ಭಾರತದಂತೆ ಚೀನಾದಲ್ಲೂ ಹಳ್ಳಿ ಯುವಕರ ವರಿಸೋ ಹೆಣ್ಣೇ ಸಿಕ್ತಿಲ್ಲ!

By Suvarna News  |  First Published Jul 9, 2023, 3:35 PM IST

ಚೀನಾದಲ್ಲಿಯೂ ಗಂಡು ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ. ಫಲಿತಾಂಶ ಲಕ್ಷಾಂತರ ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೇ ನಡೆಯುತ್ತದೆ. ಆ ಕಾರಣ ಸರಿ ಸುಮಾರು 20 ಮಿಲಿಯನ್ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಕಡಿಮೆ ಇದ್ದು, ಭಾರತದಂತೆ ಅಲ್ಲಿಯೂ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದು ಕಷ್ಟ..


-ರಂಗಸ್ವಾಮಿ ಮೂಕನಹಳ್ಳಿ

ಭಾರತದಲ್ಲಿ ಮಾತ್ರ ರಾಷ್ಟ್ರೀಯತೆಯ ಕೂಗು ಹೆಚ್ಚಾಗುತ್ತಿದೆ ಎಂದು ಕೊಂಡರೆ  ಅದು ತಪ್ಪು . ಚೀನಾದಲ್ಲಿಯೂ ನ್ಯಾಷನಲಿಸಂ  ಹೆಚ್ಚು ಒತ್ತು ಪಡೆಯುತ್ತಿದೆ. ಚೀನಾ ಸರಕಾರದ ಬಗ್ಗೆ ಕೋವಿಡ್ ಸಮಯದ ಅಥವಾ ನಂತರದ ವಿಷಯಗಳ ಬಗ್ಗೆ ಟೀಕಿಸಿದವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತಾರೆ . ಅಲ್ಲಿನ ಪ್ರಿಂಟ್ ಇರಲಿ ಅಥವಾ ದೃಶ್ಯ  ಮಾಧ್ಯಮ ಬಹಳ ಎಚ್ಚರಿಕೆಯಿಂದ ಸುದ್ದಿಯನ್ನ ಬಿತ್ತರಿಸಬೇಕಾಗುತ್ತದೆ. ಸರಕಾರದ ವಿರುದ್ಧ ಅಥವಾ ಅದು ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಅಸಹನೆ ಕೂಡ ವ್ಯಕ್ತಪಡಿಸುವಂತಿಲ್ಲ. ಅಲ್ಲಿನ ಜನರನ್ನ ಸಂದರ್ಶಿಸಲು ಬಯಸುವ ಬಹಳಷ್ಟು ವಿದೇಶಿ ಮೀಡಿಯಾಗಳಿಗೆ ಜನ ಮುಖ ಕೊಟ್ಟು ಮಾತಾಡುವುದಿಲ್ಲ. ಹಾಗೆ ಅವರೊಂದಿಗೆ ಮಾತನಾಡುವುದೂ ಅಪರಾಧ ಎಂದು ಜನರಿಗೆ ಹೇಳಲಾಗಿದೆ. ಇಂತಹ ವಿದೇಶಿ ಮಾಧ್ಯಮದ ಎದುರು ನಿಂತು ಮಾತನಾಡುವರು ಹೇಳುವ ಸಾಮಾನ್ಯ ವಿಷಯ ' ಚೀನಾ ನಡೆಯುವುದು ಹೀಗೆ , ನಮ್ಮ ನಾಯಕರಿಗೆ ಪ್ರಜೆಗಳಿಗೆ ಏನು ಬೇಕು ಎನ್ನುವುದು ಗೊತ್ತಿದೆ . ವಿದೇಶಿ ಪ್ರಜೆಗಳ ಹಾಗೆ ಎಲ್ಲದಕ್ಕೂ ಸ್ವಂತಂತ್ರ್ಯ ಎನ್ನುವ ಸಿದ್ದಾಂತಕ್ಕೆ ನಾವು ಕಟ್ಟು ಬಿದ್ದರೆ ಏನಾಗುತ್ತೆ? ಒಂದು ಕೆಲಸವನ್ನ ಮಾಡಲು ಹತ್ತಾರು ಮಾರ್ಗಗಳನ್ನ ಜನರು ಹೇಳಲು ಶುರು ಮಾಡುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಹೇಳುತ್ತಾ, ಸರಕಾರ ಕೇಳುತ್ತಾ ಕುಳಿತರೆ ಏನಾಗುತ್ತೆ? ಕೆಲಸ ಕೆಡುತ್ತದೆ. ನಮ್ಮ ಸಿಸ್ಟಮ್ ಬೆಸ್ಟ್ ಇದೆ. ನಿರ್ಧಾರ ತೆಗೆದುಕೊಳ್ಳುವುದು ಸರಕಾರದ, ನಾಯಕರ ಕೆಲಸ. ಪ್ರಜೆಗಳದ್ದು ಅದನ್ನ ಚಾಚೂ ತಪ್ಪದೆ ಪಾಲಿಸುವ ಕೆಲಸ ' ಎನ್ನುವುದಾಗಿದೆ.

