
ಸಂಬಂಧದಲ್ಲಿ ಪರಸ್ಪರ ಅವಲಂಬನೆ ಎಷ್ಟು ಮುಖ್ಯವೋ ಹಾಗೆಯೇ ಒಂದಿಷ್ಟು ಸ್ವತಂತ್ರ್ಯ ಮನಸ್ಥಿತಿಯೂ ಅಷ್ಟೇ ಅಗತ್ಯ. ಏಕೆಂದರೆ, ಆರೋಗ್ಯಕರ ಸಂಬಂಧಕ್ಕೆ ಅತಿಯಾದ ಅವಲಂಬನೆಯಿಂದ ತೊಂದರೆಯೇ ಹೆಚ್ಚು. ಯಾವುದೇ ಸಾಂಗತ್ಯದ ಆರಂಭದಲ್ಲಿ ಗಂಡು-ಹೆಣ್ಣಿನ ನಡುವೆ ಹೆಚ್ಚಿನ ಅವಲಂಬನೆ ಕಂಡುಬರುತ್ತದೆ. ವಿವಾಹದ ಆರಂಭದ ದಿನಗಳನ್ನೇ ತೆಗೆದುಕೊಳ್ಳಿ. ಎಲ್ಲದಕ್ಕೂ ಪತಿಯ ಮೇಲೆ ಅವಲಂಬಿತರಾಗುವುದು ಸಾಮಾನ್ಯ. ಹಾಗೆಯೇ, ಕೆಲವು ವಿಚಾರಗಳಲ್ಲಿ ಪತಿ ಕೂಡ ಪತ್ನಿಯ ಮೇಲೆ ಹೆಚ್ಚು ಅವಲಂಬನೆ ಹೊಂದಿರುತ್ತಾರೆ. ಆದರೆ, ಸಮಯ ಕಳೆದಂತೆ ಸಂಬಂಧವನ್ನು ಇನ್ನೊಂದು ಮಜಲಿಗೆ ಒಯ್ಯುವ ಜವಾಬ್ದಾರಿ ಇಬ್ಬರದೂ ಇರುತ್ತದೆ. ಇಲ್ಲವಾದಲ್ಲಿ ಸ್ವಲ್ಪವೂ ಸ್ಪೇಸ್ ಇಲ್ಲದಂತಾಗಿಬಿಡುತ್ತದೆ. ಚಿಕ್ಕಪುಟ್ಟ ವಿಚಾರಗಳಿಗೆ ಅವಲಂಬನೆ ಮುಂದುವರಿಯುತ್ತ ಹೋದರೆ ಅಥವಾ ಹೆಚ್ಚಾದರೆ ಕಿರಿಕಿರಿಯೂ ಹೆಚ್ಚುತ್ತದೆ. ಹೀಗಾಗಿ, ಪ್ರಬುದ್ಧತೆಯಿಂದ ವರ್ತಿಸಬೇಕಾಗುತ್ತದೆ. ಇದರರ್ಥ ಪರಸ್ಪರ ದೂರ ಇರಬೇಕು ಎಂದಲ್ಲ. ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ತಮಗೆ ಬೇಕಾದ ಕೆಲಸಕಾರ್ಯ, ಹವ್ಯಾಸಗಳನ್ನು ನೆರವೇರಿಸಿಕೊಳ್ಳುವ ಅವಕಾಶ ಇರಬೇಕು, ಇಟ್ಟುಕೊಳ್ಳಬೇಕು. ಕಾಲ ಕಳೆದಂತೆ ಸಂಸಾರದಲ್ಲಿ ಏನೋ ಒಂದು ರೀತಿಯ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗುವುದು ಸಹಜ. ಅವಲಂಬನೆ ಹೆಚ್ಚಾದಷ್ಟೂ ಇಂತಹ ಉಸಿರುಗಟ್ಟುವ ಅನುಭವ ಹೆಚ್ಚಾಗುತ್ತ ಹೋಗುತ್ತದೆ. ಇಂತಹ ಕಿರಿಕಿರಿಗಳನ್ನು ಮೆಟ್ಟಿನಿಲ್ಲಲು ನಾವೇ ಪ್ರಯತ್ನ ಪಡಬೇಕಾಗುತ್ತದೆ. ನೀವು ನಿಮ್ಮ ಸಂಗಾತಿಗೆ ಅವಲಂಬಿತರಾಗಿದ್ದೀರಾ ಇಲ್ಲವಾ ಎನ್ನುವುದನ್ನು ಕೆಲವು ನಿಮ್ಮ ಅಭ್ಯಾಸಗಳ ಮೂಲಕ ತಿಳಿದುಕೊಳ್ಳಬಹುದು. ಸಂಬಂಧದ ಆರೋಗ್ಯಕ್ಕಾಗಿ ನಿಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು, ಹೆಚ್ಚು ಅವಲಂಬಿತರಾಗದೆ ಇರುವುದು ಮುಖ್ಯ.
