ಆರಂಭದ ಕಷ್ಟದ ದಿನಗಳು ಕಳೆದು ಸುಖದ ದಿನಗಳು ಬರುತ್ತಿದ್ದ ಹಾಗೇ, ನಾವು ಸಾವಿನ ಭಯದಲ್ಲೇ ಬದುಕುತ್ತಾ ಹೋಗುತ್ತೇವೆ. ಯಾರಿಗೋ ಸುಪಾರಿ ಕೊಟ್ಟವನ ಸ್ಥಿತಿಯೇ ನಮ್ಮದೂ ಆಗಿಬಿಡುತ್ತದೆ.
-ಜೋಗಿ, ಕನ್ನಡ ಪ್ರಭ
ಆತ ದುಸ್ಥಿತಿಯಲ್ಲಿದ್ದಾನೆ. ಕೈಯಲ್ಲಿ ಕೆಲಸ ಇಲ್ಲ. ಊರವರೆಲ್ಲ ಅವಮಾನ ಮಾಡುತ್ತಾರೆ. ಎಲ್ಲಿ ಹೋದರೂ ಮನ್ನಣೆಯೇ ಇಲ್ಲ. ಹುಡುಗಿಯರು ಕಣ್ಣೆತ್ತಿ ನೋಡುವುದಿಲ್ಲ. ಯೌವನ ಸೋರಿಹೋಗುತ್ತಿದೆ. ಯಾಕಾದರೂ ಬದುಕಿದ್ದೇನೋ ಅನ್ನಿಸುವುದಕ್ಕೆ ಶುರುವಾಗುತ್ತದೆ. ಈ ಬದುಕು ಸಾಕು ಅಂತ ತೀರ್ಮಾನಿಸಿ ಸಾಯಲು ನಿರ್ಧರಿಸುತ್ತಾನೆ.
ಆದರೆ ಸಾಯುವುದಕ್ಕೆ ಭಯ. ದೈವ ಭಯ. ಆತ್ಮಹತ್ಯೆ ಮಾಡಿಕೊಂಡರೆ ಮತ್ತೆ ಮುಂದಿನ ಜನ್ಮದಲ್ಲೂ ಇಂಥದ್ದೇ ದೈನೇಸಿ ಸ್ಥಿತಿ ಪ್ರಾಪ್ತವಾದರೆ ಮಾಡುವುದೇನು ಎಂಬ ಯೋಚನೆ. ಮೊದಲು ಈ ಜನ್ಮ ಕೊನೆಗೊಂಡರೆ ಸಾಕು ಅಂತಲೂ ಆಗಾಗ ಅನ್ನಿಸುತ್ತಿರುತ್ತೆ. ಅಂಥ ದ್ವಂದ್ವದಲ್ಲೇ ಆತ ಊರಾಚೆಗಿರುವ ಹಳೆಯ ಬಾರೊಂದಕ್ಕೆ ಹೋಗಿ ಕುಡಿಯಲು ಶುರುಮಾಡುತ್ತಾನೆ. ಅದೊಂದು ಹಳೆಯ ರೌಡಿಗಳೂ ಕೊಲೆಗಡುಕರೂ ಬರುವ ಗಡಂಗು. ಅಲ್ಲಿ ದಿನವೂ ಹೊಡೆದಾಟ, ಜಗಳ, ಕಿರುಚಾಟ, ಮಾರಾಮಾರಿ ನಡೆಯುತ್ತಿರುತ್ತೆ. ಅಲ್ಲಿ ಯಾರು ರೌಡಿ, ಯಾರು ಮಾಜಿ ಕೊಲೆಗಾರ, ಯಾರು ಹಾಲಿ ಡಾನ್ ಎನ್ನುವುದೂ ಗೊತ್ತಾಗದ ಹಾಗೆ ಮುಖದ ಮೇಲೆ ಇಷ್ಟುದ್ದ ಗಾಯವಾದವರು, ಕೂದಲು ಬಿಟ್ಟವರು, ಕುಂಟುತ್ತಿರುವವರು ಬರುತ್ತಲೇ ಇರುತ್ತಾರೆ. ಎತ್ತರದ ದನಿಯಲ್ಲಿ ಮಾತಾಡಿ, ಕುಡಿದು ಹೋಗುತ್ತಿರುತ್ತಾರೆ. ಅಲ್ಲಿಗೆ ಹೋಗಿ ಕುಡಿಯುತ್ತಾ ಕೂತವನ ಟೇಬಲ್ಲಿನ ಮೇಲೆ ಯಾರೋ ಒಂದು ಹ್ಯಾಂಡ್ ಬಿಲ್ ತಂದಿಟ್ಟು ಹೋಗುತ್ತಾರೆ. ಅದನ್ನು ಆತ ಕುತೂಹಲಕ್ಕೆ ಓದುತ್ತಾನೆ.
