Personality Tips: ನೀವು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ರೆ ಜನ ನಿಮ್ಮನ್ನು ಹೀಗೆಲ್ಲ ಕಾಣೋದು ಸಹಜ!

By Suvarna News  |  First Published Aug 24, 2023, 5:15 PM IST

ಸುತ್ತಮುತ್ತ ಹಲವು ರೀತಿಯ ವಿಶಿಷ್ಟ ಜನರಿರುತ್ತಾರೆ. ಅವರೆದುರು ಏನಾದರೂ ಮಾತನಾಡಲು ಸಾಧ್ಯವಾಗುವುದಿಲ್ಲ. ಅವರ ಕುರಿತ ಗೌರವ, ಭಕ್ತಿ, ಅನಾದರ ಅಥವಾ ಭಯವೂ ಇದಕ್ಕೆ ಕಾರಣವಾಗಿರಬಹುದು. ಅವರ ವ್ಯಕ್ತಿತ್ವ ವಿಭಿನ್ನವಾಗಿದ್ದು, ಅವರೊಂದಿಗೆ ಹೊಂದಾಣಿಕೆಯಾಗದಿರಬಹುದು. ನೀವೂ ಅಂತಹ ವ್ಯಕ್ತಿತ್ವ ಹೊಂದಿದ್ದರೆ ಜನ ನಿಮ್ಮೊಂದಿಗೆ ಹೇಗೆ ಇರುತ್ತಾರೆ ಎನ್ನುವುದನ್ನು ಗಮನಿಸಿ.


ಕೆಲವರ ವ್ಯಕ್ತಿತ್ವ ವಿಶಿಷ್ಟವಾಗಿರುತ್ತದೆ. ವಿಶಿಷ್ಟ ಚೈತನ್ಯಗಳಿಂದಲೇ ಜಗತ್ತು ಹೆಚ್ಚು ವಿಶೇಷಭರಿತವಾಗಿದೆ. ಇಂತಹ ವ್ಯಕ್ತಿತ್ವಗಳು ಕ್ರಿಯಾಶೀಲವಾಗಿರುವ ಜತೆಗೆ, ಪ್ರಪಂಚದ ಕುರಿತ ನೂತನ ದೃಷ್ಟಿಕೋನಕ್ಕೆ ವಿಶೇಷ ಕೊಡುಗೆ ನೀಡುತ್ತವೆ. ಹಾಗೆ ನೋಡಿದರೆ, ಪ್ರತಿಯೊಬ್ಬರೂ ವಿಭಿನ್ನ ವ್ಯಕ್ತಿತ್ವವನ್ನೇ ಹೊಂದಿರುತ್ತೇವೆ. ಆದರೂ ಕೆಲವರು ಮೇಲ್ನೋಟಕ್ಕೆ “ವಿಚಿತ್ರ’ ಎಂಬ ಭಾವನೆ ಮೂಡುವಷ್ಟು ವಿಶೇಷವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಬುದ್ಧಿಜೀವಿಗಳು, ಕನಸುಗಾರರು, ಹೋರಾಟಗಾರರು, ಛಲವಂತರು ಯಾರೇ ಆಗಿರಬಹುದು. ಇಂಥವರಿಂದ ಪ್ರಪಂಚವೂ ವಿಶಿಷ್ಟವಾಗಿದೆ ಎನ್ನಬಹುದು. ನೀವೂ ಸಹ ಹೀಗೆಯೇ ವಿಶಿಷ್ಟ ವ್ಯಕ್ತಿತ್ವ ಹೊಂದಿದವರಾಗಿದ್ದರೆ ಜನರು ನಿಮ್ಮನ್ನು ಬಹಳಷ್ಟು ಬಾರಿ ವಿಚಿತ್ರವಾಗಿ ಪರಿಗಣಿಸುವುದು ಗಮನಕ್ಕೆ ಬಂದಿರಬಹುದು. ನಿಮ್ಮನ್ನು ಮಾತನಾಡಿಸಲು ಅಂಜಬಹುದು, ನಿಮ್ಮನ್ನು ನೋಡಿ ಏನೋ ಇರಿಸುಮುರಿಸಿನ ಭಾವನೆ ಅನುಭವಿಸಿರಬಹುದು.