Tap to resize

Latest Videos

ಚೀನಾ ಸರಕಾರ ಒಂದು ಮಗುವಿನ ನೀತಿಯನ್ನ ಅಲ್ಲಿ ಜಾರಿಗೆ ತಂದದ್ದು ನಮಗೆಲ್ಲಾ ಗೊತ್ತು.  ಹೆಚ್ಚು ತಿಳಿಯದ ವಿಷಯವೆಂದರೆ ಚೀನಿಯರೂ ಕೂಡ ಒಂದಲ್ಲ ಹಲವಾರು ವಿಷಯದಲ್ಲಿ ಭಾರತೀಯರನ್ನು ಮೀರಿಸುತ್ತಾರೆ. ಇವರಿಗೂ ಗಂಡು ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ. ಫಲಿತಾಂಶ ಲಕ್ಷಾಂತರ ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತದೆ. ಅದು ಹತ್ತಾರು ವರ್ಷ. ಇವತ್ತೇನಾಗಿದೆ ಸರಿ ಸುಮಾರು 20 ಮಿಲಿಯನ್ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಕಡಿಮೆಯಿದ್ದಾರೆ. ಅಂದರೆ ಅಷ್ಟೇ ಸಂಖ್ಯೆಯ ಗಂಡು ಮಕ್ಕಳಿಗೆ ಬಾಳ ಸಂಗಾತಿ (Life Partner) ಸಿಕ್ಕುವುದಿಲ್ಲ. ಇದೊಂದು ಬಹಳ ದೊಡ್ಡ ಸಂಖ್ಯೆ. ಬಹಳ ದೊಡ್ಡ ಸಮಸ್ಯೆ . 

