ಸಂಬಂಧದ ಬುನಾದಿಯೇ ವಿಶ್ವಾಸ. ಪರಸ್ಪರ ನಂಬಿಕೆಯಿದ್ದಾಗಲೇ ಸಂಬಂಧ ಸದೃಢವಾಗಿರುತ್ತದೆ. ಆದರೆ, ಕೆಲ ಜನರಿರುತ್ತಾರೆ. ತಮ್ಮ ಸಂಗಾತಿಗೆ ಸಣ್ಣಪುಟ್ಟ ಸುಳ್ಳು ಹೇಳುತ್ತ ಚಿಕ್ಕಪುಟ್ಟ ಮೋಸ ಮಾಡುತ್ತಲೇ ಇರುತ್ತಾರೆ. ಅವರ ಈ ಧೋರಣೆಯನ್ನು ಕೆಲವು ವರ್ತನೆಗಳ ಮೂಲಕ ಪತ್ತೆ ಮಾಡಿ.
ಸಂಗಾತಿಗೆ ಮೋಸ ಮಾಡುವ ಮಹಿಳೆ/ಪುರುಷರು ಸಮಾಜದಲ್ಲಿ ಸಾಕಷ್ಟು ಕಾಣಸಿಗುತ್ತಾರೆ. ಅದಕ್ಕೆ ಅವರದ್ದೇ ಆದ ಕಾರಣಗಳು ಇದ್ದೇ ಇರುತ್ತವೆ ಬಿಡಿ. ಆದರೆ, ಸಂಬಂಧದಲ್ಲಿ ಮೋಸ ಮಾಡುವ ಪರಂಪರೆ ಎಂದಿನಿಂದಲೂ ಇದೆ, ಮುಂದೆಯೂ ಇದ್ದೇ ಇರುತ್ತದೆ. ಯಾರಿಗೇ ಆಗಿರಲಿ, ಇದೊಂಥರ ನೋವಿನ ಸನ್ನಿವೇಶ. ಪರಸ್ಪರ ದೂರವಾಗುವುದು ಯಾರಿಗೂ ಇಷ್ಟವಾಗದ ಸಂಗತಿ, ಆದರೆ ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ದೊಡ್ಡ ಪ್ರಮಾಣದ ಮೋಸ ನಡೆದಾಗ ಸಹಿಸಿಕೊಳ್ಳುವುದರಲ್ಲಿ ಅರ್ಥ ಇರುವುದಿಲ್ಲ. ಆದರೆ, ಸಂಬಂಧದಲ್ಲಿ ಕೆಲವೊಮ್ಮೆ ಬಿರುಕು ಮೂಡಲು ಅಥವಾ ಅಪನಂಬಿಕೆ ತಾಂಡವವಾಡಲು ದೊಡ್ಡ ಪ್ರಮಾಣದ ಮೋಸ ನಡೆಯಬೇಕು ಎಂದಿಲ್ಲ. ಸಂಗಾತಿ ಮಾಡುವ ಸಣ್ಣಪುಟ್ಟ ಕ್ರಿಯೆಗಳು ಅವರ ಕುರಿತು ಅನುಮಾನ ಮೂಡಿಸುವಂತೆ ಇರುತ್ತವೆ. ಇಂತಹ ಸಣ್ಣಪುಟ್ಟ ಮೋಸದ ಕ್ರಿಯೆಗಳನ್ನು ಮೈಕ್ರೋ ಚೀಟಿಂಗ್ ಎಂದು ಕರೆಯಲಾಗುತ್ತದೆ. ಇದೊಂಥರ ದೂರವಾಗುವಷ್ಟು ದೊಡ್ಡ ಮೋಸವಲ್ಲ, ಹತ್ತಿರವಾಗಲು ಏನೋ ಕಿರಿಕಿರಿ, ಅಪನಂಬಿಕೆ. ಇಂತಹ ಸಂಗಾತಿ ನಿಮಗೂ ಇದ್ದರೆ ಹೆಚ್ಚು ಯೋಚಿಸಬೇಡಿ. ಅವರು ನಿಮಗೆ ಚಿಕ್ಕಪುಟ್ಟ ವಿಧಾನದಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವುದನ್ನು ಕೆಲವು ವರ್ತನೆಗಳಲ್ಲಿ ಪತ್ತೆ ಮಾಡಬಹುದು. ಅವರು ಮೈಕ್ರೋ ಚೀಟಿಂಗ್ ಮಾಡುತ್ತಿದ್ದರೆ ಈ ಕೆಲವು ಲಕ್ಷಣಗಳನ್ನು ಅರಿವಿಲ್ಲದೆ ತೋರುತ್ತಾರೆ.