Clean Village: ಡಜನ್ ಮನೆಗಳ ಈ ಊರಲ್ಲಿ ತೆಂಗಿನ ಮರವೇ ಇಲ್ಲ!
ಸುಪಾರಿ ಕಿಲ್ಲರ್ಸ್ ಅಸೋಸಿಯೇಷನ್. ಕೇವಲ ಐದು ಸಾವಿರ ರುಪಾಯಿಗೆ ಕೊಲೆ ಮಾಡಲಾಗುವುದು. ಈ ಕೆಳಗಿನ ವಿಳಾಸದಲ್ಲಿರುವ ಕೆಂಪು ಬಾಕ್ಸಿನೊಳಗೆ ಐದು ಸಾವಿರ ರುಪಾಯಿ ಮತ್ತು ಕೊಲ್ಲಬೇಕಾದವನ ಫೋಟೋ ಹಾಕಿದರೆ ಸಾಕು. ಮುಖತಃ ಭೇಟಿಯಾಗಬೇಕಿಲ್ಲ. ಮಾತುಕತೆಯಿಲ್ಲ. ಯಾರಿಗೂ ಯಾರ ಸುಳಿವೂ ಸಿಗುವುದಿಲ್ಲ. ಎಲ್ಲವೂ ಸೇಫು. ಐದು ಸಾವಿರ ರುಪಾಯಿಗೆ ಕೊಲೆ. ವಿಶೇಷ ಸೂಚನೆ: ಕೈ ಕಾಲು ಎತ್ತುವ, ಸೊಂಟ ಮುರಿಯುವ ಚಿಲ್ಲರೆ ಕೆಲಸಗಳನ್ನು ನಾವು ಕೈಗೆತ್ತಿಕೊಳ್ಳುವುದಿಲ್ಲ!
ಈತನಿಗೆ ಅದನ್ನು ನೋಡುತ್ತಿದ್ದಂತೆ ಒಂದು ಐಡಿಯಾ ಬರುತ್ತದೆ. ಸಾಯುವುದಕ್ಕೆ ಅದಕ್ಕಿಂತ ಒಳ್ಳೆಯ ದಾರಿ ಮತ್ತೊಂದಿಲ್ಲ ಅಂದುಕೊಳ್ಳುತ್ತಾನೆ. ಮಾರನೆಯ ದಿನದಿಂದ ಕಷ್ಟಪಟ್ಟು ಕೆಲಸ ಹುಡುಕಲು ಶುರು ಮಾಡುತ್ತಾನೆ. ಬಸ್‌ಸ್ಟಾಂಡಿನಲ್ಲಿ ಕೂಲಿ ಕೆಲಸ, ಯಾವುದೋ ಡೆಲಿವರಿ ಬಾಯ್, ಯಾವುದೋ ಅಂಗಡಿಯಲ್ಲಿ ಸೇಲ್ಸು ಮ್ಯಾನು, ಮತ್ಯಾವುದೋ ಮಾನಗೆಟ್ಟ ಚಾಕರಿ- ಹೀಗೆ ವರುಷ ಪೂರ್ತಿ ದುಡಿದು, ಹೊಟ್ಟೆ ಬಟ್ಟೆ ಕಟ್ಟಿ ಸಂಪಾದಿಸುತ್ತಾನೆ. ದುಡಿದದ್ದನ್ನೆಲ್ಲ ಬ್ಯಾಂಕು ಅಕೌಂಟಿಗೆ ಹಾಕುತ್ತಾ ಬರುತ್ತಾನೆ. ಒಂದು ದಿನ ಐದು ಸಾವಿರ ರುಪಾಯಿ ಆಗುತ್ತಿದ್ದಂತೆ, ಅದನ್ನು ಡ್ರಾ ಮಾಡುತ್ತಾನೆ.
