ನಾಳೆ ನನ್ನ ನಿಶ್ಚಿತಾರ್ಥವೆಂದು ಹೋದ ಹುಡುಗಿ ಅರಸಿ ಅದೇ ಜಾಗಕ್ಕೆ ವರ್ಷದ ನಂತರ ಹೋದಾಗ?

By Suvarna News  |  First Published Aug 1, 2023, 10:53 AM IST

ಅವಳು ನನ್ನ ಪ್ರೀತಿಯನ್ನು ಒಪ್ಪೋದು ಗ್ಯಾರಂಟಿ ಅಂತ ಮನಸ್ಸು ಹೇಳುತ್ತಿತ್ತು. ಆದರೂ, ನಾಳೆ ನನ್ನ ನಿಶ್ಚಿತಾರ್ಥವೆಂದು ಪ್ರೀತಿ ತ್ಯಜಿಸಿ ಹೋದವಳನ್ನು ನೆನೆಯದ ದಿನವಿಲ್ಲ. ವರ್ಷದ ನಂತರ ಅವಳ ನೆನಪಲ್ಲಿ ಅದೇ ಜಾಗಕ್ಕೆ ಬಂದರೆ? 


ಅವತ್ಯಾಕೋ ಧೋ.. ಮಳೆ.. ಆಕಾಶವೇ ತೂತು ಬಿದ್ದು ಹೋಗಿದೆಯೋನೋ ಎಂಬಂತೆ ಅದೆಷ್ಟು ಹೊತ್ತು ಸುರಿಯಿತೋ ಗೊತ್ತಿಲ್ಲ.ಅದೆಷ್ಟು ಹೊತ್ತು ಹಾಗೇ ಆ ಮಳೆಯ ಪರಿವೆಯೂ ಇಲ್ಲದಂತೆ ಹಾಗೇ ಆ ಗುಡ್ಡದ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನ ಆ ಕಟ್ಟೆಯ ಮೇಲೆ ಕುಳಿತಿದ್ದೆನೋ ನನಗೇ ಗೊತ್ತಿಲ್ಲ. ಎದೆಯ ತುಂಬಾ ಕಟ್ಟಿದ್ದ ಅಷ್ಟೂ ಪ್ರೀತಿಯ ಗೋಪುರ ಕರಗಿ ಹೋಗುವಂತೆ ಸುರಿಯಿತು ಮಳೆ. ನನ್ನ ಜೊತೆ ಇನ್ನು ಮಾತು ಮುಗಿಯಿತು ಎಂಬಂತೆ ಯಾವಾಗಲೋ ಅವಳು ಎದ್ದು ಹೋಗಿದ್ದಳು. ಪಾಪ ಅವಳದಾದರೂ ಏನು ತಪ್ಪಿದೆ. ಯಥಾ ಪ್ರಕಾರ ನನ್ನ ಜೊತೆ ಪ್ರತಿ ದಿನ ಕುಳಿತಂತೆ ಅರ್ಧ ಗಂಟೆ ಕುಳಿತಿದ್ದಳು. ಅವಳು ಹೇಳಬೇಕಾದ್ದನ್ನು ಹೇಳಿ ಅವಳ ಪಾಡಿಗೆಂಬಂತೆ ಎದ್ದು ಹೊರಟೇ ಹೋಗಿದ್ದಳು. 