• ಎಕ್ಸ್ (Ex) ಜತೆ ಪದೇ ಪದೇ ಫ್ಲರ್ಟಿಂಗ್ (Flirting)
ಸಾಮಾನ್ಯವಾಗಿ ಮೊದಲ ಲವರ್ (Lover) ಅಥವಾ ಎಕ್ಸ್ ಜತೆ ಎಲ್ಲರಿಗೂ ಸಣ್ಣದೊಂದು ಆಕರ್ಷಣೆ (Attraction) ಹಾಗೆಯೇ ಉಳಿದುಕೊಂಡಿರುತ್ತದೆ. ಅದೆಂಥದ್ದೇ ಸಮಸ್ಯೆಯಾಗಿ ದೂರವಾಗಿದ್ದರೂ ಅವರ ಕುರಿತಾಗಿ ಇರುವ ಆ ಆಕರ್ಷಣೆ ಅವರೊಂದಿಗೆ ಪದೇ ಪದೆ ಸಲಿಗೆಯಿಂದ ವರ್ತಿಸುವಂತೆ ಮಾಡುತ್ತದೆ. ಕೆಲವು ಜನ ತಮ್ಮ ಸಂಗಾತಿ ಜತೆಗಿದ್ದರೂ ಅವರೊಂದಿಗೆ ಅತಿಯಾಗಿ ಸಲುಗೆಯಿಂದ ಇರುವುದು ಕಂಡುಬರುತ್ತದೆ. ಅದು ಮೊಬೈಲ್ ಚಾಟಿಂಗ್ ಮೂಲಕ ಆಗಿರಬಹುದು ಅಥವಾ ಸೋಷಿಯಲ್ ನೆಟ್ ವರ್ಕ್ ನಲ್ಲಿರಬಹುದು. ಹಳೆಯ ಖಾಸಗಿ ನೆನಪುಗಳನ್ನು ಹಂಚಿಕೊಳ್ಳುವುದು, ಭಾವನಾತ್ಮಕವಾಗಿ (Emotional) ಮೆಸೇಜ್ ಮಾಡುವುದು ನಡೆಯುತ್ತದೆ. ನೀವೊಮ್ಮೆ ನಿಮ್ಮ ಸಂಗಾತಿಯ ಅರಿವಿಗೆ ಬಾರದಂತೆ ಇಂತಹ ಕೃತ್ಯ ನಡೆಸುತ್ತಿದ್ದರೆ ನಿಮ್ಮನ್ನೂ ಸಹ ಮೈಕ್ರೋ ಚೀಟರ್ (Micro Cheater) ಎಂದು ಹೇಳಬಹುದು.
