ನೆದರ್ ಲ್ಯಾಂಡ್ಸ್ ಮಕ್ಕಳು ವಿಶ್ವದಲ್ಲೇ ಅತ್ಯಂತ ಸಂತೋಷಿಗಳು. ಉತ್ತಮ ಪೇರೆಂಟ್ ಹುಡ್ ನಿಂದಾಗಿ ಅಲ್ಲಿನ ಮಕ್ಕಳು ಅತ್ಯಂತ ಖುಷಿಯಾಗಿರುತ್ತಾರೆ. ವಿಶ್ವದ ಬೇರೆ ಎಲ್ಲ ಪಾಲಕರಿಗಿಂತ ಅಲ್ಲಿನ ಪಾಲಕರು ಖುಷಿಯಾಗಿರುತ್ತಾರಂತೆ, ಮಕ್ಕಳೊಂದಿಗೆ ಒಡನಾಡುತ್ತಾರೆ.
“ಮಕ್ಕಳು (children) ಎಲ್ಲಿದ್ದರೂ ಖುಷಿ (happy) ಯಾಗಿರುತ್ತಾರೆ, ಅವರಿಗೆ ಆಟ(play)ವಾಡುವುದನ್ನು ಬಿಟ್ಟು ಬೇರೆ ಯೋಚನೆಯಿಲ್ಲ. ಅವರಿಗೆ ಯಾವುದೇ ತಲೆಬಿಸಿ(tension)ಯೂ ಇಲ್ಲ, ಅವರ ಲೋಕವೇ ಚೆಂದ’ ಎಂದು ದೊಡ್ಡವರಿಗೆ ಅನಿಸುತ್ತಿರುತ್ತದೆ. ಆದರೆ ಅವರಿಗೂ ಅವರದ್ದೇ ಆದ ಸವಾಲುಗಳಿರುತ್ತವೆ. ಅವರದ್ದು ಮುಗ್ಧ (innocent) ಪ್ರಪಂಚವಾಗಿರುವುದರಿಂದ ಅಲ್ಲಿ ಚಿಂತೆಗೆ ಮತ್ತು ದುಃಖಕ್ಕೆ ಅವಕಾಶವಿರುವುದಿಲ್ಲ.
ಮಕ್ಕಳು ಎಲ್ಲಿದ್ದರೂ ಒಂದೇ ರೀತಿಯೇನೋ ಹೌದು. ಆದರೆ, ನೆದರ್ ಲ್ಯಾಂಡ್ಸ್ (Netherlands) ಮಕ್ಕಳು ಅದೃಷ್ಟವಂತರು. ಏಕೆಂದರೆ, ವಿಶ್ವದಲ್ಲೇ ಅವರು ಅತ್ಯಂತ ಸುಖಿಗಳು. ಉಳಿದೆಲ್ಲ ಮಕ್ಕಳಿಗಿಂತ ಅವರು ಹೆಚ್ಚು ಖುಷಿಯಾಗಿರುತ್ತಾರಂತೆ. ಇತ್ತೀಚೆಗೆ ಯುನಿಸೆಫ್ (Unisef) ಬಿಡುಗಡೆ ಮಾಡಿರುವ ಜಾಗತಿಕ ಮಕ್ಕಳ ಖುಷಿ ಸೂಚ್ಯಂಕ(Index)ದಲ್ಲಿ ನೆದರ್ ಲ್ಯಾಂಡ್ಸ್ ಮುಂಚೂಣಿಯಲ್ಲಿದೆ.
ಶ್ರೀಮಂತ (rich) ಹಾಗೂ ಮುಂದುವರಿದ 41 ದೇಶಗಳ ಮಕ್ಕಳ ಸ್ಥಿತಿಗತಿ ಮೇಲೆ ಸಮೀಕ್ಷೆ ನಡೆದಿದ್ದು, ನೆದರ್ ಲ್ಯಾಂಡ್ಸ್ ಮೊದಲ ಸ್ಥಾನ ಪಡೆದಿದೆ. ಮಕ್ಕಳ ಮಾನಸಿಕ ನೆಮ್ಮದಿ, ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಕೌಶಲಾಭಿವೃದ್ಧಿಯನ್ನು ಇದಕ್ಕೆ ಪರಿಗಣಿಸಲಾಗಿತ್ತು.