ಪ್ರತಿದಿನ ಅವಳನ್ನು ಭೇಟಿ ಮಾಡುತ್ತಿದ್ದ ಜಾಗದಿಂದ ಗುಡ್ಡದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅವಳೇ ನನ್ನನ್ನು ಕರೆದುಕೊಂಡು ಬಂದಿದ್ದಳು. ಏನೋ  ಮಾತಾಡುವುದಿದೆ ಅಂತಾ ಅವಳು ನನ್ನನ್ನು ಈ ಜಾಗಕ್ಕೆ ಕರೆದದುಕೊಂಡು ಬಂದಾಗಲೇ ನನ್ನ ಮನಸಲ್ಲಿ ನೂರು ಮತಾಪುಗಳು ಒಟ್ಟಿಗೇ ಸಿಡಿದಂತೆ ಆಗಿತ್ತು. ನಾನು ಇಷ್ಟು ದಿವಸ ದೇವರಲ್ಲಿ ಬೇಡಿಕೊಂಡ ಆ ದಿನ ಬಂದೇ ಬಿಡ್ತು ಅಂತಾ ಸಂಭ್ರಮಿಸಿದ್ದೆ. ಮನಸಲ್ಲೇ ಅವಳ ಮೇಲೆ ಕಟ್ಟಿಕೊಂಡಿದ್ದ ಪ್ರೀತಿಯ ಕನಸು ಇನ್ನೇನು ನನಸಾಗೇ ಬಿಡುತ್ತೆ. ಆಂಜನೇಯನ ಮುಂದೆ ಪ್ರತಿದಿನ ಬೇಡಿಕೊಂಡಿದ್ದ ಪ್ರಾರ್ಥನೆ ಇನ್ನೇನು ಫಲಿಸಿಯೇ ಬಿಡುತ್ತೆ. ಹುಟ್ಟುವ ಮಗಳಿಗೆ ಹನುಮಂತಿ ಅಂತ ಹೆಸರಿಡಬೇಕು ಅಂತಾ ಹರಕೆ ಕಟ್ಟಿಕೊಂಡಿದ್ದೇನೆ ನೀನು ಸುಮ್ಮನೆ ಬೇರೆ ಹೆಸರು ಇಡೋಣ ಅಂತಾ ಹಠ ಮಾಡಬಾರದು ಅಷ್ಟೇ ಅಂತಾ ಅವಳ ಬಳಿ ಹೇಳಿ ಬಿಡೋಣ ಅಂತಾ ಅಂದುಕೊಳ್ಳುವಷ್ಟರಲ್ಲೇ ಅವಳು ಮಾತು ಶುರು ಮಾಡಿದ್ದಳು.

Tap to resize

Latest Videos

ನೋಡು ಅದ್ಯಾವ ಜನ್ಮದ ಬಂಧುವೋ ನೀನು ಗೊತ್ತಿಲ್ಲ. ಯಾರ ಬಳಿಯೂ ಅಷ್ಟಾಗಿ ಮಾತೇ ಆಡದ ನಾನು ನಿನ್ನ ಮುಂದೆ ಮಾತ್ರ ಅದ್ಯಾಕೋ ಏನೋ ಒಂದಿಷ್ಟೂ ಅಳುಕಿಲ್ಲದೇ ಮಾತನಾಡಬಲ್ಲೆ. ಏನೇ ಇದ್ದರೂ ನಿನ್ನ ಮುಂದೆ ಮಾತ್ರ ಹೇಳಿಕೊಳ್ಳಬಲ್ಲೆ. ಪ್ರತಿದಿನ ನಿನ್ನ ನೋಡದೇ ಹೋದ್ರೆ ಹೊತ್ತು ಮುಳುಗುವುದೇ ಇಲ್ಲ. ಯಾಕಿಷ್ಟು ಹಚ್ಚಿಕೊಂಡೆನೋ ನನಗೇ ಗೊತ್ತಿಲ್ಲ. ಆದ್ರೆ ನಾಳೆಯಿಂದ ಇದೆಲ್ಲಾ ಇರಲ್ಲ ಅಂತಾ ಯೋಚನೆ ಮಾಡೋಕೇ ಒಂಥರಾ ಕಷ್ಟ ಆಗ್ತಿದೆ. ನಾಳೆ ಇದೇ ಹೊತ್ತಿಗೆ ನಾವು ಪ್ರತಿದಿನಾ ಮೀಟ್ ಮಾಡ್ತಾ ಇದ್ದೆವಲ್ಲಾ ಅಲ್ಲಿಗೆ ಬರಬೇಡ. ಇದೇ  ದೇವಸ್ಥಾನದ ಬಳಿ ಬಂದುಬಿಡು. ನಾಳೆ ಇಷ್ಟು ಹೊತ್ತಿಗೆ ಇಲ್ಲೇ ನನ್ನ ಎಂಗೇಜ್ಮೆಂಟ್.. ಆಯ್ತಾ?

