ಇವತ್ತಿನ ಕಾಲದಲ್ಲಿ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ಹಾಗೆಯೇ ಇಲ್ಲೊಂದು ಮದುವೆ ಮನೆಯಲ್ಲಿ ಮದ್ವೆ ದಿನಾನೇ ವಧು ನಾಪತ್ತೆಯಾಗಿದ್ದು, ವರ 13 ದಿನ ಕಾದು ಕುಳಿತಿದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಸ್ಪೆಷಲ್ ಡೇ ಆಗಿರುತ್ತದೆ. ಕೇವಲ ಮದುಮಕ್ಕಳು ಮಾತ್ರವಲ್ಲ ಕುಟುಂಬ ಸದಸ್ಯರು, ಬಂಧು ಬಳಗದವರು, ಸ್ನೇಹಿತರು ಎಲ್ಲರೂ ಮದುವೆ ದಿನ ಅಂದ್ರೆ ಖುಷಿ ಪಡುತ್ತಾರೆ. ಆದ್ರೆ ಇತ್ತೀಚಿಗೆ ಕೆಲ ವರ್ಷಗಳಿಂದ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ಸಣ್ಣಪುಟ್ಟ ಕಾರಣಕ್ಕೆ ವರ, ವಧು ಮದುವೆ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ಮದ್ವೆ ಊಟ ಚೆನ್ನಾಗಿಲ್ಲಾಂತ, ಬ್ಯಾಂಡ್ ಕರೆಸಿಲ್ಲಾಂತ, ಹುಡುಗನ ಕಡೆಯವರು ಬರೋಕೆ ಕಾರು ಕಳಿಸಿಕೊಟ್ಟಿಲ್ಲಾಂತ ಹೀಗೆ ನಾನಾ ಕಾರಣಕ್ಕೆ ಹುಡುಗರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇತ್ತ ಹುಡುಗಿಯರು ಹುಡುಗನ ಮನೆಯಿಂದ ಕೊಟ್ಟ ಸೀರೆ ಚೆನ್ನಾಗಿಲ್ಲ, ಹುಡುಗನ ಮನೆ ಚಿಕ್ಕದು ಅನ್ನೋ ಕಾರಣಕ್ಕೆಲ್ಲಾ ಮದ್ವೆ ಬೇಡ ಅನ್ನುತ್ತಾರೆ.
ಹಲವು ಜೋಡಿಗಳು ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿಕೊಂಡ ಹಲವಾರು ಘಟನೆಗಳು ನಡೆದಿವೆ. ಹಾಗೆಯೇ ಇಲ್ಲೊಂದು ಮದುವೆ (Marriage) ಮನೆಯಲ್ಲಿ ಮದ್ವೆ ದಿನಾನೇ ವಧು (Bride) ನಾಪತ್ತೆಯಾಗಿದ್ದು, ವರ (Groom) ಆಕೆಗಾಗಿ 13 ದಿನ ಕಾದು ಕುಳಿತ ಘಟನೆ ನಡೆದಿದೆ.
ದಿಬ್ಬಣ ಹೋಗೋ ರಸ್ತೆಯಲ್ಲಿ ಲೈಟೇ ಇಲ್ಲ, ಮದ್ವೆ ಕ್ಯಾನ್ಸಲ್ ಮಾಡ್ಕೊಂಡು ಹೊರಟೇ ಹೋದ ವರ!
ರಾಜಸ್ಥಾನದ ಸೈನಾ ಎಂಬ ಗ್ರಾಮದಲ್ಲಿ ಮದುವೆ ದಿನಾನೇ ವಧು ಓಡಿ ಹೋಗಿದ್ದಾಳೆ. ವರ ಆಕೆಗಾಗಿ ಅಲ್ಲೇ 13 ದಿನ ಕಾದುಕುಳಿತಿದ್ದಲ್ಲದೆ, ಬಳಿಕ ಆಕೆಯನ್ನೇ ಮದುವೆಯಾಗಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮೇ 3ರಂದು ನಡೆಯಬೇಕಿದ್ದ ಮದುವೆ ಕೊನೆಗೂ ಮೇ 15ರಂದು ನಡೆದಿದೆ. ಮದುವೆಯಲ್ಲಿ ಇಷ್ಟೆಲ್ಲಾ ಗೊಂದಲವಾಗಿದ್ದು ಯಾಕಾಗಿ ಅನ್ನೋದು ಇನ್ನಷ್ಟು ಕುತೂಹಲ ಮೂಡಿಸುವ ವಿಚಾರ.
