ಹಾಗಲಕಾಯಿ ಕಹಿ ಗೊತ್ತಿರುವವರು ಇಷ್ಟವಿಲ್ಲವೆಂದ್ರೆ ಅದನ್ನು ತಿನ್ನುವುದಿಲ್ಲ. ಹಾಗೆ, ಈಗಾಗಲೇ ಪ್ರೀತಿಯಲ್ಲಿ ಬಿದ್ದು ಮೋಸ ಹೋದವರು ವಿಶ್ವಾಸ ಬರುವವರೆಗೂ ಮತ್ತೆ ಪ್ರೀತಿಯಲ್ಲಿ ಬೀಳುವುದಿಲ್ಲ. ಲವ್ ದೋಖಾ ಅನುಭವಿಸಿದ ಹುಡುಗಿಯರ ಹೃದಯದಲ್ಲಿ ಪುಟ್ಟ ಮನೆ ಮಾಡುವುದು ಸುಲಭವಲ್ಲ.
ಪ್ರೀತಿ(Love)ಯಲ್ಲಿ ಮೋಸ (Cheating). ಸಾಮಾನ್ಯವಾಗಿ ಈ ಶೀರ್ಷಿಕೆ ನೋಡ್ತಿದ್ದಂತೆ ಹುಡುಗ (Boy),ಪ್ರೀತಿಗೆ ಬಿದ್ದು ಮೋಸ ಹೋಗಿದ್ದಾನೆ ಎಂದುಕೊಳ್ಳುವವರೇ ಹೆಚ್ಚು. ಪ್ರೀತಿಯಲ್ಲಿ ಮೋಸ ಹೋಗುವವರು ಪುರುಷರೇ ಹೆಚ್ಚು ಎಂಬ ಒಂದು ನಂಬಿಕೆಯಿದೆ. ಇದು ಸುಳ್ಳು. ಪ್ರೀತಿಸಿ ಮೋಸ ಹೋಗುವವರಲ್ಲಿ ಮಹಿಳೆ (woman)ಯರ ಸಂಖ್ಯೆಯೂ ಸಾಕಷ್ಟಿದೆ. ಒಮ್ಮೆ ಮೋಸ ಹೋಗಿ,ಮತ್ತೆ ಪ್ರೀತಿಗೆ ಹುಡುಕಾಡುವ ಹುಡುಗಿಯರ ಮನಸ್ಸಿನಲ್ಲಿ ಏನಿರುತ್ತದೆ ಎಂಬುದನ್ನು ಪುರುಷ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಪ್ರೀತಿ ಒಂದು ಮಧುರ ಸಂಬಂಧ (Relationship). ಇಬ್ಬರ ಮಧ್ಯೆ ನಂಬಿಕೆ,ಹೊಂದಾಣಿಕೆ,ಪರಸ್ಪರ ಗೌರವ,ವಿಶ್ವಾಸವಿದ್ದಾಗ ಮಾತ್ರ ಅದು ಚಿಗುರಿ ದೊಡ್ಡ ಮರವಾಗಲು ಸಾಧ್ಯ. ಪ್ರೇಮ ನಿವೇದನೆ ಸುಲಭದ ಮಾತಲ್ಲ. ಮೊದಲ ಬಾರಿ ಪ್ರೀತಿಯಲ್ಲಿ ಬೀಳುತ್ತಿರುವ ಹುಡುಗಿಗೆ ಪ್ರೇಮ ನಿವೇದನೆ ಮಾಡಿ ಆಕೆಯನ್ನು ಒಪ್ಪಿಸಿದಷ್ಟು ಪದೇ ಪದೇ ಪ್ರೀತಿಯಲ್ಲಿ ಮೋಸ ಹೋದವಳನ್ನು ಒಪ್ಪಿಸುವುದು ಸರಳವಲ್ಲ. ಒಮ್ಮೆ ಅಥವಾ ಅನೇಕ ಬಾರಿ ಪ್ರೀತಿ ಮೋಸದ ಕಹಿಯುಂಡಿರುವ ಹುಡುಗಿಯರು ಇನ್ನೊಂದು ಪ್ರೀತಿಯಲ್ಲಿ ಬೀಳುವಾಗ ಸಾವಿರಾರು ಬಾರಿ ಆಲೋಚನೆ ಮಾಡುತ್ತಾರೆ. ಹುಡುಗರನ್ನು ನೋಡುವ ಅವರ ದೃಷ್ಟಿಕೋನ ಬದಲಾಗಿರುತ್ತದೆ. ಈಗಾಗಲೇ ಪ್ರೀತಿಸಿ ಮೋಸಹೋದ ಹುಡುಗಿಗೆ ನೀವು ಹತ್ತಿರವಾಗಲು ಬಯಸಿದ್ದರೆ ಆಕೆ ಮನಸ್ಸನ್ನು ಅರಿಯುವ ಅಗತ್ಯವಿದೆ. ಆಕೆಯ ಬಗ್ಗೆ ಅನೇಕ ವಿಷ್ಯಗಳನ್ನು ತಿಳಿದುಕೊಂಡು ಮುನ್ನಡೆದಾಗ ಮಾತ್ರ ಆಕೆ ಪ್ರೀತಿ ನಿಮಗೆ ಸಿಗಲು ಸಾಧ್ಯ.