• ಮನೆಯಲ್ಲಿ ನಿಮಗಾಗಿ ಒಂದು ಸ್ಥಳ (Free Space)
ದಂಪತಿ (Couple) ಜೋಡಿಯಾಗಿ ಇರುವ ಸ್ಥಳಗಳು ಮನೆಯಲ್ಲಿ ಎಲ್ಲ ಕಡೆಯೂ ಇರುತ್ತವೆ. ಆದರೆ, ನೀವೊಬ್ಬರೇ ಇರುವ ಜಾಗ ಯಾವುದಾದರೂ ಇದೆಯಾ? ಅಲ್ಲಿಗೆ ನಿಮ್ಮ ಪತಿ (Husband) ಬರಲೇಬಾರದು ಎಂದಲ್ಲ. ಆದರೆ, ಆ ಸ್ಥಳ ಕೇವಲ ನಿಮಗೊಬ್ಬರಿಗೇ ಸೇರಿರಬೇಕು. ನಿಮಗಾಗಿ ಅಲ್ಲಿ ನೀವು ಕುಳಿತು ಯೋಚಿಸಬಹುದು, ರಿಲ್ಯಾಕ್ಸ್ (Relax) ಮಾಡಬಹುದು ಅಥವಾ ನಿಮ್ಮದೇ ಕೆಲಸ ಮಾಡಿಕೊಳ್ಳಬಹುದು. ದಿನಕ್ಕೆ ಒಂದರ್ಧ ಗಂಟೆಯಾದರೂ ನಿಮ್ಮ ಪಾಡಿಗೆ ನೀವು ಇರುವಂತಹ ಸ್ಥಳ ಇದ್ದರೆ ಅಷ್ಟರಮಟ್ಟಿಗೆ ನಿಮಗೆ ಫ್ರೀ ಆಗಿ ಉಸಿರಾಡಿಸಲು ಅವಕಾಶ ಸಿಕ್ಕಂತೆ ಆಗುತ್ತದೆ. ಒಂದೊಮ್ಮೆ ನೀವಿರುವ ಮನೆಯಲ್ಲಿ ಪ್ರತ್ಯೇಕ ಸ್ಥಳವಿಲ್ಲದೆ ಹೋದರೆ ಚಿಂತೆಯಿಲ್ಲ, ನಿಮ್ಮ ಬೆಡ್ ರೂಮಿಗೆ ನಿಗದಿತ ಸಮಯದಲ್ಲಿ ನೀವೊಬ್ಬರೇ ಇರುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಸ್ವತಂತ್ರ (Independent) ಚಿಂತನೆಗೆ ಹೆಚ್ಚಿನ ಆಸ್ಪದ ದೊರೆಯುತ್ತದೆ.
ಏನು ಮಾಡಿದ್ರೂ ತಪ್ಪು ನಿಂದೇ ಅಂತಾರಾ ಸಂಗಾತಿ, ಎಲ್ಲೆಡೆ ಇದು ಕಾಮನ್ ಬಿಡಿ
• ನಿಮಗೆ ನಿಮ್ಮದೇ ಆದ ಸ್ವತಂತ್ರ ಹವ್ಯಾಸ (Hobbies) ಇದ್ಯಾ?