• ಸುಳ್ಳು (False) ಹೆಸರಿನಲ್ಲಿ ನಂಬರ್ ಸೇವ್ (Save) ಮಾಡಿಕೊಳ್ಳುವ ಪರಿಪಾಠ
ನಿಮ್ಮ ಸಂಗಾತಿಗೆ (Partner) ತಿಳಿಯಬಾರದೆಂದು ಸುಳ್ಳು ಹೆಸರಿನಲ್ಲಿ ನಂಬರ್ ಸೇವ್ ಮಾಡಿಕೊಳ್ಳುವುದು ಸಹ ಮೈಕ್ರೋ ಚೀಟಿಂಗ್ ಆಗುತ್ತದೆ. ನಿಮ್ಮ ಸಂಗಾತಿ ನಿಮಗೆ ತಿಳಿಯದ ಜನರೊಂದಿಗೆ ಪದೇ ಪದೆ ಮೆಸೇಜ್ ಮಾಡುತ್ತಿರುವುದು ಕಂಡುಬಂದರೆ, ಆ ಹೆಸರನ್ನು ಗುರುತಿಸಲು ನಿಮಗೆ ಸಾಧ್ಯವಿಲ್ಲದೆ ಹೋದರೆ ಎಚ್ಚೆತ್ತುಕೊಳ್ಳಿ. ಅವರ ಬಗ್ಗೆ ಕೇಳಿದರೆ ನಿಮ್ಮ ಸಂಗಾತಿ ಸುಳ್ಳು (Fear) ಹೇಳುತ್ತಿರುವುದು ಅರಿವಿಗೆ ಬಂದರೆ ಆ ನಂಬರ್ ಅನ್ನು ಯಾವಾಗಲಾದರೂ ತೆಗೆದಿಟ್ಟುಕೊಂಡು ನೀವೇ ಖುದ್ದಾಗಿ ಅಥವಾ ಸ್ನೇಹಿತರ ಮೂಲಕ ವಿಚಾರಿಸಬಹುದು. ನಿಮ್ಮ ಸಂಗಾತಿಗೆ ತಿಳಿಯದಂತೆ ಫೋನ್ ಚೆಕ್ ಮಾಡುವುದು ಒಳ್ಳೆಯ ಪದ್ಧತಿ ಅಲ್ಲ, ಆದರೂ ನಿಮ್ಮ ಸೇಫ್ಟಿಗಾಗಿ ಹಾಗೆ ಮಾಡಬಹುದು. ಅದಕ್ಕೂ ಮುನ್ನ ಅವರ ಬಳಿ ನೇರವಾಗಿ ಮಾತನಾಡುವುದು ಉತ್ತಮ.
• ಬೇರೊಬ್ಬರ ಬಗ್ಗೆ ಭಾವನಾತ್ಮಕ ಸಂಬಂಧ (Relationship)
ಪ್ರತಿಯೊಬ್ಬರಿಗೂ ಸ್ನೇಹಿತರಿರುತ್ತಾರೆ, ಸ್ನೇಹ (Friendship) ವಲಯವಿರುತ್ತದೆ. ಅದರಲ್ಲಿ ಸಾಕಷ್ಟು ಪುರುಷರು, ಮಹಿಳೆಯರು ಇರಬಹುದು. ಯಾರೋ ಒಬ್ಬರ ಬಗ್ಗೆ ವಿಶೇಷ ಕಾಳಜಿ, ಪ್ರೀತಿಯೂ ಇರಬಹುದು. ಅದೆಲ್ಲ ಸಹಜ. ಆದರೆ, ಆ ಸಂಬಂಧ ನಿಮಗೆ ತಿಳಿಯಬಾರದು ಎನ್ನುವುದು ಅವರ ಉದ್ದೇಶವಾಗಿದ್ದರೆ ಮೋಸಗಾರರು ಎನಿಸಿಕೊಳ್ಳುತ್ತಾರೆ. ಸಂಗಾತಿಯೊಂದಿಗಿನ ಸಂಬಂಧವೇ ಪರಮೋಚ್ಚ ಸಂಬಂಧ ಎಂದಲ್ಲ. ಆದರೆ, ಇತರರೊಂದಿಗಿನ ಆಪ್ತ ಬಾಂಧವ್ಯ (Close Connection) ನಿಮ್ಮ ಅರಿವಿಗೂ ಇರುವುದು ಉತ್ತಮ. ನಿಮ್ಮಿಂದ ಮುಚ್ಚಿಡಲು ಇಷ್ಟಪಡುತ್ತಾರೆ ಎಂದರೆ ಅವರ ಬಾಂಧವ್ಯ ನಿಮ್ಮ ಅನುಮಾನಕ್ಕೆ ಕಾರಣವಾಗುವಂತಿದೆ ಎಂದರ್ಥ. ಈ ಬಗ್ಗೆಯೂ ನೀವು ನೇರವಾಗಿ ಮಾತನಾಡುವುದು ಉತ್ತಮ ವಿಧಾನ.