ಅವನು ದುಡ್ಡು ಡ್ರಾ ಮಾಡಲು ಹೋದಾಗ, ದಿನವೂ ಅವನನ್ನೇ ಗಮನಿಸುತ್ತಿದ್ದ ಬ್ಯಾಂಕಿನ ಗುಮಾಸ್ತೆ ಅವನನ್ನು ತಡೆದು ನಿಲ್ಲಿಸುತ್ತಾಳೆ. ನಾನು ನಿಮ್ಮ ಜೊತೆ ಏನೋ ಮಾತಾಡೋದಿದೆ ಅನ್ನುತ್ತಾಳೆ. ಸಂಜೆ ಕಾಫಿಗೆ ಸಿಗುತ್ತೀರಾ, ನಾನೇ ಕಾಫಿ ಕೊಡಿಸುತ್ತೇನೆ ಅನ್ನುತ್ತಾಳೆ. ಅವನು ಸರಿ ಅಂತ ಹೇಳಿ ದುಡ್ಡಿನೊಂದಿಗೆ ಹೊರಗೆ ಬರುತ್ತಾನೆ. ಮನೆಗೆ ಬಂದು, ತಾನು ಎಚ್ಚರಿಕೆಯಿಂದ ಎತ್ತಿಟ್ಟ ಹ್ಯಾಂಡ್‌ಬಿಲ್ ಕೈಗೆತ್ತಿಕೊಳ್ಳುತ್ತಾನೆ. ಅದರಲ್ಲಿರುವ ವಿಳಾಸ ಹುಡುಕುತ್ತಾ ಹೋಗುತ್ತಾನೆ. ಐದು ಸಾವಿರ ರುಪಾಯಿ ಮತ್ತು ತನ್ನ ಫೋಟೋವನ್ನು ಆ ಡಬ್ಬಕ್ಕೆ ಹಾಕಿ ವಾಪಸ್ಸು ಬರುತ್ತಾನೆ.
ಅದೇ ಸಂಜೆ ಬ್ಯಾಂಕಿನ ಹುಡುಗಿ ಸಿಗುತ್ತಾಳೆ. ಕಾಫಿ ಕುಡಿಯುತ್ತಾ ಅವನ ಜೊತೆ ಆಪ್ತವಾಗಿ ಮಾತಾಡುತ್ತಾಳೆ. ನಿಮ್ಮನ್ನು ಒಂದು ವರುಷದಿಂದ ನೋಡುತ್ತಾ ಬರುತ್ತಿದ್ದೇನೆ. ಬಸ್ ಸ್ಟಾಂಡಲ್ಲಿ, ಹೊಟೇಲಿನಲ್ಲಿ, ಡಿಪಾರ್ಟುಮೆಂಟ್ ಸ್ಟೋರಲ್ಲಿ, ದೇವಸ್ಥಾನದಲ್ಲಿ – ಎಲ್ಲ ಕಡೆ ಗಮನಿಸಿದ್ದೇನೆ. ನಿಮ್ಮ ಶ್ರದ್ಧೆ ಮತ್ತು ತನ್ಮಯತೆ ನಂಗೆ ಹಿಡಿಸಿತು. ಎಷ್ಟು ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ ನೀವು. ಬೇರೆ ಹುಡುಗರಂತೆ ದುಂಧು ವೆಚ್ಚ ಮಾಡುವುದಿಲ್ಲ. ಪೋಲಿ ಅಲೆಯುವುದಿಲ್ಲ. ದುಡಿದದ್ದನ್ನು ತಂದು ಬ್ಯಾಂಕಿಗೆ ಕಟ್ಟುತ್ತಿದ್ದಿರಿ. ನಿಮ್ಮಂಥ ಹುಡುಗನಿಗಾಗಿ ನಾನು ಹುಡುಕಾಡುತ್ತಿದ್ದೆ. ನನಗೂ ಒಳ್ಳೆಯ ಸಂಬಳ ಇದೆ. ನನ್ನನ್ನು ಮದುವೆ ಆಗುತ್ತೀರಾ ಅಂತ ಕೇಳುತ್ತಾಳೆ.