ಅಷ್ಟೇ ನನ್ನ ಕಿವಿಗೆ ಬಿದ್ದಿದ್ದು. ದೊಡ್ಡದಾಗಿ ಅದೆಲ್ಲೋ ಸಿಡಿಲು ಬಡಿದ ಸದ್ದು. ಬೆಚ್ಚಿ ಬಿದ್ದ ಅವಳು ಅಲ್ಲಿಂದ ಎದ್ದು ನಾಳೆ ಮರೆಯದೇ ಬಾ ಅಂದವಳೇ ಅಲ್ಲಿಂದ ಹೊರಟೇ ಬಿಟ್ಟಿದ್ದಳು. ಆಗ ಶುರುವಾಗಿತ್ತು ರಣಮಳೆ. ಒಂದೇ ಸಮನೆ ಗಂಟೆಗಟ್ಟಲೆ ಸುರಿದ ಮಳೆಯಲ್ಲಿ ಲೋಕದ ಪರಿವೆಯೇ ಇಲ್ಲದೇ ಕುಳಿತಿದ್ದೆ. 

ಓ ದೇವರೇ ಅವಳು ನನ್ನ ಪ್ರೀತಿ ಒಪ್ಪಲಿ, ಮಗಳು ಹುಟ್ಟಿದರೆ ಹನುಮಂತಿ ಅಂತ ಹೆಸರಿಡುತ್ತೇನೆ!

ಯಾವ ತಪ್ಪಿಗೆ ಈ ಶಿಕ್ಷೆ? ಕೇಳಬಾರದ್ದನ್ನೇನಾದ್ರೂ ಕೇಳಿದ್ದೆನಾ. ಮಾಡಬಾರದ್ದ ಪಾಪವನ್ನೇನಾದ್ರೂ ಮಾಡಿದ್ದೆನಾ ಗೊತ್ತಿಲ್ಲ. ದೇವರ ಕಡೆ ತಿರುಗಿ ನೋಡಲೂ ಯಾಕೋ ಇಷ್ಟ ಆಗಲೇ ಇಲ್ಲ. ಎಷ್ಟೋ ಹೊತ್ತು ಕುಳಿತು ಸಮಾಧಾನ ಆಗುವವರೆಗೂ ಅತ್ತು ನಿಧಾನವಾಗಿ ಅಲ್ಲಿಂದ ಎದ್ದು ಹೊರಟಿದ್ದೆ.

ಅದಾಗಿ ಒಂದು ವರ್ಷವೇ ಕಳೇದು ಹೋಯಿತು. ಕಾಲ ಅಂದ್ರೆ ಹಾಗೇ ನೋಡಿ. ಯಾರ ನೋವಿಗೂ ನಿಲ್ಲುವುದಿಲ್ಲ. ಯಾರಿಗೂ ಕಾಯುವುದೂ ಇಲ್ಲ. ಅವಳ ಎಂಗೇಜ್ಮೆಂಟು. ಅದೆಲ್ಲಾ ಹೇಗಾಯ್ತೋ ನಾನಂತೂ ಮತ್ತೆ ಆ ಕಡೆ ತಲೆ ಹಾಕಿದವನೇ ಅಲ್ಲ. ಮತ್ತೆ ಆ ಗುಡ್ಡದ ಆಂಜನೇಯ ಸ್ವಾಮಿ ದೇವಸ್ಥಾನದ ಕಡೆ ಹೋಗಲೂ ಇಲ್ಲ. ಹೀಗೇ ಅದೆಷ್ಟು ದಿನ ಕಣ್ಣು ಮಂಜಾಗಿದ್ದವೋ ಲೆಕ್ಕವೇ ಇಲ್ಲ. ಬದುಕಿನ ಬಂಡಿ ಹೀಗೇ ಅದರ ಪಾಡಿಗೆ ಸಾಗಿ ಹೊಗುತ್ತಲೇ ಇತ್ತು.. ಅದ್ಯಾಕೋ ಅವತ್ತೊಂದು ದಿನ ಮತ್ತೆ ಅದೇ ಜಾಗಕ್ಕೆ ಹೋಗುವ ಮನಸ್ಸಾಗಿತ್ತು. ಅದೇ ಪ್ರತಿದಿನ ಅವಳನ್ನು ಭೇಟಿ ಮಾಡುತ್ತಿದ್ದ ಅದೇ ಜಾಗ.

