
ಇಷ್ಟು ದಿನ ಹರೆಯಕ್ಕೆ ಕಾಲಿರಿಸಿದ ಮಕ್ಕಳು ಪ್ರೀತಿ ಪ್ರೇಮದ ಬಲೆಗೆ ಬಿದ್ದು ಓಡಿ ಹೋಗುತ್ತಿದ್ದರು. ಆದರೆ ಇಲ್ಲೊಂದು ಕಡೆ ಮಕ್ಕಳ ಮದುವೆ ಸಮಯದಲ್ಲಿ ಪುರುಷ ಹಾಗೂ ಮಹಿಳೆ ಜೊತೆಯಾಗಿ ಓಡಿ ಹೋಗಿದ್ದು, ಇವರಿಬ್ಬರ ಪ್ರೇಮ ಪ್ರಕರಣದಿಂದಾಗಿ ಮಕ್ಕಳು ತಲೆ ತಗ್ಗಿಸುವಂತಾಗಿದೆ. ಹೌದು ಕಾಲ ಬದಲಾಗುತ್ತಿದೆ. ಇಷ್ಟು ದಿನ ಮಕ್ಕಳು ಓಡಿ ಹೋಗಿದ್ದಕ್ಕೆ ಪೋಷಕರು ಅವಮಾನಕ್ಕೆ ಒಳಗಾಗುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಕೆಲ ಘಟನೆಗಳಲ್ಲಿ ಪೋಷಕರು ಮಾಡಿದ ಕೆಲಸಕ್ಕೆ ಮಕ್ಕಳು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ. ಅಂದಹಾಗೆ ಇಂತಹದೊಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ.
ತನ್ನ ಮಗಳಿಗೆ ಅತ್ತೆಯಾಗಬೇಕಾದವಳ ಜೊತೆ ವಧುವಿನ ತಂದೆ ಓಡಿ ಹೋಗಿರುವಂತಹ ವಿಚಿತ್ರ ಘಟನೆ ನಡೆದಿದ್ದು, ಈ ಘಟನೆ ಈಗ ಎರಡು ಕುಟುಂಬಗಳ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದೆ. ತಮ್ಮ ಮಕ್ಕಳ ವಿವಾಹ ನಿಶ್ಚಿತಾರ್ಥಕ್ಕೆ ಕೆಲ ದಿನಗಳಿರುವಾಗ ಈ ಮಧ್ಯವಯಸ್ಕ ದಂಪತಿ ಪರಸ್ಪರ ಮೋಹದಲ್ಲಿ ಬಿದ್ದು ಓಡಿ ಹೋಗಿದ್ದು, ಇದರಿಂದ ಎರಡು ಕುಟುಂಬಗಳು ತಲೆ ತಗ್ಗಿಸುವಂತಾಗಿದೆ. ಗುರುವಾರ ಈ ಘಟನೆ ಬೆಳಕಿಗೆ ಬಂದಿದ್ದರು 8 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ. ಹೀಗೆ ಓಡಿ ಹೋಗಿರುವ ಮಧ್ಯವಯಸ್ಕ ಪ್ರೇಮಿಗಳನ್ನು ಗುರುವಾರ ಪೊಲೀಸರು ಪತ್ತೆ ಮಾಡಿ ಕರೆತಂದಿದ್ದಾರೆ.
ಪೊಲೀಸರ ಪ್ರಕಾರ ವಧುವಿನ ತಂದೆಯ ಜೊತೆ ಓಡಿ ಹೋದ ಮಹಿಳೆ ಅಂದರೆ ವರನ ತಾಯಿಗೆ 45 ವರ್ಷ ವಯಸ್ಸು ಈಕೆ ಉಂತ್ವಾಸ ಗ್ರಾಮದ ನಿವಾಸಿಯಾಗಿದ್ದು, ವಾರದಿಂದ ನಾಪತ್ತೆಯಾಗಿದ್ದಳು ಹೀಗಾಗಿ ಅವರ ಪುತ್ರ ಅಮ್ಮ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಹೀಗೆ ತನಿಖೆಗಿಳಿದ ಪೊಲೀಸರಿಗೆ ಚಿಕ್ಲಿ ಗ್ರಾಮದಲ್ಲಿ ಆಕೆ ಪತ್ತೆಯಾಗಿದ್ದು, 50 ವರ್ಷದ ವ್ಯಕ್ತಿಯ ಜೊತೆ ಆಕೆ ವಾಸ ಮಾಡ್ತಿದ್ದಳು. ಇವರನ್ನು ಕರೆಸಿ ವಿಚಾರಣೆ ನಡೆಸಿದಾಗ ಆ 50 ವರ್ಷದ ವ್ಯಕ್ತಿಯ ಮಹಿಳೆಯ ಪುತ್ರನಿಗೆ ಭಾವಿ( ಪುತ್ರನ ಭಾವಿ ಪತ್ನಿಯ ತಂದೆ) ಮಾವನಾಗಬೇಕಾದವರು ಎಂಬುದು ಗೊತ್ತಾಗಿದೆ.
