ಭಾರತೀಯರಿಗೆ ಪ್ರೀತಿಸಲು ಮಾತ್ರವಲ್ಲ, ಹಸೆಮಣೆಯೇರಲು ಕೂಡ ವ್ಯಾಲೆಂಟೆನ್ಸ್ ಡೇನೇ ಬೇಕಂತೆ: ಸಮೀಕ್ಷೆ

By Suvarna NewsFirst Published Feb 18, 2020, 3:46 PM IST
Highlights

ಭಾರತೀಯ ಯುವಜನತೆಗೆ ವ್ಯಾಲೆಂಟೆನ್ಸ್ ಡೇ ಪ್ರೀತಿ ಮಾಡಲು ಮಾತ್ರವಲ್ಲ,ವಿವಾಹವಾಗಲು ಕೂಡ ಅಚ್ಚುಮೆಚ್ಚಿನ ದಿನವೆಂಬುದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ. ವ್ಯಾಲೆಂಟೆನ್ಸ್ ಡೇಯಂದು ಸಪ್ತಪದಿ ತುಳಿದು ಬದುಕಿನುದ್ದಕ್ಕೂ ಪ್ರೀತಿ ಕಾಯುವ ವಾಗ್ದಾನ ಕೈಗೊಳ್ಳುವ ಬಯಕೆ ಇವರದ್ದು.

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರಬಹುದು,ಆದರೆ,ಎಲ್ಲಿ,ಯಾವಾಗ ನಡೆಯಬೇಕು ಎಂದು ನಿರ್ಧಾರವಾಗುವುದು ಮಾತ್ರ ಭೂಮಿ ಮೇಲೆಯೇ.ಹೌದು,ಆರೇಂಜ್ ಮ್ಯಾರೇಜ್ ಇರಲಿ,ಲವ್ ಮ್ಯಾರೇಜ್ ಇರಲಿ,ಅದಕ್ಕೊಂದು ದಿನ,ಸಮಯ, ಸ್ಥಳ ಎಂದು ನಿಗದಿಯಾಗಲೇಬೇಕು ಅಲ್ಲವೆ? ಪ್ರೀತಿಯಲ್ಲಿ ಬೀಳುವುದು, ಪ್ರೇಮದ ನಶೆಯಲ್ಲಿ ತೇಲುತ್ತ ಒಬ್ಬರನ್ನೊಬ್ಬರು ಅರಿತು ಗೃಹಸ್ಥಾಶ್ರಮಕ್ಕೆ ಕಾಲಿಡಲು ನಿರ್ಧರಿಸಿದ ಬಳಿಕ ಮನೆಯವರ ಒಪ್ಪಿಗೆ ನಂತರ ಎದುರಾಗುವ ಮೊಟ್ಟ ಮೊದಲ ಪ್ರಶ್ನೆ ಮದುವೆ ಯಾವಾಗ ಎಂಬುದು.ಮದುವೆ ಡೇಟ್ ಫಿಕ್ಸ್ ಮಾಡೋದು ಏನು ಸಣ್ಣ ಕೆಲಸನಾ? ಪಂಡಿತರ ಬಳಿ ಹೋಗಿ ಶುಭ ದಿನ, ಶುಭಲಗ್ನ ಮುಹೂರ್ತ ಯಾವುದೆಂದು ವಿಚಾರಿಸಬೇಕು.

