ಹೀಗ್ ಮಾಡಿದ್ರೆ ಆಕೆ ನಿಮ್ಮನ್ನು ತುಂಬಾ ಇಷ್ಟ ಪಡ್ತಾಳೆಂದರ್ಥ!

By Web DeskFirst Published Oct 16, 2019, 5:28 PM IST
Highlights

ಆಕೆ 'ಐ ಲವ್ ಯೂ'  ಎನ್ನದಿರಬಹುದು. ಆದರೆ ಆಕೆ ತೋರುವ ಕಾಳಜಿ, ಆಡುವ ಮಾತು, ನೀವು ಎಷ್ಟು ಬಾರಿ ತಪ್ಪು ಮಾಡಿದರೂ ಕ್ಷಮಿಸುವುದು, ನಿಮ್ಮ ಕನಸುಗಳಿಗೆ, ಗುರಿ ಸಾಧನೆಗೆ ಪ್ರೋತ್ಸಾಹಿಸುವುದು ಮುಂತಾದ ವರ್ತನೆಗಳಲ್ಲೇ ಆಕೆ ನಿಮ್ಮನ್ನು ಅದೆಷ್ಟು ಪ್ರೀತಿಸುತ್ತಾಳೆಂದು ತಿಳಿಯಬಹುದು. 

ಪ್ರೀತಿಯಲ್ಲಿರುವವರಿಗೆ 'ಐ ಲವ್ ಯೂ' ಎಂಬ ಮೂರು ಪದಗಳು ಸಾಕು, ಜಗತ್ತನ್ನೇ ಮರೆಯಲು. ಆಳವಾದ ಹಾಗೂ ಗಾಢವಾದ ಪ್ರೀತಿಯಲ್ಲಿರುವವರಿಂದ ಈ ಪದಗಳು ಅದ್ಭುತವನ್ನೇ ಮಾಡಿಸಬಲ್ಲವು. ಅತಿ ಬೇಜಾರಿನ ದಿನಗಳನ್ನು ಕೂಡಾ ಸ್ವಿಚ್ ಹಾಕಿ ಬಲ್ಬ್ ಹೊತ್ತಿಸಿದಷ್ಟೇ ಸುಲಭವಾಗಿ ಈ ಪದಗಳು ಸಂತೋಷದ ದಿನವಾಗಿ ಬದಲಾಯಿಸಬಲ್ಲವು. ಕೆಟ್ಟ ಮೂಡ್‌ನಲ್ಲಿರುವಾಗ 'ಐ ಲವ್ ಯೂ' ಎಂಬ ಮಾತು ನಗು ತರಿಸಬಲ್ಲದು. ಆದರೆ, ಬಹಳ ಕಾಲದಿಂದ ಪ್ರೀತಿಯಲ್ಲಿ ಬಿದ್ದೂ ಕೂಡಾ ಆಕೆಯಿಂದ ಈ ಪದಗಳನ್ನು ಕೇಳಲು ಕಾತರರಾಗಿ ಕಾಯುತ್ತಿರುವವರ ಪರಿಸ್ಥಿತಿ ಯೋಚಿಸಿ. ಅವಳು ತನ್ನ ಪ್ರೀತಿಸುತ್ತಾಳೋ ಎಲ್ಲವೋ ಎಂಬ ಗೊಂದಲದಲ್ಲೇ ದಿನಗಳು ಉರುಳುತ್ತಿರುತ್ತವೆ. ಕೆಲವೊಮ್ಮೆ ಹೌದು, ಅವಳೂ ಪ್ರೀತಿಸುತ್ತಾಳೆ ಎನಿಸಿದರೆ ಮತ್ತೆ ಕೆಲವೊಮ್ಮೆ ಅದು ಗೆಳೆತನವಿರಬಹುದಲ್ಲ, ತಪ್ಪಾಗಿ ತಿಳಿಯುತ್ತಿದ್ದೀನೇನೋ ಎನಿಸುತ್ತದೆ. ಏನೂ ಚಿಂತಿಸಬೇಡಿ. ನೀವು ಒಂಟಿಯಲ್ಲ. ಹೀಗೆ ಕಾಯುವವರ ಸಂಖ್ಯೆ ದೊಡ್ಡದಿದೆ. ಕೆಲ ಹುಡುಗಿಯರೇ ಹಾಗೆ, ಅವರಿಗೆ ಭಾವನೆಗಳನ್ನು ಬಾಯಿ ಬಿಟ್ಟು ಹೇಳುವುದು ಕಷ್ಟ. ಹಾಗಂಥ ಅವರು ನಿಮ್ಮನ್ನು ಪ್ರೀತಿಸುತ್ತಿಲ್ಲವೆಂದಲ್ಲ, ಆದರೆ, ಬೇರೆ ರೀತಿಯಲ್ಲಿ ಎಕ್ಸ್‌ಪ್ರೆಸ್ ಮಾಡುತ್ತಿರಬಹುದು. ಅದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಹೇಗೆ ಅರ್ಥ ಮಾಡಿಕೊಳ್ಳುವುದು?