ಒಮ್ಮೆ ಭೇಟಿಯಾದ ಬಳಿಕ ಮತ್ತೆ ಭೇಟಿಯಾಗಲು ಹಿಂದೇಟು ಹಾಕಿರಬಹುದು. ಏಕೆಂದರೆ, ನಿಮ್ಮ ವ್ಯಕ್ತಿತ್ವ ಹಾಗಿರುತ್ತದೆ. ವಿಭಿನ್ನ ವ್ಯಕ್ತಿತ್ವ ನಿಮ್ಮದಾಗಿದ್ದಾಗ ಜನ ನಿಮ್ಮ ಕುರಿತು ಭಯದ ಭಾವನೆಯನ್ನೂ ಹೊಂದಿರುತ್ತಾರೆ. ಯಾರಾದರೂ  ನಿಮ್ಮನ್ನು ಕಂಡು ಭಯಪಡುತ್ತಾರೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು. ಅದನ್ನು ಅರಿತುಕೊಂಡಾಗ ವ್ಯಕ್ತಿತ್ವ ಸುಧಾರಣೆ ಅಥವಾ ಹೆಚ್ಚಿನ ಸಂಪರ್ಕ ಸಾಧಿಸಲು ಅನುಕೂಲವಾಗಬಹುದು.

Tap to resize

Latest Videos

•    ನಿಮ್ಮ ಜತೆ ಇರಿಸುಮುರಿಸು (Embarrass)
ಸಾಮಾನ್ಯ ಸಾಮಾಜಿಕ ಜೀವನಕ್ಕೆ (Social Norms) ವಿರುದ್ಧವಾದ ಕಾರ್ಯಗಳನ್ನು ನೀವು ಮಾಡುತ್ತಿದ್ದರೆ ಜನ ನಿಮ್ಮೊಂದಿಗೆ ಗುರುತಿಸಿಕೊಳ್ಳಲು ಅಥವಾ ನಿಮ್ಮ ಜತೆಗೆ ಹೆಚ್ಚು ಸಮಯ ಒಡನಾಡಲು ಇರಿಸುಮುರಿಸು ಮಾಡಿಕೊಳ್ಳಬಹುದು. ಜನರ ಈ ರೀತಿ ವರ್ತನೆ (Behavior) ತೋರಲು ನೀವು ಕೆಟ್ಟ ಕೆಲಸವನ್ನೇ ಮಾಡಬೇಕು ಎಂದೇನಿಲ್ಲ. ಅಸಾಂಪ್ರದಾಯಿಕ (Unconventional) ಮನಸ್ಸುಗಳೊಂದಿಗೆ ಗುರುತಿಸಿಕೊಳ್ಳುವ ಹಿಂಜರಿಕೆಯಷ್ಟೆ. 

Personality Tips: ಸ್ಟ್ರಾಂಗ್ ಲೇಡೀಸ್ ಇಂತಹ ವಿಚಾರಗಳಿಗೆ ಎಂದಿಗೂ ರಾಜಿ ಮಾಡ್ಕೊಳೋದಿಲ್ಲ

•    ಅಂದಾಜಿಸಲು ಸಾಧ್ಯವಾಗದ (Unpredictable) ನಡವಳಿಕೆ
ಯಾರಾದರೂ ನಿಮ್ಮ ಬಳಿ ಒಂದು ರೀತಿ ಹೇಳಿ ಮತ್ತೊಬ್ಬರ ಬಳಿ ಇನ್ನೊಂದು ರೀತಿಯಲ್ಲಿ ತೋರ್ಪಡಿಸಿಕೊಂಡರೆ ಅಚ್ಚರಿಯಾಗುತ್ತದೆಯಲ್ಲವೇ? ಇದೂ ಸಹ ನಿಮ್ಮ ಕುರಿತು ಅವರಿಗಿರುವ ಭಯವನ್ನು (Fear) ತೋರಿಸುತ್ತದೆ. ನೀವು ಕೇಳಿದ್ದಕ್ಕೆಲ್ಲ ಕೆಲವರು “ಹೂಂ’ ಎನ್ನುತ್ತಾರೆ. ಅವರು ತಮ್ಮ ಭಾವನೆಗಳನ್ನು ಎಂದಿಗೂ ನಿಮ್ಮ ಬಳಿ ಮುಕ್ತವಾಗಿ ಹೇಳುವುದೇ ಇಲ್ಲ. ನಿಮ್ಮ ಜತೆಯ ಒಡನಾಟದಲ್ಲಿ ಅವರು ಕಂಫರ್ಟ್ (Comfort) ಆಗಿರುವುದಿಲ್ಲ. 