ನಂತರ ಆ ದಿನ ವಧು-ವರರು, ಅವರ ಕುಟುಂಬಸ್ಥರ ಜೊತೆಗೆ ನೆಂಟರಿಷ್ಟರು, ಸ್ನೇಹಿತರಿಗೆ ಅನುಕೂಲಕರವೇ ಎಂದು ಪರಿಶೀಲಿಸಬೇಕು.ಆ ದಿನ ಛತ್ರ ಖಾಲಿಯಿದೆಯಾ ಎಂದು ವಿಚಾರಿಸಬೇಕು.ಇನ್ನೂ ಕೆಲವರಿಗೆ ಕೆಲವು ತಿಂಗಳು ಅಥವಾ ನಿಗದಿತ ದಿನದಂದೇ ನಾವಿಬ್ಬರು ಸತಿ-ಪತಿಗಳಾಗಬೇಕು ಎಂಬ ಬಯಕೆಯಿರುತ್ತದೆ. ಉದಾಹರಣೆಗೆ ಅವರಿಬ್ಬರು ಮೊದಲು ಮೀಟ್ ಮಾಡಿದ ದಿನ, ಅವರ ನಡುವೆ ಪ್ರೀತಿ ಮೊಳಕೆಯೊಡೆದ ದಿನ...ಹೀಗೆ ಅವರಿಬ್ಬರಿಗೆ ವಿಶಿಷ್ಟವೆನಿಸಿದ ದಿನ ಹಸೆಮಣೆಯೇರಲು ಬಯಸುತ್ತಾರೆ. ಇನ್ನು ಪ್ರೀತಿಯಲ್ಲಿ ಬಿದ್ದವರಿಗೆ ಪ್ರೇಮಿಗಳ ದಿನ ಫೆಬ್ರವರಿ 14ರಂದೇ ಸಪ್ತಪದಿ ತುಳಿಯಬೇಕೆಂಬ ಬಯಕೆಯಿದ್ದರೆ ಅದರಲ್ಲಿ ಅಚ್ಚರಿಯೇನಿದೆ ಅಲ್ಲವಾ? ಇಂಥ ಬಯಕೆ ಸಹಜ ಕೂಡ. ಅದರಲ್ಲೂ ಭಾರತದ ಯುವಜನತೆ ದಾಂಪತ್ಯ ಜೀವನಕ್ಕೆ ಕಾಲಿಡಲು ವ್ಯಾಲೆಂಟೆನ್ಸ್ ಡೇನೇ ಬೆಸ್ಟ್ ಎಂಬ ಭಾವನೆ ಹೊಂದಿದ್ದಾರೆ ಎನ್ನುತ್ತದೆ ಇತ್ತೀಚೆಗೆ ನಡೆದ ಸಮೀಕ್ಷೆಯೊಂದು.

ಹೌದು, ಜೀವನ್‍ಸಾಥಿ ಡಾಟ್ ಕಾಮ್ ಎಂಬ ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ.55ರಷ್ಟು ಯುವಜನತೆ ವ್ಯಾಲೆಂಟೆನ್ಸ್ ಡೇ ದಿನ ಮದುವೆಯಾದ್ರೆ ರೊಮ್ಯಾಂಟಿಕ್ ಆಗಿರುತ್ತೆ ಎಂಬ ಭಾವನೆ ಹೊಂದಿರುವುದು ಬೆಳಕಿಗೆ ಬಂದಿದೆ.

ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!

ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿರುವ ಈ ಸಮೀಕ್ಷೆಯಲ್ಲಿ ಶೇ.55ರಷ್ಟು ಪುರುಷರು ಫೆಬ್ರವರಿ 14 ಎಂಬ ರೊಮ್ಯಾಂಟಿಕ್ ದಿನದಂದು ಮನಮೆಚ್ಚಿದ ಹುಡುಗಿಗೆ ಮೂರುಗಂಟು ಹಾಕಲು ಆಸಕ್ತಿ ತೋರಿದ್ದಾರೆ. ಅದೇ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧದಷ್ಟು ಮಹಿಳೆಯರು ಮದುವೆ ದಿನಾಂಕ ನಿಗದಿಗೆ ಇತರ ಅನೇಕ ಸಂಗತಿಗಳನ್ನು ಪರಿಗಣಿಸಿರುವುದು ಕಂಡುಬಂತು. ಈ ಸಮೀಕ್ಷೆಯಲ್ಲಿ ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಕೋಲ್ಕತ್ತ, ಅಹ್ಮದಬಾದ್, ಲಖ್ನೋ, ಜೈಪುರ, ನಾಗ್ಪುರ ಸೇರಿದಂತೆ ಭಾರತದ ಉದ್ದಗಲಕ್ಕೂ ಅನೇಕ ನಗರಗಳ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು.

ದುಬಾರಿ ಗೆಳತಿಯರ ವ್ಯಾಲಂಟೈನ್ ಸಹವಾಸ ಕಷ್ಟ ಕಷ್ಟ!