ನಾವು ನೋಡೋ ಜಾಗ ಕಣ್ಣಲ್ಲಿ ಸೆರೆಯಾಗಲಿ, ಫೋಟೋ ಕಮ್ಮಿಯಾಗಲಿ, ಪ್ರವಾಸವೆಂದರೆ ಹೀಗಿರಬೇಕು
ಅವನಿಗೋ ಅಚ್ಚರಿ. ಇದ್ದಕ್ಕಿದ್ದಂತೆ ಬದುಕು ಬದಲಾಗಿದೆ. ಚೆಂದದ ಹುಡುಗಿ ಸಂಗಾತಿಯಾಗು ಅನ್ನುತ್ತಿದ್ದಾಳೆ. ನಿರಾಕರಿಸಲು ಆಗದೇ ಇರುವಂಥ ಆಫರ್. ಆತ ಏನಾದರೂ ಹೇಳುವ ಮೊದಲೇ ಅವಳು ಅವನ ಕೈ ಹಿಡಿದು ಅವನ ಹೆಗಲಿಗೊರಗುತ್ತಾಳೆ. ಪ್ರೇಮ ಮೊಳೆಯುತ್ತದೆ.
ಆವತ್ತು ಸಂಜೆ ಅವನು ಮನೆಯೊಳಗೆ ಕಾಲಿಡುತ್ತಿದ್ದಂತೆ, ಅವನಿಗೆ ಇದ್ದಕ್ಕಿದ್ದಂತೆ ತಾನು ತನ್ನ ಕೊಲೆಗಾಗಿ ಸುಪಾರಿ ಕೊಟ್ಟದ್ದು ನೆನಪಾಗುತ್ತದೆ. ಆ ಅಪರಾತ್ರಿಯಲ್ಲಿ ಅವನು ಎದ್ದು ಓಡುತ್ತಾನೆ. ತಾನು ದುಡ್ಡು ಹಾಕಿದ ಪೆಟ್ಟಿಗೆ ಇಟ್ಟಿದ್ದ ಜಾಗ ತಲುಪುತ್ತಾನೆ. ಹೇಗಾದರೂ ಮಾಡಿ, ಅದರಿಂದ ತನ್ನ ಫೋಟೋ ತೆಗೆದುಬಿಡಬೇಕು. ಸಾಯುವುದು ಬೇಕಾಗಿಲ್ಲ ಈಗ ಎಂದುಕೊಳ್ಳುತ್ತಾನೆ. ಆತ ಹೋಗಿ ನೋಡಿದರೆ ಆ ಪೆಟ್ಟಿಗೆ ಹಾಗೆಯೇ ಇದೆ. ಅದರ ಬೀಗ ಒಡೆದು ನೋಡಿದರೆ, ಅದರೊಳಗೆ ದುಡ್ಡೂ ಇಲ್ಲ, ಫೋಟೋ ಕೂಡ ಇಲ್ಲ.