ನೆದರ್ ಲ್ಯಾಂಡ್ಸ್ ಮಕ್ಕಳು ಹೆಚ್ಚು ಖುಷಿಯಾಗಿರಲು ಅವರ ಪಾಲಕರೇ ಕಾರಣ.
ಪಾಲಕರ ವಿಶಾಲ ಹೃದಯ (Open mind)
ನೆದರ್ ಲ್ಯಾಂಡ್ಸ್ ಪಾಲಕರು ಮನೆಯಲ್ಲಿ ವಿಶ್ವಾಸಾರ್ಹ ಮತ್ತು ನೆಮ್ಮದಿಯ ವಾತಾವರಣವನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳ ವಿಚಾರ, ಅಭಿಪ್ರಾಯಗಳನ್ನು ಸಹನೆಯಿಂದ ಕೇಳಿಸಿಕೊಂಡರೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಅವರಿಗೆ ತಿಳಿ ಹೇಳುತ್ತಾರೆ. ಅವರ ಸಂಹವನ ಕೌಶಲ ಅದ್ಭುತ. ಹೀಗಾಗಿಯೇ, ಮಕ್ಕಳು ಮತ್ತು ಪಾಲಕರ ನಡುವೆ ಸಂಹವನದ ಯಾವುದೇ ಕೊರತೆ ಸೃಷ್ಟಿಯಾಗುವುದಿಲ್ಲ. ಮಕ್ಕಳೊಂದಿಗೆ ಯಾವ ರೀತಿ ಮಾತನಾಡುತ್ತಾರೋ ಹಾಗೆಯೇ ನಡೆದುಕೊಳ್ಳುತ್ತಾರೆ. ಮಕ್ಕಳು ಮತ್ತು ಪಾಲಕರ ನಡುವೆ ಸಂಘರ್ಷಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳುತ್ತಾರೆ. ದೃಢ (Assertiveness) ವಾಗಿ ಆದರೆ, ಯಾವುದೇ ಆಕ್ರಮಣಶೀಲತೆ(aggressiveness) ಇಲ್ಲದೆ ವರ್ತಿಸುತ್ತಾರೆ. ಪಾಲಕರು ಮಕ್ಕಳನ್ನು ಗೌರವ, ಸಹಾನುಭೂತಿಯಿಂದ ನಡೆಸಿಕೊಳ್ಳುತ್ತಾರೆ, ಕೇಳಿಸಿಕೊಳ್ಳುತ್ತಾರೆ. ಮನೆಯಲ್ಲಿ ಪ್ರೀತಿ ತುಂಬಿದ ಬೆಚ್ಚನೆ ವಾತಾವರಣ ನಿರ್ಮಿಸಲು ಇದರಿಂದ ಸಾಧ್ಯವಾಗುತ್ತದೆ.
ಮಕ್ಕಳೊಂದಿಗೆ ಒಡನಾಟ (Companionship)
ಮಕ್ಕಳೊಂದಿಗೆ ಒಡನಾಡುವುದು, ಅವರೊಂದಿಗೆ ಮಾತುಕತೆ ನಡೆಸುತ್ತಿರಬೇಕೆಂದು ನಮಗೆ ಗೊತ್ತಿದೆ. ಆದರೆ ನಾವು ಸಾಮಾನ್ಯವಾಗಿ ಮುಕ್ತವಾಗಿರುವುದಿಲ್ಲ. ಆರ್ಥಿಕ ಸ್ಥಿತಿಗತಿಗಳನ್ನು ಅವರಿಂದ ಮುಚ್ಚಿಡುತ್ತೇವೆ, ನಮ್ಮ ಮಾನಸಿಕ-ದೈಹಿಕ ಸಮಸ್ಯೆಗಳ ಕುರಿತು ಮಕ್ಕಳಿಗೆ ತಿಳಿಸುವುದಿಲ್ಲ. ಮನೆಯ ಹಲವು ವ್ಯವಹಾರಗಳು ಅವರ ಅರಿವಿಗೆ ಬಾರದಂತೆ ಮಾಡುತ್ತೇವೆ. ಆದರೆ, ನೆದರ್ ಲ್ಯಾಂಡ್ಸ್ ಪಾಲಕರು ಹಾಗಲ್ಲ. ಅವರು ಮಕ್ಕಳೊಂದಿಗೆ ಮುಕ್ತವಾಗಿ ಚರ್ಚೆ ನಡೆಸುತ್ತಾರೆ. ಯಾವುದನ್ನೂ ಮುಚ್ಚಿಡುವುದಿಲ್ಲ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಅವರು ಯಾವುದೇ ಕಾರಣಕ್ಕೂ ಮಕ್ಕಳೊಂದಿಗೆ ಸುಳ್ಳು ಹೇಳುವುದಿಲ್ಲ. ಇದರಿಂದ ಪಾಲಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಲೈಂಗಿಕತೆಯ ಕುರಿತಾಗಿಯೂ ಅವರು ಮುಕ್ತ ಮಾತುಕತೆ ನಡೆಸಲು ಸ್ವತಂತ್ರರು.
ಕುಟುಂಬವೇ ಫಸ್ಟ್ (Family first)
ನೆದರ್ ಲ್ಯಾಂಡ್ಸ್ ಪಾಲಕರಿಗೆ ಕುಟುಂಬದೆದುರು ಬೇರೆ ಏನೂ ಇಲ್ಲ. ಪಾಲಕರು ಎಷ್ಟೇ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದರೂ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ರಾತ್ರಿ ಊಟವನ್ನು ಜತೆಯಾಗಿಯೇ ಮಾಡುತ್ತಾರೆ. ಮಕ್ಕಳೊಂದಿಗೆ ಆಟವಾಡುತ್ತಾರೆ. ಇಂಪಾರ್ಟೆಂಟ್ ವಿಚಾರ ಏನೆಂದರೆ, ಇಲ್ಲಿ ಅಪ್ಪ ಹಾಗೂ ಅಮ್ಮ ಇಬ್ಬರಿಗೂ ಸಮಾನ ಸ್ಥಾನವಿದೆ. ಪಾಲಕರು ಖುಷಿಯಾಗಿದ್ದರಷ್ಟೇ ಮಕ್ಕಳನ್ನೂ ಖುಷಿಯಾಗಿ ನೋಡಿಕೊಳ್ಳುವುದು ಸಾಧ್ಯ ಎನ್ನುವುದನ್ನು ಅವರು ಅರಿತಿದ್ದಾರೆ.
ಸ್ವತಂತ್ರ ಭಾವದ ಮಕ್ಕಳು (liberal nature)
ಮಕ್ಕಳನ್ನು ತಮ್ಮದೇ ಮುಂದುವರಿದ ಭಾಗವನ್ನಾಗಿ ನೋಡುವ, ಪರಿಗಣಿಸುವ ಪಾಲಕರು ನಾವು. ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಡಲು ನಮ್ಮ ಮನಸ್ಸು ಒಗ್ಗುವುದಿಲ್ಲ. ಆದರೆ, ನೆದರ್ ಲ್ಯಾಂಡ್ಸ್ ನಲ್ಲಿ ಮಕ್ಕಳಿಗೆ ಪ್ರತ್ಯೇಕ ಅಸ್ತಿತ್ವವಿದೆ. ಸ್ವತಂತ್ರ ಅನಿಸಿಕೆ, ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಮಕ್ಕಳಿಗೆ ಅವರದ್ದೇ ಆದ ಒಲವು-ನಿಲುವುಗಳಿವೆ ಎನ್ನುವುದನ್ನು ಪಾಲಕರು ಬೇಸರವಿಲ್ಲದೆ ಒಪ್ಪಿಕೊಳ್ಳುತ್ತಾರೆ.