ಹೆರಿಗೆ ನಂತ್ರ ಮಹಿಳೆ ಬದಲಾಗ್ತಾಳೆ. ಇದು ಸಂಪೂರ್ಣ ಸತ್ಯ. ಇದಕ್ಕೆ ನಾನಾ ಕಾರಣಗಳಿವೆ. ಆದ್ರೆ ಪತಿ ಮೇಲೆ ಮೊದಲಿದ್ದ ಭಾವನೆ ಕೂಡ ಬದಲಾಗ್ತಾ ಬರುತ್ತದೆ. ಪ್ರೀತಿ ಜಾಗದಲ್ಲಿ ಮುನಿಸು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಏನು ಗೊತ್ತಾ?
ಮನೆಗೊಂದು ಮಗು ಬಂದಾಗ ಏನೆಲ್ಲ ಮಾಡ್ಬೇಕು, ಹೇಗೆಲ್ಲ ಇರಬೇಕು ಎನ್ನುವ ಪ್ಲಾನ್ ಗರ್ಭಧರಿಸುವ ಸಮಯದಿಂದಲೇ ಶುರುವಾಗಿರುತ್ತೆ. ಇಬ್ಬರು ಸೇರಿ ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂದು ಪ್ಲಾನ್ ಮಾಡುವ ಜನರೂ ಇದ್ದಾರೆ. ನಿಮ್ಮ ಕಲ್ಪನೆಯೇ ಬೇರೆ, ವಾಸ್ತವವೇ ಬೇರೆ ಇರುತ್ತದೆ. ಹೆರಿಗೆ ನಂತ್ರ ಮಹಿಳೆ ಒಬ್ಬಳೇ ಅಲ್ಲ. ಆಕೆ ಕೈನಲ್ಲೊಂದು ಮಗು ಇರುತ್ತದೆ. ಪ್ರಸವದ ನಂತ್ರ ಏಕಾಏಕಿ ಆಕೆ ಜೀವನದಲ್ಲಿ ದೊಡ್ಡ ಬದಲಾವಣೆಯೊಂದು ಆಗಿರುತ್ತದೆ. ಹಾಗಾಗಿಯೇ ಹೆರಿಗೆಯನ್ನು ಮರುಹುಟ್ಟು ಎಂದು ಕರೆಯುತ್ತಾರೆ.
ನವಜಾತ (Newborn) ಶಿಶುವನ್ನು ಬೆಳೆಸೋದು ಹೇಳಿದಷ್ಟು ಸುಲಭ ಅಲ್ವೇ ಅಲ್ಲ. ತಾಯಿ (Mother) ಯಾದವಳು ಅದೆಷ್ಟೋ ನಿದ್ದೆಯಿಲ್ಲದ ರಾತ್ರಿ ಕಳೆದಿರುತ್ತಾಳೆ. ಆಕೆ ಹಾರ್ಮೋನ್ (hormones) ನಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇಡೀ ದಿನ ಮಗುವಿನ ಕೆಲಸದಲ್ಲಿ ನಿರತವಾಗಿರುವ ತಾಯಿ ಸಂಪೂರ್ಣ ಸ್ವಾತಂತ್ರ್ಯ ಕಳೆದುಕೊಂಡಿರ್ತಾಳೆ. ಈ ಸಮಯದಲ್ಲಿ ಅನೇಕ ಮಹಿಳೆಯರು ಪತಿ ಮೇಲಿರುವ ಆಸಕ್ತಿ, ಪ್ರೀತಿ, ಕಾಳಜಿಯನ್ನು ಕಳೆದುಕೊಳ್ತಾರೆ. ಪತಿ ಬಗ್ಗೆ ಕಹಿಯೊಂದು ಮನಸ್ಸಿನಲ್ಲಿ ಚಿಗುರಲು ಶುರುವಾಗುತ್ತದೆ.
ಗರ್ಭಾವಸ್ಥೆಯಲ್ಲಿ ಫಾಸ್ಟ್ ಫುಡ್ ಸೇವಿಸಿದ್ರೆ… ಹುಟ್ಟೋ ಮಕ್ಕಳಲ್ಲಿ ಸಮಸ್ಯೆ ಬರುತ್ತಂತೆ!
ಚೊಚ್ಚಲ ಮಗುವಿಗೆ ತಾಯಿಯಾದವಳಿಗೆ ಎಲ್ಲವೂ ಹೊಸದು. ಒಂದ್ಕಡೆ ಕಲಿಕೆ, ಇನ್ನೊಂದು ಕಡೆ ಮಕ್ಕಳ ಕೆಲಸ, ಮಗುವಿಗೆ ಸ್ತನಪಾನ, ಊಟ – ಆಹಾರದಲ್ಲಿ ವ್ಯತ್ಯಯ, ಸುಸ್ತು ಆಕೆಯನ್ನು ಭಾವನಾತ್ಮಕವಾಗಿ ಮತ್ತಷ್ಟು ಕುಸಿಯುವಂತೆ ಮಾಡುತ್ತದೆ. ಆಕೆ ಶಕ್ತಿ ಕಳೆದುಕೊಂಡಾಗ ಸಿಟ್ಟು, ಹತಾಷೆ ಸಾಮಾನ್ಯ. ಈ ಸಮಯದಲ್ಲಿ ಗಂಡನಾದವನು ನಿರೀಕ್ಷೆಯಂತೆ ಪಾಲಕರ ಜವಾಬ್ದಾರಿ ಹಂಚಿಕೊಂಡಿಲ್ಲ ಎಂದಾಗ ನಿರಾಶೆ, ತಾತ್ಸಾರ, ಅಸಮಾಧಾನ ಮತ್ತಷ್ಟು ಹೆಚ್ಚಾಗುತ್ತದೆ.
ಮಕ್ಕಳನ್ನು ಹೆತ್ತು ಅವರ ಆರೈಕೆಯಲ್ಲಿರುವ ತಾಯಿ ಪತಿಯಿಂದ ಸ್ವಲ್ಪ ನೆರವು ಬಯಸ್ತಾಳೆ. ಸಣ್ಣಪುಟ್ಟ ಕೆಲಸಗಳಲ್ಲಿ ಆತ ಕೈಜೋಡಿಸ್ತಾನೆ ಎಂದುಕೊಳ್ತಾಳೆ. ಆದ್ರೆ ಆತ ತನ್ನದೇ ಲೋಕದಲ್ಲಿ ಮುಳುಗಿದ್ದರೆ, ಆರಾಮವಾಗಿ ಸುತ್ತಾಡಿಕೊಂಡು, ಸ್ನೇಹಿತರ ಜೊತೆ ಮಾತನಾಡ್ತಾ ಕಾಲ ಕಳೆಯುತ್ತಿದ್ದರೆ ಈಕೆ ಒಳಗೊಳಗೆ ಕುಗ್ಗಿ ಹೋಗ್ತಾಳೆ. ಅವನಿಗಿರುವ ಸ್ವಾತಂತ್ರ್ಯ ನನಗೇಕಿಲ್ಲ ಎನ್ನುವ ಭಾವನೆ ಮಹಿಳೆಯನ್ನು ಕಾಡುತ್ತದೆ. ಇದು ಇಬ್ಬರ ಮಧ್ಯೆ ಗಲಾಟೆಗೆ ಕಾರಣವಾದ್ರೂ ಅಚ್ಚರಿ ಇಲ್ಲ.
ಮಹಿಳೆಯರ ಆರೋಗ್ಯವನ್ನು ಕಾಪಾಡುತ್ತೆ ಈ ಐದು ವಿಟಮಿನ್
ಕಲ್ಪನೆ ಹಾಗೂ ವಾಸ್ತವದ ಮಧ್ಯೆಯ ವ್ಯತ್ಯಾಸ ತಿಳಿದ ತಕ್ಷಣ ಏಕಾಏಕಿ ಅದಕ್ಕೆ ಹೊಂದಿಕೊಳ್ಳುವುದು ಕಷ್ಟ. ಹೊಸ ಜವಾಬ್ದಾರಿಯ ಸಂಪೂರ್ಣ ಹೊಣೆಯನ್ನು ಹೊರಲು ಎಲ್ಲ ತಾಯಿಯರು ಸಿದ್ಧರಿರೋದಿಲ್ಲ. ಅವರ ಮಾನಸಿಕ ಸ್ಥಿತಿ ಸ್ವಲ್ಪ ದುರ್ಬಲವಾಗಿದ್ದರೂ ಖಿನ್ನತೆ, ಆತಂಕಕ್ಕೆ ಒಳಗಾಗ್ತಾರೆ. ಪತಿಯ ಮೇಲೆ ನಕಾರಾತ್ಮಕ ಭಾವನೆ ಮೂಡಲು ಶುರುವಾಗುತ್ತದೆ.
ಮಾತುಕತೆಯೊಂದೇ ಇಲ್ಲಿ ಪರಿಹಾರ : ತಾಯಿಯಂತೆ (Mother) ತಂದೆಗೂ (Father) ಈ ಜವಾಬ್ದಾರಿ ಹೊಸದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ಬಾಯ್ಬಿಟ್ಟು ಹೇಳದೆ ಹೋದ್ರೆ ಅದು ಅವರಿಗೆ ಅರ್ಥವಾಗದೆ ಇರಬಹುದು. ಹಾಗಾಗಿ ಪತಿ ಜೊತೆ ಮುಕ್ತ ಹಾಗೂ ಪ್ರಾಮಾಣಿಕ (Honesty) ಮಾತುಕತೆ ನಡೆಸಿ. ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಅವರ ದೃಷ್ಟಿಕೋನವನ್ನು ಅರಿಯಿರಿ. ಇಬ್ಬರೂ ಜವಾಬ್ದಾರಿಯನ್ನು ಹಂಚಿಕೊಳ್ಳಿ. ಪ್ರಸವದ ನಂತ್ರ ಅನೇಕ ದಂಪತಿ ಇದೇ ಸಮಸ್ಯೆ ಎದುರಿಸುವ ಕಾರಣ ಇದು ನಿಮ್ಮೊಬ್ಬರಿಗೆ ಕಾಡುತ್ತಿರುವ ಸಮಸ್ಯೆ ಅಲ್ಲ ಎಂಬುದನ್ನು ಮೊದಲು ತಿಳಿಯಿರಿ. ನಿಮ್ಮ ಸ್ನೇಹಿತರು, ಸಂಬಂಧಿಕರು, ಹಿರಿಯರ ಜೀವನದಲ್ಲೂ ಇದು ನಡೆದಿರುವ ಕಾರಣ ಅವರ ಸಹಾಯ ಪಡೆಯಿರಿ. ವೃತ್ತಿಪರ ಸಲಹೆಗಾರರ ಸಹಾಯ ಪಡೆದು ನಿಮ್ಮ ಮಾನಸಿಕ ಸ್ಥಿತಿಯನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿ. ನೀವು ಭಾವನೆಯನ್ನು ಮಾತಿನ ಮೂಲಕ ಹಂಚಿಕೊಂಡ್ರೆ ನಿಮ್ಮ ಸಂಗಾತಿ ಸದಾ ನಿಮ್ಮ ಜೊತೆಗಿರ್ತಾರೆ ಎಂಬುದನ್ನು ನೆನಪಿಡಿ.