ಹೆಂಡ್ತಿ, ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ

By Sathish Kumar KHFirst Published Jul 9, 2023, 4:22 PM IST
Highlights

ಕೊಡಗಿನ ಭೂ ಕುಸಿತದಲ್ಲಿ ಜೀವಂತ ಸಮಾಧಿಯಾದ ತನ್ನ ಹೆಂಡತಿ ಮಕ್ಕಳ ಸಾವಿನ ಸ್ಮಾರಕವಾಗಿ ಇಲ್ಲೊಬ್ಬ ವ್ಯಕ್ತಿ ಬಡಜನರಿಗೆ ಮನೆಯನ್ನು ನಿರ್ಮಿಸಿಕೊಟ್ಟು ಮಾದರಿ ಆಗಿದ್ದಾನೆ.

ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜು.09): ನಮ್ಮ ದೇಶದಲ್ಲಿ ಪ್ರೀತಿ ಸಂಕೇತವಾಗಿ ಅತಿದೊಡ್ಡ ಸ್ಮಾರಕವಾದ ತಾಜ್‌ ಮಹಲ್‌ ಅನ್ನು ಷಹಜಹಾನ್‌ ನಿರ್ಮಿಸಿ ಕೊಟ್ಟಿರುವುದು ಜಗತ್ತಿಗೇ ತಿಳಿದಿರುವ ವಿಚಾರವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಭಾರಿ ಗಾಳಿ- ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಜೀವಂತ ಸಮಾಧಿಯಾದ ತನ್ನ ಹೆಂಡತಿ ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾನೆ.

ತನ್ನ ಹೆಂಡತಿ ಮಕ್ಕಳ ಮೇಲಿನ ಪ್ರೀತಿಗಾಗಿ ಮನೆ ನಿರ್ಮಿಸಿಕೊಟ್ಟಿರುವ ವ್ಯಕ್ತಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದ ಪ್ರಭುಕುಮಾರ್ ಎನ್ನುವವರಾಗಿದ್ದಾರೆ. ಪ್ರೀತಿಯ ಹೆಂಡತಿ, ಮುದ್ದಾದ ಎರಡು ಮಕ್ಕಳೊಂದಿಗೆ ದಿನಸಿ ವ್ಯಾಪಾರ ಮಾಡಿಕೊಂಡು, ಚಿಕ್ಕ ತೋಟದಲ್ಲಿ ಬರುವ ಆದಾಯದಿಂದ ನೆಮ್ಮದಿ ಬದುಕು ಕಟ್ಟಿಕೊಂಡಿತ್ತು ಆ ಪುಟ್ಟ ಕುಟುಂಬ. ಆದರೆ, ವಿಧಿಗೆ ಇವರ ಪ್ರೀತಿಯ ಕಂಡು ಅಸೂಯೆ ಹುಟ್ಟಿತ್ತೋ ಏನೋ ಗೊತ್ತಿಲ್ಲ. 2019 ರಲ್ಲಿ ಭೂಕುಸಿತದ ರೂಪದಲ್ಲಿ ಬಂದ ಜವರಾಯ ಮನೆಯ ಯಜಮಾನ ಪ್ರಭುಕುಮಾರ್ ಅವರನ್ನು ಬಿಟ್ಟು ಅವರ ಹೆಂಡತಿ ಅನಸೂಯ, ಮಕ್ಕಳಾದ ಅಮೃತ, ಅದಿತಿಯನ್ನು ಜೀವಂತ ಸಮಾಧಿ ಮಾಡಿಬಿಟ್ಟಿತ್ತು.