ನಿಮ್ಮ ಸಂಗಾತಿ (Partner) ಜೊತೆಗೆ ಸಮಯ ಕಳೆಯುವುದು ಎಷ್ಟು ಮುಖ್ಯವೋ ನಿಮ್ಮದೇ ಆದ ಹವ್ಯಾಸ ಹೊಂದಿರುವುದೂ ಅಷ್ಟೇ ಮುಖ್ಯವಾದ ವಿಚಾರ. ನಿಮ್ಮದೇ ಆದ ಹವ್ಯಾಸದಿಂದ ವ್ಯಕ್ತಿಗತವಾಗಿ ನೀವು ಬೆಳೆಯಲು ಸಾಧ್ಯವಾಗುತ್ತದೆ. ಇದು ನಿಮಗೊಂದು ಪ್ರತ್ಯೇಕ ಅಸ್ತಿತ್ವ (Identity) ನೀಡುತ್ತದೆ. ಇದರಿಂದ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ. ಗಾರ್ಡನಿಂಗ್ (Gardening) ಮಾಡಬಹುದು, ಹಾಡುಗಾರಿಕೆ, ನೃತ್ಯ, ಬರವಣಿಗೆ ಯಾವುದೇ ಹವ್ಯಾಸವಾಗಿರಲಿ. ಅದು ನಿಮ್ಮದಾಗಿರಲಿ. ನಿಮ್ಮ ಪತಿಗೆ ನಿಮಗಾಗಿ ಹೆಚ್ಚಿನ ಸಮಯ ನೀಡಲು ಕೆಲವೊಮ್ಮೆ ಸಾಧ್ಯವಾಗದಿದ್ದರೆ ನೀವು ಕಿರಿಕಿರಿಗೊಳ್ಳಲು ಆಸ್ಪದ ದೊರೆಯುವುದಿಲ್ಲ. ಮಕ್ಕಳು ಬೆಳೆದಾಗ, ಪತಿಯೂ ಕೆಲಸಕಾರ್ಯವೆಂದು ದೂರವಿದ್ದಾಗ ನೀವು ರೂಪಿಸಿಕೊಂಡಿರುವ ನಿಮ್ಮದೇ ಆದ ಅಸ್ತಿತ್ವ ನಿಮ್ಮನ್ನು ಕಾಪಾಡುತ್ತದೆ.
50ರ ನಂತರವೂ ಅದ್ಭುತ 'ಸೆಕ್ಸ್ ಲೈಫ್' ನಿಮ್ಮದಾಗಲು ಇಲ್ಲಿವೆ ಸೂಪರ್ ಟಿಪ್ಸ್
• ಸ್ನೇಹಿತರು ಮತ್ತು ಕುಟುಂಬದವರಿಂದ ಪ್ರತ್ಯೇಕಿಸಿಕೊಳ್ಳಬೇಡಿ (Isolate)
ನಿಮಗೆ ಇಷ್ಟವಿರಲಿ, ಇಲ್ಲದಿರಲಿ. ಸ್ನೇಹಿತರು (Friends) ಮತ್ತು ಕುಟುಂಬದ (Family) ಆಗುಹೋಗುಗಳಿಂದ ವಂಚಿತರಾಗಬೇಡಿ. ಮದುವೆಯಾದ ಹೊಸದರಲ್ಲಿ ನೆಂಟರಿಷ್ಟರ ಮನೆಗಳಿಗೆ ಹೋಗಿ ಬಂದ ಬಳಿಕ ಅವರಿಂದ ದೂರವನ್ನೇ ಕಾಯ್ದುಕೊಳ್ಳುವುದು ಸಹಜ. “ಅವರು ಬರುವುದೂ ಬೇಡ, ನಾವು ಹೋಗುವುದೂ ಬೇಡʼ ಎನ್ನುವ ಧೋರಣೆಯಲ್ಲಿ ಇರುತ್ತಾರೆ. ಸ್ವಲ್ಪಮಟ್ಟಿಗೆ ಇದು ಸರಿ. ಆದರೆ, ನಿಮಗಾಗಲಿ, ಪತಿಗಾಗಲಿ ನಿಮ್ಮ ಹಳೆಯ ಸ್ನೇಹಿತರ, ಬಂಧುಬಳಗದ ಸಂಪರ್ಕ ಇರಬೇಕು. ಅನಗತ್ಯ ತಲೆನೋವು ಹೆಚ್ಚಿಸುವಂಥರಿಂದ ದೂರವಿರಿ. ಆದರೆ, ಸಮೀಪದ ಬಂಧುಗಳಿಂದ ದೂರವಿರುವುದು ಸಲ್ಲದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.