
ಒಂದು ಕಾಲ್ದಲ್ಲಿ ಕುಟುಂಬ ಮತ್ತು ಸಂಬಂಧದ ವಿಷ್ಯದಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿದ್ದ ಭಾರತದಲ್ಲಿ ಈಗ ದೊಡ್ಡ ಬದಲಾವಣೆ ಆಗ್ತಿದೆ. ಮಕ್ಕಳು ವಿದ್ಯಾಭ್ಯಾಸ, ಉದ್ಯೋಗ ಅಂತ ಊರು ಬಿಡ್ತಿದ್ದಾರೆ. ಮಕ್ಕಳು ಮನೆಯಿಂದ ಹೊರಗೆ ಹೋಗ್ತಿದ್ದಂತೆ ಇತ್ತ ವಯಸ್ಸಾದ ತಂದೆ – ತಾಯಿ ಮನೆಯಲ್ಲಿ ಒಂಟಿ ಜೀವನ ನಡೆಸುವಂತಾಗಿದೆ. ಹಳ್ಳಿ ಸೇರಿದಂತೆ ಪಟ್ಟಣಗಳಲ್ಲಿ ಒಟ್ಟಿಯಾಗಿ ವಾಸ ಮಾಡ್ತಿರುವ ಭಾರತೀಯರಿಗಾಗಿಯೇ ಈಗ ಹೊಸ ಬ್ಯುಸಿನೆಸ್ ಒಂದು ಶುರುವಾಗಿದೆ.
ಅಲ್ ಜಜೀರಾ ವರದಿಯ ಪ್ರಕಾರ, ಭಾರತದ ಪ್ರಮುಖ ನಗರಗಳಲ್ಲಿ ಇಂತಹ ಸೇವೆ ನೀಡುವ ಹಲವು ಸ್ಟಾರ್ಟ್ಅಪ್ಗಳು ಆರಂಭವಾಗಿವೆ. ಹಣ ಪಡೆದು ಹಿರಿಯರ ಜೊತೆ ಸಮಯ ಕಳೆಯುವುದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರಿಗೆ ಭಾವನಾತ್ಮಕ ಬೆಂಬಲ ನೀಡುವುದು ಈ ಸೇವೆಗಳ ಉದ್ದೇಶ.
ಗುರುಗ್ರಾಮ್ನ 80 ವರ್ಷ ದಾಟಿದ ಸುನೀಲ್ ಬುದ್ಧಿರಾಜ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವರ ಇಬ್ಬರು ಹೆಣ್ಣುಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಹೀಗಾಗಿ ಸುನೀಲ್ ಮತ್ತು ಅವರ ಪತ್ನಿ ಹೊರಗೆ ಹೋಗಬೇಕಾದಾಗ ಅವರ ಜೊತೆಗಿರೋದು 26 ವರ್ಷದ ರೋನಿ ರಾಜು. ಈತ ಅವರ ಬಾಡಿಗೆ ಮೊಮ್ಮಗ. ರೋನಿ ಕೇವಲ ಡೆಲಿವರಿ ಬಾಯ್ ಅಥವಾ ಮನೆ ಕೆಲಸ ಮಾಡುವ ವ್ಯಕ್ತಿಯಲ್ಲ. ವೃತ್ತಿಪರ ಸಮಾಜ ಸೇವಕ. ಹಿರಿಯ ದಂಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಔಷಧಿಗಳ ಬಗ್ಗೆ ಗಮನ ಕೊಡುವುದು, ಅವರ ಜೊತೆ ಇಸ್ಪೀಟ್ ಆಡುವುದು ಮತ್ತು ಅವರ ಮಾತುಗಳನ್ನು ಕೇಳಿಸಿಕೊಳ್ಳುವುದು ಹೀಗೆ ಹಲವು ಕೆಲಸಗಳನ್ನು ಮಾಡುತ್ತಾನೆ.
ರೋನಿಯ ಬಗ್ಗೆ ಮಾತನಾಡುವ ಸುನೀಲ್ ಬುದ್ಧಿರಾಜ, ಮೊದಲ ಭೇಟಿಯಿಂದಲೇ ಆತನ ಜೊತೆ ನನಗೆ ಆತ್ಮೀಯತೆ ಬೆಳೆದಿದೆ. ಆತ ನನ್ನನ್ನು ಶೇ.200ರಷ್ಟು ಅರ್ಥಮಾಡಿಕೊಳ್ಳುತ್ತಾನೆ ಎಂದಿದ್ದಾರೆ.