ಪ್ರವಾಹ, ಭೂಕುಸಿತ ಎದುರಿಸಲು ಸಿದ್ಧಗೊಂಡ ಕೊಡಗು ಪೊಲೀಸರು

ಪತ್ನಿಯ ಆಶಯ ಈಡೇರಿಸುವ ಬಯಕೆ: ಆದರೆ ಪ್ರಭುಕುಮಾರ್ ಅವರಿಗೆ ತಮ್ಮ ಹೆಂಡತಿ ಮಕ್ಕಳ ಮೇಲಿದ್ದ ಪ್ರೀತಿ ಮಾತ್ರ ಕರಗಲಿಲ್ಲ. ತನ್ನ ಕುಟುಂಬ ಸದಸ್ಯರು ಮತ್ತು ಹಿರಿಯರ ಒತ್ತಾಯದ ಮೇರೆಗೆ ತಮ್ಮ ಬದುಕಿನ ದಾರಿಗೆ ಮತ್ತೊಂದು ಮದುವೆಯಾಗಿ ಮಗು ಹುಟ್ಟಿದರೂ ತನ್ನ ಮೊದಲ ಪತ್ನಿ ಮತ್ತು ಮಕ್ಕಳ ಮೇಲಿನ ಒಂದಿನಿತೂ ಮಾಸಿರಲಿಲ್ಲ. ಸದಾ ಬಡವರು, ಕೈಲಾಗದವರ ಸಹಾಯಕ್ಕೆ ತುಡಿಯುತ್ತಿದ್ದ ಅನುಸೂಯ ಅವರ ಆಶಯದಂತೆ ಅದೇ ಗ್ರಾಮದ ಬೋಜು, ಬೊಳ್ಳಚ್ಚಿ ಕುಟುಂಬಕ್ಕೆ ಪ್ರಭುಕುಮಾರ್ ಮನೆಯೊಂದನ್ನು ನಿರ್ಮಿಸಿಕೊಟ್ಟು ಆಶ್ರಯವಾಗಿದ್ದಾರೆ. ಈ ಮೂಲಕ  ಪತ್ನಿ ಆಶಯದಂತೆ ತೀರಾ ಬಡತನದ ಬೇಗೆಯಲ್ಲಿ ಬದುಕು ದೂಡುತ್ತಿದ್ದ ಕುಟುಂಬಕ್ಕೆ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಆ ಮೂಲಕ ತಮ್ಮ ಹೆಂಡತಿ ಮಕ್ಕಳ ಆಶಯಗಳನ್ನು ಈಡೇರಿಸಿದ್ದಾರೆ. 

80 ಸಾವಿರ ರೂ. ವೆಚ್ಚದಲ್ಲಿ ಬೆಚ್ಚನೆಯ ಮನೆ ನಿರ್ಮಾಣ: ತೋರಾ ಗ್ರಾಮದಲ್ಲೇ ಚಿಕ್ಕ ತೋಟವನ್ನು ಹೊಂದಿರುವ ಬೋಜು, ಬೊಳ್ಳಚ್ಚಿ ಅವರ ಮಕ್ಕಳಾದ ಶರಣು, ಶಾಂತಿ ಅವರ ಕುಟುಂಬ ಚಿಕ್ಕ ಮತ್ತು ಹಳೆಯದಾದ ಹುಲ್ಲಿನ ಗುಡಿಸಿಲಿನಲ್ಲಿ ಜೀವನ ಸಾಗಿಸಿತಿತ್ತು. ಇದನ್ನು ಗಮನಿಸಿದ ಪ್ರಭುಕುಮಾರ್ 80 ಸಾವಿರ ವೆಚ್ಚದಲ್ಲಿ ಸಿಮೆಂಟ್‌ ಕಾಂಪೌಂಡ್ ಗೋಡೆಗಳನ್ನು ಬಳಸಿ, ಸಿಮೆಂಟ್ ಶೀಟುಗಳನ್ನು ಹೊದಿಸಿ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತಾಗುತ್ತಿದ್ದ ನೆಲ, ಹುಲ್ಲಿನ ಸಂದಿಗಳಿಂದ ತೊಟ್ಟಿಕ್ಕುವ ನೀರ ಹನಿಗಳಲ್ಲಿ ನೆನೆಯುತ್ತಲೇ ಬದುಕು ದೂಡುತಿತ್ತು ಶರಣು, ಶಾಂತಿ ಕುಟುಂಬವನ್ನು ಕಂಡಾಗಲೆಲ್ಲಾ ಪ್ರಭುಕುಮಾರ್ ಮೊದಲ ಪತ್ನಿ ಅನಸೂಯ ಮಮ್ಮಲ ಮರುಗುತಿದ್ದರಂತೆ. ಹೀಗಾಗಿ, ಈ ಕುಟುಂಬಕ್ಕೇ ತನ್ನ ಮೊದಲ ಮಡದಿಯ ಸವಿನೆನಪಿಗಾಗಿ ಸೂರೊಂದನ್ನು ನಿರ್ಮಿಸಿಕೊಟ್ಟು ಹೆಂಡತಿ, ಮಕ್ಕಳ ಆಶಯವೂ ಈಡೇರಿಸುವ ಮೂಲಕ ಅವರ ಆತ್ಮಕ್ಕೂ ಶಾಂತಿ ದೊರಕಿಸಿಕೊಡುವ ಯತ್ನವನ್ನು ಮಾಡಿದ್ದಾರೆ.