ಘಟನೆಯ ವಿವರ
ಮೇ 03ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಅದಕ್ಕಾಗಿ ಹುಡುಗ ಮತ್ತು ಹುಡುಗಿಯ ಮನೆಯವರು ಎಲ್ಲಾ ರೀತಿಯ ತಯಾರಿ ಶುರು ಮಾಡಿಕೊಂಡಿದ್ದರು. ಮದುವೆಯ ದಿನ ವಧುವಿನ ಮನೆಗೆ ವರನ ಮನೆಯಿಂದ ದಿಬ್ಬಣವೂ ಬಂದಾಗಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೇ, ಮದುವೆ ಶಾಸ್ತ್ರಗಳು ನಡೆಯುತ್ತಿದ್ದಂತೆ ವಧು ಹೊಟ್ಟೆ ನೋವು (Stomach pain), ವಾಕರಿಕೆ ಬರುತ್ತಿದೆ ಎಂದು ಬಾತ್‌ರೂಮ್‌ಗೆ ಓಡಿಹೋಗಿದ್ದಾಳೆ. ಆದರೆ ಎಷ್ಟೇ ಹೊತ್ತಾದರೂ ವಧು ವಾಪಾಸ್ ಬರಲೇ ಇಲ್ಲ .ಅನುಮಾನಗೊಂಡು ಆಕೆಯ ಪೋಷಕರು (Parents) ಮನೆಯೆಲ್ಲಾ ಹುಡುಕಾಡ ತೊಡಗಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ನಂತರ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದುಬಂದಿದೆ.
ಹುಡುಗಿಯ ಪೋಷಕರಿಗೆ ತಮ್ಮ ಮಗಳು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದು ಗೊತ್ತಿತ್ತು. ಹೀಗಾಗಿ ಅವರಿಗೆ ಮಗಳು ಓಡಿಹೋಗಿದ್ದಾಳೆಂದು ಅರ್ಥವಾಯಿತು. ಅದನ್ನು ಅವರು ವರ ಮತ್ತು ಆತನ ಕುಟುಂಬದವರಿಗೆ ತಿಳಿಸಿದರು. ಆದರೆ ವಧು ಓಡಿ ಹೋಗಿದ್ದಾಳೆಂದು ಗೊತ್ತಾದರೂ ವರ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಲ್ಲಿಲ್ಲ. ಬದಲಿಗೆ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು 13 ದಿನಗಳ ವರೆಗೆ ಮದುವೆ ಮಂಟಪದಲ್ಲೇ ಕುಳಿತ್ತಿದ್ದಾನೆ. ತಾನು ಯಾವ ಕಾರಣಕ್ಕೂ ಹಸೆಮಣೆ ಬಿಟ್ಟು ಏಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತ. ಕಟ್ಟಿದ ಬಾಸಿಂಗವನ್ನೂ ತೆಗೆಯಲು ಒಪ್ಪಲಿಲ್ಲ. 13 ದಿನಗಳವರೆಗೆ ಹೀಗೆ ವಧುವಿನ ಮನೆಯಲ್ಲೇ ಬೀಡುಬಿಟ್ಟಿದ್ದ.
ವರನ ಕುಟುಂಬ ಕಡಿಮೆ ಚಿನ್ನಾಭರಣ ಕೊಟ್ಟಿದ್ದಕ್ಕೆ ಮದ್ವೆ ಕ್ಯಾನ್ಸಲ್ ಮಾಡಿದ ವಧು!
ವರ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಕುಳಿತಿರುವುದನ್ನು ಕಂಡು ವಧುವಿನ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹ ದೂರು ನೀಡಿದ್ದಾರೆ. ಅಂತಿಮವಾಗಿ 13 ದಿನಗಳ ಬಳಿಕ, ಮೇ 15ರಂದು ಮಹಿಳೆಯನ್ನು ಪತ್ತೆಹಚ್ಚಲಾಗಿದ್ದು, ಆಕೆಯ ಪೋಷಕರಿಗೆ ಒಪ್ಪಿಸಲಾಯಿತು. ಆಕೆ ವಾಪಸ್ ಮನೆಗೆ ಬರುತ್ತಿದ್ದಂತೆ ಆ ವರ ಅವಳನ್ನೇ ಮದುವೆಯಾಗಿದ್ದಾನೆ. ಸಂಪ್ರದಾಯಬದ್ಧವಾಗಿ, ಸಂಭ್ರಮದಿಂದ ವಿವಾಹ ಸಮಾರಂಭ ನೆರವೇರಿದೆ. ಬಳಿಕ ಮಂಟಪದಲ್ಲೇ ಕಾದು ಕುಳಿತಿದ್ದ ವರನೊಂದಿಗೆ ಎಲ್ಲಾ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿಸಲಾಯಿತು.