ಮನಸು ಆಷಾಢದ ಮಳೆ;ಕಂಡದ್ದು, ಕಲಿತಿದ್ದು, ಬೆಂಕಿಗೆ ಬಿದ್ದು ಪಾರಾಗಿದ್ದು

By Kannadaprabha NewsFirst Published Aug 25, 2020, 1:11 PM IST
Highlights

ಸೂರ್ಯಾಸ್ತವರೆಗೂ ಪ್ರಶಾಂತವಾಗಿ ಎಲ್ಲವನ್ನೂ ಸಕಾರಾತ್ಮಕವಾಗಿ ಎದುರು ನೋಡುತ್ತಿದ್ದ ಮನಸ್ಸಿನ ಶಾಂತ ಸಮುದ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದು ಕೇವಲ ಒಂದು ಗಂಟೆಯ ಆಷಾಢ ಮಳೆ. ಮನುಷ್ಯನ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡುವಲ್ಲಿ ಪ್ರಕೃತಿಯ ಪಾತ್ರ ದೊಡ್ಡದು. ಎಷ್ಟೇ ಮುಂದುವರಿದರೂ ಮನುಷ್ಯ ಪ್ರಕೃತಿಯ ಮುಂದೆ ಕುಬ್ಜನೇ!

- ಏಕಾಏಕಿ ಪ್ರಕೃತಿಯಲ್ಲಿ ಉಂಟಾದ ಈ ಬದಲಾವಣೆ ನಾಳಿನ ಕನಸು ಕಮರಲಿರುವ ಸೂಚನೆಯಾ?

- ಟಾಚ್‌ರ್‍ ಬೆಳಕಲ್ಲಿ ಅಸ್ಪಷ್ಟವಾಗಿ ಕಂಡ ದೇವರ ಹುಂಡಿಗೆ 101 ರು. ಕಾಣಿಕೆ ಹೇಳಿ, ಕುಳಿತಲ್ಲೇ ಕಣ್ಣು ಮುಚ್ಚಿ ದೇವರ ನೆನದಾಯ್ತು.

- ಅದೊಂದು ಸಂಜೆ ಅಚಾನಕ್ಕಾಗಿ ಮಾಯಾನಗರಿ ಕೈ ಬೀಸಿ ಕರೆಯುವಾಗ ಕರಾವಳಿಯ ಬಾನಿನಿಂದ ಅಚ್ಚರಿಯ ತುಂತುರು ಮಳೆ ಉದುರ ತೊಡಗಿತ್ತು.

- ಕಿಟಿಕಿ ಬಾಗಿಲಿನಿಂದ ಆ ದೇವರ ಹುಂಡಿ ನಸು ನಕ್ಕಂತಾಯ್ತು.

- ಸಿನನ್‌ ಇಂದಬೆಟ್ಟು

ಸೂರ್ಯ ಅಂದಿನ ಕೆಲಸ ಮುಗಿಸಿ ಆಗಷ್ಟೇ ಪಶ್ಚಿಮದ ಬೆಟ್ಟದ ಇಳಿಜಾರಿನಲ್ಲಿ ಮರೆಯಾಗಿದ್ದ. ಮಾರನೇ ದಿನ ಆತ ಹುಟ್ಟಿನಡು ಆಕಾಶದಲ್ಲಿ ನಿಂತು ತನ್ನ ತೀಕ್ಷ$್ಣ ಕಿರಣಗಳಿಂದ ನೆತ್ತಿ ಸುಡುವ ವೇಳೆಗೆ ಆ ಸಿಹಿ ಸುದ್ದಿಯನ್ನು ಕೇಳಿ ಮನಸ್ಸು ಆಕಾಶವನ್ನೂ ಮೀರಿ ಹಾರಬೇಕು. ಹೊಸದೊಂದು ಜೀವನಕ್ಕೆ, ನವ ಕನಸಿಗೆ ಆ ಸುದ್ದಿ ಕೈ ಹಿಡಿದು ಕರೆದುಕೊಂಡು ಹೋಗಲಿದೆ. ಸುಮಾರು ದಿನಗಳಿಂದ ಮನಸ್ಸಿನಲ್ಲಿ ಅಚ್ಚೊತ್ತಿ, ಆಗಾಗ ಜಿನುಗುತ್ತಿದ್ದ ಆ ಕನಸು ಸಾಕಾರವಾಗುವ ಕ್ಷಣ ಬಂದೇ ಬಿಟ್ಟಿತು. ಹೀಗೆ ಕೈಗೆ ಸಿಗದ ಯೌವ್ವನದ ಹುಚ್ಚು ಮನಸ್ಸು ಸಂತೋಷದ ಕ್ಷಣಗಳನ್ನು ಎದುರು ನೋಡುತ್ತಿರುವ ವೇಳೆಯೇ, ಸಣ್ಣದೊಂದು ಅವ್ಯಕ್ತ ಭಯ ಮನಸ್ಸಿನ ಮೂಲೆಯಲ್ಲಿ ರೂಪು ಪಡೆಯತೊಡಗಿತ್ತು.

ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

ಒಂದು ವೇಳೆ ಹಾಗಾಗದಿದ್ದರೇ..?

ಆಷಾಢದ ಆ ರಾತ್ರಿಗೆ ಇದ್ದಕ್ಕಿದ್ದಂತೆ ಆಕಾಶ ಗುಡುಗತೊಡಗಿತು. ದಟ್ಟೈಸಿದ ಮೋಡಗಳ ನಡುವೆ ಚಂದಿರ ಮುಸುಕಾಗಿದ್ದ. ಬೆಂಕಿಯ ಕಿಡಿಗಳಂತೆ ಮಿನುಗುತಿದ್ದ ಲಕ್ಷ ನಕ್ಷತ್ರಗಳು ಕಣ್ಮರೆಯಾದವು. ಕಪ್ಪು ಮೋಡಗಳ ಪರದೆಯಿಂದ ಬೆಳ್ಳಿ ಮಿಂಚಿನ ರೇಖೆಗಳು ಮೂಡ ತೊಡಗಿದವು. ಭೀಕರ ಗಾಳಿಗೆ ಮರಗಳು ಓಲಾಡತೊಡಗಿದವು. ಆಗಷ್ಟೇ ಗೂಡು ಸೇರಿದ ಹಕ್ಕಿಗಳು ಪ್ರಕೃತಿಯ ಅನಿರೀಕ್ಷಿತ ವರ್ತನೆಗೆ ಭಯ ಬಿದ್ದು ಚೀರಲಾರಂಭಿಸಿದವು. ಆಹಾರ ಹುಡುಕುತ್ತಾ ಹೊರಟಿದ್ದ ಬಾವಲಿಗಳ ಹಿಂಡು, ಮನೆಯ ಬಗಲಲ್ಲೇ ಇದ್ದ ಪೇರಳೆ ಮರದಲ್ಲಿ ತಲೆಕೆಳಗಾಗಿ ನೇತಾಡುತ್ತಾ ಕರ್ಕಶವಾಗಿ ಗಂಟಲು ಬಿರಿಯತೊಡಗಿದವು. ಭಾರಕ್ಕೆ ಕುಸಿದ ಮೋಡಗಳು ದೊಪ್ಪನೆ ಮಳೆ ಸುರಿಸತೊಡಗಿತು. ಏನೋ ಆಗಬಾರದು ಸಂಭವಿಸಿದಂತೆ ಮನದ ಭಾವನೆಗಳ ಗ್ರಾಫ್‌ ಏರುಪೇರಾಗ ತೊಡಗಿತು. ಏಕಾಏಕಿ ಸುರಿದ ಈ ಮಳೆ, ಮುಂದೆ ನಡೆಯಲಿರುವ ಅನಾಹುತದ ಸಂದೇಶವನ್ನು ಹೊತ್ತು ತಂದತ್ತಿತ್ತು. ಮನಸ್ಸು ಭೋರ್ಗರೆಯತೊಡಗಿತು. ಕಣ್ಮುಚ್ಚಿದ ವಿದ್ಯುತ್‌ ಆತಂಕವನ್ನು ಮತ್ತಷ್ಟುಹೆಚ್ಚಿಸಿತ್ತು.

