
ಮಾಡರ್ನ್ ಸೊಸೈಟಿ... ಇದು ಭಾರತಕ್ಕೆ ಕಾಲಿಟ್ಟು ಕೆಲ ದಶಕಗಳೇ ಕಳೆದು ಹೋಗಿವೆ. ಮಾಡರ್ನ್ ಎನ್ನುವ ಹೆಸರಿನಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದ ಕುಟುಂಬವಾಗುತ್ತಿದೆ ನಮ್ಮ ಸಮಾಜ. ಭಾರತೀಯರು ಎಂದರೆ ಸಂಬಂಧಗಳನ್ನು ಕಾಪಾಡುವವರು, ಸಂಬಂಧಕ್ಕೆ ಬೆಲೆ ಕೊಡುವವರು, ಹೆಣ್ಣನ್ನು ದೇವತೆಗೆ ಹೋಲಿಸುವವರು... ಹೀಗೆ ಏನೇನೋ ಮಾತುಗಳಿವೆ. ಆದರೆ ಇದೀಗ ಭಾರತದಲ್ಲಿಯೂ ಪಾಶ್ಚಾತ್ಯ ಸಂಸ್ಕೃತಿ ಸಂಬಂಧದ ಒಳಗೆ ಹೊಕ್ಕಿ ಹಲವು ವರ್ಷಗಳೇ ಗತಿಸಿಹೋಗಿವೆ. ಲಿವ್ ಇನ್ ಸಂಬಂಧದಿಂದ ಹಿಡಿದು, ಪತ್ನಿಯರ ಅದುಲು ಬದಲು (Wife swapping) ವರೆಗೂ ಆಚರಣೆಗಳು ಆಧುನಿಕತೆಯ ಹೆಸರಿನಲ್ಲಿ ಒಂದಷ್ಟು ಶ್ರೀಮಂತ ಮನೆಗಳಲ್ಲಿ ನಡೆಯುತ್ತಲೇ ಇವೆ. ಅಕ್ರಮ ಸಂಬಂಧ, ಅನೈತಿಕ ಸಂಬಂಧ ಅಂತೂ ಬಿಡಿ ಹೇಳುವುದೇ ಬೇಡ, ಇದು ತಲೆತಲಾಂತರಗಳಿಂದ ನಡೆಯುತ್ತಲೇ ಬಂದಿದ್ದರೂ ಅದೀಗ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಇವೆಲ್ಲಕ್ಕಿಂತಲೂ ವಿಚಿತ್ರ ಎನ್ನಿಸಿರುವ, ನಮ್ಮದೇ ದೇಶದ ಸ್ಟೋರಿ, ಬಹುಶಃ ಸಿನಿಮಾದಲ್ಲಿಯೂ ಮಾಡದ ನೈಜ ಜೀವನದ ಒಬ್ಬಾಕೆಯ ಕಥೆಯನ್ನು ಹೇಳಿದ್ದಾರೆ ನಮನ್ ಜೈನ್. ಖಾಸಗಿ ಡಿಟೆಕ್ಟರ್ ಆಗಿದ್ದಾರೆ ಇವರು. ಗಂಡನ ಮೇಲೆ, ಹೆಂಡತಿಮೇಲೆ ಅಥವಾ ಇನ್ನಾರದ್ದೋ ಮೇಲೆ ಕಣ್ಣಿಡಲು ದುಡ್ಡು ಕೊಟ್ಟು ಖಾಸಗಿ ಡಿಟೆಕ್ಟರ್ಗಳನ್ನು ಇಟ್ಟುಕೊಳ್ಳುವುದು ಸರ್ವೇ ಸಾಮಾನ್ಯ. ಅಂಥವರಲ್ಲಿ ಒಬ್ಬರು ನಮನ್ ಜೈನ್. namanjain_sleuths ಎನ್ನುವ ಚಾನೆಲ್ನಲ್ಲಿ ರೋಚಕ ಎನ್ನಿಸುವ, ಸಾಮಾನ್ಯ ಜನರಿಗೆ ನಮ್ಮ ಸಮಾಜದಲ್ಲಿ ಹೀಗೆಲ್ಲಾ ನಿಜಕ್ಕೂ ನಡೆಯುತ್ತಿದ್ಯಾ ಎನ್ನುವ ಅಚ್ಚರಿ ತರುವ ಸ್ಟೋರಿಯನ್ನು ಇವರು ಹೇಳಿದ್ದಾರೆ.
