ನ್ಯೂಯಾರ್ಕ್: ತಾಯಿ ಹಾಗೂ ಮಕ್ಕಳ ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು ಅದು ರಕ್ತ ಸಂಬಂಧದ ಹೊರತಾಗಿಯೂ ಒಂದು ವಿವರಿಸಲಾಗದ ಒಂದು ಅನುಬಂಧ. ಎಲ್ಲರಿಗೂ ತನ್ನ ಹೆತ್ತಬ್ಬೆಯೊಡನೆ ಬೆಳೆದು ಬಾಳುವ ಭಾಗ್ಯವಿರುವುದಿಲ್ಲ. ಹಾಗೆಯೇ ಎಲ್ಲರಿಗೂ ತಮ್ಮ ಕರುಳ ಕುಡಿಯ ಬೆಳವಣಿಗೆ ನೋಡುತ್ತಾ ಬದುಕುವ ಯೋಗವಿರುವುದಿಲ್ಲ. ಬಡತನ ಹಾಗೂ ತನ್ನ ಕಂದನ ಭವಿಷ್ಯ ಚೆನ್ನಾಗಿರಲೆಂದು ಕೂಡ ಅನೇಕ ಬಡ ತಾಯಂದಿರು ತಮ್ಮ ಮಕ್ಕಳನ್ನು ಶ್ರೀಮಂತರಿಗೆ ದತ್ತು ನೀಡುತ್ತಾರೆ. ಮತ್ತೆ ಮದುವೆಗೆ ಮೊದಲು ಹುಟ್ಟಿದ ಕಂದನನ್ನು ಸಾಮಾಜಕ್ಕೆ ಹೆದರಿ ಯಾರಿಗೂ ತಿಳಿಯದಂತೆ ದತ್ತು ನೀಡುವುದು ಇದೇ. ಆದರೆ ಹೀಗೆ ದತ್ತು ನೀಡಲ್ಪಟ್ಟ ಮಕ್ಕಳನ್ನು ಮತ್ತೆ ನೋಡುವ ಭಾಗ್ಯ ಬಹುತೇಕರಿಗೆ ಇರುವುದಿಲ್ಲ.
ವಿದೇಶಗಳಿಗೆ ದತ್ತು ನೀಡಲ್ಪಟ್ಟ ಅನೇಕ ಮಕ್ಕಳು ಬೆಳೆದು ದೊಡ್ಡವರಾದ ನಂತರವೂ ತಮ್ಮೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವಿಲ್ಲದಿರುವ ತಾಯಿಯ ಹುಡುಕಾಡಲು ಯತ್ನಿಸಿ ಸಿಗದೇ ನಿರಾಶೆಯಿಂದ ಮರಳಿ ಹೋದ ಅನೇಕ ಘಟನೆಗಳು ನಮಲ್ಲಿ ಈಗಾಗಲೇ ನಡೆದಿರುವುದನ್ನು ನಾವು ನೋಡಿದ್ದೇವೆ. ಆದರೆ ಅಮೆರಿಕಾದ ಈ ತಾಯಿಗೆ ಮಾತ್ರ ತಾನು 20 ವರ್ಷಗಳ ಹಿಂದೆ ದತ್ತು ನೀಡಿದ ಕಂದನನ್ನು ದೊಡ್ಡ ತರುಣನಾದ ನಂತರ ನೋಡುವ ಭಾಗ್ಯ ಸಿಕ್ಕಿದೆ. ಅಲ್ಲದೇ ಜೊತೆಗೆ ಕೆಲಸ ಮಾಡುವ ಯೋಗವೂ ಒಲಿದು ಬಂದಿದೆ. ಈ ತಾಯಿ ಮಗನ ಅಪೂರ್ವ ಕತೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕಾದ ಉತಾಹ್‌ನ (Utah) ನಿವಾಸಿಯಾದ ಬೆಂಜಮಿನ್ ಹುಲ್ಲೆಬರ್ಗ್ (Benjamin Hulleberg) ಎಂಬಾತನೇ ಹೀಗೆ 20 ವರ್ಷಗಳ ಬಳಿಕ ಮೊದಲ ಬಾರಿಗೆ ತನ್ನ ತಾಯಿ ಹೋಲಿ ಶಿಯರೆರ್ (Holly Shearer) ನನ್ನು ಭೇಟಿ ಮಾಡಿದ ಅದೃಷ್ಟವಂತ. ಕಳೆದ ವರ್ಷ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಹೋಲಿ ಶಿಯರೆರ್ ತನ್ನ ಪುತ್ರ ಬೆಂಜಮಿನ್ ಹುಲ್ಲೆಬರ್ಗ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾಳೆ. ಅಪರಿಚಿತಳಿಂದ ಬಂದ ಹುಟ್ಟುಹಬ್ಬದ ಶುಭಾಶಯವನ್ನು ನೋಡಿ ತರುಣ ಆಶ್ಚರ್ಯಗೊಂಡಿದ್ದು, ನಿಮಗೆ ನನ್ನ ಪರಿಚಯ ಹೇಗೆ ಎಂದು ಕೇಳಿದಾಗ ತಾನು 20 ವರ್ಷಗಳ ಹಿಂದೆ ತೆಗೆದುಕೊಂಡ ಬದುಕಿನ ಕಠಿಣ ನಿರ್ಧಾರವನ್ನು ಈ ತಾಯಿ ಮಗನಿಗೆ ಹೇಳಿದ್ದಾಳೆ.
