ಕಾಂಪ್ರೋಮೈಸ್ ಆಗಬೇಕು ನಿಜ, ಆದರೆ ಅದಕ್ಕೂ ಒಂದು ಇತಿ ಮಿತಿ ಬೇಡ್ವಾ?

By Suvarna NewsFirst Published Sep 26, 2022, 5:30 PM IST
Highlights

ಪ್ರೀತಿ-ಪ್ರೇಮದ ಕಾರಣಕ್ಕೆ ನೀವು ನಿಮ್ಮನ್ನು ಹಿಂಸೆ ಮಾಡಿಕೊಳ್ಳುತ್ತಿದ್ದೀರಾ? ಸಂಗಾತಿಗೆ ಮಾತ್ರ ಅತಿಯಾದ ಆದ್ಯತೆ ನೀಡಿ, ನಿಮ್ಮನ್ನು ಕುಗ್ಗಿಸಿಕೊಳ್ಳುತ್ತಿದ್ದೀರಾ? ಸಂಬಂಧದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದಿರಲು, ಜೀವನಪ್ರೀತಿ ಉಳಿಸಿಕೊಳ್ಳಲು ಏನ್‌ ಮಾಡಬೇಕು ಎಂದು ಅರಿತುಕೊಳ್ಳಿ.
 

ಸಂಬಂಧ ಸರಿಯಾಗಿದ್ದರೆ ಎಲ್ಲವೂ ಸರಿ. ಮಾನಸಿಕ ನೆಮ್ಮದಿಗೆ ಮಾನವ ಸಂಬಂಧಗಳು ಚೆನ್ನಾಗಿರಬೇಕು. ಇಲ್ಲವಾದಲ್ಲಿ ಅಶಾಂತಿ, ಅತೃಪ್ತಿ ಕಾಡುತ್ತವೆ. ಕೆಲವೊಮ್ಮೆ ಸಂಬಂಧ ಹೇಗಾಗುತ್ತದೆ ಎಂದರೆ, ನಮ್ಮ ಜೀವವನ್ನು ಪ್ರತಿಕ್ಷಣ ಹಿಂಡುತ್ತದೆ. ಅರಿವಿಗೆ ಬಾರದಂತೆ ಹಿಂಸಿಸುತ್ತಿರುತ್ತದೆ. ನಮ್ಮತನವನ್ನು ಕೊಲ್ಲುತ್ತಿರುತ್ತದೆ. ಪ್ರೀತಿ-ಪ್ರೇಮದಲ್ಲಿ ಬಿದ್ದ ಅನೇಕರನ್ನು ನೋಡಬಹುದು. ಪ್ರೀತಿಸಿದ್ದ ಒಂದೇ ಕಾರಣಕ್ಕೆ ತಮ್ಮ ಸರ್ವಸ್ವವನ್ನೂ ಅವರಿಗೆ ಧಾರೆ ಎರೆಯುತ್ತಾರೆ.   ತಮ್ಮ ಖಾಸಗಿ ನೋವು-ನಲಿವು, ಇಷ್ಟಾನಿಷ್ಟಗಳಿಗೆ ತಿಲಾಂಜಲಿ ಇಟ್ಟು ಅವರೊಂದಿಗಿನ ಬದುಕೊಂದೇ ಅಸಲಿ ಬದುಕು ಎನ್ನುವಂತೆ ಭಾವಿಸುತ್ತಾರೆ ಹಾಗೂ ವರ್ತಿಸುತ್ತಾರೆ. ವೈವಾಹಿಕ ಸಂಬಂಧವಾಗಿರಲಿ, ಮದುವೆಗೂ ಮುಂಚಿನ ಪ್ರೀತಿ-ಪ್ರೇಮದ ಸಂಬಂಧವಾಗಿರಬಹುದು, ವ್ಯಕ್ತಿತ್ವವನ್ನು ಮಸುಕು ಮಾಡುತ್ತ ಸಾಗುವುದು ಉತ್ತಮ ಬೆಳವಣಿಗೆಯಲ್ಲ. ಏಕೆಂದರೆ, ಪ್ರತಿಯೊಬ್ಬರಿಗೂ ತಮ್ಮದೇ ಆತ ಅಸ್ತಿತ್ವ ಇರುವುದು ಮುಖ್ಯ. ಅದರಿಂದಲೇ ನಿಮ್ಮನ್ನು ನೀವು ಸಂಬಂಧದಿಂದ ಬೇರ್ಪಡಿಸಿಕೊಂಡು ನೋಡಲು ಸಾಧ್ಯವಾಗುತ್ತದೆ. ಹೀಗಾಗಿ, ಯಾವುದೇ ಸಂಬಂಧ ಪೂರ್ತಿಯಾಗಿ ನಮ್ಮನ್ನು ನುಂಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ನಮ್ಮನ್ನು ನಾವು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಕೆಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