ಆಕೆ ನಿಮ್ಮ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಾಳೆ
ಆಕೆ ನಿಮಗೆ ಪ್ರೇಮಪತ್ರ ಬರೆದು ಕಿವಿಯಲ್ಲಿ ಐ ಲವ್ ಯೂ ಎಂದು ಹೇಳುವಂಥ ವ್ಯಕ್ತಿತ್ವವಲ್ಲದಿರಬಹುದು. ಆದರೆ ಆಕೆ ಖಂಡಿತಾ ನಿಮ್ಮ ಅಗತ್ಯಗಳಿಗೆ ತನ್ನದಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡುತ್ತಾಳೆ. ಅಷ್ಟೇ ಅಲ್ಲ, ನಿಮ್ಮಇಷ್ಟಕಷ್ಟಗಳಿಗಾಗಿ ತಾನು ಬದುಕಿನಲ್ಲಿ ಒಂದಿಷ್ಟು ಹೊಂದಿಕೆ ಮಾಡಿಕೊಳ್ಳಲೂ ಸಿದ್ಧವಿರುತ್ತಾಳೆ. ನೀವು ಬ್ಯುಸಿ ಇದ್ದರೆ ನಿಮ್ಮ ಫ್ರೀ ಟೈಂಗೆ ಸರಿಯಾಗಿ ತನ್ನ ಸಮಯವನ್ನು ಹೊಂದಿಸಿಕೊಂಡು ಮಾತನಾಡುತ್ತಾಳೆ, ಮೀಟ್ ಮಾಡುತ್ತಾಳೆ. ಇವೆಲ್ಲವನ್ನೂ ಆಕೆ ಪ್ರೀತಿ ವ್ಯಕ್ತಪಡಿಸುವ ಪರಿ ಎಂದು ಆರಾಮಾಗಿ ಅರ್ಥಮಾಡಿಕೊಳ್ಳಿ.

ಭವಿಷ್ಯದ ಬಗ್ಗೆ ಮಾತನಾಡುತ್ತಾಳೆ
ನಾವು ಯಾರೊಂದಿಗೆ ಪ್ರೀತಿಯಲ್ಲಿರುತ್ತೇವೆಯೋ, ಅವರೊಂದಿಗೆ ಮಾತ್ರ ಭವಿಷ್ಯದ ಕನಸನ್ನು ಕಟ್ಟುತ್ತೇವಲ್ಲವೇ? ಹಾಗೆಯೇ ನಿಮ್ಮ ಹುಡುಗಿಯ ಭವಿಷ್ಯದ ಕುರಿತ ಮಾತುಗಳಲ್ಲಿ ನೀವೂ ಇದ್ದರೆ, ಆಕೆ ಜೀವನವನ್ನು ನಿಮ್ಮೊಂದಿಗೆ ಕಳೆಯಲು ಇಚ್ಛಿಸಿದ್ದಾಳೆ ಎಂಬುದಕ್ಕೆ ಅದಕ್ಕಿಂತ ಬೇರೆ ಸೂಚನೆಗಳೇ ಬೇಕಿಲ್ಲ ಅಲ್ಲವೇ? 'ಐ ಲವ್ ಯೂ' ಎನ್ನದಿದ್ದರೂ ಆಕೆ ನಿಮ್ಮೊಂದಿಗೆ ಕನಸುಗಳನ್ನು ಹಂಚಿಕೊಳ್ಳುತ್ತಿದ್ದಾಳೆ ಎಂಬುದು ಅದನ್ನೇ ಸೂಚಿಸುತ್ತದೆ.

ಆಕೆಯ ಸ್ನೇಹಿತರು ಹಾಗೂ ಕುಟುಂಬಕ್ಕೆ ಪರಿಚಯಿಸುತ್ತಾಳೆ
ನಾವು ನಮ್ಮ ಸ್ನೇಹಿತರು ಹಾಗೂ ಕುಟುಂಬವರ್ಗದವರೊಂದಿಗೆ ಇದ್ದಾಗ ಹೆಚ್ಚು ಕಂಫರ್ಟೇಬಲ್ ಆಗಿರುತ್ತೇವೆ. ನಮಗೆ ಬಹಳ ಪ್ರಮುಖರಾದವರನ್ನು ಮಾತ್ರ ನಾವು ನಮ್ಮ ಹತ್ತಿರದ ಬಳಗಕ್ಕೆ ಪರಿಚಯಿಸುತ್ತೇವೆ. ಅದರಲ್ಲೂ ಯುವತಿಯೊಬ್ಬಳು ಮತ್ತೊಬ್ಬ ಯುವಕನನ್ನು ತನ್ನ ಕುಟುಂಬವರ್ಗಕ್ಕೆ ಪರಿಚಯಿಸುತ್ತಿದ್ದಾಳೆಂದರೆ ಆಕೆ ಆ ಸಂಬಂಧದ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದಾಳೆಂದೇ ಅರ್ಥ. ನೀವು ಆಕೆಯ ಸ್ನೇಹಿತರು ಹಾಗೂ ಪೋಷಕರನ್ನು ಪದೇ ಪದೆ ಮೀಟ್ ಆಗುತ್ತಿದ್ದೀರಾದರೆ, ಅದನ್ನು ಪ್ರೀತಿಯು ಸರಿಯಾದ ಪಥದಲ್ಲೇ ಸಾಗುತ್ತಿದೆ ಎಂದುಕೊಳ್ಳಬಹುದು.