ಹಾಗಾಗಿಯೇ ಇವತ್ತು ಬೈಕು ಬಿಟ್ಟು ಕಾರಿನಲ್ಲಿ ಹೊರಟಿದ್ದೆ. ಯಾಕೋ ಇತ್ತೀಚಿಗೆ ಮಳೆಯಲ್ಲಿ ನೆನೆಯುವುದು ಅಂದ್ರೆ ಒಂಥರಾ ಸಿಟ್ಟು. ಮತ್ತೆ  ಸಣ್ಣಗೆ ಮಳೆ ಶುರುವಾಗತೊಡಗಿತ್ತು. ನಾನು ಹೋಗಿ ಅದೇ ಜಾಗದಲ್ಲಿ ಕಾರು ನಿಲ್ಲಿಸಿದಾಗಲೇ ಇದೆಲ್ಲಾ ನೆನಪಾಗಿದ್ದು. ಸ್ವಲ್ಪ ಹೊತ್ತು ನಾವಿಬ್ಬರೂ ಕುಳಿತಿದ್ದ ಅದೇ ಜಾಗ ನೋಡುತ್ತಾ ಕುಳಿತೆ. ಆಗಲೇ  ಹಿಂದಿನಿಂದ ಕೇಳಿಸಿದ್ದು ಸೈಕಲ್ಲಿನ ಬೆಲ್ಲು! 

ಎಲ್ಲೋ ನೋಡಿದ ಮುಖ ಅನಿಸಿತ್ತು.. 

ಎಸ್..ಅದೇ ಟೀ ಮಾರುವ ಹುಡುಗ.. ಮೊದಲಿಗೆ ಅವನು ನನ್ನ ಕಡೆ ನೋಡಿದವನೇ ನಿಧಾನವಾಗಿ ನನ್ನ ಗುರುತು ಹಿಡಿದ. ಸೈಕಲ್ಲು ಕೆಳಗೆ ಬೀಳುವುದನ್ನೂ ಗಮನಿಸದೇ ಹಾಗೇ ನನ್ನ ಕಡೆ ಓಡಿ ಬಂದ. ಅದೇನೋ ಹೇಳೋಕೆ ಪ್ರಯತ್ನ ಪಡ್ತಾ ಇದಾನೆ ನಂಗೆ ಅರ್ಥ ಆಗ್ತಿಲ್ಲ. ಆಗಲೇ ನನಗೆ ಗೊತ್ತಾಗಿದ್ದು, ಅವನಿಗೆ ಮಾತು ಬರಲ್ಲ. ಮಾತು ಬಾರದ ಮೂಕ ಅವನು. ನನ್ನ ಕೈ ಹಿಡಿದವನೇ ಕಾರಿನಿಂದ ಇಳಿಯುವಂತೆ ಹೇಳ್ತಾ ಇದಾನೆ. ಕಣ್ಣಲ್ಲಿ ನೀರು, ಅದ್ಯಾಕೆ ಹಿಂಗೆ ಆಡ್ತಿದಾನೆ ಅಂತಲೂ ಗೊತ್ತಾಗ್ತಿಲ್ಲ.  ಬಹುಶಃ ತುಂಬಾ ದಿನಗಳ ನಂತರ ನೋಡಿದ ಖುಷಿಯೋ ಗೊತ್ತಿಲ್ಲ. ನನ್ನ ಕೈ ಹಿಡಿದು ಅದೇ ಬೆಂಚಿನ ಮೇಲೆ ನನ್ನ ಕೂರಿಸಿ ಪಕ್ಕದಲ್ಲೇ ಸ್ವಲ್ಪ ಹೊತ್ತು ಕೂತವನೇ ಅವನ ಉಸಿರನ್ನು ನಿಧಾನಕ್ಕೆ ಕಂಟ್ರೊಲ್ ಮಾಡಿಕೊಳ್ತಿದಾನೆ. ಎದ್ದು ಸ್ವಲ್ಪ ದೂರ ಹೋಗಿ ಮತ್ತೆ ವಾಪಸ್ ಬಂದು ನನ್ನ ತಬ್ಬಿಕೊಳ್ಳುವಂತೆ ಹಿಡಿದುಕೊಳ್ಳಲು ನೋಡ್ತಿದಾನೆ. ಅವನನ್ನು ಸಮಾಧಾನ ಮಾಡೋಕೆ ನನ್ನ ಕೈಲಿ ಆದಷ್ಟು ಪ್ರಯತ್ನ ಮಾಡಿದ್ರೂ ಅವನು ಮಾತ್ರಾ ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟಿನಲ್ಲಿ ಇದಾನೆ ಅನಿಸ್ತು. 

ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ

ಸ್ವಲ್ಪ ಸಣ್ಣ ಮಳೆ ಕೂಡಾ ಶುರುವಾಗ್ತಿದೆ. ನನ್ನ ಮುಂದೆ ಕುಳಿತ ಅವನ ಕೈ ನಿಧಾನವಾಗಿ ಮೇಲೆತ್ತಿದವನೇ ಅತ್ತ ನೋಡುವಂತೆ ತೋರಿಸಿದ...

ಅಲ್ಲಿ...  ಅಸ್ಪಷ್ಟವಾಗಿ ಒಂದು ಆಕೃತಿ ಕಾಣಿಸತೊಡಗಿತ್ತು. ಅದ್ಯಾರೋ ನಿಧಾನವಾಗಿ ನಾವು ಕುಳಿತಿದ್ದ ಕಡೆಯೇ ಬರ್ತಿದ್ದಾರೆ ಅನಿಸ್ತಿದೆ. ಹತ್ತಿರ ಆಗ್ತಿದ್ದ ಹಾಗೇ ಯಾಕೋ ನಿಧಾನವಾಗಿ ಎದೆಯ ಬಡಿತ ಜೋರಾಗ ತೊಡಗಿತ್ತು. ಎಸ್ ಇದು ಅವಳೇ.. ಒಂದು ವರ್ಷದ ಹಿಂದೆ ನನ್ನ ಬಿಟ್ಟು ಹೋದ ಅದೇ ಹುಡುಗಿ.. ಅಲ್ಲಲ್ಲ.. ನಾ ಬಿಟ್ಟು ಹೋಗಿದ್ದವಳು. ಇಲ್ಲ ಇಲ್ಲ ದೇವರೇ ನನ್ನ ಇವಳಿಂದ ದೂರ ಮಾಡಿದ್ದಿದ್ದು. ಅಯ್ಯೋ ಅದೂ ಅಲ್ಲ... ಹೀಗೇ ಏನೇನೋ ತಡವರಿಸ್ತಾ ಇತ್ತು ಮನಸ್ಸು. ಅಷ್ಟರಲ್ಲಿ ಅವಳ ಪಾಡಿಗೆ ಬಂದು ಅಲ್ಲೇ ಪಕ್ಕದಲ್ಲಿ ಕುಳಿತಿದ್ದಳು.

ಏನು ಮಾತಾಡೋದು? ಎಲ್ಲಿಂದ ಶುರು ಮಾಡೋದು ಏನೂ ಗೊತ್ತಾಗದ ಹುಚ್ಚನ ರೀತಿ ಸುಮ್ಮನೆ ಕುಳಿತಿದ್ದೆ. ಎದೆ ಬಡಿತ ಇನ್ನೂ ಸ್ಥೀಮಿತಕ್ಕೆ ಬಂದಿರಲಿಲ್ಲ. ಅವಳ ಪಾಡಿಗೆ ಅವಳೆಂಬಂತೆ ಅವಳ ಕೈಯಲ್ಲಿದ್ದ ಕವರಿನಿಂದ ಒಂದು ಚಾಕೋಲೇಟನ್ನು ತೆಗೆದವಳೇ ಸುಮ್ಮನೆ ತಿನ್ನಲು ಶುರು ಮಾಡಿದಳು. ನಾನೇನಾದ್ರೂ ಕನಸು ಕಾಣ್ತಾ ಇದೀನಾ ಅನಿಸತೊಡಗಿತ್ತು. ಅವಳಷ್ಟಕ್ಕೆ ಅವಳೇ ಮಾತಾಡಲು ಶುರು ಮಾಡಿದಳು..  

