ದಾರಿ ನಿಂತಾಗ ಮುಂದೆ ಸಾಗಲೇಬೇಕು, ಅದೇ ಜಗದ ನಿಯಮ

By Suvarna NewsFirst Published May 31, 2020, 2:01 PM IST
Highlights

ಬದುಕಿನ ಹಾದಿಯಲ್ಲಿ  ನೂರಾರು ಅಡೆತಡೆಗಳು ಎದುರಾದಾಗ ಅದನ್ನು ದಾಟಿ ಮುಂದೆ ಸಾಗಲೇಬೇಕಾಗುತ್ತೆ. ನೊಂದಿರುವ ಮನಸ್ಸನ್ನು ಮತ್ತೆ ಹಳಿಗೆ ತರಲು ಅಸ್ತ್ರ ನಮ್ಮ ಕೈಯಲ್ಲೇ ಇದೆ.

ಬದುಕಿನಲ್ಲಿ ಕಂಡ ಮಹತ್ವದ ಕನಸೊಂದು ಕೈಗೂಡದಿದ್ದಾಗ, ಹಗಲು-ರಾತ್ರಿ ಪರಿಶ್ರಮಪಟ್ಟರೂ ಅಂದ್ಕೊಂಡ ಗುರಿ ತಲುಪಲು ಸಾಧ್ಯವಾಗದಿದ್ದಾಗ, ಜೀವಕ್ಕಿಂತ ಹೆಚ್ಚು ಎಂದು ಭಾವಿಸಿ ಪ್ರೀತಿಸಿದವರೇ ಮೋಸ ಮಾಡಿದಾಗ, ಆತ್ಮೀಯರು ಅಗಲಿದಾಗ...ಹೀಗೆ ಮನಸ್ಸಿಗೆ ಆಘಾತವುಂಟು ಮಾಡುವ ಘಟನೆಗಳು ಬದುಕಿನ ಕುರಿತ ಭರವಸೆಯನ್ನೇ ಕಸಿದುಕೊಳ್ಳುತ್ತವೆ. ಇಂಥ ಸಮಯದಲ್ಲಿ ಯಾರೊಂದಿಗೂ ಬೆರೆಯುವ ಮನಸ್ಸಾಗದು. ಒಂಟಿಯಾಗಿಯೇ ಕಾಲ ಕಳೆಯುವ ಇಚ್ಛೆ ಮೂಡುತ್ತದೆ. ಕೆಲವೊಮ್ಮೆ ಇದು ತೀವ್ರ ಸ್ವರೂಪ ಪಡೆದುಕೊಂಡು ಖಿನ್ನತೆಗೂ ಕಾರಣವಾಗೋ ಸಾಧ್ಯತೆಯಿದೆ. ಇಂಥ ಸಮಯದಲ್ಲಿ ಆಗಿದ್ದನ್ನೆಲ್ಲ ಮರೆತು ಮುಂದೆ ಸಾಗಲು ಏನ್ ಮಾಡ್ಬೇಕು?

ನನ್ನ ಒಂದು ನಗುವಿಗಾಗಿ ಅವಳು ತಲೆ ಬೋಳಿಸಿಕೊಂಡಿದ್ದಳು!

-ಕೆಲವೊಂದು ಹವ್ಯಾಸಗಳಿಗೆ ನಮ್ಮ ಮನಸ್ಸಿನ ನೋವನ್ನು ಮರೆಸುವ ಶಕ್ತಿ ಇದೆ. ಇವು ಮನಸ್ಸಿಗೆ ಉತ್ಸಾಹ ನೀಡುವ ಮೂಲಕ ಜೀವನ ಪ್ರೀತಿಯನ್ನು ಮೂಡಿಸುತ್ತವೆ. ಓದು, ಬರವಣಿಗೆ, ಚಿತ್ರ ಬಿಡಿಸುವುದು, ಸಂಗೀತ, ಗಾರ್ಡನಿಂಗ್ ಮುಂತಾದ ಹವ್ಯಾಸಗಳು ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ. ನಿಮಗೆ ಇಂಥ ಯಾವ ಹವ್ಯಾಸದಲ್ಲಿ ಆಸಕ್ತಿಯಿದೆಯೋ ಅದನ್ನೇ ಮಾಡಿ.

-ಆತ್ಮೀಯ ಸ್ನೇಹಿತರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಅವರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ. ಈ ರೀತಿ ನೋವುಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ. ಜೊತೆಗೆ ಅವರು ನಿಮಗೊಂದಿಷ್ಟು ಸಲಹೆಗಳನ್ನು ನೀಡಬಹುದು ಅಥವಾ ನೀವು ಎದುರಿಸುತ್ತಿರುವ ಪರಿಸ್ಥಿತಿಯಿಂದ ಹೊರಬರುವ ಮಾರ್ಗ ಸೂಚಿಸಬಹುದು. 

