'ಲವಲವಿಕೆ'ಯಿಂದ ಎಲ್ಲರಿಗೂ 'ಸಮಾಧಾನ' ಹೇಳಿದ್ದ ರವಿ ಬೆಳಗೆರೆ

By Suvarna NewsFirst Published Nov 13, 2020, 7:14 AM IST
Highlights

ವಿಶಿಷ್ಟ ಶೈಲಿ, ಅಪಾರ ಜ್ಞಾನ, ಮೋಹಕ ಬರವಣಿಗೆ, ವಿಭಿನ್ನ ಪದ ಬಳಕೆ...ಒಬ್ಬ ಪತ್ರಕರ್ತನ ಬರವಣಿಗೆಯಲ್ಲಿ ಏನೇನು ಇರಬೇಕೋ, ಎಲ್ಲವೂ ರವಿ ಬೆಳಗೆರೆ ಎಂಬ ಅಕ್ಷರ ಮಾಂತ್ರಿಕನ ಬರವಣೆಗಯಲ್ಲಿ ಕಾಣಬಹುದಾಗಿತ್ತು. ಇವರ ಬರವಣಿಗೆಯನ್ನು ಓದಿಯೇ ಪತ್ರಕರ್ತರಾದವರು, ಲೇಖಕರಾದವರು ಅದೆಷ್ಟು ಮಂದಿಯೋ?

ರವಿ ಬೆಳಗೆರೆಯ ಅಕ್ಷರಗಳಲ್ಲಿ ಎಂಥದ್ದೋ ಒಂದು ಮಾಂತ್ರಿಕತೆ ಇತ್ತು. ಎಂಥವರನ್ನಾದರೂ ಓದಿಸುಕೊಂಡು ಹೋಗುವಂಥ ಅವರ ಬರಹ ಶೈಲಿಯಿಂದ ಓದಿನ ಅಭ್ಯಾಸ ರೂಢಿಸಿಕೊಂಡವರು ಅದೆಷ್ಟೋ ಮಂದಿಯೋ? ಬರವಣಿಗೆ ಆರಂಭಿಸಿದರು ಮತ್ತೆಷ್ಟೋ ಜನರೋ? ಅದರಲ್ಲಿಯೂ ಯುವ ಜನಾಂಗವನ್ನು ಆಕರ್ಷಿಸುವಂಥ ಮೋಹಕ ಬರವಣಿಗೆ ಅವರದ್ದು. ಹುಬ್ಬಳ್ಳಿಯಲ್ಲಿ ಜನಿಸಿ, ಕಷ್ಟದಲ್ಲಿಯೇ ಬೆಳೆದು ಬೆಂಗಳೂರಿಗೆ ಸೇರಿದ ರವಿ, ಮೊದ ಮೊದಲು ಹೊಟ್ಟೆ ತುಂಬಿಸಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಖಾಸ್ ಬಾತ್ ಎಂಬ ಅವರ ಅಂಕಣದಲ್ಲಿ ತಮ್ಮ ವೈಯಕ್ತಿಕ ಜೀವನದ ಘಟನೆಗಳನ್ನೂ ಹಂಚಿಕೊಳ್ಳುತ್ತಿದ್ದರು. ಲವ್‌ಲವಿಕೆ ಎಂಬ ಅಂಕಣ ಮನುಷ್ಯ ತನ್ನನ್ನು ತಾನೇ ಪ್ರೀತಿಸಿಕೊಳ್ಳುವಂತೆ ಮಾಡುತ್ತಿತ್ತು.  