ಅವತ್ತಿನಿಂದ ಅವನ ಭಯ ಶುರುವಾಗುತ್ತದೆ. ಇತ್ತ ಪ್ರೀತಿಸುವ ಹುಡುಗಿ ಸಿಕ್ಕಿದ್ದಾಳೆ. ಅವಳ ಜೊತೆ ಪ್ರೇಮ ಬಲಿಯುತ್ತಾ ಹೋಗುತ್ತದೆ. ಅವಳ ತಂದೆ ಅವನನ್ನು ಕರೆದು ತನ್ನ ಫ್ಯಾಕ್ಟರಿಗೆ ಮ್ಯಾನೇಜರ್ ಮಾಡುತ್ತಾನೆ. ಬದುಕು ಇದ್ದಕ್ಕಿದ್ದಂತೆ ಬದಲಾಗಿಹೋಗುತ್ತದೆ. ಆದರೆ ಎಷ್ಟು ದಿನವೋ ಗೊತ್ತಿಲ್ಲ. ತನ್ನನ್ನು ಅವರು ಯಾವಾಗ ಬೇಕಾದರೂ ಕೊಲ್ಲಬಹುದು! ಕೊಂದೇ ಕೊಲ್ಲುತ್ತಾರೆ. ಅವರು ಕೊಲ್ಲುವುದಕ್ಕೆಂದೇ ಇರುವುದು. ದುಡ್ಡು ತೆಗೆದುಕೊಂಡ ನಂತರ ಅವರು ಕೊಲ್ಲಲೇಬೇಕು. ಅದು ಅವರ ಸಂಸ್ಥೆಯ ಮೇಲಿನ ನಂಬಿಕೆ ಉಳಿಸಿಕೊಳ್ಳುವ ಪ್ರಶ್ನೆ.
ಆ ಭಯದಲ್ಲೇ ಆತ ಬದುಕುತ್ತಾ ಹೋಗುತ್ತಾನೆ. ಮರುಕ್ಷಣ ತಾವು ಸಾಯಬಹುದು ಅನ್ನಿಸಿ, ಸೊರಗುತ್ತಾ, ಕೊರಗುತ್ತಾ ಹೋಗುತ್ತಾನೆ.
ಆಡ್ ಜಾಬ್ ಎಂಬ ಸಿನಿಮಾ ಇಂಥದ್ದೇ ಒಂದು ಕತೆಯನ್ನು ಆಧರಿಸಿದ್ದು. ಇದು, ಬದುಕು ಸುಧಾರಿಸುತ್ತಾ ಹೋಗುತ್ತಿದ್ದಂತೆ ಸಾವಿನ ಭಯದ ನೆರಳಲ್ಲಿ ಬದುಕುವ ಎಲ್ಲರ ಕತೆಯೂ ಹೌದು. ಇಲ್ಲಿ ಸಾಯಿಸುವುದಕ್ಕೆ ಯಾವ ಸುಪಾರಿ ಕಿಲ್ಲರ್‌ಗಳೂ ಬೇಕಿಲ್ಲ. ಕೊಲ್ಲುವುದಕ್ಕೆ ತಾನೇ ದುಡ್ಡು ಕೊಡಬೇಕಾಗಿಯೂ ಇಲ್ಲ. ಯಾಕೆಂದರೆ ಅದು ದೇವರ ಕೆಲಸ!
ಸ್ಕಾಚ್ ವಿಸ್ಕಿ ಕುಡಿಯುವವನಿಗೆ ಇಲ್ಲ ಮಾರ್ಯಾದೆ! ಎಲ್ಲಿಗೆ ಬಂತು ಕಾಲ?
