
ಜೈಪುರ್(ಜೂ.09) ಲೀವ್ ಇನ್ ರಿಲೇಶನ್‌ಶಿಪ್ ಈಗಿನ ಕಾಲದಲ್ಲಿ ಅಚ್ಚರಿಯ ವಿಷಯವಲ್ಲ. ಯುವ ಸಮೂಹದಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಸಾಮಾನ್ಯವಾಗಿದೆ. ಆದರೆ ಈ ರೀತಿಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಜೋಡಿಯೊಂದು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಹೆಜ್ಜೆ ಹಾಕಿದೆ. ಈಗ ಲೀವ್ ಇನ್ ರಿಲೇಶನ್‌ಶಿಪ್ ವರ್ಷ ಪೂರೈಸುವುದೇ ದೊಡ್ಡ ಸಾಹಸ. ಆದರೆ ಈ ಜೋಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 70 ವರ್ಷ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಸಾಗಿದೆ. 70 ವರ್ಷ ಜೊತೆಯಾಗಿ ಸಾಗಿದ ಈ ಜೋಡಿ ಕೊನೆಗೂ ಸಪ್ತಪದಿ ತುಳಿದಿದೆ ವಿಶೇಷ ಅಂದರೆ ಹೀಗೆ 70 ವರ್ಷ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಅನ್ಯೋನ್ಯವಾಗಿ ಕಳೆದ ಈ ಜೋಡಿ ಇದೀಗ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವಿಶೇಷ ಅಂದರೆ ಗಂಡಿನ ವಯಸ್ಸು 95, ವಧುವಿನ ವಯಸ್ಸು 90. ಅಜ್ಜ-ಅಜ್ಜಿ ಇದೀಗ ಹೊಸ ಬದುಕು ಆರಂಭಿಸಿದ್ದಾರೆ.
6 ಮಕ್ಕಳ, ಮೊಮ್ಮಗಳ ಸಮ್ಮುಖದಲ್ಲಿ ಮದುವೆ
ದುಂಗರ್ಪುರ್ ಜಿಲ್ಲೆಯ ಗಲಂದರ ಗ್ರಾಮದಲ್ಲಿ ಈ ವಿಶೇಷ ಮದುವೆ ನಡೆದಿದೆ. 95 ವರ್ಷದ ರಾಮ್ ಭಾಯಿ ಅಂಗಾರಿ ಹಾಗೂ 90 ವರ್ಷದ ಜಿವಾಲಿ ದೇವಿ ಮದುವೆಯಾಗಿದ್ದಾರೆ. ಕಳೆದ 70 ವರ್ಷಗಳಿಂದ ಈ ಜೋಡಿ ಜೊತೆಯಾಗಿ ಒಂದೇ ಮನೆಯಲ್ಲಿ ಕಳೆದಿದೆ. ಆದರೆ ಮದುವೆಯಾಗಿರಲಿಲ್ಲ. ಲೀವ್ ಇನ್ ರಿಲೇಶನ್‌ಶಿಪ್ ರೀತಿಯಲ್ಲೇ ಇವರ ಜೀವನ ಸಾಗಿದೆ. ಮದುವೆಯಾಗಿಲ್ಲ ಅನ್ನೋದು ಬಿಟ್ಟರೆ ಇನ್ಯಾವುದು ಆಗಿಲ್ಲ ಎಂದಲ್ಲ. ಕಾರಣ ಇವರ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ 6 ಮಕ್ಕಳ ಹೆತ್ತು ಸಾಕಿದ್ದಾರೆ. ಇದೀಗ ಈ ಮಕ್ಕಳ ಮೊಮ್ಮಗಳು ಮದುವೆಯಾಗಿದ್ದರೆ. ಮೊಮ್ಮಕ್ಕಳು ಇವರ ಜೊತೆಗಿದ್ದಾರೆ. ಈ ದೊಡ್ಡ ಕುಟುಂಬದ ಅಜ್ಜ ಹಾಗೂ ಅಜ್ಜಿ ತಮ್ಮ ಲೀವ್ ಇನ್ ರಿಲೇಶನ್‌ಶಿಪ್‌ಗೆ ಮದುವೆ ಅರ್ಥ ಕೊಟ್ಟಿದ್ದಾರೆ.