•    ನಿಮ್ಮ ಜೀವನಕ್ಕೆ (Life) ಆದ್ಯತೆ (Priority) ಇರಲಿ
ಯಾವುದೇ ಸಂಬಂಧದಲ್ಲಿ ಮತ್ತೊಬ್ಬರ ಆರೈಕೆ ಮಾಡುವುದು, ಕಾಳಜಿ (Care) ತೆಗೆದುಕೊಳ್ಳುವುದು ಅಗತ್ಯ. ಆದರೆ, ತಮ್ಮ ಬಗ್ಗೆ ತಾವು ಚೂರಾದರೂ ಕಾಳಜಿ ತೆಗೆದುಕೊಳ್ಳದೆ ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುವುದು ಹೇಗೆ? ಅಂದರೆ, ಸಂಗಾತಿಯನ್ನು ನೋಡಿಕೊಳ್ಳುವ ಜತೆ ನಿಮ್ಮನ್ನೂ ನೋಡಿಕೊಳ್ಳಿ. ನಿಮ್ಮ ಸಂತಸಕ್ಕೆ (Happiness) ಅವರ ಮೇಲೆ ಅವಲಂಬಿತರಾಗಬೇಡಿ. ಇದು ಅನಗತ್ಯ ಭಾವನಾತ್ಮಕ (Emotional) ನೆಗೆಟಿವ್ (Negative) ಅಭ್ಯಾಸಗಳಿಗೆ ಮುನ್ನುಡಿ ಬರೆಯುತ್ತದೆ. ನೀವು ಎಷ್ಟನ್ನು ಹಂಚಿಕೊಳ್ಳಬಲ್ಲಿರಿ, ಅವರಿಗಾಗಿ ಎಷ್ಟು ಸಮಯ ನೀಡಬಲ್ಲಿರಿ, ಅವರ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಳ್ಳಬಲ್ಲಿರಿ ಎನ್ನುವ ಅಂದಾಜಿರಲಿ. ನಿಮ್ಮ ಹವ್ಯಾಸಗಳನ್ನು (Hobbies) ಸಂಪೂರ್ಣವಾಗಿ ಮರೆಯುವಷ್ಟು, ನಿಮ್ಮ ಖಾಸಗಿ (Private) ಅಗತ್ಯಗಳನ್ನು ದೂರ ಮಾಡಿಕೊಳ್ಳುವಷ್ಟು ಸಂಬಂಧವನ್ನು ಆವಾಹನೆ ಮಾಡಿಕೊಳ್ಳಬೇಡಿ. ಇದರಿಂದ ದುಃಖವೇ (Pain) ಹೆಚ್ಚು.

ಹೆಂಡ್ತಿ ಮುಖದ ಮೇಲೆ ಮೊಡವೆ ಇದೇಂತ ಡಿವೋರ್ಸೇ ಕೊಟ್ಬಿಟ್ಟ !

•    ಸ್ನೇಹಿತರು (Friends), ಕುಟುಂಬದವರೊಂದಿಗೆ (Family) ಬೆರೆಯಿರಿ
ನಿಮಗೂ ನಿಮ್ಮ ಸ್ನೇಹಿತರು, ಕುಟುಂಬದವರು ಇರುತ್ತಾರೆ. ಅವರಿಗೆ ಸಮಯವನ್ನೇ ನೀಡದಷ್ಟು ನಿಮ್ಮ ಸಂಬಂಧದಲ್ಲಿ ಮುಳುಗುವುದು ಅಪಾಯಕಾರಿ ಬೆಳವಣಿಗೆ. ಸಮಾನ ಮನಸ್ಕರೊಂದಿಗೆ ಬೆರೆಯುವುದು ವ್ಯಕ್ತಿತ್ವದ ಬೆಳವಣಿಗೆ (Development) ಹಾಗೂ ನೆಮ್ಮದಿಗೆ (Satisfaction) ಅತ್ಯಂತ ಅಗತ್ಯ. ನಿಯಮಿತವಾಗಿ ಅವರನ್ನು ಭೇಟಿ ಮಾಡುವ ಕಾರ್ಯಕ್ರಮ ಇಟ್ಟುಕೊಳ್ಳಿ. ಅವರ ಬಗ್ಗೆ ಕಾಳಜಿ ವಹಿಸಿ. ಜೀವನದಲ್ಲಿ ಏಕೈಕ ವ್ಯಕ್ತಿಗೆ ನಿಮ್ಮ ಶ್ರಮ, ಸೇವೆ, ಕಾಳಜಿಯನ್ನು ಮೀಸಲು ಮಾಡಬೇಡಿ. ಆಗಲೇ ವ್ಯಕ್ತಿಯಾಗಿ (Person) ನಮ್ಮ ಬಗ್ಗೆ ನಮಗೆ ಖುಷಿ ಇರುತ್ತದೆ.