ಆ 50 ವರ್ಷದ ವ್ಯಕ್ತಿ ರೈತನಾಗಿದ್ದು, ಅವರ ಪತ್ನಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗಳ ಮದುವೆಗೆ ವರನನ್ನು ನಿಗದಿ ಮಾಡಲಾಗಿತ್ತು. ಆದರೆ ಈ ಸಮಯದಲ್ಲಿಯೇ ವರನ ತಾಯಿಗೂ ವಧುವಿನ ತಂದೆಗೂ ಪ್ರೇಮಾಂಕುರವಾಗಿದ್ದು, ವರನ ತಾಯಿ ಮನೆ ಬಿಟ್ಟು ಈ ವ್ಯಕ್ತಿಯ ಮನೆಗೆ ಹೊರಟು ಬಂದಿದ್ದಾರೆ. ಇವರಿಬ್ಬರ ಈ ಪ್ರೇಮ ಪ್ರಕರಣದಿಂದಾಗಿ ಈಗ ಎರಡು ಕುಟುಂಬಗಳು ಆಘಾತಕ್ಕೆ ಒಳಗಾಗಿದ್ದಾರೆ. ನಗರ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಪಟೀದಾರ್ ಅವರು ಈ ಘಟನೆಯನ್ನು ಖಚಿತಪಡಿಸಿದ್ದಾರೆ.
ಮಕ್ಕಳು ಕರೆದರೂ 50 ವರ್ಷದವನ ಬಿಟ್ಟು ಬರಲೊಪ್ಪದ ಮಹಿಳೆ
ಎಂಟು ದಿನಗಳ ಹಿಂದೆ 45 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ನಮ್ಮ ತನಿಖೆಯಲ್ಲಿ ಅವರು ತಮ್ಮ ಪತಿ ಮತ್ತು 18 ಹಾಗೂ 20 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಬಿಟ್ಟು 50 ವರ್ಷದ ರೈತನೊಂದಿಗೆ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಆಕೆ ರೈತನ ಮಗಳ ಜೊತೆ ತನ್ನ ಮಗನಿಗೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು. ಆದರೆ ನಿಶ್ಚಿತಾರ್ಥ ಇನ್ನೂ ನಡೆದಿರಲಿಲ್ಲ. ಆದರೆ ಈಗ ಮಕ್ಕಳ ಬದಲು ಈ ಇಬ್ಬರೂ ಒಟ್ಟಿಗೆ ವಾಸಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಪತ್ತೆ ಮಾಡಿದ ನಂತರವೂ, ಮಹಿಳೆ ತನ್ನ ಪ್ರಿಯಕರನನ್ನು ಬಿಟ್ಟು ಬರಲು ನಿರಾಕರಿಸಿದರು, ಅವರೊಂದಿಗೆ ಇರಲು ಬಯಸುವುದಾಗಿ ಘೋಷಿಸಿದರು ಎಂದು ವರದಿಯಾಗಿದೆ. ಈ ವೇಳೆ ಆಕೆಯ ಕುಟುಂಬ ಸದಸ್ಯರು ಅವಳನ್ನು ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರಾದರು ಆ ಮಹಿಳೆ ಮಾತ್ರ ನಿರ್ಧಾರ ಬದಲಿಸದೇ ಧೃಡವಾಗಿ ನಿಂತಿದ್ದರಿಂದ ಎರಡೂ ಮನೆಯವರು ಮುಜುಗರಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗುರುವಾಯೂರು ದೇಗುಲದಲ್ಲಿ ವೃಶ್ಚಿಕ ಏಕಾದಶಿಯಂದೇ ಉದಯಸ್ತಮಾನ ಪೂಜೆ ಮಾಡಿ: ಸುಪ್ರೀಂಕೋರ್ಟ್ ಸೂಚನೆ
ಇದನ್ನೂ ಓದಿ: ಧರ್ಮ ಮೀರಿದ ಸ್ನೇಹ: ಮುಸ್ಲಿಂ ನಟ ಮಮ್ಮುಟ್ಟಿ ಚೇತರಿಕೆ ನಂತರ ಹರಕೆ ತೀರಿಸಿದ ಕೇರಳ RSS ಮುಖಂಡ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.