ನಂಬಿಕೆ-ವಿಶ್ವಾಸ (Trust) : ಪದೇ ಪದೇ ಪ್ರೀತಿಯ ದ್ರೋಹಕ್ಕೊಳಗಾದ ಮಹಿಳೆ,ಪ್ರೀತಿಯಲ್ಲಿ ವಿಶ್ವಾಸ ಕಳೆದುಕೊಂಡಿರುತ್ತಾಳೆ. ಒಮ್ಮೆ ಆಕೆ ಹುಡುಗನಿಗೆ ಹತ್ತಿರವಾಗ್ತಿದ್ದಾಳೆಂದರೆ ಆಕೆಯ ಪ್ರೀತಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಒಂದು ಹುಡುಗಿಯ ವಿಶ್ವಾಸ ಗಳಿಸುವುದು ಹೇಳಿದಷ್ಟು ಸುಲಭವಲ್ಲ. ಒಬ್ಬ ವ್ಯಕ್ತಿಯನ್ನು ನಂಬಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳದೆ ಯಾವುದೇ ಹುಡುಗಿ ಆತನ ಮುಂದೆ ತನ್ನ ಹೃದಯವನ್ನು ತೆರೆದಿಡುವುದಿಲ್ಲ.
ನೋವನ್ನು ಹಂಚಿಕೊಳ್ಳಲು ಬಯಸುತ್ತಾಳೆ : ಅನೇಕ ಬಾರಿ ಪ್ರೀತಿಯಲ್ಲಿ ವಂಚನೆ ಅನುಭವಿಸಿದ ಹುಡುಗಿ ನಿಮ್ಮ ಜೊತೆ ಬರಲು ಹೆದರುವುದಿಲ್ಲ. ಹಿಂದೆ ನಡೆದ ಘಟನೆ ಇಲ್ಲಿಯೂ ನಡೆದರೆ ಎಂಬ ಅಂಜಿಕೆ ಆಕೆಗಿರುತ್ತದೆ. ಇದೇ ಕಾರಣಕ್ಕೆ ಆಕೆ ತನ್ನ ನೋವನ್ನು ಹೇಳಿಕೊಳ್ಳಲು ಬಯಸುತ್ತಾಳೆ. ನೋವು ಹಂಚಿಕೊಳ್ಳುವುದು ಎಂದ್ರೆ ತನ್ನ ಅಸಹಾಯಕತೆ ತೋರ್ಪಡಿಸಿದಂತಲ್ಲ. ಈ ಪ್ರೀತಿಯಲ್ಲೂ ಅದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ನೋವನ್ನು ಹೇಳಿಕೊಳ್ಳುತ್ತಾಳೆ.
ಅವಮಾನ ಬೇಡ : ಪ್ರೀತಿ ಕಳೆದುಕೊಂಡಾಗ ಆಗುವ ನೋವಿ(Pain)ನಿಂದ ಹೊರ ಬರಲು ಸಾಕಷ್ಟು ಸಮಯ ಹಿಡಿದಿರುತ್ತದೆ. ಪದೇ ಪದೇ ಕಾಡುವ ಮೊದಲ ಪ್ರೀತಿಯನ್ನು ಮರೆತು ಹೊಸ ಬದುಕಿಗೆ ಆಕೆ ಕಾಲಿಟ್ಟಿರುತ್ತಾಳೆ. ಮತ್ತೆ ಆ ಕೆಟ್ಟ ಕ್ಷಣ ಬಂದರೆ ಎಂಬ ಭಯ (Fear)ದಲ್ಲಿ ಆಕೆ ಸ್ವಲ್ಪ ಅಂತರ್ಮುಖಿಯಾಗಿರುತ್ತಾಳೆ. ಅತಿಯಾಗಿ ಪ್ರೀತಿ ವ್ಯಕ್ತಪಡಿಸದೆ ಇರಬಹುದು. ಸಂತೋಷ (Happiness)ವನ್ನು ಮನಸ್ಸು ಬಿಚ್ಚಿ ಆನಂದಿಸದಿರಬಹುದು. ಎಲ್ಲ ಸಂಗತಿಗಳನ್ನು ಹೇಳದೆ,ಕೆಲವೊಂದನ್ನು ತನ್ನಲ್ಲಿಯೇ ಮುಚ್ಚಿಟ್ಟುಕೊಂಡಿರಬಹುದು. ಆ ಸಂದರ್ಭದಲ್ಲಿ ಆಕೆಯನ್ನು ಅವಮಾನಿಸುವ,ಆಕೆ ಮೇಲೆ ಕೂಗಾಡುವ ಕೆಲಸ ಮಾಡಬೇಡಿ. ಹಿಂದೆ ನಡೆದ ಘಟನೆಯಿಂದ ಆಕೆ ಹೀಗಾಗಿದ್ದಾಳೆ ಎಂಬುದನ್ನು ಅರ್ಥೈಸಿಕೊಂಡು,ಆಕೆಯನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಪ್ರೀತಿ : ಪ್ರೀತಿಯಲ್ಲಿ ಮೋಸ ಹೋದ ಹುಡುಗಿಯರು ನಿಸ್ವಾರ್ಥ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಹಾಗಾಗಿ ಅವರನ್ನು ಅತಿ ಕಾಳಜಿಯಿಂದ ನೋಡುವ ಅಗತ್ಯವಿದೆ. ತನ್ನ ಮೇಲೆ ಹೆಚ್ಚು ಗಮನ ನೀಡುವ,ಕಾಳಜಿ ತೋರುವ,ಭಯಪಡುವ ಅಗತ್ಯವಿಲ್ಲ ನಾನಿದ್ದೇನೆ ಎಂದು ಹೆಗಲು ನೀಡುವ ಪುರುಷನ ಅಗತ್ಯವಿರುತ್ತದೆ.
ಆತುರ ಬೇಡ : ಮೋಸ ಹೋದ ಮಹಿಳೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾಳೆ. ದೂರದಿಂದಲೇ ನಿಮ್ಮ ಪರೀಕ್ಷೆ ನಡೆಸುತ್ತಾಳೆ. ನೀವು ತಾಳ್ಮೆಯಿಂದ ಕಾಯಬೇಕಾಗುತ್ತದೆ.