ಅವರು ಹೇಳಿದ್ದನ್ನು ಇಲ್ಲಿ ವಿವರಿಸಲಾಗಿದೆ: ಒಬ್ಬ ಕ್ಲೈಂಟ್ ನನ್ನ ಬಳಿ ಬಂದ. ಅವನು ನನ್ನ ಬಳಿ, ನನ್ನ ಮದುವೆಯಾಗಿದೆ, ನನ್ನ ಗರ್ಲ್ಫ್ರೆಂಡ್ದೂ ಮದುವೆಯಾಗಿದೆ. ನಮ್ಮಿಬ್ಬರ ನಡುವೆ ಹಲವಾರು ವರ್ಷಗಳಿಂದ ಅಫೇರ್ ನಡೆಯುತ್ತಿದೆ. ನನ್ನ ಗರ್ಲ್ಫ್ರೆಂಡ್ಗೆ ಇಬ್ಬರು ಮಕ್ಕಳು. ಅವರಲ್ಲಿ ಎರಡನೆಯ ಮಗು ನನ್ನದೇ ಎಂದ. ನನಗೆ ಆಶ್ಚರ್ಯ ಆಗುವಷ್ಟರಲ್ಲಿಯೇ ಅವನು ಇನ್ನೂ ಹೇಳಿದ್ದು ಕೇಳಿ ಮತ್ತಷ್ಟು ಅಚ್ಚರಿಯಾಯ್ತು. ಅದೇನೆಂದರೆ, ನಾನು ಅವರ ಮನೆಗೆ ಹೋಗಿ ಬರುತ್ತೇನೆ. ಆಕೆಯ ಗಂಡನ ಅಪ್ಪ-ಅಮ್ಮನಿಗೆ ನನ್ನ ಮತ್ತು ಅವಳ ವಿಷಯ ಗೊತ್ತಿದೆ. ಎರಡನೆಯ ಮಗು ನನ್ನದು ಎನ್ನುವ ವಿಷಯ ಕೂಡ ಗೊತ್ತಿದೆ. ಆದರೂ ಅವರು ಏನೂ ಹೇಳುತ್ತಿಲ್ಲ ಎನ್ನುವುದು ಅವನಿಂದ ತಿಳಿಯಿತು ಎಂದಿದ್ದಾರೆ ನಮನ್.
ನಿಮ್ಮ ಪತ್ನಿಗೆ ಈ ವಿಷಯ ಗೊತ್ತಾ ಎಂದು ನಾನು ಅವನನ್ನು ಪ್ರಶ್ನಿಸಿದೆ. ಅದಕ್ಕೆ ಆತ ಇಲ್ಲ, ಈ ಬಗ್ಗೆ ಅವಳಿಗೆ ಏನೂ ಗೊತ್ತಿಲ್ಲ ಎಂದ. ಇವೆಲ್ಲಾ ಸರಿ. ಎಲ್ಲವೂ ಸಲೀಸಾಗಿ ಆಗ್ತಿದೆಯಲ್ಲ, ಅವರ ಮನೆಯಲ್ಲಿಯೂ ವಿಷಯ ತಿಳಿದಿದೆಯಲ್ಲ. ಹಾಗಿದ್ದರೆ ನನ್ನ ಬಳಿ ಬಂದಿರುವ ಉದ್ದೇಶ ಏನು ಎಂದು ಕೇಳಿದೆ. ನಾನೊಬ್ಬ ಖಾಸಗಿ ಡಿಟೆಕ್ಟರ್ ಆಗಿರುವುದರಿಂದ ಯಾರ ಜಾಸೂಸಿ ಮಾಡಲು ನನ್ನ ಬಳಿ ಬಂದದ್ದು ಎನ್ನುವ ಪ್ರಶ್ನೆ ನನ್ನದಾಗಿತ್ತು. ಅದಕ್ಕೆ ಆತ ಹೇಳಿದ್ದು ಕೇಳಿ ಇನ್ನಷ್ಟು ಹೌಹಾರಿದೆ ಎಂದು ವಿವರಿಸಿದ್ದಾರೆ ನಮನ್.
