
ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆಯಾದ ಮೇಲೆ ಅವರ ಹೆಸರಿನ ಮುಂದೆ ಗಂಡನ ಹೆಸರು ಇಟ್ಟುಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಒಂದು ವೇಳೆ ಹೀಗೆ ಇಟ್ಟುಕೊಳ್ಳದಿದ್ದರೆ, ಎಷ್ಟೋ ಗಂಡನ ಮನೆಯವರು ಆಕೆಯನ್ನು ಜರಿಯುವುದು ಇದೆ. ಇದೇ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳವಾಗುವುದೂ ಇದೆ. ಸೆಲೆಬ್ರಿಟಿಗಳಿಂದ ಹಿಡಿದು ಬಹುತೇಕ ಹೆಣ್ಣುಮಕ್ಕಳು ಅಪ್ಪನ ಜಾಗದಲ್ಲಿ ಗಂಡನ ಹೆಸರು ಹಾಕುತ್ತಾರೆ. ಇನ್ನು ಕೆಲವರು ಅಪ್ಪನ ಮನೆಯ ಸರ್ನೇಮ್ ಮುಂದೆ ಗಂಡನ ಮನೆಯ ಸರ್ನೇಮ್ ಹಾಕುವುದೂ ಫ್ಯಾಷನ್ ರೀತಿ ಆಗಿಬಿಟ್ಟಿದೆ. ಉದಾಹರಣೆಗೆ ಐಶ್ವರ್ಯ ರೈ ಬಚ್ಚನ್... ಹೀಗೆ. ಮದುವೆಯಾದ ಮೇಲೂ ಅಪ್ಪನ ಮನೆಯ ಹೆಸರನ್ನೇ ಇಟ್ಟುಕೊಂಡರೆ, ಇವಳು ದೊಡ್ಡ ಮಾಡರ್ನ್ ಲೇಡಿ. ಸೊಕ್ಕು ಜಾಸ್ತಿ... ಹೀಗೆಲ್ಲಾ ಕೊಂಕು ಮಾತನಾಡುವವರಿಗೂ ಕಮ್ಮಿಯೇನಿಲ್ಲ. ಅದು ಶುರುವಾಗುವುದು ಕೂಡ ಕುಟುಂಬದಿಂದಲೇ. ಇನ್ನು ಕೆಲವು ಸಂಪ್ರದಾಯಗಳಲ್ಲಿ ಹೆಣ್ಣುಮಕ್ಕಳ ಹೆಸರನ್ನೇ ಬದಲಿಸುವುದು ಮಾಮೂಲು.
ಆದರೆ, ಇದೀನ ಸಂಸ್ಕೃತ ವಿದ್ವಾನ್ ಜಗದೀಶ್ ಶರ್ಮಾ ಅವರು ಕುತೂಹಲದ ವಿಷಯವೊಂದನ್ನು ತಿಳಿಸಿದ್ದಾರೆ. ಗೌರೀಶ್ ಅಕ್ಕಿ ಸ್ಟುಡಿಯೋಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಸಂಪ್ರದಾಯ, ಸನಾತನ ಧರ್ಮ ಇತ್ಯಾದಿ ಕುರಿತು ಆಳವಾಗಿ ಅಧ್ಯಯನ ನಡೆಸಿರುವ ಜಗದೀಶ್ ಶರ್ಮಾ ಅವರು, ಭಾರತೀಯ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಗಂಡನ ಹೆಸರನ್ನು ಇಟ್ಟುಕೊಳ್ಳುವ ಪದ್ಧತಿಯೇ ಇಲ್ಲ. ಇದು ಬಂದಿರೋದು ಬ್ರಿಟಿಷರಿಂದ ಎಂದಿದ್ದಾರೆ.
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯ ಇರುವುದು. ಸನಾತನ ಧರ್ಮದಲ್ಲಿ ಗಂಡ ತನ್ನ ಹೆಸರಿನ ಮೊದಲು ಹೆಂಡತಿಯ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಇದು ಹಿಂದೂ ಸಂಪ್ರದಾಯ ಎಂದಿರುವ ಜಗದೀಶ್ ಶರ್ಮಾ ಅವರು, ಇದಕ್ಕೆ ಉದಾಹರಣೆ ಕೊಟ್ಟಿದ್ದಾರೆ. ನೋಡಿ ಸೀತಾರಾಮ, ರಾಧಾಕೃಷ್ಣ, ಉಮಾಮಹೇಶ್ವರ, ಲಕ್ಷ್ಮೀನಾರಾಯಣ... ಹೀಗೆ ಹೇಳುತ್ತಾ ಹೋದರೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಅದು ನಮ್ಮ ಸಂಸ್ಕೃತಿ, ಅದು ನಮ್ಮ ಧರ್ಮ. ಇದು ಹೆಣ್ಣಿನ ಮಹತ್ವವನ್ನು ಸಾರುತ್ತದೆ.
ಆದರೆ ಇದೀಗ ಉಲ್ಟಾ ಆಗಿ ಹೋಗಿದೆ. ಬ್ರಿಟಿಷರಿಂದ ಬಂದಿರೋ ಸಂಸ್ಕೃತಿಯನ್ನೇ ಈಗ ಶುರು ಮಾಡಿಬಿಟ್ಟಿದ್ದೇವೆ. ಒಂದು ವೇಳೆ ಮದುವೆಯಾದ ಮೇಲೆ ಗಂಡನ ಹೆಸರು ಸೇರಿಸಿಕೊಂಡಿಲ್ಲ ಎಂದರೆ ಏನೋ ಅಪರಾಧ ಮಾಡಿರುವ ರೀತಿಯಲ್ಲಿ ಹೆಣ್ಣನ್ನು ಬಿಂಬಿಸಲಾಗುತ್ತದೆ. ಆದರೆ ಇದು ಸನಾತನ ಧರ್ಮವಲ್ಲ. ಸನಾತನ ಧರ್ಮದಲ್ಲಿ ಗಂಡನಾದವ ತನ್ನ ಹೆಂಡತಿಯ ಹೆಸರನ್ನು ತನ್ನ ಹೆಸರಿಗಿಂತ ಮುಂಚೆ ಇಟ್ಟುಕೊಳ್ಳುತ್ತಾನೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.