ಅವಳನ್ನು ಮೀಟ್ ಆಗೋ ವ್ಯವಹಾರ ಹಲವು ದಿನಗಳಿಂದ ನಡೆಯುತ್ತಿತ್ತು. ದೇವರ ಹತ್ತಿರ ಇದ್ದಿದ್ದು ಒಂದೇ ಬೇಡಿಕೆ. ಅವಳು ನನ್ನ ಪ್ರೀತಿಯನ್ನು ಒಪ್ಪಲಿ. ಏನೋ ಹೇಳುತ್ತೇನೆಂದು ಅದೇ ದೇವಸ್ಥಾನಕ್ಕೆ ಕರೆದುಕೊಂಡು ಹೋದವಳು ಪ್ರೀತಿ ಇರುವುದ ಒಪ್ಪಿಕೊಂಡು ಹೇಳಿದ್ದೇನು?
- ಸುರೇಶ್.ಎ.ಎಲ್.
ಆಗಷ್ಟೇ ಮಳೆ ಬಂದು ನಿಂತಿರೋ ರೋಡಿನಲ್ಲಿ ಒಬ್ಬನೇ ನಡೆಯುತ್ತಿದ್ದರೆ, ಅದೇನೋ ಸಣ್ಣಗೆ ಚಳಿ, ರಸ್ತೆಯ ಮೇಲೆ ಅಲ್ಲಲ್ಲಿ ಆಗಷ್ಟೇ ಉದುರಿದ ಅದೆಂತದೋ ಬಣ್ಣಬಣ್ಣದ ಹೂವುಗಳು, ಮರದಿಂದ ಇನ್ನೂ ತೊಟ್ಟಿಕ್ಕುತ್ತಿರೋ ಮಳೆಯ ಹನಿಗಳು, ಸೈಕಲ್ಲಿನ ಮೇಲೆ ಟೀ ಮಾರುತ್ತಿದ್ದ ಹುಡುಗನನ್ನ ನಿಲ್ಲಿಸಿ ಹಂಗೇ ಕಾರನ್ನು ಸೈಡಿಗೆ ಹಾಕಿ, ಒಂದು ಕಪ್ ಟೀ ಕುಡಿಯುತ್ತಾ ಕುಳಿತಾಗಲೇ ತುಟಿಯಂಚಿನಲ್ಲಿ ಸಣ್ಣಗೆ ನಗು ಮೂಡಿದ್ದು, ಅದು ವ್ಯಂಗ್ಯವೋ,, ಹಾಸ್ಯವೋ.. ನನಗೇ ಗೊತ್ತಾಗಲಿಲ್ಲ.
ಇಲ್ಲೇ ಅಲ್ಲವೇ ಅವಳ ಜೊತೆ ಕುಳಿತು ಟೀ ಕುಡಿಯುತ್ತಾ ಹರಟುತ್ತಾ, ಕೂತಿದ್ದು. ಇಬ್ಬರೂ ಟೀ ಕಪ್‌ಗಳನ್ನು ಪರಸ್ಪರ ಒಂದಕ್ಕೊಂದು ತಾಗಿಸಿ ಚಿಯರ್ಸ್ ಅನುತ್ತಿದ್ದರೆ ಟೀ ಮಾರೋ ಹುಡುಗ ನಗ್ತಾ ಇದ್ದ. ಅಷ್ಟು ಸಣ್ಣಪುಟ್ಟ ವಿಚಾರಗಳಲ್ಲೂ ನಮ್ಮಲ್ಲಿ ಸಂಭ್ರಮವಿತ್ತು. ಅವಳ ಪಾಡಿಗೆ ಅವಳು ಟೀ ಕುಡಿಯುತ್ತಾ ಏನೋ ಮಾತಾಡ್ತಾ ಇದ್ರೆ, ಅವಳಿಗೇ ಗೊತ್ತಾಗದಂತೆ ಮೆಲ್ಲಗೆ ಅವಳ ಕಿರುಬೆರಳನ್ನು ತಾಗಿ ತಾಗಿ ಸಂಭ್ರಮ ಪಡುತ್ತಿದ್ದೆ. ಅವಳ ಚೂಡಿಯ ತುದಿಯನ್ನು ಹಂಗೇ ಬೆರಳಲ್ಲಿ ಹಿಡಿದು ಆಟವಾಡುತ್ತಿದ್ದೆ. ಅವಳು ಟೀ ಕುಡಿದು ಕಪ್ಪು ಪಕ್ಕಕ್ಕಿಟ್ಟರೆ ಅದನ್ನು ಬಿಸಾಡುವ ನೆಪದಲ್ಲಿ ಎತ್ತಿಕೊಂಡು ತುಂಬಾ ಹೊತ್ತು ಕೈನಲ್ಲೇ ಹಿಡಿದು ಕೂತಿರುತ್ತಿದ್ದೆ. ಅವಳಿಗಂತಲೇ ತಂದ ಚಾಕಲೇಟನ್ನು ಕೊಟ್ಟಾಗ ಅವಳು ಅದರಲ್ಲಿ ಅರ್ಧ ಮುರಿದು ಕೊಟ್ಟರೆ?