ಬಿಟ್ಟು ಹೋಗಬೇಕು ಅಂತಾ ಅಂದುಕೊಂಡಿದ್ದೇನೋ ಹುಡುಗಾ. ಎಲ್ಲೋಗಿದ್ದೆ ಇಷ್ಟು ದಿನ? ನನ್ನ ನೆನಪು ಇಷ್ಟು ದಿನಗಳಾದ ಮೇಲೆ ಬಂತಾ? ಅವತ್ತಿನಿಂದ ಇವತ್ತಿನ ತನಕ ಯಾವತ್ತೂ ಇಲ್ಲಿಗೆ ಬರೋದು ತಪ್ಪಿಸಿಲ್ಲ ನಾನು. ಯಾವತ್ತಾದ್ರೂ ಸ್ವಲ್ಪ ಲೇಟಾದ್ರೂ ನೀನು ಬಂದು ಹೊರಟು ಹೋಗಿಬಿಡ್ತೀಯೇನೋ ಅಂತಾ ಆತಂಕವಾಗ್ತಿತ್ತು. ಯಾಕೆ ಬೇಡವಾಗಿಬಿಟ್ಟೆನಾ ನಾನು? ನೀನಿಲ್ಲ ಅಂತಾ ನಾನು ಯಾವತ್ತೂ ಅಂದುಕೊಂಡಿಲ್ಲ. ಪ್ರತಿದಿನ ಇಲ್ಲೇ ಬಂದು ಕೂರ್ತಾ ಇದೀನಿ. ನನ್ನ ಪಕ್ಕ ನೀನೇ ಬಂದು ಕೂತಿದೀಯಾ ಅನಿಸ್ತಾ ಇರುತ್ತೆ. ಪ್ರತಿದಿನ ನನ್ನ ಜೊತೆ ಏನೋ ಮಾತಾಡೋ ನೆಪದಲ್ಲಿ ನನ್ನ ಕಿರು ಬೆರಳನ್ನು ತಾಕಿ ತಾಕಿ ಸಂಭ್ರಮ  ಪಡ್ತಾ ಇದೀಯಾ ಅನಿಸ್ತಾ ಇರುತ್ತೆ. ನಂಗೆ ಗೊತ್ತಾಗಿಲ್ಲ ಅಂದು ಕೊಂಡಿದೀಯಾ? ನಿನ್ನ ಎಲ್ಲ ಚೇಷ್ಟೆಗಳನ್ನು ನಾನು ಕೂಡಾ ಎಂಜಾಯ್ ಮಾಡಿದೀನಿ. ನಾನು ಕುಡಿದ  ಟೀ ಕಪ್ಪು ಹಿಡಿದು ನೀನು ತುಂಬಾ ಹೊತ್ತು ಸಂಭ್ರಮ ಪಡ್ತಿದ್ದೆ ಅಲ್ವಾ? ನಂಗೆ ಅಂತಲೇ ಚಾಕೋಲೇಟು ತಂದು ಕೊಡ್ತಾ ಇದ್ದೆ ತಾನೇ. ನಿನ್ನ ಮನಸಲ್ಲಿ ಏನಿದೆ ಅಂತಾ ನಂಗೆ ಗೊತ್ತಾಗಲ್ಲ ಅಂದುಕೊಂಡಿದೀಯಾ.. ಅವತ್ಯಾಕೋ ಗೊತ್ತಿಲ್ಲ. ನನ್ನ ಮನಸಲ್ಲಿ ಮೂಡಿದ್ದ ಅಷ್ಟೂ ಪ್ರೀತಿಯನ್ನು ನಿನ್ನ ಬಳಿ ಹೇಳಿಕೊಳ್ಳಬೇಕು ಅನಿಸಿತ್ತು. ಯಾವತ್ತೂ ನನ್ನ ಬಿಟ್ಟು ಹೋಗಲ್ಲ ಅಲ್ವಾ ಅಂತಾ ಕೇಳಬೇಕು ಅನಿಸಿತ್ತು. ಅವತ್ತು ನಿನ್ನ ಭೇಟಿ ಮಾಡೋಕೂ ಮುಂಚೆ ಇಲ್ಲೆ ಪಕ್ಕದಲ್ಲಿ ಇದ್ದ ಗುಡ್ಡದ ಆಂಜನೇಯ ಸ್ವಾಮಿ ಬಳಿ ಹೋಗಿದ್ದೆ. ನಿಜವಾಗಲೂ ಅವನು ನನ್ನ ಪ್ರೀತಿ ಮಾಡ್ತಾ ಇದಾನಾ, ಅಂತಾ ದೇವರಲ್ಲಿ ಕೇಳೋಣ ಅಂತಾ ಹೋಗಿದ್ದೆ. ಆಗಲೇ ನನಗೆ ನೀನು ಕಾಣಿಸಿದ್ದು. 

