
ಇಂದು ಸಂಬಂಧಗಳಿಗೆ ಬೆಲೆ ಇಲ್ವೇನೋ ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಬಂದು ತಲುಪಿದೆ. ಎಲ್ಲಿ ನೋಡಿದರೂ ಕೊಲೆ, ಸುಲಿಗೆ, ಪತಿಯಿಂದ ಪತ್ನಿಯ ಹತ್ಯೆ, ಪತ್ನಿಯೇ ಪತಿಯನ್ನು ಸಾಯಿಸುವ ಕೃತ್ಯ ನಡೆಯುತ್ತಲೇ ಇದೆ. ಮೊನ್ನೆಯಷ್ಟೇ ಮಧ್ಯಪ್ರದೇಶದ ಇಂದೋರ್ನ ರಾಜವಂಶಿ ದಂಪತಿಯ ಘನಘೋರ ಕಥೆ ಕೇಳಿದ ಮೇಲೆ ಗಂಡು ಮಕ್ಕಳು ತಮಗೆ ಮದುವೆಯಾಗದಿದ್ದರೂ ಚಿಂತೆಯಿಲ್ಲ, ಹೆಣ್ಣಿನ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿಬರುತ್ತಿವೆ. ಮದುವೆ ಇಷ್ಟ ಇಲ್ಲ ಎಂದೂ ಹೇಳದೇ ಮದುವೆಯಾದ ಮೇಲೆ ಗಂಡನನ್ನು ಹನಿಮೂನ್ಗೆ ಕರೆದುಕೊಂಡು ಹೋಗಿ ಅಲ್ಲಿ ಲವರ್ ಜೊತೆ ಸೇರಿ ಗಂಡನನ್ನು ಸಾಯಿಸಿದ್ದಾಳೆ ಈ ಹಂತಕಿ. ಇದೇ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಒಂದೋ ಪತಿ ಇಂಥ ಕೃತ್ಯ ಮಾಡಿದರೆ, ಇನ್ನೊಂದೆಡೆ ಪತ್ನಿಯೇ ಹಂತಕಿಯಾಗುತ್ತಿದ್ದಾಳೆ. ಇಂಥ ಘಟನೆಗಳನ್ನೆಲ್ಲಾ ನೋಡಿದಾಗ ಅಬ್ಬಬ್ಬಾ ಎನ್ನಿಸುವುದು ಉಂಟು. ಎಲ್ಲಿಗೆ ಹೋಗಿ ಮುಟ್ಟುತ್ತೆ ನಮ್ಮ ಸಮಾಜ ಎಂದು ಹೇಳುವವರೇ ಎಲ್ಲಾ.
ಆದರೆ ಕಾಲ ಏನೂ ಬದಲಾಗಿಲ್ಲ. ಅಂದೂ ಇಂಥ ಘಟನೆಗಳು ನಡೆಯುತ್ತಲೇ ಇದ್ದವು, ಇಂದೂ ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ... ಇದೇ ಸತ್ಯ. ಹಿಂದೆ ಈಗಿನಷ್ಟು ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಇಲ್ಲದ ಕಾರಣದಿಂದ ಇಂಥ ಘಟನೆಗಳು ಟಿವಿಯಲ್ಲಿ ಬಂದು ಕಣ್ಮರೆಯಾಗುತ್ತಿದ್ದವು. ಟಿವಿ ಚಾನೆಲ್ಗಳೂ ಇಂದಿನ ಹಾಗೆ ಇರದ ಕಾರಣ ವಿಷಯಗಳು ಒಂದೆರಡು ದಿನಗಳಲ್ಲಿಯೇ ತೆರೆಮರೆಯಿಂದ ಸರಿದು ಹೋಗುತ್ತಿದ್ದವು. ಆದರೆ ಇಂದು ಆ ಘಟನೆಗಳು ಟಿವಿ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಿಂದ ಹೆಚ್ಚು ಹೆಚ್ಚು ಪ್ರಚಾರ ಪಡೆಯುತ್ತಿವೆ ಅಷ್ಟೇ. ಇದು ಪಾಪಿಗಳ ಬಗ್ಗೆ ಹೇಳಿದ್ದಾದರೆ, ಅದೇ ಇನ್ನೊಂದೆಡೆ, ಒಳ್ಳೆತನವೂ ಇದ್ದೇ ಇದೆ. ಸುಂದರ ದಾಂಪತ್ಯದ ಉದಾಹರಣೆಗಳೂ ಸಾಕಷ್ಟಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಅದರಲ್ಲಿಯೂ ಹೆಚ್ಚಾಗಿ ವನಿತೆಯರಿಂದ ಭಾರಿ ಶ್ಲಾಘನೆಗೆ ಒಳಗಾಗಿದೆ.