ಏಕಾಏಕಿ ಪ್ರಕೃತಿಯಲ್ಲಿ ಉಂಟಾದ ಈ ಬದಲಾವಣೆ ನಾಳಿನ ಕನಸು ಕಮರಲಿರುವ ಸೂಚನೆಯಾ? ಮುಂಬರುವ ಅನಾಹುತಗಳನ್ನು ಪ್ರಕೃತಿ ಮುಂಗಡವಾಗಿ ಸೂಚನೆ ನೀಡುತ್ತದೆ ಎನ್ನುವ ಮಾತಿನಂತೆ ಎಲ್ಲವೂ ಆಗುತ್ತಿದೆಯಲ್ಲಾ. ಒಂದು ವೇಳೆ ಹಾಗಾದರೆ, ಮುಂದಿನ ಭವಿಷ್ಯ ಏನು? ಮುಂದೆ ಮಾಡುವುದಾದರೂ ಏನು? ಈಗ ನನಗಿರುವ ಕಿಮ್ಮತ್ತಿಗೆ ನೌಕರಿ ಸಿಗುವುದು ಕಷ್ಟ. ಮನಸ್ಸಿನಲ್ಲಿ ಕಟ್ಟಿದ್ದ ಆಸೆಯ ಮಹಲುಗಳ ಗೋಪುರ ಒಂದೊಂದೇ ಕುಸಿಯತೊಡಗಿತು. ಅಸ್ಪಷ್ಟಭವಿಷ್ಯದ ಕರಾಳ ಸತ್ಯ ಕಣ್ಣ ಮುಂದೆ ರಪ್ಪನೇ ಒಮ್ಮೆ ಹಾದು ಹೋಯಿತು. ಮನದಲ್ಲಿ ನೂರಾರು ಯೋಚನೆಗಳು ಲೋಚಗುಟ್ಟುತ್ತಿರುವ ವೇಳೆಯಲ್ಲೇ ಕುಕ್ಕರ್‌ ಕೂಗಿಕೊಂಡಿತು. ಇಂಥ ಮುನ್ಸೂಚನೆಗಳ ಬಗ್ಗೆ ಬಾಲ್ಯದಲ್ಲಿ ಕೇಳಿದ್ದ ನಾನಾ ಕತೆಗಳು ನೆನಪಾಗಿ ತುಮುಲ, ತಳಮಳ, ಚಡಪಡಿಕೆ ಹೆಚ್ಚಾಯ್ತು. ಮನದ ಇಂಗಿತಗಳು ಆವಿಯಾಗತೊಡಗಿದವು. ಟಾಚ್‌ರ್‍ ಬೆಳಕಲ್ಲಿ ಅಸ್ಪಷ್ಟವಾಗಿ ಕಂಡ ದೇವರ ಹುಂಡಿಗೆ 101 ರು. ಕಾಣಿಕೆ ಹೇಳಿ, ಕುಳಿತಲ್ಲೇ ಕಣ್ಣು ಮುಚ್ಚಿ ದೇವರ ನೆನದಾಯ್ತು. ಮಳೆಯ ರಾತ್ರಿಯ ಆ ಪ್ರಾರ್ಥನೆಗೆ ಈ ಹಿಂದಿಗಿಂತಲೂ ಹೆಚ್ಚಿನ ಭಕ್ತಿ, ಭಯ, ಶ್ರದ್ಧೆ ಇತ್ತು. ಸಿಡಿಲು, ಗುಡುಗನ್ನೂ ಮೀರಿಸುವ ಏಕಾಗ್ರತೆ ಇತ್ತು. ಸೂರ್ಯಾಸ್ತವರೆಗೂ ಪ್ರಶಾಂತವಾಗಿ ಎಲ್ಲವನ್ನೂ ಸಕಾರಾತ್ಮಕವಾಗಿ ಎದುರು ನೋಡುತ್ತಿದ್ದ ಮನಸ್ಸಿನ ಶಾಂತ ಸಮುದ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದು ಕೇವಲ ಒಂದು ಗಂಟೆಯ ಆಷಾಢ ಮಳೆ. ಮನುಷ್ಯನ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡುವಲ್ಲಿ ಪ್ರಕೃತಿಯ ಪಾತ್ರ ದೊಡ್ಡದು. ಎಷ್ಟೇ ಮುಂದುವರಿದರೂ ಮನುಷ್ಯ ಪ್ರಕೃತಿಯ ಮುಂದೆ ಕುಬ್ಜನೇ!

ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ? 

