ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ, ರಾಯಚೂರಿನ ಸೊಸೆ ಆಗಲಿದ್ದಾರೆ ಸತೀಶ್‌ ಜಾರಕಿಹೊಳಿ ಪುತ್ರಿ!

Published : Oct 23, 2026, 09:55 PM IST
priyanka jarkiholi

ಸಾರಾಂಶ

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಗೌತಮ್ ಪಾಟೀಲ್ ಅವರೊಂದಿಗೆ ಸರಳವಾಗಿ ನೆರವೇರಿತು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಜಾರಕಿಹೊಳಿ ಸಹೋದರರು ಈ ಕೌಟುಂಬಿಕ ಸಮಾರಂಭದಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.

ಬೆಳಗಾವಿ (ಅ.23): ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಯುವ ಸಂಸದೆ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಸರಳ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿದೆ. ಬೆಳಗಾವಿಯ ಪ್ರತಿಷ್ಠಿತ ಕ್ಲಬ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ‘ಹಿಲ್‌ ಗಾರ್ಡನ್’ ನಿವಾಸದಲ್ಲಿ ಈ ಶುಭ ಸಮಾರಂಭ ಜರುಗಿತು. ಕೇವಲ ಕುಟುಂಬದ ಆಪ್ತರು ಹಾಗೂ ನಿಕಟವರ್ತಿಗಳ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಕಾರ್ಯಕ್ರಮ ಸಂಪನ್ನಗೊಂಡಿದೆ.

ಸತೀಶ್‌ ಜಾರಕಿಹೊಳಿ ಭಾವಿ ಅಳಿಯ ಯಾರು?

ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಭಾವಿ ವರನ ಹೆಸರು ಗೌತಮ್ ಪಾಟೀಲ್. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿರುವ ಗೌತಮ್, ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರು. ಗೌತಮ್ ಅವರ ತಂದೆ ನಿವೃತ್ತ ಆರ್‌ಟಿಒ (RTO) ಅಧಿಕಾರಿಯಾಗಿದ್ದು, ಉನ್ನತ ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ವರನ ಕುಟುಂಬದ ಕುರಿತು ಹೆಚ್ಚಿನ ವಿವರಗಳನ್ನು ಜಾರಕಿಹೊಳಿ ಕುಟುಂಬ ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಕುಟುಂಬದ ಸಂಭ್ರಮದಲ್ಲಿ ಒಂದಾದ ಜಾರಕಿಹೊಳಿ ಸಹೋದರರು

ರಾಜಕೀಯವಾಗಿ ಜಾರಕಿಹೊಳಿ ಸಹೋದರರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಮನೆಯ ಶುಭ ಸಮಾರಂಭಕ್ಕಾಗಿ ಎಲ್ಲ ಸಹೋದರರು ಒಟ್ಟಾಗಿ ಸೇರಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಅವರ ಸಹೋದರ ರಾಹುಲ್ ಜಾರಕಿಹೊಳಿ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಭಾವಿ ದಂಪತಿಗೆ ಶುಭ ಹಾರೈಸಿದರು.

ರಾಜಕೀಯ ಅಖಾಡದಿಂದ ಹಸೆಮಣೆ ಕಡೆಗೆ

ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ದೇಶದ ಅತಿ ಕಿರಿಯ ಸಂಸದೆಯರಲ್ಲಿ ಒಬ್ಬರಾಗಿ ಪ್ರಿಯಾಂಕಾ ಜಾರಕಿಹೊಳಿ ಸಂಸತ್ ಪ್ರವೇಶಿಸಿದ್ದರು. ತಮ್ಮ ಸರಳತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಂದ ಗುರುತಿಸಿಕೊಂಡಿರುವ ಪ್ರಿಯಾಂಕಾ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಯ ದಿನಾಂಕ ಹಾಗೂ ಹೆಚ್ಚಿನ ವಿವರಗಳನ್ನು ಕುಟುಂಬದ ಮೂಲಗಳು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.

ಅದ್ದೂರಿತನಕ್ಕೆ ಬ್ರೇಕ್, ಕೇವಲ ಕುಟುಂಬಸ್ಥರು ಮಾತ್ರ ಭಾಗಿ

ಇತ್ತೀಚೆಗೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿ ಪ್ರಕರಣದ ತನಿಖೆ ಮುಂದುವರಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅದ್ದೂರಿತನವಿಲ್ಲದೆ ಕೇವಲ ಕುಟುಂಬಸ್ಥರನ್ನಷ್ಟೇ ಆಹ್ವಾನಿಸಿ ಸರಳವಾಗಿ ನಿಶ್ಚಿತಾರ್ಥ ನಡೆಸಲಾಗಿದೆ. ಕಾಂಗ್ರೆಸ್‌ನ ಯಾವುದೇ ಹಿರಿಯ ನಾಯಕರಾಗಲಿ, ಸಚಿವರಾಗಲಿ ಅಥವಾ ಶಾಸಕರಾಗಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಿಯಾನೇ ನನಗೆ ದುಡ್ಡು ಕೊಡ್ತಿದ್ರು, ಪೆಟ್ರೋಲ್​ ಹಾಕಿಸಿ ಬೈಕ್​ ಕೊಟ್ಟು ಹೋಗ್ತಿದ್ರು- ಆ ದಿನಗಳ ನೆನೆದ ಕಿಚ್ಚ
MINUGU TAARE KALPANA DEATH SECRET: ಆ ಜೋಡಿ ಮಾಡದ ಅದೊಂದೇ ತಪ್ಪಿಗೆ ಮಿನುಗುತಾರೆ ಕಲ್ಪನಾ ಪ್ರಾಣಪಕ್ಷಿ ಹಾರಿಹೋಯ್ತು; ಅಂದು ನಿಜವಾಗಿ ನಡೆದಿದ್ದೇನು?