ಈ ಸುಂದರ ಜೋಡಿಯ 6 ಮಕ್ಕಳಲ್ಲಿ ಹಿರಿಯ ಮಗ ಬಾಕು ಅಂಗಾರಿಗೆ 60 ವರ್ಷ. ರೈತನಾಗಿ ಕೆಲಸ ಮಾಡುತ್ತಿದ್ದಾರೆ. 55 ವರ್ಷದ ಎರಡನೇ ಪುತ್ರ ಶ್ರಿವಂ ಹಾಗೂ ಮೂರನೇ ಪುತ್ರ 52 ವರ್ಷದ ಕಾಂತಿಲಾಲ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಾಲ್ಕನೇ ಪುತ್ರ ಲಕ್ಷ್ಮನ್ ರೈತನಾಗಿದ್ದಾರೆ. ಇನ್ನಿಬ್ಬರು ಹೆಣ್ಣುಮಕ್ಕಳಾದ ಸುನಿತಾ ಹಾಗೂ ಅನಿತಾ ಶಿಕ್ಷಕಿ ಹಾಗೂ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಕ್ಕಳು ಇದೀಗ ಮದುವೆ ವಯಸ್ಸಿಗೆ ಬಂದಿದ್ದಾರೆ. ಇದರ ನಡುವೆ ಅಜ್ಜ-ಅಜ್ಜಿ ಮದುವೆಯಾಗಿದ್ದಾರೆ.
ಅದ್ಧೂರಿ ಮದುವೆ
ಮದುವೆಯಾಗದೇ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿಗೆ ತಮ್ಮ ಮಕ್ಕಳು, ಮೊಮ್ಮಕಳ ಮುಂದೆ ಮದುವೆಯಾಗುವ ಆಸೆಯಾಗಿದೆ. ಈ ವಿಚಾರ ಮಕ್ಕಳ ಮುಂದೆ ಹೇಳಿದಾಗ, ಮಕ್ಕಳು, ಮೊಮ್ಮಕ್ಕಳು ಸಂಭ್ರಮಿಸಿದ್ದಾರೆ. ಯುವ ವಧು ವರರಂತೆ ಅಜ್ಜ ಅಜ್ಜಿಗೆ ಮದುವೆ ಮಾಡಿಸಿದ್ದಾರೆ. ಎಲ್ಲಾ ಮದುವೆ ಕಾರ್ಯಕ್ರಮದಲ್ಲಿ ಇರುವಂತೆ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಮದುವೆ ದಿಬ್ಬಣ, ಅದ್ಧೂರಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಡಿಜೆ, ಡ್ಯಾನ್ಸ್, ಪಾರ್ಟಿ ಕೂಡ ಈ ಮದುವೆಯ ವಿಶೇಷತೆಯಾಗಿತ್ತು. ಗ್ರಾಮಸ್ಥರು, ಆಪ್ತರು, ಕುಟುಬಸ್ಥರು ಸೇರಿದಂತೆ ಸುಮಾರು ಸಾವಿರಕ್ಕೂ ಅಧಿಕ ಮಂದಿ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಸಪ್ತಪದಿ ತುಳಿದು ಇವರಿಬ್ಬರು ಮದುವೆಯಾಗಿದ್ದಾರೆ. ಮದುವೆಯ ಎಲ್ಲಾ ಶಾಸ್ತ್ರಗಳನ್ನು ನಡೆಸಲಾಗಿದೆ. ಇವರಿಬ್ಬರ ಪ್ರೀತಿಗೆ ಇಡೀ ಗ್ರಾಮ ಸಲಾಂ ಹೇಳುತ್ತಿದೆ. ಇದೀಗ ಈ ಜೋಡಿಯ ಮದುವೆ ದೇಶದಲ್ಲಿ ಸದ್ದು ಮಾಡುತ್ತಿದೆ. ಈ ಜೋಡಿಯ ಮದುವೆ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.