
ಪ್ರೀತಿಪಾತ್ರರು ಕೈಕೊಟ್ಟರೆ... ಎನ್ನುವ ಅಭದ್ರತೆ ಒಮ್ಮೆಯಾದರೂ ಎಲ್ಲರನ್ನೂ ಕಾಡುತ್ತದೆ. ಆದರೆ, ಈ ಭಯವೇ ದೊಡ್ಡದಾದರೆ ಸಾರ್ಥಕ ಬಾಂಧವ್ಯವನ್ನು ಹೊಂದಲು ಬಹುದೊಡ್ಡ ತಡೆಯಾಗುತ್ತದೆ. ಜೀವನದಲ್ಲಿ ಯಾರೊಂದಿಗೂ ಅರ್ಥಪೂರ್ಣ ಸಂಬಂಧ ಏರ್ಪಡುವುದು ಸಾಧ್ಯವೇ ಆಗುವುದಿಲ್ಲ. ಸಮಸ್ಯೆಯಾಗುವ ಮಟ್ಟಿಗೆ ಪ್ರೀತಿಯ ಕುರಿತು ಭಯ ಹಾಗೂ ಅಭದ್ರತೆ ಇರುವ ಮಾನಸಿಕ ಸ್ಥಿತಿಯನ್ನು ಮನೋಶಾಸ್ತ್ರದಲ್ಲಿ ಫಿಲೋಫೋಬಿಯಾ ಎನ್ನಲಾಗುತ್ತದೆ. ಬಹುವಾಗಿ ನೋವು ನೀಡಿದ ಬ್ರೇಕಪ್, ವಿಚ್ಛೇದನ, ಸಂಬಂಧದಲ್ಲಾದ ತಿರಸ್ಕಾರ ಹಾಗೂ ಬಾಲ್ಯದಲ್ಲಾಗಿರುವ ಕೆಲವು ಅನುಭವಗಳು ಈ ಸಮಸ್ಯೆಗೆ ಕಾರಣವಾಗಬಲ್ಲವು. ಹಾಗೆ ನೋಡಿದರೆ, ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಪ್ರೀತಿಯ ಕುರಿತು ಕಿಂಚಿತ್ತು ಮಟ್ಟದಲ್ಲಾದರೂ ಅಭದ್ರತೆ ಇರುತ್ತದೆ. ಆದರೆ, ಇದು ಸಮಸ್ಯೆ ಎನ್ನಿಸುವ ಮಟ್ಟಿಗೆ ಇರದ್ದಾಗ ಅದರ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಮನುಷ್ಯ ಪ್ರಬುದ್ಧನಾದ ಬಳಿಕ ಅರ್ಥಪೂರ್ಣ ಸಂಬಂಧಗಳು ಸಹಜವಾಗಿ ಏರ್ಪಡುತ್ತವೆ, ಅವು ಸ್ನೇಹ, ಪ್ರೀತಿ ಯಾವುದೇ ಇರಬಹುದು. ಅಂಥದ್ದೊಂದು ಸಂಬಂಧ ಹೊಂದಲು ಸಾಧ್ಯವೇ ಇಲ್ಲದಂತೆ ಮಾಡಿಬಿಡುವ ಈ ಸಮಸ್ಯೆಯಿಂದ ವ್ಯಕ್ತಿ ನಿಜಕ್ಕೂ ಏಕಾಂಗಿಯಾಗುತ್ತಾನೆ. ನಿಮಗೂ ಈ ಸಮಸ್ಯೆ ಇದ್ದರೆ ಆರಂಭದಲ್ಲೇ ಗುರುತಿಸಿಕೊಂಡು ನಿಭಾಯಿಸುವುದು ಸೂಕ್ತ. ಹೀಗೆಲ್ಲ ಎಚ್ಚರಿಕೆ ವಹಿಸಿದರೆ ಫಿಲೋಫೋಬಿಯಾ ನಿಮ್ಮನ್ನು ಕಾಡದಂತೆ ನೋಡಿಕೊಳ್ಳಬಹುದು.