ವಿವಾಹ ದಿನಾಂಕ ಆಯ್ಕೆ ಕುರಿತು ಆಸಕ್ತಿಕರ ಮಾಹಿತಿಯನ್ನು ಬೆಳಕಿಗೆ ತಂದಿರುವ ಈ ಸಮೀಕ್ಷೆ ಇನ್ನೂ ಅನೇಕ ಇಂಟ್ರೆಸ್ಟಿಂಗ್ ವಿಷಯಗಳನ್ನು ಕೂಡ ಬಹಿರಂಗಪಡಿಸಿದೆ. ವ್ಯಾಲೆಂಟೆನ್ಸ್ ಡೇಯಂದು ಒಂಟಿಯಾಗಿ ಕಾಲ ಕಳೆಯುವುದು ಅನೇಕ ಮಹಿಳೆಯರಿಗೆ ಇಷ್ಟದ ಸಂಗತಿಯಾಗಿದ್ದು, ಇವರು ಪ್ರೇಮಿಗಳ ದಿನದಂದು ತಮ್ಮತನವನ್ನು ಪ್ರೀತಿಸಲು ಇಷ್ಟಪಡುವುದು ಕಂಡುಬಂದಿದೆ. ಡ್ರೆಸ್ ಮಾಡಿಕೊಳ್ಳುವುದರಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದು. ಇದಕ್ಕೆ ಕಾರಣ ಮಹಿಳೆ ತನ್ನ ದೇಹ ಹಾಗೂ ಮನಸ್ಸನ್ನು ಪ್ರೀತಿಸುತ್ತಾಳೆ. ತನ್ನನ್ನು ತಾನೇ ಪ್ರೀತಿಸುವ ಕಾರಣ ಮಹಿಳೆಗೆ ತನ್ನ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಪ್ರೀತಿ ಹಂಚುವುದು ಸುಲಭದ ಕೆಲಸ. ಇನ್ನು ಪ್ರೇಮಿಗಳ ದಿನವನ್ನು ತನ್ನ ಪ್ರೇಮಿಯೊಂದಿಗೆ ಸೆಲೆಬ್ರೇಟ್ ಮಾಡಬೇಕೆಂಬ ಬಯಕೆ ಹೊಂದಿರುವ ಮಹಿಳೆಯರಲ್ಲಿ ಬಹುತೇಕರು ಮನೆಯಲ್ಲೇ ಸ್ವಲ್ಪ ಸಮಯವನ್ನು ರೊಮ್ಯಾಂಟಿಕ್ ಆಗಿ ಕಳೆಯಬೇಕೆಂಬ ಬಯಕೆ ಹೊಂದಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 1/4ರಷ್ಟು ಮಂದಿ ಪೋಷಕರು, ಒಡಹುಟ್ಟಿದವರು ಹಾಗೂ ಸ್ನೇಹಿತರ ಗುಂಪನ್ನು ಹೊರತುಪಡಿಸಿ ತಾನು ಪ್ರೀತಿಸುವ ವಿಶೇಷ ವ್ಯಕ್ತಿಯೊಂದಿಗೆ ವ್ಯಾಲೆಂಟೆನ್ಸ್ ಡೇಯನ್ನು ಕಳೆಯಬೇಕೆಂಬ ಬಯಕೆ ಹೊಂದಿದ್ದಾರೆ. ಶೇ.5ರಷ್ಟು ಮಂದಿ ನಿತ್ಯದ ಕೆಲಸಗಳಿಂದ ಬ್ರೇಕ್ ಪಡೆದು ಸಂಗಾತಿಯೊಂದಿಗೆ ಟ್ರಾವೆಲ್ ಹೋಗುವ ಬಯಕೆ ವ್ಯಕ್ತಪಡಿಸಿದ್ದಾರೆ.

ದಾಂಪತ್ಯ ಸುಖಕ್ಕೆ ಪ್ರೀತಿಯಲ್ಲಿ ಬೀಳ್ಬೇಡಿ, ಪ್ರೀತಿಯಲ್ಲಿ ಎದ್ದೇಳಿ

ಒಟ್ಟಾರೆ ಪ್ರೇಮಿಗಳ ದಿನದಂದು ಪ್ರಿಯತಮ ಅಥವಾ ಪ್ರಿಯತಮೆಗೆ ಪತಿ ಅಥವಾ ಪತ್ನಿ ಸ್ಥಾನಕ್ಕೆ ಬಡ್ತಿ ನೀಡುವ ಯೋಚನೆ ರೊಮ್ಯಾಂಟಿಕ್ ಆಗಿರೋದಂತೂ ನಿಜ. ಇದರಿಂದ ಮದುವೆ ಬಳಿಕ ವ್ಯಾಲೆಂಟೆನ್ಸ್ ಡೇ ಆಚರಿಸಿಲ್ಲ, ಗಿಫ್ಟ್ ನೀಡಿಲ್ಲ ಎಂದು ಪರಸ್ಪರ ಕಾಲೆಳೆಯುವ ಪ್ರಸಂಗ ಎದುರಾಗುವುದಿಲ್ಲ. ಯಾಕೆಂದರೆ ವ್ಯಾಲೆಂಟೆನ್ಸ್ ಡೇ ದಿನವೇ ವಿವಾಹ ವಾರ್ಷಿಕೋತ್ಸವ ಇರುವ ಕಾರಣ ಕನಿಷ್ಠ ಕೇಕ್ ಕಟ್ಟಿಂಗ್ ಆದ್ರೂ ನಡೆದೇ ನಡೆಯುತ್ತೆ ಅಲ್ಲವಾ?

click me!