ಮದ್ವೆಯಾದ್ಮೇಲೆ ಹೇಗಿರಬೇಕೆಂದು ಹೇಳಿ ಕೊಡದ ಅಮ್ಮ!

ಆಕೆಯ ರಹಸ್ಯಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಾಳೆ
ಸಂತೋಷವನ್ನು ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳಬಹುದು. ಆದರೆ, ನಮ್ಮ ಭಯಆತಂಕಗಳನ್ನು, ಕೀಳರಿಮೆ, ವೀಕ್ನೆಸ್‌ಗಳನ್ನು, ನೋವುಗಳನ್ನು ತೀರಾ ಆಪ್ತರೊಂದಿಗೆ ಮಾತ್ರ ಹೇಳಿಕೊಳ್ಳಲು ಸಾಧ್ಯ. ಅದರಲ್ಲೂ ನಾವು ಬಹಳ ನಂಬುವ, ಪ್ರೀತಿಸುವ ವ್ಯಕ್ತಿಯೊಂದಿಗೆ ಮಾತ್ರ ವೈಯಕ್ತಿಕ ಜೀವನದ ಗುಟ್ಟುಗಳೆಲ್ಲವನ್ನೂ ಹೇಳಿಕೊಳ್ಳುತ್ತೇವೆ. ನಿಮಗೆ ನಿಮ್ಮ ಗರ್ಲ್‌ಫ್ರೆಂಡ್‌ನ ಇಂಥ ಸೀಕ್ರೆಟ್‌ಗಳೆಲ್ಲ ಗೊತ್ತಿದೆ ಎಂದರೆ, ನೀವು ಆಕೆಯ ಹೃದಯಕ್ಕೆ ಹತ್ತಿರದಲ್ಲಿದ್ದೀರಿ ಎಂದರ್ಥ. ಇಂಥ ಸಂಗತಿಗಳನ್ನೆಲ್ಲ ಆಕೆ ನಿಮ್ಮೊಂದಿಗೆ ಹೇಳಿಕೊಳ್ಳುತ್ತಿದ್ದಾಳೆಂದರೆ, ಎಷ್ಟು ಪ್ರೀತಿಸುತ್ತಿದ್ದಾಳೆಂದು ಬಾಯಿ ಬಿಟ್ಟು ಹೇಳಬೇಕಾಗಿಲ್ಲ ಅಲ್ಲವೇ?

ಮದುವೆ ಎಂಬ ಸಮಾರಂಭದಲ್ಲಿ ಕಾಣೋ ವ್ಯಕ್ತಿತ್ವಗಳಿವು...

ನಿಮ್ಮನ್ನು ಉತ್ತಮಗೊಳಿಸಲು ಯತ್ನಿಸುತ್ತಿದ್ದಾಳೆ
ಯಾವಾಗಲೂ ನಿಮ್ಮ ತಪ್ಪುಗಳನ್ನು, ಸೋಲುಗಳನ್ನು ಹಿಡಿದೆತ್ತಿ ವಿಮರ್ಶೆ ಮಾಡಿ ಸಿಟ್ಟು ಬರಿಸುತ್ತಾಳಾ? ಆದರೆ, ಆಕೆ ಹಾಗೆ ಮಾಡಿದಾಗೆಲ್ಲ ನೀವು ಅವನ್ನು ಸರಿಪಡಿಸಿಕೊಂಡು ಬೆಳೆವ ಛಲ ಹುಟ್ಟುತ್ತದಲ್ಲವೇ? ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿಸಲು ಆಕೆಯ ಮಾತುಗಳಿದ್ದರೆ, ಅದು ಆಕೆಯ ಪ್ರೀತಿಯಷ್ಟೇ. ನೀವು ಕೇಳಬೇಕೆಂದು ಬಯಸಿದ್ದನ್ನು ಹೇಳದೆ, ನಿಮಗೆ ಒಳ್ಳೆಯದಾಗುವಂಥದನ್ನು ಹೇಳುವ, ನಿಮ್ಮ ವೀಕ್ನೆಸ್ ಎತ್ತಿ ಹಿಡಿಯುವಂಥ ಕೆಲಸ ಮಾಡುತ್ತಿದ್ದರೆ ಆಕೆ ಖಂಡಿತವಾಗಿ ನಿಮ್ಮನ್ನು ಪ್ರೀತಿಸುತ್ತಿದ್ದಾಳೆಂದರ್ಥ.

click me!