ಪ್ರೀತಿ (Love) ಅಥವಾ ಸಂಬಂಧದಿಂದ (Relationship) ತಿರಸ್ಕೃತರಾಗುವ (Reject) ಭಯದಿಂದ ಕೂಡಿರುವ ಅನೇಕರನ್ನು ನಮ್ಮ ನಡುವೆಯೂ ಕಾಣಬಹುದು. ಅಂಥವರು ಸಾಮಾನ್ಯವಾಗಿ ಮದುವೆಯಾಗುವುದಿಲ್ಲ. ತಮ್ಮ ಬಳಿ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ಈ ಸಮಸ್ಯೆಯ ಪ್ರಾಥಮಿಕ ಲಕ್ಷಣಗಳನ್ನು ಹೀಗೆ ಗುರುತಿಸಬಹುದು. ಮದುವೆಯ ಸುದ್ದಿ ಎತ್ತಿದಾಕ್ಷಣ ವಿಪರೀತವಾಗಿ ಉದ್ವೇಗ ಆಗಬಹುದು, ಆತಂಕ (Anxiousness) ಆಗಬಹುದು. ಯಾರಾದರೂ ಪ್ರೊಪೋಸ್ ಮಾಡಿದಾಗ ವಿನಾಕಾರಣ ಉದ್ವೇಗಭರಿತರಾಗಬಹುದು. ನಿಮ್ಮಲ್ಲಿ ಅವರ ಬಗ್ಗೆ ಪ್ರೀತಿ ಇದ್ದರೂ ಅನುಮಾನಭರಿತವಾಗಿ ಕಠೋರವಾಗಿ ವರ್ತಿಸಬಹುದು. ಇಂತಹ ಲಕ್ಷಣಗಳು ನಿಮ್ಮಲ್ಲೂ ಇದ್ದರೆ ಕೆಲವು ಮಾರ್ಗಗಳ ಮೂಲಕ ನಿವಾರಣೆ ಮಾಡಿಕೊಳ್ಳಿ.
ಹುಡುಗೀರು ಫಸ್ಟ್ ನೈಟ್ ಬಗ್ಗೆ ಹೀಗೆಲ್ಲಾ ಯೋಚಿಸುತ್ತಾರಂತೆ!
• ಮೂಲಕಾರಣ (Root Cause) ಗುರುತಿಸಿಕೊಳ್ಳಿ
ಪ್ರೀತಿಯ ಬಗ್ಗೆ ಭಯ (Philophobia) ಕಾಡುತ್ತಿದ್ದರೆ ಯಾಕಾಗಿ ಹೀಗಾಗುತ್ತಿದೆ ಎನ್ನುವುದನ್ನು ವಾಸ್ತವದ ನೆಲೆಗಟ್ಟಿನಲ್ಲಿ ಯೋಚನೆ ಮಾಡಿ. ಭಯಕ್ಕೆ (Fear) ಕಾರಣವೇನು ಎಂದು ಗುರುತಿಸಿ. ಹಿಂದಿನ ಅನುಭವಗಳಿಂದ ಹೀಗಾಗುತ್ತಿದ್ದರೆ ಅದನ್ನು ಮೆಟ್ಟಿ ನಿಲ್ಲಲು ಯತ್ನಿಸಿ. ಯಾವುದೇ ಸಂಬಂಧದ ಧನಾತ್ಮಕ (Positive) ಅಂಶಗಳಿಗಷ್ಟೇ ಗಮನ ನೀಡಿ. ದೀರ್ಘಕಾಲದಿಂದಲೂ ನೀವು ಸ್ನೇಹ, ಪ್ರೀತಿಗೆ ಹಿಂದೇಟು ಹಾಕುತ್ತಿದ್ದರೆ ಅದನ್ನು ಮೀರಲು ಇದು ಸಕಾಲ ಎಂದು ಭಾವಿಸಿ.
