಮಸ್ಕ್!
5. ರಿಸ್ಕ್ (Risk) ತೆಗೆದುಕೊಳ್ಳಿ
ಉದ್ಯೋಗ- ವೃತ್ತಿಯಲ್ಲಿ ಸಾರ್ವಕಾಲಿಕ ಸುರಕ್ಷಿತತೆ ನಿರೀಕ್ಷಿಸಿ ಆಡುವುದು ನಿಮ್ಮನ್ನು ಬೆಳೆಯದಂತೆ ತಡೆಯುತ್ತದೆ. ನೀವು ರಿಸ್ಕ್ ತೆಗೆದುಕೊಳ್ಳಲೇಬೇಕು. ಧೈರ್ಯದಿಂದ ಏನನ್ನಾದರೂ ಮಾಡಬೇಕು. ಅದು ಮುಂದೆ ನೀವು ವಿಷಾದಿಸದಂತೆ ಮಾಡುತ್ತದೆ. ರಿಸ್ಕ್ ತೆಗೆದುಕೊಳ್ಳುವುದರ ಅಪಾಯ, ಪರಿಣಾಮ ಏನೇ ಇರಲಿ. ವಿಫಲವಾದರೂ, ಪ್ರಯತ್ನ ಮಾಡಿದೆ ಎಂಬ ಸಮಾಧಾನ ನಿಮ್ಮಲ್ಲಿ ಇರುತ್ತದೆ. ನಿಮಗೆ ವಯಸ್ಸಾದಂತೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದು ನಿಮ್ಮ ಕುಟುಂಬ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆಗ ನಿಮ್ಮ ಕೈಯಲ್ಲಿ ನೀವು ಕಡಿಮೆ ಸಮಯ ಹೊಂದಿರುತ್ತೀರಿ. ಹೀಗಾಗಿ ಯುವಕರಾಗಿದ್ದಾಗ, ಹೆಚ್ಚು ಬದ್ಧತೆಗಳು ಇಲ್ಲದಿದ್ದಾಗ ರಿಸ್ಕ್ ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: Tesla Cars ಕೈಗೆಟುಕುವ ದರದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ನೀಡುವ ಮಸ್ಕ್ ಕನಸಿಗೆ ರಷ್ಯಾ ಉಕ್ರೇನ್ ಯುದ್ಧ ಅಡ್ಡಿ!
6. ವಿಫಲಗೊಳ್ಳಲು ಸಿದ್ಧರಾಗಿರಿ
ಗೆಲ್ಲಬೇಕೆಂದೇ ಹೋರಾಡಬೇಕು. ನಿಮಗೆ ಒಂದು ಕಲ್ಪನೆ, ನಂಬಿಕೆ, ಗುರಿ ಇದ್ದರೆ, ನೀವು ಯಶಸ್ವಿಯಾಗುತ್ತೀರಿ ಎಂಬ ಮನೋಭಾವದಿಂದ ಅದರ ಮೇಲೆ ಕೆಲಸ ಮಾಡಿ. ಇಷ್ಟಾದರೂ, ಸೋಲಿಗೆ ನೀವು ಸಿದ್ಧರಾಗಿರಬೇಕು. ಯಾಕೆಂದರೆ ನೀವು ಎಷ್ಟೇ ಪ್ರಯತ್ನಿಸಿದರೂ ನಿಮಗೇ ತಿಳಿಯದ ಯಾವುದೋ ಅಂಶಗಳು ಸೋಲಿಗೆ ಕಾರಣ ಆಗಬಹುದು. ಹೀಗಾಗಿ ಮನಸ್ಸನ್ನು ಸೋಲಿಗೂ ರೆಡಿ ಮಾಡಬೇಕು.