'ಹಾಯ್ ಬೆಂಗಳೂರು' ಎಂಬ ಪತ್ರಿಕೆಯಲ್ಲಿ ಅಪರಾಧ ಜಗತ್ತಿನ ಅನಾವರಣಗೊಳ್ಳುತ್ತಿತ್ತು. ಆದರೆ, ಬಾಂಧವ್ಯ, ಜೀವನದ ಮೌಲ್ಯಗಳು ಆ ಪತ್ರಿಕೆಯಲ್ಲಿ ಕಾಣ ಸಿಗುವುದು ಅಪರೂಪವಾಗಿತ್ತು. ಆ ಕಾರಣಕ್ಕೆ 'ಓ ಮನಸೇ' ಎಂಬ ಪಾಕ್ಷಿಕ ಹೊರ ತಂದರು ಈ ಕನ್ನಡದ ಅತ್ಯದ್ಭುತ ಅಕ್ಷರ ಮಾಂತ್ರಿಕ. ಅದು ಮಾಡಿದ ಮೋಡಿ ಅಷ್ಟಿಷ್ಟಲ್ಲ. 'ಮನಸೇ'ಗಾಗಿ ಮಂದಿ ಕಾಯುತ್ತಿದ್ದರು. ಕೈಗೆ ಸಿಕ್ಕಿದ ಕೂಡಲೇ, ಓದಿ ಮುಗಿಸುವ ತವಕ. ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ. ಯಾರೋ ತಮ್ಮ ಆತ್ಮೀಯ ಗೆಳೆಯರು ತಮ್ಮನ್ನು ಸಂತೈಸುತ್ತಿದ್ದಾರೆ ಎಂದೆನಿಸುವಂತ ಲೇಖನಗಳು. ಜೊತೆಗೆ ಕಷ್ಟದಲ್ಲಿರುವವರಿಗೆ ಸಮಾಧಾನ. ನೇರವಾಗಿ ಓದುಗರ ಹೃದಯವನ್ನು ಮುಟ್ಟುವಂಥ ಬರಹ ಶೈಲಿ ಈ ಕನ್ನಡದ ಹಿರಿಯ ಪತ್ರಕರ್ತನದ್ದಾಗಿತ್ತು. 

ಕನ್ನಡ ಅಕ್ಷರ ಲೋಕವನ್ನು ಅಗಲಿದ ರವಿ ಬೆಳಗೆರೆ

ಸಂಗೀತದ ಬಗ್ಗೆ ರವಿ ಅವರಿಗೆ ಇದ್ದ ಜ್ಞಾನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಸ್ವರ, ರಾಗ, ಲಯಗಳನ್ನು ಆಸ್ವಾದಿಸುವ ಜೊತೆಗೆ ಗೀತೆಯ ಭಾವಾರ್ಥವನ್ನು ಅವರು ವರ್ಣಿಸುತ್ತಿದ್ದ ರೀತಿ ಅಘೋಷ. ಈ ಟಿವಿಯಲ್ಲಿ ಪ್ರ,ಸಾರವಾಗುತ್ತಿದ್ದ 'ಎಂದೂ ಮರೆಯದ ಹಾಡು' ಕಾರ್ಯಕ್ರಮದಲ್ಲಿ ಹಾಡು ಕೇಳುವ ಕೌತುಕದೊಂದಿಗೆ, ಅವರಾಡುವ ಮಾತುಗಳೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಶೇ.100 ರಷ್ಟು ಮನೋರಂಜನೆಯೊಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂಥ ಕಾರ್ಯಕ್ರಮ ಇದಾಗಿತ್ತು. 

ಪ್ರೀತಿ, ಪ್ರೇಮ, ಸಾಹಿತ್ಯ, ಸಂಗೀತದಿಂದ ಹಿಡಿದು ಅಪರಾಧ ಜಗತ್ತಿನ ಸುದ್ದಿಗಳನ್ನು ರೋಚಕವಾಗಿ ಹೇಳುವ ರವಿಯ ಪರಿ ಅತ್ಯದ್ಭುತ. ಬರವಣಿಗೆಯೇ ಅವರ ಉಸಿರಾಗಿತ್ತು. ಬರೆದ ಪ್ರತಿಯೊಂದೂ ಪುಸ್ತಕವೂ ಸೂಪರ್ ಹಿಟ್. ಇದೀಗ ಆರು ಪುಸ್ತಕಗಳನ್ನು ಬರೆಯುತ್ತಿದ್ದರಂತೆ. ಎಲ್ಲವನ್ನೂ ಒಟ್ಟಿಗೇ ಪ್ರಕಟಿಸಲು ಮುಂದಾಗಿದ್ದರಂತೆ.  