ಅಬ್ಬೋ.. ನನ್ನದೇ ಹೃದಯದ ಸಣ್ಣ ತುಂಡೊಂದನ್ನು ಮತ್ತೆ ನನಗೇ ಕೊಟ್ಟಳೇನೋ ಅನ್ನೋ ಭಾವನೆ ಇಷ್ಟಿಷ್ಟೇ ತುಂಡು ಮಾಡಿ ಅವಳು ಬಾಯಿಗಿಟ್ಟು ಕೊಳ್ತಿರೋ ಚಾಕಲೇಟಿನ ಪೀಸು ಅದೆಷ್ಟು ಪುಣ್ಯ ಮಾಡಿತ್ತೋ ಅನಿಸ್ತಿತ್ತು. ಏನೋ ಮಾತಾಡ್ತಾ ಮಾತಾಡ್ತಾ ಆಗಾಗ ಸಣ್ಣಗೆ ನಗುತ್ತಿದ್ದ ಅವಳನ್ನೇ ನೋಡುತ್ತಾ ಕುಳಿತಿದ್ದರೆ ನನ್ನನ್ನೇ ನಾನು ಮರೆತೇ ಹೋಗುತ್ತಿದ್ದೆ. ತುಂಬಾ ಹೊತ್ತೇನಲ್ಲಾ ಒಂದು ಅರ್ಧ ಗಂಟೆ ಅಷ್ಟೇ. ಅಯ್ಯೋ ನಂಗೆ ಟೈಮಾಯ್ತು ಮನೆಗೆ ಹೊರಡ್ಬೇಕು ಅಂತಾ ಅವಳು ಅಂದಾಗಲೇ ನಾನೂ ವಾಸ್ತವಕ್ಕೆ ತಿರುಗಿ ಬರ್ತಾ ಇದ್ದಿದ್ದು. ಓಹ್ ಆಗಲೇ ಅರ್ಧ ಗಂಟೆ ಆಗಿಯೇ ಹೋಯ್ತಾ. ಥೂ ಈ ಗಡಿಯಾರ ಎತ್ತಿ ಬಿಸಾಕ್ಬೇಕು ಅನಿಸ್ತಿತ್ತು. ಅವಳಂತೂ ಮತ್ತೆ ಒಂದು ಕ್ಷಣ ಕೂಡಾ ನಿಲ್ಲುತ್ತಿರಲಿಲ್ಲ. ಸೀದಾ ಎದ್ದು ಅವಳ ಪಾಡಿಗೆ ಅವಳು ಹೊರಟೇ ಬಿಡೋಳು. ಮತ್ತೆ ನಾಳೆ ಸಿಗೋಣ ಅಂತ ಅವಳು ಹೇಳಿದ್ದೂ ನನಗೆ ಕೇಳಿಸ್ತಿರಲಿಲ್ಲ. ಸದ್ಯ ನಾನಿವತ್ತು ಆರು ಸಲ ಅವಳ ಬೆರಳನ್ನು ಮುಟ್ಟಿದ್ದು ಅವಳಿಗೆ ಗೊತ್ತಾಗಲೇ ಇಲ್ಲ, ಅಂತಾ ಮನಸಲ್ಲೇ ಖುಷಿ... ಮತ್ತೆ ಹೆಂಗೂ ನಾಳೆ ಸಿಗ್ತೀವಲ್ಲ ಅಂತಾ ಹೊರಡುತ್ತಿದ್ದೆ .
ಪ್ರೀತಿ ಮಾಡೋದ್ ತಪ್ಪೇನಿಲ್ಲಾ.. ಆದ್ರೆ, ಪ್ರಿಯಕರ ಕೈಕೊಟ್ಟ ಅಂತ ಸಾಯೋದ್ ತಪ್ಪಲ್ವಾ!
ಓಹ್ ನಾಳೆಯವರೆಗೂ ಕಾಯೋದಿದೆಂಯಲ್ಲ.. ಛೇ ಆಗಲೇ ಬಿಸಾಕ್ತೀನಿ ಅಂತಾ ಅಂದಿದ್ದಕ್ಕೆ ಬೇಜಾರಾಗಿದೆ ಅನ್ಸುತ್ತೆ ಗಡಿಯಾರಕ್ಕೆ.. ಸಾರಿ ಕಣೋ.. ಒಂಚೂರು ಬೇಗ ಬೇಗ ಓಡು .. ಆದಷ್ಟು ಬೇಗ ನಾಳೆ ಆಗಿಬಿಡಲಿ! ಯಾಕೋ ಮತ್ತೆ ಮತ್ತೆ ಅವಳನ್ನು ನೋಡಬೇಕು ಅನಿಸ್ತಿದೆ.. ಪ್ಲೀಸ್....ನಿಂಗೂ ಒಂದು ಚಾಕೊಲೇಟ್ ಕೊಡಿಸ್ತೀನಿ ಆಯ್ತಾ ಅಂತಾ ಗಡಿಯಾರಕ್ಕೂ ಒಂದು ಪೂಸಿ ಹೊಡೆದವನೇ ಅಲ್ಲಿಂದ ನಿಧಾನಕ್ಕೆ ಹೊರಡುತ್ತಿದ್ದೆ. ದಾರಿಯ ಮದ್ಯ ಗುಡ್ಡದ ಆಂಜನೇಯ ಸ್ವಾಮಿ ದೇವಸ್ಥಾನ. ಹಂಗೇ ದೇವಸ್ಥಾನದ ಮುಂದೆ ನಿಂತಾಗಲೇ, ಒಂದ್ ಮಾತು ಕೇಳಿ ನೋಡ್ಲಾ ಅನಿಸಿದ್ದು. ಆಗಿದ್ದಾಗ್ಲಿ ಬಿಡು ಕೇಳಿ ನೋಡೋಣ ಅಕಸ್ಮಾತ್ ಇವನೇ ಕೇಳಿಲ್ಲ, ನಾನ್ಯಾಕೆ ಕೊಡ್ಲಿ ಅಂತಾ ಇವನೂ ಅಂದುಕೊಂಡಿದ್ರೆ. ಹೌದು ಸುಮ್ನೆ ಬಿಂಕ ಇಟ್ಟುಕೊಂಡ್ರೆ ಚೆನ್ನಾಗಿರಲ್ಲ ಕೇಳಿಯೇ ಬಿಡೋಣ ಆಗಿದ್ದಾಗ್ಲಿ ಅಂತಾ ಅನಿಸಿತ್ತು.. ಮತ್ತೆ ಲೇಟ್ ಮಾಡೋದು ಬೇಡ ಅಂದವನೇ ಹಂಗೇ ಒಳಗೆ ಹೋದೆ. ಅವತ್ಯಾಕೋ ಅಲ್ಲಿ ಜನ ಬಹಳ ಕಡಿಮೆ ಇದ್ರು. ಪೂಜಾರಿ ಕೂಡಾ ಏನೋ ಕೆಲಸ ಇತ್ತು ಅಂತಾ ಹೊರಗೆ ಹೋಗಿದ್ದ ಅನ್ಸುತ್ತೆ. ಇದ್ದ ಮೂರ‍್ನಾಲ್ಕು ಜನ ದೇವರಿಗೆ ಕೈಮುಗಿದು ಹೊರಗೆ ಹೊರಟೇ ಹೋದ್ರು. ಇಡೀ ದೇವಸ್ಥಾನದಲ್ಲಿ ನಾನೊಬ್ಬನೇ. ಹಂಗೇ ಒಂಚೂರು ಹೊರಗೆ ನೋಡಿದೆ. ಸದ್ಯಕ್ಕೆ ಯಾರೂ ಬರೋ ತರಾ ಕೂಡಾ ಕಾಣಲಿಲ್ಲ. ಅಬ್ಬಾ ಇದೇ ಸರಿಯಾದ ಸಮಯ.. ಯಾರೂ ಇಲ್ಲ, ಅಂದುಕೊಂಡ ಕೆಲಸ ಇವಾಗ್ಲೇ ಮಾಡಿಬಿಡಬೇಕು ಅಂತ ಮನಸಲ್ಲಿ ಒಂದ್ಸಲಾ ಅಂದುಕೊಂಡು ಜೋರಾಗಿ ಒಮ್ಮೆ ಉಸಿರೆಳೆದುಕೊಂಡೆ.. ಆದ್ರೂ ಸಮಾಧಾನ ಆಗಲಿಲ್ಲ ಹೆಂಗಪ್ಪಾ ಕೇಳೋದು ಅಂತಾ ಹಂಗೇ ಎಳೆದುಕೊಂಡ ಉಸಿರನ್ನು ಮತ್ತೆ ಉಸ್ ಅಂತಾ ಹೊರಗೆ ಬಿಟ್ಟೆ..
