ಗಲಗಲ ಮಾತಾಡ್ತಾ ಎಲ್ಲರ ಜೊತೆ ಬೆರೆಯೋರದ್ದು ಒಂದು ವರ್ಗ ಆದ್ರೆ ಗುಮ್ಮನಗುಸುಕನ ಹಾಗಿದ್ದು ತಮ್ಮ ಪಾಡಿಗೆ ತಾವಿರುವ ಅಂತರ್ಮುಖಿಗಳದ್ದು ಇನ್ನೊಂದು ಜಗತ್ತು. ಇಂಥವರು ತಮ್ಮ ಸ್ವಭಾವವನ್ನು ಇವತ್ತು ಸೆಲೆಬ್ರೇಟ್ ಮಾಡಬಹುದು. ಇವತ್ತು world introvert day.
ಸುಹಾಸಿನಿ ಸೀರಿಯಸ್ ಹುಡುಗಿ. ಮಾತು ಕಡಿಮೆ. ಸೀರಿಯಸ್ ಆಗಿರ್ತಾಳೆ. ಎಷ್ಟು ಬೇಕೋ ಅಷ್ಟೇ ಉತ್ತರ. ಅವಳ ಜೊತೆ ಕೆಲಸ ಮಾಡೋರಿಗೆ ಅವಳೆಂದರೆ ಅಷ್ಟಕ್ಕಷ್ಟೇ. ಹೆಚ್ಚಿನ ಉದ್ಯೋಗಿಗಳು ಅವಳನ್ನು ದುರಹಂಕಾರಿ ಅಂದುಕೊಂಡಿದ್ದಾರೆ. ಅವಳ ಕ್ಲೋಸ್ ಫ್ರೆಂಡ್ ನಮಿತಾಗಷ್ಟೇ ಅವಳ ಬಗ್ಗೆ ಗೊತ್ತು. ಮೌನದಲ್ಲೇ ಮಾತಾಡೋ ಸುಹಾಸಿನಿ ದುರಹಂಕಾರಿ ಅಲ್ಲ ಅಂತ. ಹಾಗಂತ ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳೋಕೂ ಅವಳಿಗೆ ಸಾಧ್ಯವಾಗಿಲ್ಲ. ಆದರೆ ಅಂತರ್ಮುಖಿಯೊಬ್ಬಳ ಜೊತೆಗಿನ ಸ್ನೇಹ ಅವಳಿಗೆ ಖುಷಿಯನ್ನಂತೂ ಕೊಟ್ಟಿದೆ.
ಒಂದಿಷ್ಟು ಸಿನಿಮಾಗಳಲ್ಲಿ ಹೀರೋ ಅಥವಾ ಹೀರೋಯಿನ್ ಪಾತ್ರ ಈ ಥರ ಇಂಟ್ರಾವರ್ಟ್ ಆಗಿರ್ತಾರೆ. ಆದರೆ ಈ ಸ್ವಭಾವದವರನ್ನು ಜನ ತಪ್ಪಾಗಿ ಅರ್ಥ ಮಾಡಿಕೊಳ್ಳೋದೇ ಜಾಸ್ತಿ. ಇವರಿಗೆ ಅಹಂಕಾರ. ಇವರು ಸ್ವಾರ್ಥಿಗಳು, ಬರೀ ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡ್ತಾರೆ.. ಹೀಗೆಲ್ಲ ಅಂದುಕೊಳ್ತಾರೆ. ಆದರೆ ಅಂತರ್ಮುಖಿಗಳು ಮೌನದಲ್ಲೇ ಖುಷಿ ಕಾಣೋರು. ಜಗತ್ತನ್ನು ಒಂದು ಪ್ರಶಾಂತತೆಯಲ್ಲಿ ನೋಡಲು ಇಷ್ಟ ಪಡುತ್ತಾರೆ. ಇವರು ಏಕಾಂಗಿಯಾಗಿ ಸಮಯ ಕಳೆಯುವುದನ್ನು ಆನಂದಿಸುತ್ತಾರೆ. ಅಂತಹವರಿಗಾಗಿಯೇ ಇರೋದು ಈ ವಿಶ್ವ ಅಂತರ್ಮುಖಿಗಳ ದಿನ. ಅಥವಾ ವರ್ಲ್ಡ್ ಇಂಟ್ರಾವರ್ಟ್ಸ್ ಡೇ - World Introvert Day.
ಪುಟ್ಟಕ್ಕನ ಮಕ್ಕಳು ಸ್ನೇಹಾ ವರ್ಕ್ಔಟ್ ವೈರಲ್: ಹೊಸ ವರ್ಷಕ್ಕೆ ಸಂಜನಾ ಬುರ್ಲಿ ಕೊಟ್ಟ ಫಿಟ್‌ನೆಸ್ ಟಿಪ್ಸ್ ಏನು?