ಪ್ರಕೃತಿ ನೀಡಿದ ಸೂಚನೆ ಮರುದಿನ ನಿಜವಾಗಿ ಹೋಗಿತ್ತು. ಸುಮಾರು ದಿನಗಳಿಂದ ಕಂಡಿದ್ದ ಕನಸೊಂದು ನೂಲಿನ ಅಂತರದಲ್ಲಿ ಕೈ ತಪ್ಪಿ ಹೋಗಿತ್ತು. ಆಸೆ, ಭರವಸೆಗಳ ಪರ್ವತ ಚೂರು ಚೂರಾಗಿ ಹೋಗಿತ್ತು. ಕಣ್ಣನ್ನು ತಬ್ಬಿಕೊಂಡಿದ್ದ ಅಳು, ಗಲ್ಲದ ಮೇಲಿಂದ ಜಾರಿ ಮಾಯವಾಯ್ತು. ಮನಸ್ಸಲ್ಲಿ ಮೂಡಿದ್ದ ಆಸೆಯ ಹೆಜ್ಜೆ ಗುರುತುಗಳು ಚುಚ್ಚಲಾರಂಭಿಸಿದವು. ಭವಿಷ್ಯದ ಕತ್ತಲು ಮುಂದೆ ಬಂದು ಗಹಗಹಿಸಿದಂತಾಯ್ತು. ಜೀವನದ ಮೊದಲ ಸೋಲಿನ ಏಟಿಗೆ ಆತ್ಮವಿಶ್ವಾಸ ಸೊಂಟ ಮುರಿದುಕೊಂಡು ಬಿತ್ತು. ಮುಂದಿನ ಕೆಲ ದಿನಗಳಲ್ಲಿ ಜೀವನದಲ್ಲಿ ಬರೀ ಮಿಂಚು, ಸಿಡಿಲುಗಳದ್ದೇ ಆರ್ಭಟ. ಅದೊಂದು ಸಂಜೆ ಅಚಾನಕ್ಕಾಗಿ ಮಾಯಾನಗರಿ ಕೈ ಬೀಸಿ ಕರೆಯುವಾಗ ಕರಾವಳಿಯ ಬಾನಿನಿಂದ ಅಚ್ಚರಿಯ ತುಂತುರು ಮಳೆ ಉದುರ ತೊಡಗಿತ್ತು. ಅರಳಿದ್ದ ಕಾಮನಬಿಲ್ಲು ಹೊಸ ಭರವಸೆಯನ್ನು ಮೂಡಿಸಿತು. ಅಂದು ತಳಮಳ ಉಂಟು ಮಾಡಿದ್ದ ಅದೇ ಪ್ರಕೃತಿ ಇಂದು ತಬ್ಬಿ ಹಿಡಿದು ಸಂತೈಸಿದಂತಿತ್ತು. ಗೊತ್ತಿಲ್ಲದಂತೆ ಕಣ್ಣಿಂದ ಎರಡು ಹನಿ ಜಾರಿ ಬಿತ್ತು. ಕಿಟಿಕಿ ಬಾಗಿಲಿನಿಂದ ಆ ದೇವರ ಹುಂಡಿ ನಸು ನಕ್ಕಂತಾಯ್ತು. ಮುಂದಿನದ್ದು ಮತ್ತೊಂದು ಅಧ್ಯಾಯ.

ಪ್ರೀತಿಸುವುದೊಂದೇ ಅಲ್ಲ, ಅಭಿವ್ಯಕ್ತಿಯೂ ಒಂದು ಕಲೆ!

ಕಣ್ಣೆದುರು ತೇಲಿ ಬರುತ್ತವೆ

ಕಂಡದ್ದು, ಕಲಿತಿದ್ದು; ಬೆಂಕಿಗೆ ಬಿದ್ದು ಪಾರಾಗಿದ್ದು;

ಪಗಡೆದಾಳದ ಜತೆಗೆ ಉರುಳಿ ಬಿದ್ದಿದ್ದು; ಬಿಚ್ಚಿದ

ಜಡೆಯ ನೆರಳಿನ ಕೆಳಗೆ ಭುಸುಗುಟ್ಟಿನರಳಿದ್ದು;

ಕಾಡು ಪಾಲಾಗಿ ಅಲೆದಿದ್ದು

ಯಾವಾಗಲೋ ಡೈರಿಯಲ್ಲಿ ಗೀಚಿದ್ದ ರಾಷ್ಟ್ರಕವಿ ಜಿ.ಎಸ್‌ ಶಿವರುದ್ರಪ್ಪನವರು ಬರೆದ ಈ ಸಾಲುಗಳು ಈ ಹಳೆಯ ನೆನಪುಗಳನ್ನು ಧೇನಿಸುತ್ತಿದ್ದರೇ, ಬೆಂಗಳೂರಿನ ತಂಪು ವಾತಾವರಣದಲ್ಲಿ ವರುಣ ಧ್ಯಾನಕ್ಕೆ ಕುಳಿತಿದ್ದ.

click me!