ಚೀನಾದಲ್ಲಿ ಹೆಣ್ಣು ಮಕ್ಕಳು ಹಿಂದೆಂದೂ ಕಂಡಿರದ ಆರ್ಥಿಕ ಸ್ವಂತಂತ್ರ್ಯವನ್ನ (Economic Independency) ಇಂದು ಕಾಣುತ್ತಿದ್ದಾರೆ . ಗಂಡಸಿಗೆ ಸಮನಾಗಿ ದುಡಿಯುವುದು, ನಗರದ ಜೀವನ ಶೈಲಿಗೆ ಹೊಂದಿಕೊಂಡಿರುವ ಹೆಣ್ಣು ಮಕ್ಕಳು ಮದುವೆ ಬಗ್ಗೆ ಯಾವುದೇ ಆತುರ ತೋರುತ್ತಿಲ್ಲ. ಇದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣ ಗೊಳಿಸಿದೆ. ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಈ ಟ್ರೆಂಡ್ ಬದಲಾಯಿಸಬೇಕು ಎಂದು ಸರಕಾರ ಯುವ ಜನತೆಯನ್ನು ಹೆಚ್ಚಾಗಿ ಹೆಣ್ಣು ಮಕ್ಕಳನ್ನ ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದೆ . ಅಜ್ಜಿ ಅಥವಾ ಅಮ್ಮ ಸಾಯುವ ಮುನ್ನ ನಿನ್ನ ಮದುವೆ ನೋಡಿ ಸಾಯಬೇಕು ಎನ್ನುವ ಜಾಹೀರಾತುಗಳು ಹೆಚ್ಚಾಗುತ್ತಿವೆ. ಲಕ್ಷಾಂತರ ಹೆಣ್ಣು ಹೆತ್ತವರು ನಿದ್ದೆಯಿಲ್ಲದ ಸಮಯ ದೂಡುತ್ತಿದ್ದಾರೆ. ಇದಕ್ಕೆ ಕಾರಣ 27 ವಯಸ್ಸು ಮೀರಿದ ಮದುವೆಯಾಗದ ಹೆಣ್ಣು ಮಕ್ಕಳನ್ನ  ಚೀನಿ ಭಾಷೆಯಲ್ಲಿ Shèng cài ಎನ್ನುತ್ತಾರೆ.  ಅಂದರೆ ' ಲೆಫ್ಟ್ ಓವರ್' (Left Over) ಎಂದರ್ಥ . ಚೀನಿ ಸರಕಾರ ತನ್ನ ಜನರನ್ನ ಮ್ಯಾನಿಪುಲೇಟ್ ಮಾಡುವುದು ಕರಗತ ಮಾಡಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಹೆಣ್ಣು ಹೆತ್ತವರು ತಮ್ಮ ಮಗಳು 27 ಮೀರಿ ಮದುವೆಯಾಗಿಲ್ಲ ಎಂದರೆ ಅವರು ಅನ್ನ ನೀರು ನಿದ್ರೆ ಬಿಟ್ಟು ಚಿಂತಿಸುವಷ್ಟು. ಬೀಜಿಂಗ್‌ನಂಥ ದೊಡ್ಡ ನಗರದಲ್ಲಿ ವಾರಕ್ಕೆರಡು ಅಥವಾ ಮೂರು ಮ್ಯಾಚ್ ಮೇಕಿಂಗ್ ಮೇಳಗಳು ನಡೆಯುತ್ತವೆ. ಚೀನಾದಲ್ಲಿ ಇಂತಹ ಮೇಳಗಳು ಅತಿ ಸಾಮಾನ್ಯ ಎನ್ನುವಂತಾಗಿದೆ .

ಮುಸ್ಲಿಂ ಬಾಹುಳ್ಯ ಮಲೇಷ್ಯಾದಲ್ಲೂ ನಾನ್ ಹಲಾಲ್ ಬೋರ್ಡ್, ಸಹಿಷ್ಣುತೆ ಅಂದ್ರೆ ಇದಲ್ಲವೇ?

ಹಳ್ಳಿ ಯುವಕರಿಗೆ ಬ್ರಹ್ಮಚರ್ಯ ಅನಿವಾರ್ಯ
ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಹೆಣ್ಣು ಮಕ್ಕಳು ಪಟ್ಟಣದಲ್ಲಿ ವಾಸಿಸುವ ಹುಡುಗರನ್ನ ವರಿಸುತ್ತಿದ್ದಾರೆ. ಹಳ್ಳಿಯಲ್ಲಿ ವಾಸವಿರುವ, ಹಳ್ಳಿಯಲ್ಲಿ ಕೆಲಸ ಮಾಡುವ ಹುಡುಗರು ಇಚ್ಛೆ ಇಲ್ಲದಿದ್ದರೂ 'ಬ್ರಹ್ಮಚಾರಿ' ಯಾಗಿರಬೇಕಾದ ಸನ್ನಿವೇಶಗಳು ಸೃಷ್ಟಿಯಾಗಿವೆ. ಇವೆಲ್ಲವುಗಳ ನಡುವೆ ಹೆಣ್ಣು ಮಕ್ಕಳನ್ನ 27 ಮುಗಿಯುವ ಮುನ್ನ ಮದುವೆ ಮಾಡಿ ಕಳಿಸಲು ಪೋಷಕರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಇದರ ಫಲಿತಾಂಶ ಚೀನಾದ ಮದುವೆ ಉದ್ಯಮ ಹುಲುಸಾಗಿ ಬೆಳೆದಿದೆ. ಅದು 30 ಬಿಲಿಯನ್ ಅಮೆರಿಕನ್ ಡಾಲರ್ ಮೀರಿಸುವ ಮಾರುಕಟ್ಟೆ ಎಂದರೆ ಅದೆಷ್ಟು ದೊಡ್ಡದು ಎನ್ನುವ ಅಗಾಧತೆಯ ಅರಿವು ನಿಮ್ಮದಾಗಬಹದು.
 
