
ನಮ್ಮ ಸುತ್ತಮುತ್ತಲಿನ ಪರಿಸರ (Environment ) ಮಕ್ಕಳ (Children) ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಅವರು ಯಾರ ಜೊತೆಗಿರ್ತಾರೋ ಅವರಂತೆ ವರ್ತಿಸಲು ಶುರು ಮಾಡ್ತಾರೆ. ಬೇರೆಯವರ ಪ್ರಭಾವಕ್ಕೆ ಮಕ್ಕಳು ಬೇಗ ಒಳಗಾಗ್ತಾರೆ. ಮಕ್ಕಳ ಜೀವನದಲ್ಲಿ ಸ್ನೇಹಿತ (Friend)ರು ಬಹುಮುಖ್ಯ ಪಾತ್ರ ವಹಿಸ್ತಾರೆ ಎನ್ನುವುದ್ರಲ್ಲಿ ಎರಡು ಮಾತಿಲ್ಲ. ಮಕ್ಕಳ ಜೀವನದ ದಾರಿ ಬಹುತೇಕ ಅವರಿಂದಲೇ ನಿರ್ಧಾರವಾಗುತ್ತದೆ. ಸ್ನೇಹಿತರ ಹಾವ-ಭಾವ, ಅವರ ನಡವಳಿಕೆ, ಅವರ ಕೆಲಸ ಎಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.
ಶಾಲೆಗೆ ಹೋಗುವ ಮಕ್ಕಳಿರಲಿ, ಕಾಲೇಜಿಗೆ ಹೋಗುವ ಮಕ್ಕಳಿರಲಿ ಅವರ ಸ್ನೇಹಿತರ ಮೇಲೆ ಪಾಲಕರ ಕಣ್ಣಿರಬೇಕು. ಮಕ್ಕಳ ಭವಿಷ್ಯದ ಬಗ್ಗೆ ಭಯವಿರುವ ಪಾಲಕರು, ಮಕ್ಕಳ ಸ್ನೇಹಿತರು ಹೇಗಿದ್ದಾರೆ ಎಂಬುದನ್ನು ತಿಳಿದಿರಬೇಕು. ಕೆಲವರ ಸ್ನೇಹ ತೋರಿಕೆಗಾಗಿರುತ್ತದೆ. ಮತ್ತೆ ಕೆಲವರು ಹಣಕ್ಕಾಗಿ ಸ್ನೇಹ ಬೆಳೆಸ್ತಾರೆ. ಸ್ನೇಹ ನಕಲಿಯಾಗಿದ್ದರೆ ಸ್ನೇಹ ಬೆಳೆಸಿ ಪ್ರಯೋಜನವಿಲ್ಲ. ಹಾಗಾಗಿ ಮಕ್ಕಳ ಸ್ನೇಹಿತರು ಎಂಥವರು ಎಂಬುದನ್ನು ತಿಳಿದು, ಮಕ್ಕಳಿಗೆ ಅವ್ರಿಂದ ನಷ್ಟವಾಗಲಿದೆ ಎಂಬ ಮುನ್ಸೂಚನೆ ನಿಮಗೆ ಸಿಕ್ಕಿದ್ರೆ ತಕ್ಷಣ ಮಕ್ಕಳನ್ನು ಅವರಿಂದ ದೂರ ಮಾಡಿ. ಇಲ್ಲವಾದ್ರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಸ್ನೇಹಿತರಲ್ಲಿ ಯಾರು ಸುಳ್ಳುಗಾರ ಮತ್ತು ನಾಟಕೀಯ ವ್ಯಕ್ತಿ ಎಂದು ತಿಳಿದುಕೊಳ್ಳಲು ಮಕ್ಕಳಿಗೆ ಸಾಕಷ್ಟು ತಿಳುವಳಿಕೆ ಇರುವುದಿಲ್ಲ. ಆದ್ರೆ ಪಾಲಕರಾದ ನೀವು, ನಿಮ್ಮ ಮಗುವಿನ ಸ್ನೇಹಿತರಲ್ಲಿ ಕೆಲ ಸ್ವಭಾವ ಕಂಡು ಬಂದ್ರೆ ಅವರಿಂದ ಮಕ್ಕಳನ್ನು ದೂರವಿಡಿ.