ದೇವರಲ್ಲಿ ಏನೋ ಕೇಳಿಕೊಳ್ತಾ ಇದ್ದ ನಿನ್ನ ದನಿ ನನಗೆ ಸ್ಪಷ್ಟವಾಗಿ ಕೇಳಿಸಿತ್ತು. ಅವಳೇ ಬಂದು ಪ್ರೀತಿಯನ್ನು ಹೇಳಿಕೊಳ್ಳಲಿ. ಮಗಳು ಹುಟ್ಟಿದರೆ ಹನುಮಂತಿ ಅಂತಾ ಹೆಸರಿಡ್ತೀನಿ ಅಂತಾ  ಕೇಳಿಕೊಂಡೆ ಅಲ್ವಾ? ನಿನ್ನ ನೋಡಿ ತಕ್ಷಣ ಹೊರಗೆ ಓಡಿ ಬಂದೆ. ಇಲ್ಲಿಂದ ಮತ್ತೆ ನಿನ್ನ ಅದೇ ದೇವಸ್ಥಾನದ ಬಳಿ ಕರೆದುಕೊಂಡು ಹೋದೆ. ಯಾಕೋ ಸ್ವಲ್ಪ ನಿನ್ನ ಆಟ ಆಡಿಸಬೇಕು ಅನಿಸ್ತು. ನಾಳೆ ನನ್ನ ಎಂಗೇಜ್ಮೆಂಟು ಅಂದೆ ಅಷ್ಟೇ. ಅವತ್ತಿಂದ ಇವತ್ತಿನ ತನಕ ಎಲ್ಲೋ ಮಾಯವಾಗಿದ್ದೆ? ನಿನಗೆ ನನ್ನ ಪ್ರೀತಿ ಅರ್ಥ ಆಗಲೇ ಇಲ್ಲವಾ.. ಗೂಬೆ...

Relationship Tips: ದಾಂಪತ್ಯ ಗಟ್ಟಿಯಾಗ್ಬೇಕೆಂದ್ರೆ ಬೆಳಗ್ಗೆ ಹೀಗ್ ಮಾಡೋದ ರೂಢಿಸಿಕೊಳ್ಳಿ!

ಪ್ರತಿದಿನ ನಿನಗೇ ಅಂತಲೇ ಕಾಯುತ್ತಿರೋ ಜೀವ ಇದು. ಈಗಲೇ ಹೇಳ್ತಾ ಇದೀನಿ ಕೇಳು ಹನುಮಂತಿ ಅನ್ನೋ ಹೆಸರು ಅಷ್ಟು ಚೆನ್ನಾಗಿಲ್ಲ ಅಂತಾ ಯಾರು ಏನೇ ಹೇಳಿದ್ರೂ ಪರವಾಗಿಲ್ಲ. ಅದೇ ಹೆಸರನ್ನು ಇಡೋಣ. ಓಕೆ ನಾ. ನಾಳೆ ಸಂಜೆ ಮನೆಯಲ್ಲಿ ಎಲ್ಲರೂ ಕಾಯ್ತಾ ಇರ್ತೀವಿ. ಬಂದು ಮಾತಾಡು. ಅದೇನೋ ದೇವರಲ್ಲಿ ಅವತ್ತು ಕೇಳಿಕೊಳ್ತಾ ಇದ್ಯಲ್ಲಾ. ಅವಳು ನನ್ನ ಪ್ರೀತಿ ಒಪ್ಪಿಕೊಳ್ಳಲಿ, ಅವಳಾಗೇ ಬಂದು ಕೇಳಲಿ, ನಾನೇ ಹೋಗಿ ಅವರ ಮನೆಯಲ್ಲಿ ಮಾತಾಡ್ತಿನಿ ಅಂತಾ. ಹೀಗೇ ಅವಳ ಪಾಡಿಗೆ ಅವಳು ಮಾತಾಡ್ತಾ ಇದ್ರೆ.. ನಿಧಾನವಾಗಿ ಮಳೆ ಮುಂದುವರೆದಿತ್ತು.
 

click me!