
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಮೇ 29): ಅದು ಅಪ್ಪ ಅಮ್ಮ ಮತ್ತು ಒರ್ವ ಪುತ್ರನಿರುವ ಪುಟ್ಟ ಸಂಸಾರ. ಪೋಷಕರಿಬ್ಬರೂ ಕೂಲಿ ಮಾಡಿ ತಮ್ಮ ಪುತ್ರನನ್ನ ಸಾಕಿ ಕನಸುಗಳನ್ನು ಕಂಡಿದ್ದರು. ಆದ್ರೆ ಶತ್ರುವಿನ ರೂಪದಲ್ಲಿ ಬಂದ ಹಾವೊಂದು ಆ ಕುಟುಂಬದ ಸಂತಸವನ್ನೆಲ್ಲ ಕಿತ್ತುಕೊಂಡು ದುಖಕ್ಕೆ ದೂಡಿದೆ. ಈಗ 22 ವರ್ಷದ ಮಗನಿಗ ತನ್ನ ಅರ್ಧ ಜೀವವನ್ನೇ ಕೊಟ್ಟು ಮರುಜೀವ ನೀಡಲು ತಾಯಿ ಮುಂದಾಗಿದ್ದಾಳೆ.
ಇಲ್ಲಿ ಹೆಜ್ಜೆ ಮೇಲೆ ಹೆಜ್ಜೆಯನ್ನ ಮೆತ್ತಗೆ ಇಡುತ್ತಾ ನಡೆದಾಡುತ್ತಿರುವ ಯುವಕನ ಹೆಸರು ಶರಣ್ ಕುಮಾರ್, ಈಗಿನ್ನು 22 ವರ್ಷ ವಯಸ್ಸು. ಕೂಲಿ ಮಾಡುವ ತನ್ನ ಪೋಷಕರ ಪ್ರೀತಿಯ ಏಕೈಕ ಪುತ್ರ. ತಮ್ಮ ಪುತ್ರನನ್ನು ಸಾಕಿ ಅವನಿಗೆ ಒಳ್ಳೆಯ ಶಿಕ್ಷಣಕೊಡಿಸಿ ಅವನಿಗೊಂದು ಕೆಲಸ ಸಿಕ್ಕರೆ ಸಾಕಪ್ಪ ಎಂದುಕೊಂಡಿದ ಈ ಬಡ ದಂಪತಿಗಳಿಗೆ ಜೀವನ ಕಷ್ಟವನ್ನು ಬೇಕಾದಷ್ಟು ನೀಡಿದೆ. ಎಸ್ ಎಸ್ ಎಲ್‌ಸಿ ವರೆಗೆ ಓದು ಮುಗಿಸಿ ಶರಣ್ ಐಟಿಐ ಎರಡನೇ ವರ್ಷವನ್ನು ಓದುತಿದ್ದನು. ಓದಿನ ಜೊತೆಗೆ ಮನೆ ಕೆಲಸವನ್ನೂ ಮಾಡಿಕೊಡುತಿದ್ದ ಶರಣ್ ಅಪ್ಪ ಅಮ್ಮ ಇಬ್ಬರಿಗೂ ಪ್ರೀತಿ ಪಾತ್ರವಾಗಿದ್ದನು. ಕಳೆದ ಎರಡು ವರ್ಷಗಳ ಹಿಂದೆ ಅದೊಂದು ದಿನ ಮನೆಯಿಂದ ಹಸು ಮೇಯಿಸಿಕೊಂಡು ಬೆಟ್ಟದ ಕಡೆಗೆ ಹೋಗಿದ್ದ ಶರಣ್ ಗೆ ಹಾವೊಂದು ಕಚ್ಷಿದೆ. ಅಂದಿನಿಂದ ಈ ಮನೆ, ಈ ಪುಟ್ಟ ಕುಟುಂಬದ ಸಂತಸವನ್ನೆಲ್ಲ ಆ ದೇವರೇ ಕಿತ್ತುಕೊಂಡುಬಿಟ್ಟ ಎಂದು ಕಣ್ಣೀರು ಹಾಕುವಂತಾಗಿದೆ.