ಆರಂಭದ ಕಷ್ಟದ ದಿನಗಳು ಕಳೆದು ಸುಖದ ದಿನಗಳು ಬರುತ್ತಿದ್ದ ಹಾಗೇ, ನಾವು ಸಾವಿನ ಭಯದಲ್ಲೇ ಬದುಕುತ್ತಾ ಹೋಗುತ್ತೇವೆ. ಯಾರಿಗೋ ಸುಪಾರಿ ಕೊಟ್ಟವನ ಸ್ಥಿತಿಯೇ ನಮ್ಮದೂ ಆಗಿಬಿಡುತ್ತದೆ. ಅಷ್ಟಕ್ಕೂ ನಾವು ಒತ್ತಡಕ್ಕೆ, ನಿರಂತರ ದುಡಿಮೆಗೆ, ಸಿಟ್ಟಿಗೆ, ಹೊಟ್ಟೆಕಿಚ್ಚಿಗೆ, ಅತೃಪ್ತಿಗೆ, ಅನಾರೋಗ್ಯಕರ ಹವ್ಯಾಸಗಳಿಗೆ ಸುಪಾರಿ ಕೊಟ್ಟಾಗಿರುತ್ತದೆ. ಕ್ರಮೇಣ ನಮ್ಮ ಆರೋಗ್ಯವನ್ನು ನಾವೇ ಕಡೆಗಣಿಸುತ್ತಾ ಹೋಗುತ್ತೇವೆ. ಪಕ್ಕದ ಮನೆಗಿಂತ ಎತ್ತರದ ಮನೆ ಕಟ್ಟುವ ಆಶೆಯಾಗುತ್ತದೆ. ಮತ್ತೊಂದು ಸೈಟು ಇರಬೇಕು ಅನ್ನಿಸುತ್ತದೆ. ಇಂಥ ಆಶೆಗಳಿಗೆ ನಾವೇ ಸುಪಾರಿ ಕೊಟ್ಟು, ನನ್ನನ್ನು ಕೊಲ್ಲು ಅಂತ ಹೇಳುತ್ತಲೇ ಹೋಗುತ್ತೇವೆ. ಹೀಗೆ ನಾವೇ ನೇಮಿಸಿದ ಸೀಕ್ರೆಟ್ ಏಜೆಂಟುಗಳು ನಮ್ಮನ್ನು ಕೊಲ್ಲುವುದಕ್ಕೆ ಬೇರೆ ಬೇರೆ ಥರ ಯತ್ನಿಸುತ್ತಾರೆ. ಉದ್ವೇಗದಲ್ಲಿ, ರೋಷದಲ್ಲಿ, ಆಕ್ರೋಶದಲ್ಲಿ, ಭಾವುಕತೆಯಲ್ಲಿ, ಅಸೂಯೆಯಲ್ಲಿ, ಅಮಲಿನಲ್ಲಿ, ಅವಿಶ್ರಾಂತದಲ್ಲಿ- ಹೇಗೆ ಬೇಕಾದರೂ ಆ ಗೂಢಚಾರ ನಮ್ಮನ್ನು ಮುಗಿಸಿಬಿಡಬಹುದು.
ವಿಷ್ಣುವಿನ ಅವಕೃಪೆಗೆ ಪಾತ್ರರಾದ ಜಯವಿಜಯರಿಗೆ ಶಾಪ ಸಿಗುತ್ತದೆ. ಶತ್ರುತ್ವದ ಮೂರು ಜನುಮವೋ ಮಿತ್ರತ್ವದ ಏಳು ಜನುಮವೋ ಎಂದು ಕೇಳಿದಾಗ ಅವರು ಶತ್ರುತ್ವದ ಮೂರೇ ಜನ್ಮ ಸಾಕು ಎಂದುಬಿಡುತ್ತಾರೆ. ತೀವ್ರವಾಗಿ ದ್ವೇಷಿಸಿ ಮೂರೇ ಜನ್ಮದಲ್ಲಿ ಮತ್ತೆ ಶ್ರೀಹರಿ ಸಾಯುಜ್ಯ ಸೇರುತ್ತಾರೆ.
ನಾವು ಒಂದೇ ಜನ್ಮದಲ್ಲಿ ತೀವ್ರವಾಗಿ ಪ್ರೀತಿಸಿ, ತೀವ್ರವಾಗಿ ದ್ವೇಷಿಸಿ ಇದ್ದಲ್ಲೇ ಇರುತ್ತೇವೆ. ನಮಗೆ ನಮ್ಮ ವೃತ್ತದಿಂದ ನಿವೃತ್ತಿಯಿಲ್ಲ, ಮುಕ್ತಿಯಿಲ್ಲ!.