ನೋಡು ಈ ತರಾ ಲೇಟ್ ಮಾಡ್ತಾ ಇದ್ರೆ ಮತ್ತೆ ಯಾರಾದ್ರೂ ಜನ ಬಂದ್ ಬಿಡ್ತಾರೆ.. ಪೂಜಾರಿ ಬಂದ್ರೂ ಬರಬಹುದು.. ಆಮೇಲೆ ಮತ್ತೆ ನಿನ್ನಿಷ್ಟ ಅಂತ ಯಾರೋ ಹೇಳಿದಂಗಾಯ್ತು.. ಹೌದಲ್ವಾ ಈ ಸಲಾ ಹೆಂಗಾದ್ರೂ ಧೈರ‍್ಯ ಮಾಡೋದೇ ಅಂತಾ ಮತ್ತೆ ಒಂದ್ಸಲಾ ಇದ್ದ ಶಕ್ತಿಯೆಲ್ಲಾ ಹಾಕಿ ಉಸಿರನ್ನು ಎಳೆದುಕೊಂಡೆ.. ಹಂಗೇ ನಿಧಾನವಾಗಿ ಮುಂದೆ ಹೋಗಿ ಆಂಜನೇಯನ ಮುಂದೆ ನಿಂತೆ ತಲೆಯೆತ್ತಿ ಅವನ ಮುಖ ನೋಡೋಕೆ ಒಂಥರಾ ಆಗ್ತಿತ್ತು... ನಿಧಾನವಾಗಿ ತಲೆಯೆತ್ತಿ ಅವನ ಕಡೆ ನೋಡಿದೆ.. ಹಾರ್ಟ್ ಬೀಟ್ ಸ್ವಲ್ಪ ಸ್ವಲ್ಪವೇ ಜೋರಾಗತೊಡಗಿತ್ತು. ಅವನ ಕಣ್ಣುಗಳು ನನ್ನನ್ನೇ ನೋಡುತ್ತಿವೆ.. ಸ್ವಲ್ಪ ಭಯ ಶುರುವಾಯ್ತು.. ಇನ್ನು ತಡ ಮಾಡಿದ್ರೆ ಅರ್ಥ ಇಲ್ಲ ಅನಿಸ್ತು ತಟ್ಟಂತ ಹಂಗೇ ಬಾಗಿದವನೇ ಕೆಳಗೆ ಕುಳಿತೇ ಬಿಟ್ಟೇ.. ಎರಡೂ ಕೈಗಳನ್ನು ಮುಂದೆ ಚಾಚಿದವನೇ ಅಂಜನೇಯನ ಎರಡೂ ಕಾಲುಗಳನ್ನು ನನ್ನ ಎರಡೂ ಕೈಗಲಲ್ಲಿ ಬಿಗಿಯಾಗಿ ಹಿಡಿದವನೇ ಒಂದೇ ಉಸಿರಿನಲ್ಲಿ ನೋಡು ನಿಂಗೂ ನಂಗೂ ಸಾವಿರ ಇರಬಹುದು, ಆದ್ರೆ ಈ ವಿಚಾರದಲ್ಲಿ ಆಟ ಆಡ್ಬೇಡ. ನಂಗೆ ಅವಳಿಲ್ಲಾ ಅಂದ್ರೆ ಬದುಕೋಕೆ ಆಗಲ್ಲಾ ಆಯ್ತಾ.. ಅದೇನ್ ಮಾಡ್ತೀಯೋ ನಂಗೊತ್ತಿಲ್ಲ ಅವಳ ಮನಸಲ್ಲಿ ಒಂಚೂರು ಪ್ರೀತಿ ಹುಟ್ಟೋಹಂಗೆ ಮಾಡು ಸಾಕು.. ನಂಗಂತೂ ಹೇಳೋ ಧೈರ್ಯ ಆಗ್ತಿಲ್ಲ.. ಅವಳಾಗೇ ಕೇಳಬೇಕು .. ಹೆಚ್ಚಿಗೆ ಏನೂ ಬೇಡ ಮದ್ವೆ ಆಗೋಣ ಅಂತಾ ಕೇಳಿಬಿಡ್ಲಿ ಸಾಕು.. ಮಿಕ್ಕಿದ್ದು ನಾನು ನೋಡಿಕೊಳ್ತೀನಿ. ಬೇಕಿದ್ರೆ ಅವರಪ್ಪನ ಹತ್ರ ನಾನೇ ಮಾತಾಡ್ತೀನಿ. ಒಪ್ಪಿಸ್ತೀನಿ. ಹೆಂಗೋ ಚೆನ್ನಾಗಿ ನೋಡಿಕೊಳ್ತೀನಿ.. ಆಮೇಲೆ ನಿನ್ನನ್ನೂ ನಾನೇನು ಮರಿಯಲ್ಲ. ಪ್ರತಿ ಶನಿವಾರ ಅವಳನ್ನೂ ಕರ್ಕೊಂಡು ಬಂದು ನಿಂಗೆ ಪೂಜೆ ಮಾಡ್ತೀನಿ.. ಅಷ್ಟೆಲ್ಲಾ ಯಾಕೆ ಹುಟ್ಟೋ ಮಗನಿಗೂ ನಿಂದೇ ಹೆಸರಿಡ್ತೀನಿ ಓಕೆ ನಾ ಅಂತ ಹೇಳ್ತಾ ಇದ್ದಾಗಲೇ ಡಣ್ ಅಂತಾ ದೊಡ್ಡ ಸದ್ದು.. ಅಬ್ಬೋ ಯಾರೋ ಬಂದಿದ್ರು ಹೊರಗೆ ಇದ್ದ ದೊಡ್ಡ ಗಂಟೆಯನ್ನು ಡಣ್ ಅಂತಾ ಭಾರಿಸಿದ್ದ. ನಾನಂತೂ ಅಬ್ಬಾ ಸದ್ಯ ಕೇಳಬೇಕಾಗಿದ್ದೆಲ್ಲಾ ಕೇಳಿ ಆಯ್ತಲ್ಲಾ ಅಂತಾ ಒಂದೇ ಉಸಿರಿನಲ್ಲೇ ದೇವಸ್ಥಾನದಿಂದ ಹೊರಗೆ ಓಡಿ ಬಂದಿದ್ದೆ...
ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ
ಸದ್ಯ ದೇವರನ್ನು ಬಿಟ್ಟು ಬೇರೆ ಯಾರೂ ಕೇಳಿಸ್ಕೊಂಡಿಲ್ಲ ಅಂತ ಹಂಗೇ ಅಲ್ಲಿದ್ದ ಅರಳೀ ಕಟ್ಟೆ ಮೇಲೆ ಕುಳಿತೆ.. ಎದೆಬಡಿತ ನಿಧಾನವಾಗಿ ಹತೋಟಿಗೆ ಬರ‍್ತಾ ಇತ್ತು. ಅರಳೀ ಕಟ್ಟೆ ಮೇಲಿದ್ದ ಪುಟ್ಟ ಗಣಪತಿ, ನಾಗರಕಲ್ಲುಗಳ ಕಡೆ ಒಂದ್ಸಲಾ ನೋಡಿದಾಗ ಮನಸಲ್ಲಿ ಏನೋ ಬಂತು.. ಅಬ್ಬೋ ಇವರ ಹತ್ರಾ ಕೂಡಾ ಒಂದ್ಸಲಾ ಕೇಳಿಬಿಡೋಣ .. ಆಮೇಲೆ ನನ್ನ ಹತ್ರ ಕೇಳಿಲ್ಲಾ ಅಂತಾ ಇವರು ಅಂದುಕೊಂಡರೆ ಅನಿಸಿದ್ದೇ ತಡಾ ಎದ್ದು ಅರಳಿಮರಕ್ಕೆ ಒಂದು ಹತ್ತು ಪ್ರದಕ್ಷಿಣೆ ಹಾಕಿ ಗಣಪತಿಗೂ ಅಡ್ಡಬಿದ್ದು, ನಾಗರಕಲ್ಲುಗಳಿಗೂ ಒಂದು ನಮಸ್ಕಾರ ಹಾಕಿ.. ನೋಡಿ ಫ್ರೆಂಡ್ಸ್, ಒಳಗೆ ಆಂಜನೇಯ ಹತ್ರ ಎಲ್ಲಾ ಹೇಳಿದೀನಿ,, ಇವಾಗಾ ನಿಮ್ಗೂ ಹೇಳ್ತಾ ಇದೀನಿ.. ಅವಳಂದ್ರೆ ನಂಗೆ ಇಷ್ಟ.. ಆದ್ರೆ ನಂಗೆ ಹೇಳೋಕಾಗ್ತಿಲ್ಲ.. ನೀವೇ ಅದೆಂಗಾದ್ರೂ ಮಾಡಿ ಅವಳನ್ನು ಕನ್ವಿನ್ಸ್ ಮಾಡಿ.. ಆಮೇಲೆ ನಿಮ್ಗೆ ಏನ್ ಬೇಕೋ ಅದನ್ನು ನಾನು ಮಾಡ್ತೀನಿ ಆಯ್ತಾ ಅಂದವನೇ ಮತ್ತೆ ಬಂದು ಕಟ್ಟೆ ಮೇಲೆ ಹಾಗೇ ಕೂತೆ.. ಸದ್ಯ ಯಾರೂ ನೋಡ್ಲಿಲ್ಲ ಅನ್ನೋದೇ ಸಮಾಧಾನ..
ಹಿಂಗೇ ಇನ್ನೂ ಅದೆಷ್ಟ್ ದಿನಾ ಅಂತಾ ಕಾಯೋದು..ಅವಳನ್ನ ನೆನೆಸಿಕೊಂಡರೆ ಮನಸಲ್ಲಿ ಅದೇನೋ ಪುಳಕ. ಎದೆಯಲ್ಲಿ ಢವಢವ. ಇವತ್ತೂ ಕೂಡಾ ಅದೇ ಟೈಮಿಗೆ ಅಲ್ಲಿಗೆ ಬರ‍್ತಾಳೆ. ಮಿಸ್ ಮಾಡೋದೇ ಇಲ್ಲ. ನಂಗೊತ್ತು.ಬಹುಶಃ ಅವಳೀಗೂ ಕೂಡಾ ಹಂಗೇ ಅನಿಸ್ತಾ ಇರಬೇಕು. ಅದಿಕ್ಕೇ ಅಲ್ವಾ ಕರೆಕ್ಟ್ ಟೈಮಿಗೆ ಬರೋದು. ಅಷ್ಟು ಹೊತ್ತೂ ಮಾತಾಡ್ತಾ ಕೂರೋದು ನಂಗೊತ್ತು ನಿಜವಾಗ್ಲೂ ಅವಳ ಮನಸಲ್ಲಿ ನಾನು ಅಂದ್ರೆ ಪ್ರೀತಿ ಇದೆ. ಇದ್ದೇ ಇರುತ್ತೆ.. ಇಲ್ಲಾ ಅಂದ್ರೆ ಒಂದ್ ಹುಡುಗಿ ಹೀಗೆ ನಂಗೆ ಅಂತಾ ಬಂದು ಸುಮ್ನೆ ಹರಟೆ ಹೋಡಿತಾ ಕೂರೋಕೆ ಅವಳಿಗೇನು ಹುಚ್ಚಾ.. ಖಂಡಿತಾ ಇವತ್ತಲ್ಲಾ ನಾಳೆ ಅವಳೇ ಹೇಳ್ತಾಳೆ.. ನಮ್ಮನೇಲಿ ಬಂದು ಮಾತಾಡು ಮದ್ವೆ ಆಗೋಣ ಅಂತಾ.. ಅಷ್ಟು ಹೇಳಿಬಿಡ್ಲಿ ಸಾಕು.. ಮಿಕ್ಕಿದ್ದು ಆಮೇಲೆ ಏನೇ ಇದ್ರು ನಾನು ನೋಡ್ಕೋತೀನಿ.. ಹೆಂಗೂ ದೇವರಿದ್ದಾನೆ. ನನ್ನ ಪ್ರಾರ್ಥನೆ ಅವನಿಗೆ ತಲುಪೇ ಇರುತ್ತೆ.. ಅಲ್ವಾ.... ಸರಿ ಇವತ್ತೂ ಅವಳು ಬರೋ ಹೊತ್ತಾಯ್ತು ಬೇಗ ಹೋಗೋಣ ಇವತ್ತು ಮಳೆ ಬರಲ್ಲ ಅನ್ಸುತ್ತೆ. ಮಳೆ ಬಂದ್ರೆ ಬೇಗ ಹೊರಟು ಬಿಡ್ತಾಳೆ. ಮಳೆರಾಯ ಸ್ವಲ್ಪ ನಿಧಾನಿಸಿ ಬಾರಪ್ಪ ತಂದೆ.. ಅಂದುಕೊಂಡವನೇ ಬೈಕು ಹತ್ತಿಕೊಂಡು ಮತ್ತದೇ ಜಾಗಕ್ಕೆ ಹೊರಟೆ...