ಆ ಬಂದ ವ್ಯಕ್ತಿ ಹೇಳಿದ್ದೇನೆಂದರೆ, ಅವನ ಗರ್ಲ್ಫ್ರೆಂಡ್ ದೊಡ್ಡ ಬಿಜಿನೆಸ್ ಶುರು ಮಾಡಿದ್ದಾಳಂತೆ. ಅವಳ ಈ ಉದ್ಯಮಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಸಿಕ್ಕಾಪಟ್ಟೆ ಫಂಡಿಂಗ್ ಮಾಡುತ್ತಿದ್ದಾನಂತೆ. ಅದಕ್ಕಾಗಿ ಇವನಿಗೆ ಡೌಟ್ ಬಂದಿದೆ. ಇದಾಗಲೇ ಇಬ್ಬರ ಜೊತೆ ಸಂಬಂಧ ಹೊಂದಿರೋ ಆಕೆ ಆ 60 ವರ್ಷದ ವೃದ್ಧನ ಜೊತೆಯೂ ಸಂಬಂಧ ಹೊಂದಿದ್ದಾಳೆ ಎನ್ನುವ ಬಗ್ಗೆ ಡೌಟ್ ಬಂದಿರುವ ಕಾರಣ, ಅದನ್ನು ಕೇಳಲು ನನ್ನ ಬಳಿ ಬಂದ. ನನ್ನ ಕೆಲಸ ನಾನು ಮಾಡಬೇಕು. ಅದಕ್ಕಾಗಿ ಅವನ ಆರ್ಡರ್ ತೆಗೆದುಕೊಂಡು ತನಿಖೆ ಕೈಗೊಂಡೆ ಎಂದು ಮುಂದಿನ ಇನ್ನೂ ಅಚ್ಚರಿ ಘಟನೆ ವಿವರಿಸಿದ್ದಾರೆ ನಮನ್.
ನಾನು ತನಿಖೆ ಮಾಡಿದಾಗ, ಅವನ ಸಂಶಯ ನಿಜವಾಗಿತ್ತು. ಇವಳ ಮೇಲೆ ಕೋಟಿ ಕೋಟಿ ಹಣ ಸುರಿಯುತ್ತಿದ್ದ ಅವನು ಇವಳ ಶುಗರ್ ಡ್ಯಾಡಿ ಆಗಿದ್ದ. ಇನ್ನೂ ವಿಚಿತ್ರ ಎಂದರೆ, ಈ ವಿಷಯ ಅವಳ ಗಂಡನಿಗೂ ಗೊತ್ತಿತ್ತು, ಅವಳ ಅತ್ತೆ-ಮಾವನಿಗೂ ಗೊತ್ತಿತ್ತು. ಅವರಿಗೆ ಇದರಿಂದ ಏನೂ ಸಮಸ್ಯೆ ಇರಲಿಲ್ಲ. ತಮ್ಮ ಸೊಸೆ ದೊಡ್ಡ ಬಿಜಿನೆಸ್ ಶುರು ಮಾಡಿ ಶ್ರೀಮಂತೆ ಆಗುವುದು ಅವರಿಗೆ ಬೇಕಿತ್ತು. ಗಂಡನಿಗೆ ಇದಾಗಲೇ ಪತ್ನಿಗೆ ಇರುವ ಸಂಬಂಧ, ಎರಡನೆಯ ಮಗುವಿನ ಗುಟ್ಟು ಎಲ್ಲವೂ ಗೊತ್ತಿದ್ದ ರೀತಿಯಲ್ಲಿಯೇ, ಈ ಶುಗರ್ ಡ್ಯಾಡಿಯ ಬಗ್ಗೆಯೂ ತಿಳಿದಿದ್ದು ಅವನಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿತ್ತು ಎಂದಿರುವ ನಮನ್, ನಮಗೆ ಗೊತ್ತಿರದ ಸೊಸೈಟಿ ಇದೆ. ಇಂಥ ಕುಟುಂಬಗಳಲ್ಲಿ ಇವೆಲ್ಲಾ ಮಾಮೂಲು. ಸಾಮಾನ್ಯ ಜನರಿಗೆ ಇಂಥ ವಿಷಯಗಳು ತಿಳಿಯುವುದಿಲ್ಲವಷ್ಟೇ. ಎಲ್ಲವೂ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ ಎಂದಿದ್ದಾರೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.