
ಅನಂತವಾಗಿ ದಿಗಂತ ಮುಟ್ಟಲಾಗದಷ್ಟು ವಿಶಾಲವಾಗಿ ಹರಡಿರುವ ಸಾಗರದ ಮಧ್ಯದಲ್ಲಿ, ಯಾವುದೇ ಊಹನೆ ಕೂಡ ಇಲ್ಲದೆ ಅಪರಿಚಿತ ಹಡಗುಗಳು ಹಾದುಹೋಗುವಾಗ ಕಾಕತಾಳೀಯವಾಗಿ ತಂದೆ-ಮಗ ಮುಖಾಮುಖಿಯಾದ ಅಪರೂಪದಲ್ಲೇ ಅಪರೂಪದ ಅತ್ಯಂತ ಹೃದಯಸ್ಪರ್ಶಿ ಘಟನೆಯೊಂದು ನೆಟ್ಟಿಗರ ಗಮನ ಸೆಳೆದಿದೆ.
ಮರ್ಚೆಂಟ್ ನೇವಿ ನಾವಿಕರಾದ ರುಶೀಲ್ ಸರನ್ ಹಾಗೂ ಅವರ ತಂದೆ ರವಿರಾಜ್ ಸರನ್ ಸಾಗರದ ಮಧ್ಯದಲ್ಲಿ ಹೀಗೆ ಮುಖಾಮುಖಿಯಾದ ಅಪರೂಪದ ಜನ್ಮಜನ್ಮಾಂತರದ ಬಾಂಧವ್ಯದ ಕ್ಷಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರುಶೀಲ್ ಸರನ್ ಅವರು ತಾವಿದ್ದ ಹಡಗಿನಲ್ಲಿ ಉತ್ತರ ಅಟ್ಲಾಂಟಿಕ್ ಸಾಗರದ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ (ದಕ್ಷಿಣದ ಕಡೆಗೆ) ಬೃಹತ್ ಹಡಗೊಂದು ಬರುವುದನ್ನು ಗಮನಿಸಿದ ಅವರು, ಕುತೂಹಲದಿಂದ ತಮ್ಮ ಹಡಗಿನ ನೌಕಾಯಾನ ಚಾರ್ಟ್‌ಗಳನ್ನು (Navigation Charts) ಪರಿಶೀಲಿಸಿದರು. ಆಗ ಅವರಿಗೆ ಎದುರಾಗಿದ್ದು ಬದುಕಿನ ಅತ್ಯಂತ ದೊಡ್ಡ ವಿಸ್ಮಯ! ಎದುರಿಗೆ ಬರುತ್ತಿದ್ದ ಬೃಹತ್ ಹಡಗು ಬೇರಾರದೂ ಅಲ್ಲ, ಸ್ವತಃ ತಮ್ಮ ತಂದೆ ರವಿರಾಜ್ ಸರನ್ ಅವರು ಕ್ಯಾಪ್ಟನ್ ಆಗಿ ಪ್ರಯಾಣಿಸುತ್ತಿದ್ದ ಹಡಗಾಗಿತ್ತು.
ಯಾವುದೇ ಪೂರ್ವ ಯೋಜಿತ ಭೇಟಿಯಿಲ್ಲದೆ, ಇಬ್ಬರೂ ಸಂಪೂರ್ಣ ವಿಭಿನ್ನ ದಿಕ್ಕುಗಳಿಗೆ ಪ್ರಯಾಣಿಸುತ್ತಿದ್ದಾಗ, ಎರಡು ಹಡಗುಗಳು ಸಾಗರದ ಮಧ್ಯದಲ್ಲೇ ಪರಸ್ಪರ ಹಾದುಹೋಗುವ ಅಪರೂಪದ ಘಟನೆ ನಡೆಯಿತು.