ಈ ರೀತಿಯ ಸೇವೆ ನೀಡುವ ಸಂಸ್ಥೆಗಳು ಗಂಟೆಗಳ ಲೆಕ್ಕದಲ್ಲಿ ಹಣ ಪಡೆಯುತ್ತವೆ. ಉದಾಹರಣೆಗೆ, ತಿಂಗಳಿಗೆ 10 ಗಂಟೆಗಳ ಸೇವೆ ಬೇಕೆಂದರೆ ಪ್ರತಿ ಗಂಟೆಗೆ 450 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಅದೇ 25 ಗಂಟೆಗಳ ಸೇವೆ ಪಡೆದರೆ ಪ್ರತಿ ಗಂಟೆಗೆ 400 ರೂಪಾಯಿ ನೀಡಬೇಕು. ಇದರಲ್ಲೊಂದು ವಿಶೇಷ ಸೌಲಭ್ಯವೂ ಇದೆ. ಮೊಬೈಲ್ ಡೇಟಾ ರೋಲ್ಓವರ್ ಆಗುವಂತೆ, ಒಂದು ತಿಂಗಳಲ್ಲಿ ಬಳಕೆಯಾಗದೆ ಉಳಿದ ಸೇವೆಯ ಗಂಟೆಗಳನ್ನು ಮುಂದಿನ ತಿಂಗಳಿಗೆ ವರ್ಗಾಯಿಸಬಹುದು. ಆದರೆ ಸದ್ಯಕ್ಕೆ ಈ ಸೇವೆ ಹೆಚ್ಚಾಗಿ ಆರ್ಥಿಕವಾಗಿ ಅನುಕೂಲವಾಗಿರುವ ನಗರ ಪ್ರದೇಶದ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ.
ಹೆಚ್ಚಾಗಿದೆ ಒಂಟಿತನದ ಸಮಸ್ಯೆ
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಮತ್ತು IIPS ಪ್ರಕಟಿಸಿರುವ 'ಇಂಡಿಯಾ ಏಜಿಂಗ್ ರಿಪೋರ್ಟ್ 2023'ರ ಪ್ರಕಾರ, 2022ರಲ್ಲಿ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.10.5ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದರು. 2050ರ ವೇಳೆಗೆ ಈ ಪ್ರಮಾಣ ಶೇ.21ಕ್ಕೆ ಏರಿಕೆಯಾಗುವ ಅಂದಾಜಿದೆ. ಅಂದರೆ, ಆಗ ಭಾರತದಲ್ಲಿ ಸುಮಾರು 34.7 ಕೋಟಿ ಹಿರಿಯ ನಾಗರಿಕರು ಇರಲಿದ್ದಾರೆ. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, 60 ವರ್ಷ ಮೇಲ್ಪಟ್ಟವರ ಪೈಕಿ ಒಂಟಿಯಾಗಿ ವಾಸಿಸುವವರಲ್ಲಿ ಶೇ.37ರಷ್ಟು ಮಂದಿ ಮಧ್ಯಮ ಅಥವಾ ತೀವ್ರ ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ.
ಹಿರಿಯರ ಆರೈಕೆಗೆ ಸಂಬಂಧಿಸಿದ ಉದ್ಯಮವೂ ಇದೇ ಕಾರಣಕ್ಕೆ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಎಲ್ಡರ್ ಕೇರ್ ಮಾರುಕಟ್ಟೆ ಈಗ ಸುಮಾರು 7 ಬಿಲಿಯನ್ ಡಾಲರ್, ಅಂದರೆ ಸುಮಾರು 58,000 ಕೋಟಿ ರೂಪಾಯಿ ಮೌಲ್ಯದ ಉದ್ಯಮವಾಗಿ ಬೆಳೆದಿದೆ. ದಿವಂಗತ ಉದ್ಯಮಿ ರತನ್ ಟಾಟಾ ಕೂಡ 2022ರಲ್ಲಿ ಮುಂಬೈ ಮೂಲದ ಹಿರಿಯರ ಆರೈಕೆ ಸ್ಟಾರ್ಟ್ಅಪ್ ಒಂದರಲ್ಲಿ ಹೂಡಿಕೆ ಮಾಡಿದ್ದರು.
ಇಂದಿನ ಜೀವನಶೈಲಿ ಮತ್ತು ಉದ್ಯೋಗದ ಅನಿವಾರ್ಯತೆಗಳಿಂದ ಮಕ್ಕಳು ದೂರದ ಊರುಗಳಲ್ಲಿ ನೆಲೆಸಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಹಿರಿಯರಿಗೆ ಸುರಕ್ಷತೆ, ಮಾತನಾಡಲು ಒಬ್ಬರು ಮತ್ತು ಕಾಳಜಿ ವಹಿಸುವ ವ್ಯಕ್ತಿಯ ಅಗತ್ಯವಿರುತ್ತದೆ. ಅದನ್ನು ಈ ಸೇವೆಗಳು ಒದಗಿಸುತ್ತಿವೆ. ಹಣ ಕೊಟ್ಟು ಪಡೆಯುವ ಸೇವೆಯಾದರೂ, ದಿನದ ಕೊನೆಯಲ್ಲಿ ಇದು ಕೇವಲ ಉದ್ಯೋಗವಾಗಿ ಉಳಿಯುವುದಿಲ್ಲ. ತಮ್ಮ ಆರೋಗ್ಯದ ಸಮಸ್ಯೆಗಳನ್ನು ಹೇಳಿಕೊಳ್ಳಲು, ಮನಸ್ಸಿನ ನೋವನ್ನು ಹಂಚಿಕೊಳ್ಳಲು ಮತ್ತು ಒಂದಷ್ಟು ಹೊತ್ತು ಮನಬಿಚ್ಚಿ ಮಾತನಾಡಲು ಹಿರಿಯರಿಗೆ ಒಬ್ಬರು ಸಿಗುತ್ತಾರೆ ಅನ್ನೋದು ಈ ಸಂಸ್ಥೆಯ ಹೇಳಿಕೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.