
ರಕ್ಷಾ ಬಂಧನ ಎಂದರೆ ಕೇವಲ ಕೈಗೆ ರಾಖಿ ಕಟ್ಟುವ ಹಬ್ಬವಲ್ಲ. ಅದು ಅಣ್ಣ-ತಂಗಿಯ ನಡುವಿನ ಪ್ರೀತಿ, ನಂಬಿಕೆ ಮತ್ತು ಭಾವನಾತ್ಮಕ ಬಂಧವನ್ನು ಆಚರಿಸುವ ದಿನ. ಈ ಮಾತಿಗೆ ಸಾಕ್ಷಿಯಂತಿದೆ ಕೈಗಳನ್ನು ಕಳೆದುಕೊಂಡಿರುವ ಪುಟ್ಟ ತಂಗಿಯೊಬ್ಬಳು ತನ್ನ ಅಣ್ಣನಿಗೆ ರಾಖಿ ಕಟ್ಟಿದ ಹೃದಯಸ್ಪರ್ಶಿ ಘಟನೆ.
ವಿದ್ಯುತ್ ಅಪಘಾತದಲ್ಲಿ ತನ್ನ ಕೈಗಳನ್ನು ಕಳೆದುಕೊಂಡಿರುವ ಪುಟ್ಟ ಬಾಲಕಿ ದಿವ್ಯಾ ಚೌಧರಿ, ರಕ್ಷಾ ಬಂಧನದಂದು ತನ್ನ ಅಣ್ಣನಿಗೆ ಕಾಲಿನ ಸಹಾಯದಿಂದ ರಾಖಿ ಕಟ್ಟಿದ್ದಾಳೆ. ಕೈಗಳಿಲ್ಲದ ಕಾರಣ ತನ್ನ ಸಹೋದರನಿಗೆ ರಾಖಿ ಕಟ್ಟಲು ಸಾಧ್ಯವಿಲ್ಲ ಎಂದು ಆಕೆ ಹಿಂದೆ ಸರಿಯಲಿಲ್ಲ. ಬದಲಾಗಿ ತನ್ನ ಕಾಲುಗಳ ಸಹಾಯದಿಂದಲೇ ಸಹೋದರನ ಕೈಗೆ ರಾಖಿ ಕಟ್ಟಿದ್ದಾಳೆ.
ಈ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಗಮನ ಸೆಳೆದಿದೆ. ಬಳಕೆದಾರರ ಕಣ್ಣು ಮಂಜಾಗಿದೆ. ರಾಖಿ ಕಟ್ಟುವ ಆ ಕ್ಷಣದಲ್ಲಿ ಕಾಣಿಸುವ ಆಕೆಯ ಸಂತೋಷ ಮತ್ತು ಸಹೋದರನ ಮೇಲಿನ ಪ್ರೀತಿ ನಿಜಕ್ಕೂ ಭಾವನಾತ್ಮಕವಾಗಿದೆ. ಮೊದಲು ಕಾಲಿನ ಸಹಾಯದಿಂದಲೇ ಅಣ್ಣನ ಹಣೆಗೆ ಕುಂಕುಮ ಹಚ್ಚುವ ಬಾಲಕಿ ನಂತ್ರ ಸಿಹಿ ತಿನ್ನಿಸುತ್ತಾಳೆ. ಕೊನೆಯಲ್ಲಿ ರಾಖಿ ಕಟ್ಟುದ್ದಾಳೆ. ಇನ್ನೊಂದು ಕಾಲಿನಲ್ಲಿ ಅಣ್ಣ ನೀಡಿದ ಹಣವನ್ನು ಪಡೆಯುತ್ತಾಳೆ. ಎಲ್ಲ ಕೆಲ್ಸವನ್ನು ಆಕೆ ಕಾಲಿನಲ್ಲಿಯೇ ಮಾಡ್ತಿರೋದು ಎಲ್ಲರನ್ನು ಅಚ್ಚರಿಗೊಳಿಸಿದೆ.
ರಕ್ಷಾ ಬಂಧನವನ್ನು ದೇಶದಾದ್ಯಂತ ಸಹೋದರ-ಸಹೋದರಿಯರ ಪ್ರೀತಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನ ತಂಗಿ ಅಥವಾ ಸಹೋದರಿ ತನ್ನ ಸಹೋದರನ ಕೈಗೆ ರಾಖಿ ಕಟ್ಟಿ, ಆತನ ಒಳಿತಿಗಾಗಿ ಹಾರೈಸುತ್ತಾಳೆ. ಸಹೋದರ ಕೂಡ ತನ್ನ ತಂಗಿಯ ರಕ್ಷಣೆ, ಸಂತೋಷ ಮತ್ತು ಕಷ್ಟದ ಸಮಯದಲ್ಲಿ ಜೊತೆಯಾಗಿರುವ ಭರವಸೆ ನೀಡುತ್ತಾನೆ. ಆದರೆ ದಿವ್ಯಾಳ ಈ ಘಟನೆ ರಕ್ಷಾ ಬಂಧನದ ನಿಜವಾದ ಅರ್ಥವನ್ನು ಮತ್ತೊಮ್ಮೆ ನೆನಪಿಸುತ್ತದೆ.
ರಾಖಿಯನ್ನು ಕಟ್ಟಲು ಕೈಗಳು ಬೇಕಾಗಬಹುದು. ಆದರೆ ಸಂಬಂಧವನ್ನು ಕಟ್ಟಲು ಕೈಗಳ ಅಗತ್ಯವಿಲ್ಲ. ಬೇಕಾಗಿರುವುದು ಪ್ರೀತಿಸುವ ಹೃದಯ ಮಾತ್ರ. ಜೀವನದಲ್ಲಿ ಎದುರಾಗುವ ಒಂದು ಅಪಘಾತ ಆಕೆಯ ಕೈಗಳನ್ನು ಕಸಿದುಕೊಂಡಿರಬಹುದು. ಆದರೆ ತನ್ನ ಸಹೋದರನ ಮೇಲಿನ ಪ್ರೀತಿಯನ್ನು ಮಾತ್ರ ಕಸಿದುಕೊಳ್ಳಲು ಸಾಧ್ಯವಾಗಿಲ್ಲ ಎಂಬುದನ್ನು ಸಾರಿ ಹೇಳ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.