ವಿಶ್ವ ಅಂತರ್ಮುಖಿ ದಿನವನ್ನು ಜರ್ಮನಿಯ ಖ್ಯಾತ ಮನಶ್ಶಾಸ್ತ್ರಜ್ಞ ಫೆಲಿಸಿಟಾಸ್ ಹೇಯ್ನೆ ಆಚರಣೆಗೆ ತಂದರು. ಇವರು ಸೆಪ್ಟೆಂಬರ್ 20, 2011 ರಂದು ತಮ್ಮ ವೆಬ್‌ಸೈಟ್‌ನಲ್ಲಿ (website) ‘ವಿಶ್ವ ಅಂತರ್ಮುಖಿ ದಿನ' (world introvert day) ವನ್ನು ಏಕೆ ಆಚರಿಸಬೇಕು’ ಎಂಬ ಶೀರ್ಷಿಕೆಯ ಬ್ಲಾಗ್ ಪೋಸ್ಟ್ ಅನ್ನು ಬರೆದರು. ಈ ಲೇಖನವೇ ವಿಶ್ವ ಅಂತರ್ಮುಖಿ ದಿನಕ್ಕೆ ಕಾರಣವಾಯಿತು. ಈ ಲೇಖನದಲ್ಲಿ ಅಂತರ್ಮುಖಿಗಳು ಎದುರಿಸುತ್ತಿರವ ತೊಂದರೆಗಳನ್ನು ಹಾಗೂ ಅವರ ಅಗತ್ಯತೆಗಳನ್ನು ಎತ್ತಿ ತೋರಿಸಿದರು. ನಂತರ ಅವರು ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲು ಸಲಹೆ ನೀಡಿದರು. ಕ್ರಿಸ್ಮಸ್‌ನ ಭಾರಿ ಆಚರಣೆ ಮತ್ತು ವರ್ಷಾಂತ್ಯದ ರಜೆಯ ಗಲಗಲದ ಬಳಿಕವಾದರೂ ಈ ಅಂತರ್ಮುಖಿಗಳು ಅವರ ಪಾಡಿಗೆ ಅವರಿರಲು ಒಂದು ದಿನ ಇರಲಿ ಅಂತ ಈ ಆಚರಣೆ. ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ (silent) ಹೆಚ್ಚು, ಆದರೆ ಒರಟರಾಗಿರುವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಅವರ ಆನಂದಕ್ಕೆ ಹಾಗೂ ಅವರ ಜಗತ್ತನ್ನು ಇತರರು ಅರಿಯುವುದಕ್ಕೆ ಈ ದಿನ ಮೀಸಲಾಗಿರಲಿ ಅನ್ನೋದು ಈ ದಿನದ ಆಚರಣೆ ಆರಂಭಿಸಿದವರ ಉದ್ದೇಶ. ಹಾಗೆ ನೋಡಿದರೆ ಚಾರ್ಲ್ಸ್ ಡಾರ್ವಿನ್, ಅಲ್ಬರ್ಟ್ ಐನ್‌ಸ್ಟೈನ್ ನಂತಹ ಜಗತ್ತಿನ ಹಲವರು ಅತಿ ಬುದ್ದಿವಂತರು ಅಂತರ್ಮುಖಿಗಳು. ಜಗತ್ತಿಗೆ ಅವರ ಕೊಡುಗೆಯನ್ನು ಸ್ಮರಿಸಲೂ ಈ ದಿನ ಆಚರಿಸಲಾಗುತ್ತದೆ.
ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್
ಸೋ ಇವತ್ತು ನಿಮ್ಮೊಳಗಿನ ಅಂತರ್ಮುಖಿಯನ್ನು ಖುಷಿಯಾಗಿರಲು ಬಿಡಿ. ಇಡೀ ದಿನ ನಿಮ್ಮ ಪಾಡಿಗೆ ನೀವಿರಿ. ಸಂತೆಯಲ್ಲೂ ಸಂತನ ಹಾಗೆ. ಜೊತೆಗೆ ನೀವೊಬ್ಬರೇ ಖಾಲಿ ರಸ್ತೆಯಲ್ಲಿ ಲಾಂಗ್ ವಾಕ್ ಹೋಗಬಹುದು. ನಿಮ್ಮ ಪ್ರೀತಿಯ ಸಾಕುಪ್ರಾಣಿಗಳಿದ್ದರೆ ಇನ್ನೂ ಚೆನ್ನ. ಇದು ಆತ್ಮಾವಲೋಕನ ಮಾಡಿಕೊಳ್ಳಲು ಸರಿಯಾದ ಅವಕಾಶ. ಅಂತರ್ಮುಖಿಗಳು ಏಕಾಂಗಿಯಾಗಿರುವಾಗ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಹಾಗಾಗಿ ನಿಮ್ಮಿಷ್ಟದ ಕವಿತೆ (poem), ಚಿತ್ರ ಬರೆಯಿರಿ. ನಿಮ್ಮಲ್ಲಿರುವ ಸಂಗೀತ, ಡ್ಯಾನ್ಸ್ ಮುಂತಾದ ಪ್ರತಿಭೆ ತೋರಿಸಿ.
ಇಂಟ್ರಾವರ್ಟ್ ಅಲ್ಲದವರು ಅಂತರ್ಮುಖಿ ಸ್ವಭಾವದವರನ್ನು ಗೌರವಿಸೋದನ್ನು (respect) ಈ ದಿನದಿಂದಲಾದರೂ ಶುರು ಮಾಡೋಣ. ಜೊತೆಗೆ ನಮ್ಮೊಳಗೂ ಒಂದು ಅಂತರ್ಮುಖಿ ವ್ಯಕ್ತಿತ್ವ ಇರುತ್ತದೆ. ಅದನ್ನೂ ಆನಂದಿಸೋಣ.