Karnataka Rain: ಹೊಲದಲ್ಲಿ ಉಳುಮೆ ಮಾಡುತ್ತಲೇ ಸಿಡಿಲಿಗೆ ಬಲಿಯಾದ ರೈತರು: ಈ ಸಾವು ನ್ಯಾಯವೇ.?
ಎರಡು ವರ್ಷದ ನಂತರ ಕಿಡ್ನಿ ವಿಫಲ: 2020 ರಲ್ಲಿ ಹಾವು ಕಡಿತಕ್ಕೆ ಒಳಗಾದ ಶರಣ್ ನಂತರ ಒಂದು ವರ್ಷ ಏನೂ ಸಮಸ್ಯೆ ಇರಲಿಲ್ಲ. ಆದ್ರೆ ನಂತರ ಹಾವು ಕಡಿತದ ವಿಷವೊರಬಹುದು ನಿಧಾನವಾಗಿ ಮೈಯಲ್ಲಿ ತನ್ನ ಪ್ರಭಾವ ಬೀರುತ್ತಾ ಇಡೀ ದೇಹದ ಮೇಲೆ ಪರಿಣಾಮ ಬೀರಿದೆ. ಗಟ್ಟಿ ಮುಟ್ಟಾಗಿದ್ದ ಶರಣ್ ದೇಹ ಕ್ಷೀಣಿಸುತ್ತಾ ಬಂದಿದೆ. ಆತಂಕದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದಾಗಲೇ ಗೊತ್ತಾಗಿದ್ದು ಅದು ಎರಡೂ ಕಿಡ್ನಿಗಳ ಮೇಲೆ ಪರಿಣಾಮಬೀರಿದೆ ಅನ್ನೋ ವಿಚಾರ. ಗಟ್ಟಿಮುಟ್ಟಾಗಿದ್ದ ಯುವಕ ಶರಣ್ ದೇಹ ಒಮ್ಮೆಲೆ ನಿಶ್ಯಕ್ತಿ ಗೊಂಡಿದೆ. ಒಂದು ಕಿಡ್ನಿ ಸಂಪೂರ್ಣ ವೈಪಲ್ಯವಾಗಿದ್ದು, ಮತ್ತೊಂದು ಕಿಡ್ನಿ ಕೇವಲ 40 ಪರ್ಸೆಂಟ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈಗ ಒಂದಾದರೂ ಸಹ ಬದಲಾಯಿಸದೇ ಇದ್ದರೆ ಜೀವಕ್ಕೆ ಅಪಾಯ ಅಂತ ವೈದ್ಯರು ಹೇಳ್ತಿದ್ದಾರೆ.
ಮಗನಿಗೆ ಮರುಜನ್ಮ ನೀಡಲು ತಾಯಿ ತೀರ್ಮಾನ: ಹೀಗಾಗಿ ಶರಣ್ ತಾಯಿ ಉಮಾ ಸ್ವತಃ ತನ್ನ ಒಂದು ಕಿಡ್ನಿ ನೀಡುವುದಾಗಿ ತೀರ್ಮಾನ ಮಾಡಿದ್ದು, ವೈದ್ಯರು ಸಹ ತಾಯಿಯ ಕಿಡ್ನಿಯನ್ನು ಪರೀಕ್ಷಿಸಿ ದಾನ ಮಾಡಬಹುದು ಅಂತ ತಿಳಿಸಿದ್ದಾರೆ. ಆದರೆ, 8 ರಿಂದ 10 ಲಕ್ಷ ಹಣ ಖರ್ಚಾಗುವ ಸಾದ್ಯತೆ ಇರೋದ್ರಿಂದ ಪುಟ್ಟ ಕುಟುಂಬದ ಮೇಲೆ ಸಿಡಿಲು ಬಡಿದಂತಾಗಿದೆ. ಕಿಡ್ನಿ ಬದಲಾಯಿಸದೇ ಜೀವ ಉಳಿಯೋಲ್ಲ. ಕಿಡ್ನಿ ದಾನಕ್ಕೆ ಸ್ವತಹ ತಾಯಿಯೇ ಮುಂದಾಗಿದ್ಸರೂ ಆಸ್ಪತ್ರೆ ಖರ್ಚಿಗೆ ಹಣ ಇಲ್ಲ. ಗಾರೆ ಕೆಲಸ ಮಾಡ್ತಿರುವ ತಂದೆ ನಾರಾಯಣಸ್ವಾಮಿ ಹಾಗೂ ಮನೆ ಕೆಲಸಕ್ಕೆ ಹೋಗ್ತಿರುವ ತಾಯಿ ಉಮಾಳ ಕಷ್ಟ ಕಂಡು ಶರಣ್ ಸಹ ಕಣ್ಣಿರು ಹಾಕ್ತಿದ್ದಾನೆ. ಇದರ ಜೊತೆ ವಾರಕ್ಕೆ ಎರಡೂ ಬಾರಿ ಡಯಾಲಿಸಿಸ್ ಸಹ ಮಾಡಲಾಗ್ತಿದ್ದು, ಒಮ್ಮೆಗೆ 3 ರಿಂದ 5 ಸಾವಿರ ರುಪಾಯಿ ಖರ್ಚು ಬರ್ತಿದೆ. ನಾನು ನನ್ನ ತಂದ ತಾಯಿಯನ್ನು ನೋಡಿಕೊಳ್ಳಬೇಕು ದಯವಿಟ್ಟು ನನ್ನನ್ನು ಬದುಕಿಸಿ, ಯಾರಾದ್ರೂ ಧನ ಸಹಾಯ ಮಾಡಿ ಎಂದು ಕೇಳಿ ಕೊಳ್ತಿದ್ದಾರೆ.
ಮದುವೆಯಾದ್ರೆ ನೀವಿಬ್ರೂ ಉಳಿಯಲ್ಲ, ಹೆಂಗ್ ಮದ್ವೆ ಆಗ್ತೀರೋ ಆಗ್ರಿ: ಪ್ರೇಮಿಗಳಿಗೆ ಪ್ರಾಣ ಬೆದರಿಕೆ
ಕಿಡ್ನಿ ವರ್ಗಾವಣೆಗೆ ಹಣಕಾಸಿನ ಸಮಸ್ಯೆ: ಪುತ್ರನ ಐಟಿಐ ಮುಗಿದ ಮೇಲೆ ಅವನೂ ಕೂಡ ದುಡಿಯುವ ಕನಸು ಕಂಡಿದ್ದನು. ಆದರೆ, ನತದೃಷ್ಟ ದಂಪತಿಗೆ ವಿಧಿಯೇ ಮೋಸಮಾಡಿದೆ. ಏನಾದ್ರೂ ಆಗಲಿ ಮಗನನ್ನು ಉಳಿಸಬೇಕು ಎಂದು ಹೆತ್ತಮ್ಮ ತನ್ನ ಕರುಳಕುಡಿಗೆ ಕಿಡ್ನಿ ನೀಡಲು ಮುಂದೆಯಾಗಿದ್ದರೂ ಆಪರೇಷನ್ ಖರ್ಚಿಗೂ ಹಣವಿಲ್ಲದೆ ಧಾನಿಗಳಿಗೆ ಮನವಿಮಾಡಿಕೊಳ್ಳುವ ಪರಿಸ್ಥಿತಿ ಎಧುರಾಗಿದೆ. ಯಾರಾದರು ಈ ಬಡ ಕುಟುಂಬಕ್ಕೆ ಸಹಾಯಕ್ಕೆನಿಂತರ ಆ ಯುವಕನ ಪ್ರಾಣ ಉಳಿಸಬಹುದು. ಒಂದು ಬಡಕುಟುಂಬಕ್ಕೆ ಬೆನ್ನಲುವಾಗಿ ನಿಲ್ಲಬಹುದು ಸಮಾಜ ಸೇವೆಯ ನಿಜ ಪ್ರಯತ್ನ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.