ಹೀಗೆ ಸರಕಾರ ಕಾಣದ ಒತ್ತಡ (Stress) ಮತ್ತು ಪೋಷಕರ ಕಾಣುವ ಒತ್ತಡವನ್ನು ದಿಕ್ಕರಿಸಿ ಒಂಟಿಯಾಗಿ ಬಾಳುವ 27 ಮೀರಿದ ಹುಡುಗಿಯರ ಸಂಖ್ಯೆಯೂ ಬಹಳವಿದೆ. ಹೀಗಾಗಿ ಇಂತಹ ಹುಡುಗಿಯರ ಮನೋಬಲ ಕುಗ್ಗಿಸಲು ಸಮಾಜದಲ್ಲಿ ಇಂತವರನ್ನ 'ಲೆಫ್ಟ್ ಓವರ್' ಎಂದು ಬಿಂಬಿಸಲಾಗುತ್ತದೆ. ಹೆಣ್ಣು ಮಕ್ಕಳು ಸಿಗುವುದು ಕಷ್ಟವಿರುವ ಸಮಯದಲ್ಲೂ ಗಂಡು ಮಕ್ಕಳಿಗೆ ಇಂತಹ ಕೃತಕ ಡಿಮ್ಯಾಂಡ್ ಸೃಷ್ಟಿಸಲಾಗುತ್ತಿದೆ. 2 ಕೋಟಿಗೂ ಮೀರಿದ ಹುಡುಗರಿಗೆ ಹೆಣ್ಣು ಸಿಗಲು ಸಾಧ್ಯವೇ ಇಲ್ಲ. ವಸ್ತುಸ್ಥಿತಿ ಹೀಗಿದ್ದೂ ಇಂತಹ ಹುಡುಗರನ್ನು ಲೆಫ್ಟ್ ಓವರ್ ಹುಡುಗರು ಎನ್ನುವುದಿಲ್ಲ. ಹುಡುಗಿಯರು ಮಾತ್ರ ಲೆಫ್ಟ್ ಓವರ್ ಹುಡುಗಿಯರು ಎನ್ನಿಸಿಕೊಳ್ಳುತ್ತಾರೆ. 

ಇದು ಚೀನಾದ ಸಮಸ್ಯೆಯ ಒಂದು ಮುಖ ಮಾತ್ರ. ಚೀನಿ ಕಮ್ಯುನಿಸ್ಟ್ ಸರಕಾರ ಹತ್ತಾರು ವರ್ಷದ ಮುಂದಿನದನ್ನ ಯೋಚಿಸಿ ಎಲ್ಲವನ್ನೂ ಶಿಸ್ತು ಬದ್ದವಾಗಿ ಜಾರಿಗೆ ತರುತ್ತದೆ. ಅಷ್ಟೊಂದು ಆಲೋಚಿಸಿ, ಅಳೆದು ತೂಗಿ ನಿರ್ಧಾರ ಮಾಡಿದ ಒಂದು ಮಗು ಪಾಲಿಸಿ ಕೈ ಕೊಟ್ಟಿದೆ. ಚೀನಿ ಸಮುದಾಯದಲ್ಲಿ ಮೆಲ್ಲನೆ ರೋಧನೆಯ ಧ್ವನಿ ಜಗತ್ತಿಗೂ ಕೇಳಿಸಲು ಶುರುವಾಗಿದೆ ಎಂದರೆ ಸಮಸ್ಯೆ ಚಿಕ್ಕದೇನೂ ಅಲ್ಲ. 