ಗಾಸಿಪ್ ಮತ್ತು ಡ್ರಾಮಾ : ಮನಸ್ಸಿನಲ್ಲಿ ಕಲ್ಮಶ ತುಂಬಿರುವವರು ಸದಾ ಗಾಸಿಪ್ ಮಾಡೋದ್ರಲ್ಲಿ ಬ್ಯುಸಿಯಿರ್ತಾರೆ. ಎಲ್ಲರ ಮುಂದೆ ಒಳ್ಳೆಯವರಂತೆ ನಾಟಕವಾಡ್ತಾರೆ. ಗಾಸಿಪ್ ಮಾಡಿ ಮಜಾ ತೆಗೆದುಕೊಳ್ಳುವ ಅವರು ಯಾವಾಗ ನಿಮ್ಮ ಮಗುವನ್ನು ಬಲಿಪಶು ಮಾಡ್ತಾರೆ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ವೈಯಕ್ತಿಕ ವಿಷ್ಯವನ್ನು ಅವರ ಮುಂದೆ ಹೇಳದಂತೆ ತಡೆಯಿರಿ. ಯಾಕೆಂದ್ರೆ ಸ್ನೇಹಿತರಂತಿರುವ ಅವರು ನಿಮ್ಮ ಮಕ್ಕಳ ಹಿಂದೆ ನಿಮ್ಮ ಮಕ್ಕಳ ಸುದ್ದಿಯನ್ನೇ ಹೇಳಬಹುದು.
ಕೈಬಿಡುವ ಸ್ನೇಹಿತ : ಸಂತೋಷದಲ್ಲಿರುವಾಗ ನೂರು ಜನ ಬರ್ತಾರೆ ಆದ್ರೆ ದುಃಖದಲ್ಲಿ ಜೊತೆಗಿರುವವರೇ ನಿಜವಾದ ಸ್ನೇಹಿತರು ಎಂಬುದನ್ನು ಮಕ್ಕಳಿಗೆ ಹೇಳಿ. ಕಷ್ಟ ಬಂದಾಗ ಸ್ನೇಹಿತನ ಜೊತೆ ನಿಲ್ಲದೆ ಓಡಿ ಹೋಗುವ ವ್ಯಕ್ತಿ, ನಿಮ್ಮ ಮಕ್ಕಳ ಸ್ನೇಹಿತರಾಗಿದ್ದರೆ, ಮಕ್ಕಳ ಪರ ಮಾತನಾಡದೆ, ತಪ್ಪಿಸಿಕೊಳ್ಳುವ ವ್ಯಕ್ತಿಯಾಗಿದ್ದರೆ ಎಂದೂ ಆತನ ಸ್ನೇಹ ಮುಂದುವರಿಸದಂತೆ ಮಕ್ಕಳಿಗೆ ಹೇಳಿ. ಅವರು ಕೇವಲ ನಿಮ್ಮ ಸುಖದಲ್ಲಿರುತ್ತಾರೆ. ನಿಮ್ಮನ್ನು ನಿಜವಾಗಿ ಎಂದಿಗೂ ಸ್ನೇಹಿತನಾಗಿ ಸ್ವೀಕರಿಸಿರುವುದಿಲ್ಲ ಎಂದು ಮಕ್ಕಳಿಗೆ ತಿಳಿಸಿ. ಅನೇಕ ಬಾರಿ ಮಕ್ಕಳಿಗೆ ಸ್ನೇಹಿತರನ್ನು ಬಿಡುವುದು ಸುಲಭವಾಗಿರುವುದಿಲ್ಲ. ಆದ್ರೆ ದುಷ್ಟರ ಸಹವಾಸಕ್ಕಿಂತ ದೂರವಿರುವುದು ಬೆಸ್ಟ್ ಎಂಬುದನ್ನು ನೀವು ಮಕ್ಕಳಿಗೆ ತಿಳಿ ಹೇಳಬೇಕಾಗುತ್ತದೆ.