ಅದೇ ಬೆಂಚಿನ ಮೇಲೆ ಕುಳಿತು ಕಾಯೋಕೆ ಶುರು ಮಾಡಿದ್ದೆ ಟೀ ಮಾರೋ ಹುಡುಗ ಸೈಕಲ್ ತಳ್ಳಿಕೊಂಡು ಹತ್ತರ ಬಂದು ನಿಂತ. ಅವನಿಗೂ ಗೊತ್ತು.. ಅವಳು ಬರೋತನಕ ನಾನೂ ಅವನ ಹತ್ರ ಟೀ ತಗೋಳೋದಿಲ್ಲ ಅಂತಾ.. ಹಾಗೇ ಕುಳಿತವನ ಕಿವಿಗೆ ಎಲ್ಲೋ ದೇವಲೋಕದಲ್ಲಿ ಮೀಟಿದಂತೆ ಸಣ್ಣಗೆ ಸಂಗೀತ ಕೇಳತೊಡಗಿತು. ಮೆಲುದನಿಯಲ್ಲಿ ಶುರುವಾದ ನಾದ ಸ್ವಲ್ಪಸ್ವಲ್ಪವೇ ಜೋರಾದಾಗಲೇ ಗೊತ್ತಾಗಿದ್ದು. ಅದು ಅವಳ ಕಾಲಿನ ಗೆಜ್ಜೆ ಸದ್ದು ಅಂತಾ. ತುಂಬಾ ದೂರದಲ್ಲಿ ಬರುವಾಗಲೇ ಅವಳ ಮೇಲೆ ನೆಟ್ಟ ಕಣ್ಣು ಬೇರೆ ಕಡೆ ತಿರುಗಿಸಲಾರದೇ ಹೋದೆ. ನಂಗೂ ಗೊತ್ತು ಸ್ವಲ್ಪ ಹೊತ್ತು ಕಣ್ಣು ಆಚೀಚೆ ಹೊರಳಿದರೂ ಅಷ್ಟು ಹೊತ್ತು ಅವಳನ್ನು ನೋಡೋ ಭಾಗ್ಯ ಕಣ್ಣುಗಳಿಗೆ ಮಿಸ್ ಆಗುತ್ತೆ ಅಂತಾ.. ಅವಳು ಬಂದು ಪಕ್ಕದಲ್ಲಿ ಕೂತ ತಕ್ಷಣ ಟೀ ಕೊಟ್ಟ ಹುಡುಗ ಹೊರಟು ಹೋದ.. ಏನ್ ಗೊತ್ತಾ ನೆನ್ನೆ ನೀನು ಕೊಟ್ಟಿದ್ಯಲ್ಲಾ ಚಾಕೊಲೇಟ್ ಸೇಮ್ ಅಂತದ್ದೇ ನಮ್ಮ ಚಿಕ್ಕಪ್ಪ ತಂದ್ ಕೊಟ್ಟಿದ್ರು ಅಂತಾ ಮಾತು ಶುರು ಮಾಡಿದ್ಲು.. ಆಮೇಲಿಂದು ಯಾವನ್ ಕೇಳ್ತಾನೇ ಬರೀ ಅವಳ ಮುಖ ನೋಡ್ತಾ ಕೂತಿದ್ದೇ ಬಂತು.. ದಿನಾ ಹಿಂಗೇ ಬರ‍್ತಾಳೇ ಅದೇನೋ ಒಂದೇ ಸಮನೆ ಮಾತಾಡ್ತಾ ಕೂತಿರ್ತಾಳೆ, ಒಂದಷ್ಟು ಹೊತ್ತು ಕಳೆದು ಹಂಗೇ ಎದ್ದು ಹೊರಟೇ ಬಿಡ್ತಾಳೇ... ಅಷ್ಟೇ..ನಂಗೂ ಅಷ್ಟರಲ್ಲೇ ಇಡೀ ಪ್ರಪಂಚಾನೇ ಕಣ್ಣ ಮುಂದೆ ಇದೆ ಅಂದುಕೊಂಡು ನಿಧಾನಕ್ಕೆ ಎದ್ದು ಬರ‍್ತೀನಿ..
ಅಸಲಿಗೆ ಇದೆಲ್ಲಾ ಶುರುವಾಗಿದ್ದು ಯಾವಾಗ.. ಸರಿಯಾಗಿ ಗೊತ್ತಿಲ್ಲ.ಅದಕ್ಕೊಂದು ಕಾರಣ ಕೂಡಾ ಇಲ್ಲ, ಆದ್ರೆ ಅವತ್ತು ಹಿಂಗೇ ಬೇಜಾರು ಅಂತಾ ಬಂದು ಇದೇ ಬೆಂಚಿನ ಮೇಲೆ ಬಂದು ಕೂತಿದ್ದೆ. ಒಂದು ಟೀ ಕುಡಿದು ನನ್ನ ಪಾಡಿಗೆ ಕೂತಿದ್ದ ನನ್ನ ಪಕ್ಕದಲ್ಲಿ ಅವಳಾಗೇ ಬಂದು ಕುಳಿತಳು. ನೋಡಿದ ಮೊದಲ ಕ್ಷಣದಲ್ಲೇ ಇವಳೇ ಅಲ್ಲವಾ ಅಂತಾ ಅನಿಸಿತ್ತು. ಅರೆ ಅಲ್ಲಿತನಕಾ ನಾನೇನು ಪ್ರಪಂಚದಲ್ಲಿ ಹುಡುಗೀರನ್ನೇ ನೋಡಿರಲಿಲ್ಲವಾ.. ಆದ್ರೂ ಇವಳ್ಯಾಕೋ ನನಗಾಗೇ ಹುಟ್ಟಿಬಂದವಳು ಅನಿಸಿದ್ದು. ಅಷ್ಟೊಂದು ಜಾಗ ಇದೆ .. ಅಲ್ಲೆಲ್ಲಾ ಬಿಟ್ಟು ಇಲ್ಲೇ ಯಾಕೆ ಬಂದು ಕೂತಿದ್ದು,, ನನಗಾಗೇ ತಾನೇ.. ಯಾರ ಜೊತೆ ಕೂಡಾ ಮಾತೇ ಆಡದವಳು ನನ್ನ ಜೊತೆ ಮಾತ್ರಾ ಯಾಕೆ ಅಷ್ಟು ಹರಟ್ತಾಳೇ.. ಎಲ್ಲಿಂದ ಬಂದಳು,, ಇಷ್ಟು ದಿನ ಎಲ್ಲಿದ್ಲು..? ಯಾವುದಕ್ಕೂ ಉತ್ತರ ಇಲ್ಲ. ಆದ್ರೆ ಅವತ್ತಿನಿಂದ ಪ್ರತಿದಿನ ಅದೇ ಸಮಯಕ್ಕೆ ಬರ‍್ತಾಳೆ ಮಾತಾಡಿ ಎದ್ದು ಹೋಗ್ತಾಳೆ.. ಅದಿಷ್ಟೇ ನಂಗೊತ್ತು..