ಮನೆ ತುಂಬಿಸಿಕೊಳ್ಳುವ ವೇಳೆ ತಲೆ ಸ್ಪರ್ಶಿಸುವ ಸಂಪ್ರದಾಯ; ನವ ವಧುವಿಗೆ ಗಾಯ, ತನಿಖೆಗೆ ಆದೇಶ!

ಪೋಸ್ಟ್ ಕೋವಿಡ್ ನಂತರ ಚೀನಾ ತನ್ನ ಪ್ರಜೆಗಳ ಮೇಲೆ ಹೆಚ್ಚಿನ ಹಿಡಿತವನ್ನ, ನಿಯಂತ್ರಣವನ್ನು ಹೊಂದಿದೆ. ಎಲ್ಲೆಡೆ ಪ್ರವೇಶ ಪಡೆಯಲು ಸರಕಾರವೇ ಬಿಟ್ಟಿರುವ ಹತ್ತಾರು ಆ್ಯಪ್‌ಗಳಲ್ಲೊಂದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಆ್ಯಪ್ ನಿಮಗೆ ಆ ಪ್ರದೇಶದಲ್ಲಿ ಪ್ರವೇಶ ಇದೆಯೋ ಅಥವಾ ನಿಷಿದ್ಧವೋ ಎನ್ನುವುದನ್ನು ನಿರ್ಧರಿಸುತ್ತದೆ. ಅದು ಹೋಟೆಲ್ ಪ್ರವೇಶವೇ ಆಗಿರಬಹುದು ಅಥವಾ ಬೇರೆ ಊರಿನ ಪ್ರವೇಶವಾದರೂ ಸರಿ. ತನ್ನ ಬಹುಪಾಲು ಜನರನ್ನ ಫೇಸ್ ರೆಕಗ್ನಿಷನ್ (Face Recognition) ಅಡಿಯಲ್ಲಿ ಆಗಲೇ ಡೇಟಾ ಸಂಗ್ರಹಿಸಿಟ್ಟಿದೆ. ಅವರು ಕುಳಿತದ್ದು, ನಿಂತದ್ದು, ತಮ್ಮ ಮನೆಯ ಬಾಗಿಲನ್ನ ತೆಗೆದದ್ದು ಎಲ್ಲವೂ ಸರಕಾರಕ್ಕೆ ತಲುಪುತ್ತದೆ.
 
ಇನ್ನೆಷ್ಟು ದಿನ ಈ ಉಸಿರಗಟ್ಟೋ ವಾತಾವರಣದಲ್ಲಿ ಬದುಕು?
ಮನುಷ್ಯ ಎಷ್ಟು ದಿನ ಅಂತ ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕಲು ಸಾಧ್ಯ? ಜನ ವ್ಯವಸ್ಥೆಯ ವಿರುದ್ಧ ದಂಗೆ ಏಳುವುದಿಲ್ಲವೇ? ಇಂದಿನ ಮಟ್ಟಿಗೆ ಯಾವುದೊ ಅಸಾಧ್ಯ ಎಂದು ತಳ್ಳಿ ಹಾಕುವಂತಿಲ್ಲ. ಅಮೇರಿಕ, ರಷ್ಯಾ, ಭಾರತ, ಇಸ್ರೇಲುಗಳು ರಹಸ್ಯ ಕಾರ್ಯಾಚರಣೆ ಮಾಡಿ ಚೀನಾದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಜನರಿಗೆ ಸ್ವಲ್ಪ ಸಹಾಯ ಮಾಡಿದರೂ ಸಾಕು. ಚೀನಾ ಛಿದ್ರವಾಗುತ್ತದೆ. ಜಗತ್ತಿನ ಮೇಲೆ ತನ್ನದು ಮಾತ್ರವೇ ಹಿಡಿತವಿರಬೇಕು ಎನ್ನುವ ವ್ಯವಸ್ಥೆ ಯಾವುದಾದರೂ ಸರಿಯೇ ಅದು ಅವಸಾನ ಕಾಣಲಿ. 

click me!