ಇದರಲ್ಲಿ, ಮಹಿಳೆಯೊಬ್ಬಳನ್ನು ಹೆರಿಗೆಗೆಂದು ಹೆರಿಗೆ ಕೋಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆಕೆಯ ಜೊತೆ ಅವಳ ಅಮ್ಮನೋ, ಅತ್ತೆಯೊ ಇದ್ದಾರೆ. ಆದರೆ ಹೊರಗಡೆ ಇರುವ ಪತಿ ಮಾತ್ರ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಈಗ ಅಳುವುದನ್ನು ನೋಡಿದರೆ ಏನೋ ಆವಾಂತರವಾಗಿದೆ, ಆಸ್ಪತ್ರೆಯಲ್ಲಿ ಯಾರಿಗೋ ಏನೋ ಆಗಬಾರದ್ದು ಆಗಿಹೋಗಿದೆ ಎಂದುಕೊಳ್ಳಬೇಕು, ಹಾಗೆ ಅಳುತ್ತಿದ್ದಾನೆ. ಆದರೆ ಆತ ಅಳುತ್ತಿರುವುದು ಅದಕ್ಕಲ್ಲ. ಹೆರಿಗೆಯ ಸಮಯದಲ್ಲಿ ಪತ್ನಿ ಅನುಭವಿಸುವ ನೋವು ಆತನನ್ನು ಹಿಂಡಿ ಹಿಪ್ಪೆ ಮಾಡಿದೆ. ಹೆರಿಗೆ ತನಗೇ ಆಗುತ್ತಿರುವಂತೆ ಆತನ ಮನಸ್ಸು ದುಗುಡದಿಂದ ಕೂಡಿದೆ. ಬಹುಶಃ ಪತ್ನಿಗೆ ಸಿಸರಿಯನ್ ಎಂದು ವೈದ್ಯರು ಹೇಳಿರೋ ಕಾರಣ, ಏಳು ಸುತ್ತಿನ ಹೊಲಿಗೆ ಪತ್ನಿಗೆ ಹಾಕಿದರೆ ಆಕೆ ಹೇಗೆ ತಡೆದುಕೊಳ್ಳುತ್ತಾಳೆ ಎಂದು ಅಮ್ಮನ ಬಳಿ ಕೇಳುತ್ತಲೇ ಅಳುತ್ತಿದ್ದಾನೆ ಈ ಪತಿ.
ಅಮ್ಮ ಇದೆಲ್ಲಾ ಮಾಮೂಲು ಎಂದು ಆತನನ್ನು ಸಮಾಧಾನ ಮಾಡಲು ನೋಡಿದರೂ ಆತನ ದುಃಖ ಕಡಿಮೆಯಾಗುತ್ತಿಲ್ಲ. ಪತ್ನಿಯ ನೋವನ್ನು ನೆನೆಸಿಕೊಂಡು ಆತ ನೋವು ಅನುಭವಿಸುತ್ತಿದ್ದಾನೆ. ಈ ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಬ್ಬಾ ಇಂಥ ಗಂಡನನ್ನು ಪಡೆಯಲು ಆಕೆ ಅದೆಷ್ಟು ಜನ್ಮದ ಪುಣ್ಯ ಮಾಡಿರಬೇಕು ಎಂದು ಬಹುತೇಕ ಮಂದಿ ಕೇಳುತ್ತಿದ್ದಾರೆ. ನಿನ್ನಂಥ ಗಂಡ ಪ್ರತಿ ಮನೆಯಲ್ಲಿಯೂ ಇರಲಿ ಎಂದು ಕೆಲವರು ಹಾರೈಸುತ್ತಿದ್ದಾರೆ. ಪತ್ನಿಯನ್ನು ಅರಿತು ಬಾಳುವ ಇಂಥವರು ಇದ್ದರೆ ಬಾಳು ಅದೆಷ್ಟು ಸೊಗಸು ಎಂದು ಮತ್ತಷ್ಟು ಮಂದಿ ಕೇಳುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.