• ನಿಮ್ಮ ಭಾವನೆಗಳನ್ನು ಅರ್ಥೈಸಿಕೊಳ್ಳಿ (Know Your Feeling)
ನಿಮ್ಮ ಭಯಕ್ಕೆ ಕಾರಣವೇನು ಎನ್ನುವುದನ್ನು ಗುರುತಿಸಿಕೊಂಡ ಬಳಿಕ ಭಾವನೆಗಳನ್ನು ಅರಿತುಕೊಳ್ಳಿ. ನಿಮ್ಮ ಬಗ್ಗೆಯೇ ನಿಮಗೆ ಹಿಂಜರಿಕೆ ಇರುವುದನ್ನು ಅರ್ಥ ಮಾಡಿಕೊಂಡು, ನಿಮ್ಮ ಬಗ್ಗೆ ವಿಶ್ವಾಸ ಮೂಡಿಸಿಕೊಳ್ಳಿ. ಪ್ರೀತಿಯ ವಿಚಾರದಲ್ಲಿ ಅಪನಂಬಿಕೆ, ಅಭದ್ರತೆ ಇರುವುದು ನಿಮಗೊಬ್ಬರಿಗೇ ಅಲ್ಲ, ಎಲ್ಲರಿಗೂ ಸಾಮಾನ್ಯವಾಗಿ ಇದ್ದೇ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ. ನಿಮಗೆ ಇಷ್ಟವಾಗುವವರ ಜತೆ ಮಾತಾಡಿ, ಭಯದ ಕುರಿತು ಚರ್ಚೆ ಮಾಡಿ, ನಿಮ್ಮ ನಿಲುವನ್ನು ವಿಮರ್ಶಿಸಿಕೊಳ್ಳಿ.
• ನಿಮ್ಮ ಬಗ್ಗೆಯೇ ಕಠೋರ (Harsh) ನಿಲುವು ಬೇಡ
ಪ್ರೀತಿಯ ಕುರಿತಾಗಿ ಭಯ ಇರುವ ಸಮಯದಲ್ಲಿ ಯಾರೊಂದಿಗಾದರೂ ಮುಕ್ತವಾಗಿರುವುದು ಕಷ್ಟವಾಗುತ್ತದೆ. ಆ ಸಮಯದಲ್ಲಿ ನಿಮ್ಮ ಬಗ್ಗೆಯೇ ನಿಮಗೆ ಅಸಹ್ಯ ಎನಿಸಬಹುದು. ನಿಮ್ಮ ಬಗ್ಗೆಯೇ ಕಠೋರವಾಗಿ ವರ್ತಿಸಿಕೊಳ್ಳಬಹುದು. ನಿಮಗೆ ಯಾರಲ್ಲಿ ನಂಬಿಕೆ ಇದೆಯೋ ಅವರ ಬಗ್ಗೆ ಮುಕ್ತವಾಗಿ ಮಾತನಾಡುವುದು ಭಾರೀ ಮುಖ್ಯ. ಇದಕ್ಕೆ ಆಪ್ತಸಮಾಲೋಚಕರಲ್ಲಿ ಮಾತನಾಡಬಹುದು.
ಮಾನ್ಸೂನ್ ವೆಡ್ಡಿಂಗ್‌ಗೆ ಇವು ಬೆಸ್ಟ್ ಡೆಸ್ಟಿನೇಷನ್ಸ್
• ನಿಮ್ಮ ಬಗ್ಗೆ ವಿಶ್ವಾಸವಿರಲಿ (Trust)
ಮದುವೆ ಎಂದಾಕ್ಷಣ ಹಾರಾಡುವವರು, ದೂರ ಸರಿಯುವವರು ನೀವಾಗಿದ್ದರೆ ಆ ಮನಸ್ಥಿತಿಯನ್ನು ಏಕಾಏಕಿ ಬದಲಿಸಿಕೊಳ್ಳುವುದು ಕಷ್ಟ. ಹೀಗಾಗಿ, ನಿಧಾನವಾಗಿ ಈ ಮನಸ್ಥಿತಿ ಬದಲಿಸಿಕೊಳ್ಳುವ ಬಗ್ಗೆ ವಿಶ್ವಾಸ ಹೊಂದಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.