ಬಡವರ ಮೇಲಿದ್ದ ಪತ್ನಿಯ ಕಾಳಜಿಯೇ ನೆರವು ನೀಡಲು ಪ್ರೇರಣೆ: ಈ ಕುರಿತು ಮಾತನಾಡಿದ ಪ್ರಭುಕುಮಾರ್‌ ತನ್ನ ಹೆಂಡತಿಗೆ ಇದ್ದ ಬಡವರ ಮೇಲಿನ ಕಾಳಜಿ ಮತ್ತು ಸಹಾಯ ಮಾಡುವ ಮನೋಭಾವವೇ ಆಕೆಯ ಸವಿನೆನಪಿಗಾಗಿ ಮನೆ ನಿರ್ಮಿಸಿಕೊಡಲು ಪ್ರೇರೆಣೆ ನೀಡಿದೆ. ಈ ಮೂಲಕ ಹೆಂಡತಿ, ಮಕ್ಕ ಆತ್ಮಕ್ಕೆ ಶಾಂತಿ ದೊರಕಿಸಿಕೊಡುವ ಯತ್ನ ಮಾಡಿದ್ದೇ ಎಂದು ಹೇಳಿದರು.  ಇಂತಹ ಕೆಲಸ ಕಾರ್ಯಕಗಳಿಗೆ ಈಗಿನ ಪತ್ನಿ ಮಕ್ಕಳ ಸಹಕಾರವೂ ಸಾಕಷ್ಟಿದೆ ಎನ್ನುತ್ತಾರೆ. 

ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ

ನೆಮ್ಮದಿಯ ಜೀವನಕ್ಕೆ ಆಸರೆಯಾಗಿದೆ: ಮಳೆಗಾಲ ಆರಂಭವಾಯಿತ್ತೆಂದರೆ ಇಡೀ ಗುಡಿಸಲು ನೆನೆದು ನಾವು ಶೀತ, ಕೆಮ್ಮು ಮತ್ತು ಜ್ವರದಿಂದ ಬಳಲುತಿದ್ದೆವು. ಇವರು ಮನೆ ನಿರ್ಮಿಸಿ ಕೊಟ್ಟ ಬಳಿಕ ಯಾವುದೇ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಇದ್ದೇವೆ. ಪ್ರಭುಕುಮಾರ್‌ ಮತ್ತು ಅವರ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. ನಮ್ಮಂತಹ ಹಲವರಿಗೆ ಇವರಿಂದ ಸಹಾಯ ಆಗಲಿ ಎಂದು ಆಶ್ರಯ ಪಡೆದ ಶಾಂತಿ ಅವರ ಕುಟುಂಬಸ್ಥರು ಹಾರೈಸಿದ್ದಾರೆ. ಏನೇ ಆಗಲಿ ತನ್ನನ್ನು ಬಿಟ್ಟು ಬಾರದೂರಿಗೆ ಹೋದ ಹೆಂಡತಿ, ಮಕ್ಕಳ ಪ್ರೀತಿಗಾಗಿ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಆಸರೆ ಆಗಿರುವುದು ಮಾನವೀಯ ಬದುಕಿನ ದ್ಯೋತಕವೇ ಸರಿಯಾಗಿದೆ.

click me!