ಪೆನ್, ಪೇಪರ್ ಈ ಪತ್ರಕರ್ತನ ಉಸಿರಾಗಿದ್ದವು. ಕೊನೆ ಉಸಿರು ಇರುವವರೆಗೂ ಬರೆಯುತ್ತಲೇ ಇದ್ದರು. ರಾಜ್ಯ ರಾಜಕೀಯದ ರೋಚಕ ಕಥೆಗಳನ್ನು ಹೇಳುವಂಥ ಪುಸ್ತಕದ ಬರವಣಿಗೆಯಲ್ಲಿ ರವಿ ಬ್ಯುಸಿಯಾಗಿದ್ದರಂತೆ. ರಾಜಕೀಯ ನಾಯಕರ ಬಗೆಗಿನ ಇನ್‌ಸೈಡ್ ಮಾಹಿತಿ ಬಿಚ್ಚಿಡುವ ಬರಹಗಳಂತೆ ಇವು. ಅಷ್ಟೇ ಅಲ್ಲ ಹೋರಾಟದ ಬದುಕಿನಲ್ಲಿ ವಿವಿಧ ಮಜಲುಗಳನ್ನು ಕಂಡ ರವಿ, ಜೀವನದ ಪೂರ್ತಿ ಕಲ್ಲು ಮುಳ್ಳುಗಳೇ ತುಂಬಿದ್ದವು. ಅಷ್ಟೇ ಸ್ವಾರಸ್ಯಕರವಾಗಿಯೂ ಇತ್ತು. ಇಬ್ಬರು ಪತ್ನಿಯರು ಹಾಗೂ ನಾಲ್ಕು ಮಕ್ಕಳ ಕುಟುಂಬ ಅವರದ್ದು. ಈ ಎಲ್ಲ ವಿಷಯಗಳನ್ನೊಳಗೊಂಡ ಆತ್ಮ ಚರಿತ್ರೆ ಬರೆಯುತ್ತಿದ್ದರಂತೆ ರವಿ. ತಮ್ಮ ಜೀವನದ ಉದ್ದಕ್ಕೂ ಎದುರಿಸದ ಸವಾಲುಗಳನ್ನು ಆತ್ಮಚರಿತ್ರೆಯಲ್ಲಿ ಕಟ್ಟಿಕೊಳ್ಳುತ್ತಿದ್ದರು. ಪೂರ್ಣವಾಗಲೇ ಇಲ್ಲ ಇದು. 

ರವಿ ಬೆಳಗೆರೆ ಪ್ರೇಮ ಪತ್ರದಲ್ಲಿ ಎಸ್ ಪಿಬಿ ಹಾಡಿನ ಸಾಲುಗಳು

1954ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಬೆಳಗೆರೆ, ಶಿಕ್ಷಣ ಮುಗಿಸಿದ್ದು ಅಲ್ಲಿಯೇ. ಅದಕ್ಕೆ ತೆಲುಗು ಭಾಷೆ ಹಾಗೂ ಸಾಹಿತ್ಯ ಪ್ರಭಾವವೂ ರವಿ ಅವರ ಮೇಲಿತ್ತು. ಉಪನ್ಯಾಸಕರಾಗಿ ರವಿ ಬೆಳಗೆರೆ ವೃತ್ತಿ ಆರಂಭಿಸಿ, ವಿವಿಧ ಪತ್ರಿಕೆಗಳಲ್ಲಿ ದುಡಿದು, ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿ 1995ರಲ್ಲಿ ಹಾಯ್ ಬೆಂಗಳೂರು ಎಂಬ ವಾರ ಪತ್ರಿಕೆ ಪ್ರಾರಂಭಿಸಿದರು. ಒಂದೇ ಒಂದು ಜಾಹೀರಾತು ಇಲ್ಲದ ಈ ಟ್ಯಾಬ್ಲಾಯ್ಡ್, ಕನ್ನಡ ಪತ್ರಿಕೋದ್ಯಮದಲ್ಲಿ ಸಂಚಲನ ಮೂಡಿಸಿತ್ತು. 

ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ, ಲಂಕೇಶ್, ಕನ್ನಡ ಪ್ರಭ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಅವರು ಭಾವನಾ ಆಡಿಯೋ , ಭಾವನಾ ಪ್ರಕಾಶನ , ಪ್ರರ್ಥಾನಾ ಶಾಲೆಯ ಸಂಸ್ಥಾಪಕರೂ ಹೌದು. ಭೀಮಾ ತೀರದ ಹಂತಕರು , ಪಾಪಿಗಳ ಲೋಕದಲ್ಲಿ, ನೀ ಹಿಂಗೆ ನೋಡಬೇಡ ನನ್ನ, ಇಂದಿರೇ ಮಗ ಸಂಜಯ, ರಾಜ್ ಲೀಲಾ ವಿನೋದ, ಹಿಮಾಲಯನ್ ಬ್ಲಂಡರ್, ಮಾಂಡೋವಿ ಸೇರಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇಂಥ ಬರಹಗಾರನ ನಿಧನ ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ. ಅವರಂಥ ಬರಹಗಾರ ಮತ್ತೊಬ್ಬ ಸಿಗುವುದು ಕಷ್ಟ. ಮತ್ತೆ ಅವರೇ ಹುಟ್ಟಿ ಬರಲಿ. 

 

click me!