•    ಅವಾಯ್ಡ್ (Avoid) ಮಾಡಬಹುದು
ಜನ ನಿಮ್ಮನ್ನು ನೋಡಿ ಭಯಪಡುತ್ತಾರೆ ಎಂದರೆ ಅವರು ನಿಮ್ಮೊಂದಿಗೆ ಒಡನಾಡುವುದನ್ನು ಸಹ ಅವಾಯ್ಡ್ ಮಾಡುತ್ತಾರೆ. ನೀವು ಇರುವಾಗ ಮುಕ್ತವಾಗಿರಲು (Open) ಅವರಿಗೆ ಸಾಧ್ಯವಾಗುವುದಿಲ್ಲ. ಯಾರಾದರೂ ಮೂರ್ನಾಲ್ಕು ಜನ ಮಾತನಾಡುತ್ತಿರುವಾಗ ನೀವು ಅಲ್ಲಿಗೆ ಹೋದರೆ ಮಾತು ನಿಲ್ಲಿಸುವುದು ಸಹಜ. ಆದರೆ, ಅಲ್ಲಿಂದ ಒಬ್ಬೊಬ್ಬರಾಗಿ ಕಳಚಿಕೊಳ್ಳುತ್ತಾರೆ ಎಂದರೆ ನಿಮ್ಮ ಬಗ್ಗೆ ಎಲ್ಲರಲ್ಲೂ ಒಂದು ರೀತಿಯ ಹಿಂಜರಿಕೆಯಿದೆ ಎಂದರ್ಥ. 

•    ನೀವು ಹೇಳಿದ್ದಕ್ಕೆಲ್ಲ ವಿರುದ್ಧ (Opposite)
ಇನ್ನೂ ಕೆಲ ಜನರಿರುತ್ತಾರೆ. ಅವರು ನೀವು ಏನೇ ಹೇಳಿದರೂ ಅದಕ್ಕೆ ನೋ ಎಂದೇ ಹೇಳುತ್ತಾರೆ. ವಿರುದ್ಧವಾದ ಅಭಿಪ್ರಾಯವನ್ನೇ ಮಂಡಿಸುತ್ತಾರೆ. ನಿಮ್ಮ ವ್ಯಕ್ತಿತ್ವ ವಿಶಿಷ್ಟವಾಗಿದ್ದಾಗ (Unique Personality) ಅಥವಾ ಅಸಾಂಪ್ರದಾಯಿಕವಾಗಿದ್ದಾಗ ಜನರಿಗೆ ಅದನ್ನು ಒಪ್ಪಿಕೊಳ್ಳಲು, ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ನಿಮ್ಮ ಅಭಿಪ್ರಾಯಗಳಿಗೆ ನೆಗೆಟಿವ್ ಆಗಿಯೇ ಪ್ರತಿಕ್ರಿಯಿಸುತ್ತಾರೆ. 

Personality Tips: ಯಶಸ್ವಿ ಜನ ತಮ್ಮ ಫ್ರೀ ಟೈಮನ್ನ ಕಳೆಯೋದೇ ಹೀಗೆ!

•    ಏಕಾಏಕಿ ಸ್ತಬ್ಧ
ನೀವು ಎಲ್ಲಾದರೂ ಹೋದಾಗ ಏಕಾಏಕಿ ಎಲ್ಲವೂ ಸ್ತಬ್ಧವಾದ ಭಾವನೆ ಮೂಡುತ್ತದೆಯೇ? ಅಲ್ಲಿರುವ ಜನರೆಲ್ಲ ಎಚ್ಚರಿಕೆಯಿಂದ ವರ್ತಿಸುವಂತೆ ಭಾಸವಾಗುತ್ತದೆಯೇ? ನಿಮ್ಮ ಸುತ್ತ ಅವರೆಲ್ಲ ಐಸ್ ನಂತೆ ತಣ್ಣಗೆ (Cold) ಇರುವಂತೆ ತೋರುತ್ತದೆಯೇ? ನಿಮ್ಮ ವ್ಯಕ್ತಿತ್ವವೇ ಅವರ ಈ ನಡವಳಿಕೆಗೆ ಕಾರಣವಾಗಿರಬಹುದು. 

ಪ್ರಪಂಚದಲ್ಲಿ ವಿಭಿನ್ನವಾಗಿರುವುದು ತಪ್ಪೇನೂ ಇಲ್ಲ. ಜನರ ವರ್ತನೆ ಆಧರಿಸಿ ನಿಮ್ಮ ವಿಶಿಷ್ಟತೆಗಳನ್ನು ನೀವು ಕಳೆದುಕೊಳ್ಳಬೇಕಾಗಿಲ್ಲ. ಆದರೆ, ಜನ ಯಾಕೆ ಹೀಗೆ ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಉತ್ತಮ ಸಂವಹನಕ್ಕೆ ಬೇಕಾದ ಕೌಶಲ ರೂಢಿಸಿಕೊಳ್ಳುವುದು ಉತ್ತಮ.

click me!