ಮಕ್ಕಳ ಜೊತೆ ವೃತ್ತಿ ಸಂಭಾಳಿಸೋದು ಸವಾಲಲ್ಲ ಅಂತಾರೆ Mrs. India ಸತ್ಯ ಪ್ರಿಯಾ
ಸ್ವಾರ್ಥಿ : ಅನೇಕರ ಜೀವನ ಅವರ ಸುತ್ತವೇ ಸುತ್ತುತ್ತಿರುತ್ತದೆ. ಅವರು ಎಂದೂ ಬೇರೆಯವರ ಬಗ್ಗೆ ಆಲೋಚನೆ ಮಾಡುವುದಿಲ್ಲ. ತಮಗೆ ಅವಶ್ಯಕತೆಯಿದ್ದಾಗ ಸ್ನೇಹಿತರನ್ನು ನೆನಪಿಸಿಕೊಳ್ತಾರೆ. ತಮ್ಮ ಕೆಲಸ ಮುಗಿದ್ಮೇಲೆ ಆ ಸ್ನೇಹವನ್ನು ಮರೆತುಬಿಡ್ತಾರೆ. ಅಂಥವರು ನಿಮ್ಮ ಮಕ್ಕಳ ಸ್ನೇಹಿತರಾಗಿದ್ರೆ ಅವರ ಸಹವಾಸದಿಂದಲೂ ದೂರವಿರುವಂತೆ ಹೇಳಿ.
ಸುಳ್ಳು : ಕಪಟಿ ಸ್ನೇಹಿತರು ತಮ್ಮ ಅಭದ್ರತೆಯನ್ನು ಮರೆಮಾಡಲು ಸುಳ್ಳು ಹೇಳುತ್ತಾರೆ. ಅವರು ತಮ್ಮ ವಸ್ತುಗಳು, ಫೋನ್ ನಂಬರ್ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಸುಳ್ಳು ಹೇಳ್ತಾರೆ. ನಿಮ್ಮ ಮಗು ಒಂದಕ್ಕಿಂತ ಹೆಚ್ಚು ಬಾರಿ ಸ್ನೇಹಿತನ ಸುಳ್ಳನ್ನು ಪತ್ತೆ ಹಚ್ಚಿದ್ದರೆ ಆ ಸ್ನೇಹಿತನಿಂದ ದೂರವಿರಲು ಸಲಹೆ ನೀಡಿ.
WOMEN'S DAY 2022: ಪತ್ನಿಗೆ ಗುಲಾಬಿ ನೀಡಿದ್ರೆ ಸಾಲ್ದು, ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ
ಅಸೂಯೆ : ಸ್ನೇಹಿತರ ಸಾಧನೆಯನ್ನು ನೋಡಿ ಸಂತೋಷಪಡುವ ವ್ಯಕ್ತಿ ನಿಜವಾದ ಗೆಳೆಯ. ಆದ್ರೆ ಸ್ನೇಹಿತನ ಏಳ್ಗೆಯನ್ನು ಸಹಿಸದೆ ಅಸೂಯೆಪಡುವ ವ್ಯಕ್ತಿ ಸ್ನೇಹಿತನಾದ್ರೆ ಪ್ರಯೋಜನವಿಲ್ಲ. ಜೀವನದಲ್ಲಿ ಇವರಿಂದ ಯಾವುದೇ ಪ್ರೀತಿ,ಸಹಕಾರ ನಿಮಗೆ ಸಿಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.