ಈ ಮರೆಯಲಾಗದ ಕ್ಷಣದ ವಿಡಿಯೋ ಹಂಚಿಕೊಂಡ ರುಶೀಲ್, " ಇದು ಒಂದು ಬಿಲಿಯನ್‌ನಲ್ಲಿ ಸಿಗುವ ಒಂದು ಆಕಸ್ಮಿಕ ಅವಕಾಶವು, ನಾವಿಕರಾದ ಎರಡು ತಲೆಮಾರಿನ ತಂದೆ-ಮಗನನ್ನು ಸಾಗರದ ಮಧ್ಯದಲ್ಲಿ ಒಟ್ಟಿಗೆ ತಂದಿದೆ. ಎರಡು ಹಡಗುಗಳು, ಎರಡು ವಿಭಿನ್ನ ಪಯಣ, ಆದರೆ ಒಂದೇ ಅಪರೂಪದ ಕ್ಷಣ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸುದೀರ್ಘ ಅವಧಿಗೆ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ನಾವಿಕರ ಕಠಿಣ ಬದುಕಿನ ನಡುವೆ, ಈ ಅನಿರೀಕ್ಷಿತ ಭೇಟಿ ಅವರಿಗೆ ಬೆಲೆಕಟ್ಟಲಾಗದ ನೆನಪನ್ನು ನೀಡಿದೆ.
ತಮ್ಮ ತಂದೆ ಹೇಳಿದ ಮಾತನ್ನು ಸ್ಮರಿಸಿದ ರುಶೀಲ್, "ಈ ವಿಶಾಲವಾದ ಸಾಗರದ ಶೂನ್ಯತೆಯಲ್ಲಿ ಎಲ್ಲೋ ಒಂದು ಕಡೆ ತಂದೆ-ಮಗ ಒಬ್ಬರನ್ನೊಬ್ಬರು ಕಂಡುಕೊಂಡೆವು. ನಾವು ಬೇರೆ ಬೇರೆ ದಿಕ್ಕುಗಳಲ್ಲಿ ನೌಕಾಯಾನ ಮಾಡುತ್ತಿರಬಹುದು, ಆದರೆ ನಮ್ಮನ್ನು ಜೋಡಿಸಿರುವುದು ಒಂದೇ ಸಾಗರ" ಎಂದು ತಂದೆ ಹೇಳಿದ್ದಾಗಿ ತಿಳಿಸಿದ್ದಾರೆ.
ಬಹುಶಃ ಬೆಳೆಯುವುದು ಎಂದರೆ ಇದೇ ಇರಬೇಕು. ಕಾಲಕ್ರಮೇಣ ನಾವೆಲ್ಲರೂ ನಮ್ಮದೇ ಆದ ಪ್ರತ್ಯೇಕ ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಆದರೆ, ಜೀವನದ ಸಾಗರದಲ್ಲಿ ಹೇಗೆ ಸಾಗಬೇಕೆಂದು ನಮಗೆ ಕಲಿಸಿಕೊಟ್ಟ ವ್ಯಕ್ತಿಯೊಂದಿಗೆ ಪಯಣಿಸುವುದನ್ನು ನಾವು ಎಂದಿಗೂ ನಿಲ್ಲಿಸುವುದಿಲ್ಲ ಎಂದು ರುಶೀಲ್ ಭಾವನಾತ್ಮಕವಾಗಿ ಬರೆದಿದ್ದಾರೆ.
ಈ ವಿಡಿಯೋ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
"ನಾವಿಕನ ಬದುಕಿನಲ್ಲಿ ಇದು ಅತ್ಯಂತ ಅಪರೂಪದ ಸುಂದರ ಕ್ಷಣ" ಎಂದು ಒಬ್ಬರು ಕಾಮೆಂಟ್ ಮಾಡಿದರೆ,
"ಪನಾಮಾ ಕಾಲುವೆ ದಾಟುವಾಗ ನನಗೂ ನನ್ನ ತಂದೆಗೂ ಹೀಗೆಯೇ ಎದುರಾಗಿದ್ದ ನೆನಪು ಬಂತು. ನಿಜಕ್ಕೂ ಈ ಪ್ರಪಂಚ ಎಷ್ಟು ಚಿಕ್ಕದಾಗಿದೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.