ಮದುವೆ, ಪ್ರೀತಿ ಸಂಬಂಧದಲ್ಲಿ ಅನೇಕರು ಪ್ರಾಮಾಣಿಕವಾಗಿರೋದಿಲ್ಲ. ಅವರು ದಾರಿ ತಪ್ಪಲು ಬೇರೆ ಬೇರೆ ಕಾರಣ ಹೇಳ್ತಿರುತ್ತಾರೆ. ಈ ವ್ಯಕ್ತಿ ಕೂಡ ಪತ್ನಿಗೆ ನಿರಂತರ ಮೋಸ ಮಾಡಿದ್ದಲ್ಲದೆ ಈಗ ಬೇರೆ ಏನೋ ಹೇಳ್ತಿದ್ದಾನೆ.
ಸಂಬಂಧದಲ್ಲಿ ವಿಶ್ವಾಸ ಬಹಳ ಮುಖ್ಯ. ದಾಂಪತ್ಯದಲ್ಲಿ ವಿಶ್ವಾಸವಿದ್ದರೆ ಒಬ್ಬರಿಗೊಬ್ಬರು ಅನುಮಾನಿಸುವ ಅಥವಾ ಮೇಲ್ವಿಚಾರಣೆ ಮಾಡುವ ಅಗತ್ಯ ಇರೋದಿಲ್ಲ. ಎಲ್ಲ ದಂಪತಿ ಮಧ್ಯೆ ಇಷ್ಟು ಗಟ್ಟಿಯಾದ ವಿಶ್ವಾಸವಿರೋದಿಲ್ಲ. ದಾಂಪತ್ಯದಲ್ಲಿ ಮೋಸ ನಡೆಯುತ್ತಿರುತ್ತದೆ. ಅನೇಕರು ಸಂಗಾತಿಗೆ ಮೋಸ ಮಾಡ್ತಿರುತ್ತಾರೆ. ಒಮ್ಮೆ ಮೋಸ ನಡೆದ್ರೆ ಕ್ಷಮಿಸಬಹುದು. ಎರಡು – ಮೂರು ಬಾರಿ ಮೋಸ ಮಾಡಿದ್ರೂ ಅದನ್ನು ಕ್ಷಮಿಸಿ ಮುನ್ನಡೆಯುವವರಿದ್ದಾರೆ. ಆದ್ರೆ ಪದೇ ಪದೇ ಮೋಸ ಮಾಡುವ ಅಭ್ಯಾಸ ಕೆಲವರಿಗೆ ಆಗಿರುತ್ತದೆ. ಸಂಗಾತಿಗೆ ದ್ರೋಹ ಬಗೆದು ಇನ್ನೊಂದು ಸಂಬಂಧ ಬೆಳೆಸುತ್ತಾರೆ. ಕೆಲವೊಮ್ಮೆ ಎಷ್ಟೇ ಸುಧಾರಿಸಿಕೊಳ್ಳಬೇಕೆಂದ್ರೂ ಅದು ಸಾಧ್ಯವಾಗೋದಿಲ್ಲ. ಮೋಸ ಮಾಡೋದು, ಅಕ್ರಮ ಸಂಬಂಧ ಬೆಳೆಸೋದು, ಡೇಟಿಂಗ್, ಫ್ಲರ್ಟಿಂಗ್ ಒಂದು ರೀತಿಯ ಚಟವಾಗಿರುತ್ತದೆ. ಮದ್ಯಪಾನ, ಧೂಮಪಾನದಿಂದ ಹೊರ ಬರಲು ಎಷ್ಟು ಕಷ್ಟವೋ ಅದೇ ರೀತಿ ಅಕ್ರಮ ಸಂಬಂಧ ಚಟದಿಂದ ಹೊರಬರೋದು ಕಷ್ಟ ಎನ್ನುವುದಕ್ಕೆ ಈತ ಸಾಕ್ಷ್ಯ. ಸಂಗಾತಿಗೆ ಮೋಸ ಮಾಡಬಾರದು ಎಂಬ ಸತ್ಯ ಈತನಿಗೆ ಗೊತ್ತಿದೆ. ಆದ್ರೆ ಈ ಅಭ್ಯಾಸವನ್ನು ಬಿಡಲು ಸಾಧ್ಯವಾಗ್ತಿಲ್ಲ. ಈಗ ಟೆಸ್ಲಾ ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಸುಧಾರಿಸಿಕೊಳ್ಳುವ ಸಾಧನ ನೀಡುವಂತೆ ಕೇಳಿದ್ದಾನೆ.
ದಾಂಪತ್ಯ (Marriage) ಮೋಸಕ್ಕೂ, ಎಲಾನ್ ಮಸ್ಕ್ ಗೂ ಏನು ಸಂಬಂಧ ಎಂದು ನೀವು ಕೇಳ್ಬಹುದು. ಮಸ್ಕ್ (Musk) ಕಂಪನಿಯು ಇತ್ತೀಚೆಗೆ ನ್ಯೂರಾಲಿಂಕ್ (Neuralink) ಬ್ರೈನ್ ಚಿಪ್ ತಯಾರಿಸಿದೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದ ವಿಷ್ಯ. ಇದನ್ನು ಮಂಗಗಳ ಮೇಲೆ ಅಳವಡಿಸಲಾಗಿದೆ. ಬ್ರೈನ್ ಚಿಪ್ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಇತ್ತೀಚೆಗೆ ಇದನ್ನು ಮಾನವ ಪರೀಕ್ಷೆಗೆ ಒಳಪಡಿಸಲಾಗ್ತಿದೆ. ದಾಂಪತ್ಯ ದ್ರೋಹ ಮಾಡ್ತಿರುವ ವ್ಯಕ್ತಿ ಈಗ ಎಲಾನ್ ಮಾಸ್ಕ್ ಸಹಾಯ ಕೇಳಿದ್ದಾರೆ. ನ್ಯೂರಾಲಿಂಕ್ ಮೆದುಳಿನ ಚಿಪ್ ತನ್ನ ದಾಂಪತ್ಯ ದ್ರೋಹವನ್ನು ನಿಲ್ಲಿಸಬಹುದೇ ಎಂದು ಕೇಳಿದ್ದಾನೆ.
ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು
ನ್ಯೂರಾಲಿಂಕ್ ಚಿಪ್ ಇನ್ನೂ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿಲ್ಲ. ಆಗ್ಲೇ ಇದಕ್ಕೆ ಬೇಡಿಕೆ ಬಂದಂತಿದೆ. ರೆಡ್ಡಿಟ್ ನಲ್ಲಿ ಈ ವ್ಯಕ್ತಿ ಎಲಾನ್ ಮಸ್ಕ್ ಸಹಾಯ ಕೇಳಿದ್ದಾನೆ. ಚಿಪ್ ತನ್ನ ಮೋಸವನ್ನು ಸುಧಾರಿಸುತ್ತಾ ಎಂದಿದ್ದಾನೆ.
ರೆಡ್ಡಿಟ್‌ನಲ್ಲಿ electronic_camera277 ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು r:marriageadvice ವೇದಿಕೆಯಲ್ಲಿ ಪ್ರಶ್ನೆ ಕೇಳಿದ್ದಾರೆ. ನಾನು ನನ್ನ ಹೆಂಡತಿಗೆ ಮೋಸ ಮಾಡಿದ್ದೇನೆ ಎಂಬ ವಿಷ್ಯವನ್ನು ಹೇಳ್ಬೇಕಾ ಎಂದು ಕೇಳಿದ್ದಾನೆ. 17 ವರ್ಷಗಳ ದಾಂಪತ್ಯ ಜೀವನದಲ್ಲಿ ಆತ ಪತ್ನಿಗೆ ಎಷ್ಟು ಮೋಸ ಮಾಡಿದ್ದಾನೆ ಎಂಬುದು ಆತನ ಲೆಕ್ಕಕ್ಕಿಲ್ಲವಂತೆ. ದಾಂಪತ್ಯ ದ್ರೋಹ ತಡೆಯಲು, ಮನಸ್ಥಿತಿಯನ್ನು ಸುಧಾರಿಸಿಕೊಳ್ಳಲು ಈ ವ್ಯಕ್ತಿ ಥೆರಪಿ ಕೂಡ ಪಡೆದಿದ್ದಾನೆ. ಆದ್ರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ನಂತ್ರ ಎಲಾನ್ ಮಸ್ಕ್ ಗೆ ಈ ವ್ಯಕ್ತಿ ಚಿಪ್ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಅಲ್ಲದೆ ಚಿಪ್ ಬಗ್ಗೆ ತಾನು ರಿಸರ್ಚ್ ಮಾಡಿದ್ದೇನೆ ಎಂದು ವ್ಯಕ್ತಿ ರೆಡ್ಡಿಟ್ ನಲ್ಲಿ ಬರೆದಿದ್ದಾನೆ.
ಈ ವ್ಯಕ್ತಿ ಪೋಸ್ಟ್ ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ನಿನ್ನ ತಪ್ಪನ್ನು ಚಟದ ಮೇಲೆ ಹೊರಿಸುವ ಅಗತ್ಯವಿಲ್ಲ. ನಿನ್ನನ್ನು ನೀನು ಸುಧಾರಿಸಿಕೊಳ್ಳಬೇಕು. ಮೋಸ ಮಾಡೋದನ್ನು ಬಿಟ್ಟು, ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಪ್ರಸವದ ನಂತ್ರ ಪತಿ ಮೇಲ್ಯಾಕೆ ಈ ಹೆಣ್ಮಕ್ಕಳು ಇಷ್ಟು ಕೋಪಿಸಿಕೊಳ್ಳುತ್ತಾರೆ?
ನಿನ್ನ ಈ ಅಭ್ಯಾಸ ಬಿಡುವವರೆಗೆ ನೀನು ಪತ್ನಿಯಿಂದ ದೂರ ಇರು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನೀನು ಮದುವೆ ಆಗ್ಬಾರದಿತ್ತು. ನೀನೀಗ ಮಾಡ್ತಿರುವುದು ಸ್ವಾರ್ಥ, ಬೇಜವಾಬ್ದಾರಿ ಮತ್ತು ಅಪಾಯಕಾರಿ ಕೆಲಸ ಎಂದು ಇನ್ನೊಬ್ಬ ಬಳಕೆದಾರ ಖಂಡಿಸಿದ್ದಾನೆ. ಮಸ್ಕ್ ಪ್ರಕಾರ, ನ್ಯೂರಾಲಿಂಕ್ ಅನ್ನು ಆರಂಭದಲ್ಲಿ ದೈಹಿಕ ವಿಕಲಾಂಗ ರೋಗಿಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ.