
ಸೃಷ್ಟಿಯ ವೈಚಿತ್ರ್ಯವನ್ನು ಬಲ್ಲವರು ಯಾರೂ ಇಲ್ಲ. ಈ ಪರಿಸರದಲ್ಲಿ ನಡೆಯುತ್ತಿರುವ ಅದೆಷ್ಟೋ ವಿಷಯಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆಯೇ ವಿನಾ ಉತ್ತರವಂತೂ ಸಿಗುವುದೇ ಇಲ್ಲ. ಮನುಷ್ಯ ತಾನು ಎಷ್ಟೇ ಬುದ್ಧಿವಂತ ಎಂದುಕೊಂಡರೂ ಸೃಷ್ಟಿಯ ಮುಂದೆ ಆತ ಜೀರೋ ಎಂದರೂ ತಪ್ಪಾಗಲಿಕ್ಕಿಲ್ಲ. ಸಂಶೋಧನೆಗಳ ಮೂಲಕ ಒಂದೊಂದೇ ವಿಷಯ ಹೊರಬಂದಾಗ ಅಬ್ಬಾ ಎಂದು ಬಾಯಿಯ ಮೇಲೆ ಬೆರಳಿಡಬೇಕಷ್ಟೇ. ಅದರಲ್ಲಿಯೂ ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳ ಲೋಕದ ಒಳಹೊಕ್ಕು ನೋಡಿದಷ್ಟೂ ವಿಚಿತ್ರಗಳೇ ತುಂಬಿರುತ್ತವೆ. ಕೋಟಿ ಕೋಟಿ ಜೀವರಾಶಿಗಳ ಅಧ್ಯಯನವಂತೂ ಸುಲಭವೇ ಅಲ್ಲ. ಆದರೂ ಕೆಲವು ಸಂಶೋಧಕರು ಹಲವು ದಶಕಗಳವರೆಗೆ ಒಂದು ಸಂಶೋಧನೆಯಲ್ಲಿ ತೊಡಗಿದಾಗ ಸಿಗುವ ಫಲಿತಾಂಶ ಅಚ್ಚರಿಯ ಕೂಪವಾಗಿರುತ್ತದೆ.
ಅದೇ ರೀತಿ, ಇದೀಗ ಪೆಂಗ್ವಿನ್ ಬಗ್ಗೆ ಪಕ್ಷಿ ತಜ್ಞರು ನಡೆಸಿರುವ ಸಂಶೋಧನೆಯಿಂದ, ಪೆಂಗ್ವಿನ್ ಕೂಡ ಮನುಷ್ಯರಂತೆಯೇ ವಿಚ್ಛೇದನ ಪಡೆಯುತ್ತಿವೆ, ಮರು ಮದುವೆಗೆ ಸಂಗಾತಿಯನ್ನು ಹುಡುಕುತ್ತವೆ, ಸಂಬಂಧಗಳಲ್ಲಿ ಬಿರುಕು ಮೂಡುವ ಪ್ರಕ್ರಿಯೆ ಪೆಂಗ್ವಿನ್ಗಳಲ್ಲಿಯೂ ಇವೆ ಎನ್ನುವುದನ್ನು ಕಂಡುಹಿಡಿದಿದ್ದಾರೆ! ಕಳೆದ ಹತ್ತು ವರ್ಷಗಳಿಂದ ನಡೆದಿರುವ ಈ ಅಧ್ಯಯನದಲ್ಲಿ ಈ ಕುತೂಹಲದ ವಿಷಯ ರಿವೀಲ್ ಆಗಿದೆ. ಪರಿಸರ ವಿಜ್ಞಾನ ಮತ್ತು ವಿಕಸನ ಜರ್ನಲ್‌ನಲ್ಲಿ (journal Ecology and Evolution) ಪ್ರಕಟವಾದ ಅಧ್ಯಯನದಲ್ಲಿ ಲೇಖಕ ರಿಚರ್ಡ್ ರೀನಾ ಈ ವಿಷಯ ಉಲ್ಲೇಖಿಸಿದ್ದಾರೆ. ಸಂಬಂಧದ ವಿಷಯ ಬಂದಾಗ ಮನುಷ್ಯರಿಗೂ, ಪೆಂಗ್ವಿನ್ಗಳಿಗೂ ಹೆಚ್ಚು ವ್ಯತ್ಯಾಸ ಇಲ್ಲ. ಒಬ್ಬ ಸಂಗಾತಿಯಿಂದ ಬೇಸರವಾದಾಗ, ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಸಿಗದೇ ಹೋದಾಗ ತನ್ನ ಸಂಗಾತಿಗೆ ವಿಚ್ಛೇದನ ಕೊಟ್ಟು ಮತ್ತೊಂದು ಸಂಗಾತಿಯನ್ನು ಹುಡುಕಿಕೊಳ್ಳುತ್ತವೆ. ಸಾಮಾನ್ಯವಾಗಿ ಮನುಷ್ಯರಂತೆಯೇ ಪೆಂಗ್ವಿನ್ಗಳಲ್ಲಿ ಕೂಡ, ಒಂದು ಗಂಡಿಗೆ ಒಂದು ಹೆಣ್ಣು ಎನ್ನುವ ಪದ್ಧತಿ ಇದೆ. ಅದೇ ಕಾರಣಕ್ಕೆ ಆ ಹೆಣ್ಣು ಅಥವಾ ಗಂಡು ಸರಿಹೊಂದಲಿಲ್ಲ ಎಂದರೆ ಮನುಷ್ಯರಂತೆಯೇ ಡಿವೋರ್ಸ್ ಕೊಡುತ್ತವೆ ಎಂದಿದ್ದಾರೆ ಸಂಶೋಧಕರು. ಫಿಲಿಪ್ ದ್ವೀಪದಲ್ಲಿ ಇರುವ 37 ಸಾವಿರ ಪುಟ್ಟ ಪೆಂಗ್ವಿನ್‌ಗಳ ವಸಾಹತು ಪ್ರದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಸುದೀರ್ಘ ಅವಧಿಯ ಸಂಶೋಧನೆಯಿಂದ ಇದು ಬಹಿರಂಗಗೊಂಡಿದೆ.
ಹಾವಿನಂತೆ ನೀರಲ್ಲಿ ಚಲಿಸುವ ಬೇರಿದು: ವಿಜ್ಞಾನಕ್ಕೇ ಸವಾಲೆಸೆಯುವ ಗರುಡ ಸಂಜೀವಿನಿಯ ಕುತೂಹಲ ಇಲ್ಲಿದೆ...
ಸಂತಾನೋತ್ಪತ್ತಿ ಸಮಯದಲ್ಲಿ ಡಿವೋರ್ಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಲೈಂಗಿಕ ಕ್ರಿಯೆಯಲ್ಲಿನ ಅತೃಪ್ತಿ ಇದಕ್ಕೆ ಮುಖ್ಯ ಕಾರಣವಾದರೆ, ತನ್ನ ಸಂಗಾತಿ ಮತ್ತೊಂದು ಪೆಂಗ್ವಿನ್ ಜೊತೆ ಇರುವುದನ್ನು ನೋಡಿದಾಗಲೂ ಸಂಬಂಧಗಳು ಮುರಿದು ಬೀಳುವುದು ಇದೆ ಎಂದು ಈ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಪೆಂಗ್ವಿನ್ಗಳಿಗೆ ತಮ್ಮ ಸಂತಾನೋತ್ಪತ್ತಿಯೇ ಮುಖ್ಯವಾಗಿರುತ್ತವೆ. ವಯಸ್ಸಾದಂತೆ ಇದು ಕುಗ್ಗುವ ಕಾರಣ, ತನ್ನ ಸಂಗಾತಿಗೆ ಡಿವೋರ್ಸ್ ಕೊಟ್ಟು ಮತ್ತೊಂದನ್ನು ಹುಡುಕಿ ಹೋಗುವುದು ಪೆಂಗ್ವಿನ್ಗಳಲ್ಲಿ ಸಾಮಾನ್ಯವಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ.
ಅಧ್ಯಯನ ಮಾಡಿದ ಸುಮಾರು ಸಾವಿರ ಜೋಡಿಗಳಲ್ಲಿ, ಹತ್ತು ವರ್ಷಗಳ ನಂತರ 250 ವಿಚ್ಛೇದನಗಳು ನಡೆದಿವೆ. ಒಂದೇ ಸಂಬಂಧ ಇಟ್ಟುಕೊಂಡ ಹೆಣ್ಣು ಪೆಂಗ್ವಿನ್‌ಗಳು 'ವಿಧವೆ'ಯಾಗಿರುವ ಘಟನೆಗಳೂ ನಡೆದಿವೆ. ಹೆಚ್ಚಿನ ಪೆಂಗ್ವಿನ್‌ಗಳು ತಮ್ಮ ಪಾಲುದಾರರನ್ನು ತೊರೆದ ನಂತರ ಒಂಟಿಯಾಗಿ ಖಿನ್ನತೆಗೆ ಜಾರುವುದು ಇದೆ ಎಂದು ಸಂಶೋಧನೆಯ ಭಾಗವಾಗಿರುವ ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಪರಿಸರ ಶರೀರಶಾಸ್ತ್ರ ಮತ್ತು ಸಂರಕ್ಷಣಾ ಸಂಶೋಧನಾ ಗುಂಪಿನ ಮುಖ್ಯಸ್ಥರಾಗಿರುವ ರೀನಾ ಹೇಳುತ್ತಾರೆ. ಪೆಂಗ್ವಿನ್‌ಗಳ ಸಂಖ್ಯೆ ಕ್ಷೀಣಿಸುತ್ತಿರಲು ಕಾರಣ ಏನೆಂದರೆ, ಬಹುತೇಕ ಪೆಂಗ್ವಿನ್‌ಗಳು ತಮಗೆ ಸೂಕ್ತ ಸಂಗಾತಿ ಹುಡುಕಾಟದಲ್ಲಿಯೇ ಸಮಯ ಕಳೆದುಬಿಡುತ್ತವೆ. ಪ್ರಣಯಕ್ಕೆ ಅವುಗಳ ಜೀವಿತಾವಧಿಯಲ್ಲಿ ಕಡಿಮೆ ಸಮಯ ಸಿಗುತ್ತದೆ. ಇದರ ಜೊತೆಗೆ, ಆಹಾರ ಲಭ್ಯತೆ ಕಡಿಮೆಯಾದಾಗ ಬೇರೆ ಸ್ಥಳ ಅರಸಿ ಹೋಗುವುದರಲ್ಲಿ ಸಮಯ ಕಳೆಯುವ ಕಾರಣ, ಲೈಂಗಿಕ ಜೀವನಕ್ಕೆ ಇದಕ್ಕೆ ಅವಕಾಶ ಸಿಗುವುದು ಕಡಿಮೆ ಎಂದಿದ್ದಾರೆ ಸಂಶೋಧಕರು.
ಬಹಳ ದಿನ ಹಲ್ಲುಜ್ಜದಿದ್ದರೆ ಜೀವಕ್ಕೇ ಅಪಾಯ! ತಜ್ಞ ವೈದ್ಯರು ಹೇಳುವುದೇನು? ಇಲ್ಲಿದೆ ಎಚ್ಚರಿಕೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.