•    ಅತಿಯಾದ ಹೊಂದಾಣಿಕೆಯಿಂದ ದೂರವಿರಿ (Over Adjustment)
ಸಂಬಂಧದಲ್ಲಿ ಹೊಂದಾಣಿಕೆ, ತ್ಯಾಗ (Sacrifice) ಎಲ್ಲವೂ ಬೇಕು. ಅವು ಕೆಲವೊಮ್ಮೆ ಅಗತ್ಯ, ಅನಿವಾರ್ಯವೂ ಆಗಿರುತ್ತವೆ. ಆದರೆ, ಅತಿಯಾದ ಹೊಂದಾಣಿಕೆ ಮಾಡಿಕೊಳ್ಳುವುದು ನಿಮ್ಮನ್ನು ದುಃಖಕ್ಕೆ ದೂಡುತ್ತದೆ. ನೀವೊಬ್ಬರೇ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದಂತೂ ಅಕ್ಷಮ್ಯ. ಏಕೆಂದರೆ, ಸಂಗಾತಿ (Partner) ನಿಮ್ಮನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿರಬಹುದು. ಅದರಿಂದ ನಿಮ್ಮ ಅಸ್ತಿತ್ವಕ್ಕೆ ಹಾನಿಯಾಗುತ್ತದೆ. ಸಂಬಂಧದಲ್ಲಿ (Relation) ಯಾವುದನ್ನು ಒಪ್ಪಿಕೊಳ್ಳಬಾರದು, ಯಾವುದನ್ನು ಒಪ್ಪಿಕೊಳ್ಳಬೇಕು ಎನ್ನುವ ಸ್ಪಷ್ಟತೆ ಬೆಳೆಸಿಕೊಳ್ಳಬೇಕು. ನಿಮ್ಮ ಅಭಿರುಚಿ, ಆಹಾರ-ವಿಹಾರ, ಹವ್ಯಾಸ, ಸ್ನೇಹಿತರು, ಕುಟುಂಬ, ನಿಮ್ಮ ಕೆಲಸ, ವ್ಯಕ್ತಿತ್ವ ಎಲ್ಲದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಮ್ಮಲ್ಲಿ ಆಳವಾದ ನೋವನ್ನು ಉಂಟು ಮಾಡುತ್ತದೆ. ಬದುಕಲು ಸಾಧ್ಯವೇ ಆಗದಂತಹ ಏಕಾಏಕಿ ಆಘಾತ ನೀಡುತ್ತದೆ. ನಿಮ್ಮ ಹೊಂದಾಣಿಕೆ ಅಥವಾ ತ್ಯಾಗಕ್ಕೆ ಬೆಲೆ ಇದ್ದಾಗಲಷ್ಟೇ ಮಾಡಬೇಕು. ಅಷ್ಟೇ ಅಲ್ಲ, ನಿಮ್ಮತನವನ್ನು ಹೊಸಕಿಹಾಕುವಂತಹ ಹೊಂದಾಣಿಕೆಗೆ ಎಂದಿಗೂ ತಲೆಕೊಡಬಾರದು. ಏಕೆಂದರೆ, ಅದರಿಂದ ಕೀಳರಿಮೆ, ಹಿಂಜರಿಕೆ, ಆತ್ಮವಿಶ್ವಾಸ (Self Esteem) ನಾಶವಾಗುವಂತಹ ಹಲವು ಕೆಟ್ಟ ಪ್ರಭಾವ ಉಂಟಾಗುತ್ತದೆ.  

ಸಂಗಾತಿ ಜೊತೆ ಗಟ್ಟಿ ಸಂಬಂಧ, ನಿಭಾಯಿಸೋದು ಹೇಗೆ?

click me!