ಸರಿ ಇವತ್ತಾದ್ರೂ ಮನಸಲ್ಲಿ ಇರೋದನ್ನು ಹೇಳಿಬಿಡಲೇ ಅಂತಾ ನೋಡ್ತೀನಿ.. ಕಾಣದ ಅಷ್ಟೂ ದೇವರುಗಳನ್ನು ಬೇಡಿಕೊಳ್ತೀನಿ. ಒಂಚೂರು ಧೈರ್ಯ ಕೊಡ್ರಪ್ಪಾ ಅಂತಾ ಕೇಳಿಕೊಳ್ತೀನಿ.. ಉಹುಂ ಯಾವತ್ತೂ ಅದು ಆಗಲೇ ಇಲ್ಲ. ಕಡೆಗೆ ಅದೊಂದು ದಿನ ಅಂತಾ ಬಂತು.. ಎದ್ದು ಹೋಗುವ ಮುಂಚೆ ಒಂದು ಸಲ ನನ್ನ ಕಡೆ ತಿರುಗಿ ನೋಡಿದವಳೇ ನಾಳೆ ಸಿಕ್ಕಾಗ ನಿಂಗೊಂದು ವಿಷ್ಯಾ ಹೇಳ್ತೀನಿ ಅಂದೇ ಬಿಟ್ಟಳು..
Love Story: ಪ್ರೀತಿಗಾಗಿ ದೇಶದ ಗಡಿ ದಾಟಿ 10000 ಕಿ.ಮೀ ಪಯಣಿಸಿದ ಯುವಕ
ವಾವ್ ಅಬ್ಬೋ.. ಕಡೆಗೂ ದೇವರಿಗೆ ನನ್ನ ಪ್ರಾರ್ಥನೆ ಮುಟ್ಟಿದೆ ಅನಿಸಿತ್ತು.ಇನ್ನೇನಿದೆ ಜಗತ್ತಿನಲ್ಲಿ ಅದೇನು ಹೇಳಬೇಕೋ ಇವತ್ತೇ ಹೇಳಿಬಿಡು, ಸುಮ್ನೆ ಯಾಕೆ ಸತಾಯಿಸ್ತೀಯ ಅಂತಾ ಮನಸು ಕೂಗಿ ಕೂಗಿ ಹೇಳ್ತಾ ಇತ್ತು. ನಾಳೆವರೆಗೂ ಈ ಕಾಯುವ ನೋವು ತಡಿಯೋದಾದ್ರೂ ಹೇಗೆ ಅಂತಾ ಅನಿಸ್ತಿತ್ತಾದ್ರೂ ಏನೂ ಮಾಡೋಹಾಗೂ ಇರ‍್ಲಿಲ್ಲ.. ಅವತ್ತೇ ಬಹುಶಃ ನಾನು ಮೊದಲ ಸಲ ನಿದ್ದೆಗೆಟ್ಟಿದ್ದು. ಯಾವಾಗ ನಾಳೆ ಆಗುತ್ತೋ ಅನಿಸ್ತಿತ್ತು.
ಅವತ್ತು ಏನೋ ಆಗಲಿದೆ.. ಕರೆಕ್ಟ್.. ಅಷ್ಟೂ ದೇವರ ಬಳಿ ನಾನು ಬೇಡಿಕೊಂಡ ಪ್ರಾರ್ಥನೆ ಫಲಿಸೋ ದಿನ ಅದು.. ನಂಗೊತ್ತು ದೇವರು ಯಾವತ್ತಿಗೂ ನನ್ನ ಕೈ ಬಿಡಲ್ಲ ಅಂತಾ.. ನಾನು ಕೇಳಿದ್ದು ಯಾವತ್ತೂ ಇಲ್ಲ ಅಂದವನಲ್ಲ ದೇವರು.. ನಾನಾದರೂ ಏನು ಮಹಾ ಕೇಳಿದ್ದೀನಿ. ಒಂದು ಪುಟ್ಟ ಕೆಲಸ. ಹುಷಾರಿಲ್ದೇ ಇದ್ದಾಗ ಬೇಗ ವಾಸಿ ಮಾಡಪ್ಪಾ ದೇವ್ರೇ ಅನ್ನೋದು. ಎಲ್ರಿಗೂ ಒಳ್ಳೇದು ಮಾಡಪ್ಪಾ ದೇವ್ರೇ ಅನ್ನೋದು ಅಷ್ಟೇ ತಾನೇ.. ಇದನ್ನು ಬಿಟ್ಟು ಬೇರೆ ಏನೂ ಅಂತಾ ದೊಡ್ಡ ಕೋರಿಕೆಗಳನ್ನು ಕೇಳಿದವನೇ ಅಲ್ಲ. ಇದೊಂದು ವರ ಕೊಟ್ಟು ಬಿಡಲಿ ಸಾಕು. ಗಂಡು ಮಗು ಆದ್ರೆ ಹನುಮಂತ ಅಂತಾ ಹೆಸರಿಟ್ಟು ಬಿಡ್ತೀನಿ. ಹೆಣ್ಣು ಮಗು ಆದ್ರೆ ನೋ ಡೌಟ್.. ಹನುಮಂತೀ ಅಂತಲೇ ಇಡ್ತೀನಿ... ಯಾರು ಏನು ಬೇಕಾದ್ರೂ ಅಂದುಕೊಳ್ಳಲಿ ನಂಗೇನಂತೆ.
ಅಷ್ಟು ಯೋಚನೆ ಮಾಡಿದವನೇ ನೇರವಾಗಿ ಅದೇ ಆಂಜನೇಯನ ದೇವಸ್ಥಾನಕ್ಕೆ ಬಂದಿದ್ದೆ.. ಸಂಜೆ ಆಗೋಕೆ ಇನ್ನೂ ಟೈಮಿದೆ. ಅಷ್ಟರಲ್ಲಿ ದೇವರಿಗೆ ಒಂದು ಥ್ಯಾಂಕ್ಸ್ ಹೇಳಿ ಹೋಗೋಣ ಅಂದವನೇ ಸೀದಾ ದೇವರ ಮುಂದೆ ನಿಂತಿದ್ದೆ.. ಅದೆಷ್ಟು ಸಲ ನಿನ್ನ ಹತ್ರ ಕೇಳಿಕೊಂಡಿದ್ದೆ.. ಕೊನೆಗೂ ಇವತ್ತು ನನ್ನ ಆಸೆ ಈಡೇರಿಸ್ತಾ ಇದೀಯ ಅಲ್ವಾ,, ಖಂಡಿತಾ ನಾನು ಮಾತು ತಪ್ಪಲ್ಲ. ಪ್ರತಿವಾರ ಅವಳನ್ನು ಕರ್ಕೊಂಡು ಬರ‍್ತೀನಿ. ಮಕ್ಕಳಿಗೆ ಆಗಲೇ ಹೆಸರು ಹುಡುಕಿದ್ದೇನೆ.. ಥ್ಯಾಂಕ್ಯೂ ದೇವರೇ.. ಇಷ್ಟು ಸಾಕು..ಅಂದವನೇ ಸೀದಾ ಅದೇ ಮಾಮೂಲಿ ಜಾಗಕ್ಕೆ ಹೋಗಿ ಕೂತಿದ್ದೆ.. ಒಂದೊಂದು ಕ್ಷಣವೂ ಯಾಕೋ ಅವತ್ತು ಸಿಕ್ಕಾಪಟ್ಟೆ ಭಾರ ಅನಿಸ್ತಿತ್ತು.. ಅವಳು ಯಾವತ್ತೂ ಲೇಟಾಗಿ ಬರೊಲ್ಲ ಅಂತಾ ಗೊತ್ತು. ಆದ್ರೆ ಅವತ್ತು ಮಾತ್ರ ಅವಳು ಬಂದಿದ್ದು ಅರ್ಧ ಗಂಟೆ ತಡವಾಗಿಯೇ . ಎದೆ ಒಡೆದೇ ಹೋಗುತ್ತೇನೋ ಅನ್ನೋ ಅಷ್ಟು ಜೋರಾಗಿ ಬಡಿದುಕೊಳ್ತಾ ಇತ್ತು. ಹಾಗೆ ಬಂದು ನಿಂತವಳೇ ಅದೇ ಮೊದಲ ಸಲ ನನ್ನ ಕೈಯನ್ನು ಒಮ್ಮೆ ಅವಳ ಕೈಯಲ್ಲಿ ಹಿಡಿದುಕೊಂಡಳು. ಎಸ್ ಆ ಗಳಿಗೆ ಬಂದೇ ಬಿಡ್ತು ಅನಿಸ್ತಿತ್ತು. ನನ್ನ ಇಲ್ಲೇ ಪಕ್ಕದಲ್ಲಿ ಆಂಜನೇಯನ ದೇವಸ್ಥಾನ ಇದೆಯಂತಲ್ಲಾ ಅಲ್ಲಿಗೆ ಕರೆದುಕೊಂಡು ಹೋಗ್ತೀಯಾ ಅಂದಳು!!
ಓಹ್ .... ಇನ್ನೇನಿದೆ.. ನನ್ನ ಮೆಚ್ಚಿನ ದೇವರು. ನನಗೆ ಇವಳನ್ನು ವರ ಕೊಟ್ಟಂತೆ ಕೊಟ್ಟ ದೇವರು. ಅದೇ ಆಂಜನೇಯನ ಮುಂದೆ ಇವಳು ಅವಳ ಮನಸಿನ ಮಾತು ಹೇಳೋಕೆ ಹೊರಟಿದಾಳೆ ಇದಕ್ಕಿಂತ ಇನ್ನೇನು ಬೇಕು? ಓಹ್ ದೇವರೇ ಕ್ಷಮಿಸಿಬಿಡು.. ನನ್ನ ಮನಸಿಗೆ ಯಾಕೆ ಇದು ತೋಚಲಿಲ್ಲ.. ನಾನೇ ಕೇಳಬಹುದಿತ್ತು ಅಲ್ವಾ ಓಕೆ ಓಕೆ... ಅದೇ ಸರಿ ಅಲ್ಲೇ ಹೋಗೋಣ ಅಂದುಕೊಂಡವನ .. ಅವಳನ್ನು ತಕ್ಷಣ ಬೈಕಿನ ಮೇಲೆ ಕೂರಿಸಿಕೊಂಡು ಹೊರಟೇ ಬಿಟ್ಟೆ. ಅವಳನ್ನ ಬೈಕಿನ ಮೇಲೆ ಕೂರಿಸಿಕೊಂಡಿದ್ದು ಅದೇ ಮೊದಲು!
90ರ ಹರೆಯಲ್ಲಿ 5ನೇ ಮದುವೆಯಾದ ಅಜ್ಜ ಕೊಟ್ಟ ಮದುವೆ ಟಿಪ್ಸ್
ಹತ್ತೇ ನಿಮಿಷದಲ್ಲಿ ಆಂಜನೇಯನ ದೇವಸ್ಥಾನ ತಲುಪಿದ್ದೆವು.. ನಂಗೆ ಇವತ್ತು ಪೂಜೆ ಮಾಡಿಸಬೇಕಿದೆ ...