57 ವರ್ಷ ತಾಯಿ ಮಗನಿಗಾಗಿ, ಮಗ ತಾಯಿಗಾಗಿ ಹುಡುಕಾಟ: ಸಿಕ್ಕಾಗ ಆಗಿದ್ದೇನು?
ಇದಕ್ಕೂ ಮೊದಲು ತಾನು ತನ್ನ ಪೋಷಕರ ದತ್ತು ಪುತ್ರ ಎಂದು ಪೋಷಕರಿಂದಲೇ ತಿಳಿಯಲ್ಪಟ್ಟಿದ್ದ ಹುಲ್ಲೆಬರ್ಗ್ ತನ್ನ ಜೈವಿಕ ತಾಯಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೊಂದಿದ್ದ. ಆದರೆ ಎರಡು ದಶಕಗಳ ನಂತರ ಈ ಇಬ್ಬರು ಭೇಟಿಯಾದಾಗ ಇಬ್ಬರಿಗೂ ಅಚ್ಚರಿ ಕಾದಿತ್ತು. ಏಕೆಂದರೆ ಇಬ್ಬರೂ ಸಾಲ್ಟ್ ಲೇಕ್ ಸಿಟಿಯ ( Salt Lake City) ಸೇಂಟ್ ಮಾರ್ಕ್ಸ್ ಆಸ್ಪತ್ರೆಯಲ್ಲಿ (St Mark’s Hospital) ಕೆಲಸ ಮಾಡುತ್ತಿದ್ದರು. ಬೆಂಜಮಿನ್ ಹುಲ್ಲೆಬರ್ಗ್ ಸ್ವಯಂಸೇವಕರಾಗಿ NICU ನಲ್ಲಿ ಕೆಲಸ ಮಾಡುತ್ತಿದ್ದರೆ ಹೋಲಿ ಶಿಯರೆರ್ ವೈದ್ಯಕೀಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.
ಕೊಚ್ಚಿಯಿಂದ ಲಡಾಕ್ಗೆ ತಾಯಿ-ಮಗನ ಬೈಕ್ ರೈಡ್; ವಿಡಿಯೋ ವೈರಲ್
ಇನ್ನು ಇವರಿಬ್ಬರು ಕೆಲಸ ಮಾಡುತ್ತಿರುವ ಆಸ್ಪತ್ರೆಯೂ ಫೇಸ್‌ಬುಕ್‌ನಲ್ಲಿ ಬೆಂಜಮಿನ್ ಹುಲ್ಲೆಬರ್ಗ್ ಜನಿಸಿದ ಸಮಯದ 2001 ರ ಫೋಟೋಗಳನ್ನು ಪೋಸ್ಟ್ ಮಾಡಿದೆ. ಶಿಯರೆರ್ ತನ್ನ ಮಗನಿಗೆ ಜನ್ಮ ನೀಡಿದಾಗ ಕೇವಲ 15 ವರ್ಷದವಳಾಗಿದ್ದಳು. ತಂದೆ ಹಾಗೂ ತಾಯಿಯ ಪಾತ್ರವನ್ನು ಅವಳೊಬ್ಬಳೇ ನಿಭಾಯಿಸಬೇಕಾಗಿತ್ತು. ಅವನಿಗೆ ಯಾವ ಸವಲತ್ತುಗಳನ್ನು ಒದಗಿಸುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಹೀಗಾಗಿ 2001ರ ನವಂಬರ್‌ನಲ್ಲಿ ಬದುಕಿನ ಅತ್ಯಂತ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಆಕೆ ತನ್ನ ಕಂದನನ್ನು ದತ್ತು ಪೋಷಕರಾದ ಏಂಜೆಲಾ ಮತ್ತು ಬ್ರಿಯಾನ್ ಗೆ ನೀಡುತ್ತಾಳೆ.
ಇದಾಗಿ ಎರಡು ದಶಕಗಳೇ ಕಳೆದಿವೆ. ಈ ನಡುವೆ ತನ್ನ ಹೆತ್ತ ತಾಯಿಯನ್ನು ನೋಡುವ ಆಸೆ ಬೆಂಜಮಿನ್ ಹೃದಯವನ್ನು ತೀವ್ರವಾಗಿ ಕೊರೆಯುತ್ತಿದ್ದು, ಆಕೆಯ ನಿಸ್ವಾರ್ಥ ನಿರ್ಧಾರಕ್ಕಾಗಿ ಆಕೆಗೆ ಧನ್ಯವಾದ ಹೇಳಲು ಬಯಸಿದ ಆತ ಈ ವಿಚಾರವನ್ನು ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ. ಪರಿಣಾಮ ವರ್ಷಗಳ ನಂತರ ಆತನಿಗೆ ತನ್ನ ತಾಯಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ.
ಇನ್ನು ಈ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ತಾಯಿ ಶಿಯರೆರ್ ತಾನು ತನ್ನ ಮಗನನ್ನು 18 ವರ್ಷವಿದ್ದಾಗ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದೆ. ಆದರೆ ಅದು ಅವನ ಜೀವನವನ್ನು ತಲೆಕೆಳಗಾಗಿಸಬಹುದೆಂಬ ಭಯದಿಂದ ಆತನನ್ನು ಸಂಪರ್ಕಿಸಲು ಹೆದರುತ್ತಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಾಯಿ ಮಗನ ಈ ಅಪೂರ್ವ ಸಮ್ಮಿಲನದ ಸ್ಟೋರಿ ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.