ತೆಂಗಿನಕಾಯಿ, ಕಡ್ಡಿ, ಕರ್ಪೂರ ತಂದು ಕೊಡ್ತೀಯಾ ಅಂದ್ಲು.. ಅಯ್ಯೋ ಬಂಗಾರೀ... ನೀನು ಪೂಜೆ ಮಾಡಿಸ್ತಾ ಇರೋದೇ ನಂಗೋಸ್ಕರ ತಾನೇ ಅದನ್ಯಾಕೆ ಅಷ್ಟು ಸಂಕೋಚ ಪಟ್ಕೋತಾ ಕೇಳ್ತಾ ಇದೀಯಾ. ಇವಾಗ್ಲೇ ತರ್ತೀನಿ ಇರು ಅಂತಾ ಹೇಳಬೇಕು ಅನಿಸಿದ್ರೂ.. ಮಾತುಗಳು ಮಾತ್ರ ಮನಸಿಂದ ಆಚೆ ಬರಲಿಲ್ಲ. ಇಬ್ಬರೂ ಸೇರಿ ಪೂಜೆ ಮುಗಿಸಿ ದೇವಸ್ಥಾನದ ಹೊರಗೆ ಬಂದು ಕಟ್ಟೆಯ ಮೇಲೆ ಕೂತೆವು. ಇದೇ ಕಟ್ಟೆಯ ಮೇಲೆ ಕುಳಿತೇ ಅಲ್ವಾ ದೇವರಿಗೆ ನಾನು ಅಪ್ಲಿಕೇಷನ್ ಹಾಕಿದ್ದು.ಇವಾಗ ಇಲ್ಲೇ ಆ ಕನಸು ನನಸಾಗ್ತಾ ಇದೆ. ಇನ್ನೇನು ಅವಳ ಮನಸಿನ ಮಾತು ಹೇಳಿ ಕೊಳ್ತಿದಾಳೆ. ನಂಗಂತೂ ಈ ಕ್ಷಣಕ್ಕೂ ನಂಬೋಕಾಗ್ತಿಲ್ಲ. ನಂಗಂತೂ ಆ ಧೈರ್ಯವೇ ಇಲ್ಲ. ಅಯ್ಯೋ ದೇವರೇ ಬೇಗ ಹೇಳಿ ಬಿಡ್ಲಿ ಅವಳು, ಯಾಕಿನ್ನೂ ಕಾಯಿಸ್ತಾ ಇದಾಳೇ ಅಂದುಕೊಳ್ತಿದ್ದಾಗಲೇ ಅವಳು ಮಾತು ಶುರು ಮಾಡಿದ್ದು...
ನಂಗೆ ಎಲ್ಲಿಂದ ಶುರು ಮಾಡೋದು ಅಂತಾ ಗೊತ್ತಾಗ್ತಿಲ್ಲ. ಮನುಷ್ಯರ ಮೇಲೆ ನಂಬಿಕೆ ಅನ್ನೋದೇ ಇರಲಿಲ್ಲ, ಆದ್ರೆ ನಿನ್ನ ನೋಡಿದ ಮೇಲೆ ಅದ್ಯಾಕೋ ಗೊತ್ತಿಲ್ಲ ನೀನೇ ಬೆಸ್ಟ್ ಅನಿಸ್ತು. ಮಾತೇ ಆಡದ ಮೌನಿ ನಾನು, ನಿನ್ನ ನೋಡಿದ ಮೇಲೆ ಮಾತು ಕಲಿತೆ ಅನ್ನೋ ಅಷ್ಟು ಮಾತಾಡಿಬಿಟ್ಟೆ. ಯಾರ ಹತ್ರ ಕೂಡಾ ಹೇಳಿ ಕೊಳ್ಳೊಕೆ ಆಗದ ವಿಚಾರಗಳನ್ನು ನಿನ್ನ ಮುಂದೆ ಕೂತು ಗಂಟೆ ಗಟ್ಟಲೆ ಹರಟಿಬಿಟ್ಟೆ. ನಿನ್ನ ಜೊತೆ ಮಾತೇ ಆಡದ ದಿನ ನಾನಂತೂ ಅದು ಹೆಂಗಿರ್ತೀನೋ ನಂಗೇ ಗೊತ್ತಿಲ್ಲ. ಒಂದು ದಿನ ಸ್ವಲ್ಪ ಲೇಟಾದ್ರೂ ಏನೋ ಕಳೆದುಕೊಂಡ ಭಾವನೆ. ನೀನು ನನಗೆ ಕೊಟ್ಟ ಆ ಕಂಫರ್ಟ್ ಫೀಲಿಂಗ್ ನೆನೆಸಿಕೊಂಡರೆ ನಾನೇ ಧನ್ಯ ಅನಿಸುತ್ತೆ. ಎಲ್ಲಿದ್ದೆ ನೀನು ಇಷ್ಟು ದಿನ? ಹೀಗೇ ನಿನ್ನ ಮೇಲೆ ಏನೇನೋ ಫೀಲಿಂಗ್. ನೀನಿಲ್ಲದೇ ಇರೋ ದಿನಗಳನ್ನು ನಾನು ನೆನೆಸಿಕೊಳ್ಳೋಕೂ ಸಾದ್ಯ ಇಲ್ಲ. ನೀನಿಲ್ಲದೇ ನಾನು ಹೆಂಗೆ ಇರ‍್ತೀನೋ ಗೊತ್ತಿಲ್ಲ. ನಾಳೆಯಿಂದ ನಾನು ಹೆಂಗೆ ಇರೋದು ಅಂತಾ ನೆನೆಸಿಕೊಂಡರೇನೆ ಒಂಥರಾ ಹಿಂಸೆ ಅನಿಸುತ್ತೆ. ಬಟ್ ಬೇರೆ ದಾರಿಯಿಲ್ಲ. ಇರಲೇ ಬೇಕಲ್ವಾ? ನಾಳೆ ಸಂಜೆ ಇದೇ ಹೊತ್ತಿಗೆ ನೀನು ದಿನಾ ನಾವು ಕೂರುತ್ತಿದ್ದ ಜಾಗಕ್ಕೆ ಬರಬೇಡ, ಸೀದಾ ಇದೇ ಜಾಗಕ್ಕೆ ಬಂದು ಬಿಡು.. ಇಲ್ಲೇ ನಾಳೆ ನನ್ನ ಎಂಗೇಜ್ಮೆಂಟ್. ಈ ವಿಚಾರ ನಿನಗೇ ಮೊದಲು ಹೇಳ್ತಾ ಇದೀನಿ... ಪ್ಲೀಸ್ ಮಿಸ್ ಮಾಡಬೇಡ ಆಯ್ತಾ..
ಮುಂದೆ ಆವಳು ಏನು ಹೇಳ್ತಾ ಇದಾಳೋ ಕಿವಿಗೆ ಕೇಳಿಸ್ತಾ ಇರಲಿಲ್ಲ.. ಆದ್ರೆ ಆಕೆ ಒಂದೇ ಸಮನೆ ಮಾತಾಡ್ತಾ ಇದ್ದಳು. ಯಥಾಪ್ರಕಾರ ನಾನು ಅವಳ ಮುಖವನ್ನೇ ನೋಡುತ್ತಾ ಕುಳಿತಿದ್ದೆ!