-ಸೋಲು, ನೋವು, ಅವಮಾನವಾದಾಗ ಮನಸ್ಸು ಒಂಟಿಯಾಗಿರಲು ಬಯಸುತ್ತದೆ. ಒಂಟಿಯಾಗಿರುವಾಗ ಇಲ್ಲಸಲ್ಲದ ಆಲೋಚನೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ. ಇಂಥ ಯೋಚನೆಗಳಿಂದ ಹೊರಬರಲು ಮೊದಲು ಮಾಡಬೇಕಾದ ಕೆಲಸವೆಂದರೆ ಹಿಂದಿನ ಕಹಿ ಘಟನೆಗಳನ್ನು ಮರೆತುಬೇಡಿ ಅಥವಾ ಆ ಕುರಿತು ಯೋಚಿಸಲು ಹೋಗಬೇಡಿ.

-ಭವಿಷ್ಯದ ಕುರಿತು ಕನಸುಗಳನ್ನು ಕಾಣಿ, ಅವುಗಳನ್ನು ನನಸು ಮಾಡಿಕೊಳ್ಳಲು ಯೋಜನೆಗಳನ್ನು ರೂಪಿಸಿಕೊಳ್ಳಿ. ಆ ಯೋಜನೆಗಳಿಗೆ ಅನುಗುಣವಾಗಿ ಕಾರ್ಯನಿರತರಾಗಿ. ಆಗ ಇಲ್ಲಸಲ್ಲದ ವಿಚಾರಗಳ ಬಗ್ಗೆ ಚಿಂತಿಸಲು ಮನಸ್ಸಿಗೆ ಸಮಯ ಇರೋದಿಲ್ಲ. 

-ದಿನನಿತ್ಯದ ಜೀವನದಲ್ಲಿ ಎದುರಾಗುವ ಚಿಕ್ಕಪುಟ್ಟ ಖುಷಿಗಳನ್ನು ಸಂಭ್ರಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಎಷ್ಟೋ ಬಾರಿ ಇಂಥ ಚಿಕ್ಕ ಖುಷಿಗಳೇ ಮನಸ್ಸಿನ ನೆಮ್ಮದಿ ಹೆಚ್ಚಿಸುತ್ತವೆ. ಅಲ್ಲದೆ, ಬದುಕಿನ ಕುರಿತು ಭರವಸೆ ಮೂಡಿಸುತ್ತವೆ.

-ಬದುಕಿನಲ್ಲಿ ಒಂದಲ್ಲ ಒಂದು ಹಂತದಲ್ಲಿ ಸೋಲು ಎದುರಾಗುವುದು ಸಹಜ. ಆ ಸೋಲಿನ ಕಹಿಯನ್ನು ಎಲ್ಲರೂ ಅನುಭವಿಸಿರುತ್ತಾರೆ. ಸೋಲಿಗೆ ಅಂಜುವ ಬದಲು ಅದನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಿ. 

ಸೆಕ್ಸ್ ವಿಚಾರದಲ್ಲಿ ಈ ಎಡವಟ್ಟು ಮಾಡಬೇಡಿ!

-ಇನ್ನೊಬ್ಬರಿಗೆ ಸಹಾಯ ಮಾಡಿದ ಬಳಿಕ ಅವರಿಂದ ಪ್ರತಿಯಾಗಿ ಏನನ್ನೂ ನಿರೀಕ್ಷಿಸಬೇಡಿ. ಎಷ್ಟೋ ಬಾರಿ ಈ ನಿರೀಕ್ಷೆ ಅಪಾರ ನೋವನ್ನು ನೀಡುತ್ತದೆ. ಆದಕಾರಣ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡುವ ಗುಣ ರೂಢಿಸಿಕೊಳ್ಳಲು ಪ್ರಯತ್ನಿಸಿ. ಇಂಥ ಗುಣ ನಿಮ್ಮ ಮಾನಸಿಕ ಆರೋಗ್ಯಕ್ಕೆ ಉತ್ತಮ.

-ಇನ್ನೊಬ್ಬರ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಹೇರಲು ಹೋಗಬೇಡಿ. ಅವರು ಹೇಗಿರುತ್ತಾರೋ ಹಾಗೆಯೇ ಸ್ವೀಕರಿಸಲು ಪ್ರಯತ್ನಿಸಿ. ಇನ್ನೊಬ್ಬರು ನಿಮ್ಮ ನಿರೀಕ್ಷೆಯಂತೆ ಬದುಕಬೇಕು ಅಥವಾ ನಿಮ್ಮ ಅಭಿಪ್ರಾಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬ ವರ್ತನೆಗಳಿಂದ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. 

-ಇನ್ನೊಬ್ಬರ ಮೇಲೆ ಅತಿಯಾದ ಅವಲಂಬನೆ ಬೇಡ. ಇದರಿಂದ ಅನೇಕ ಸಂದರ್ಭಗಳಲ್ಲಿ ಮನಸ್ಸಿಗೆ ನೋವುಂಟು ಮಾಡುವ ಘಟನೆಗಳು ನಡೆಯಬಹುದು. ಇನ್ನೊಬ್ಬರ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಸ್ವೀಕರಿಸಿ, ಆದರೆ ನೀವು ಕೈಗೊಳ್ಳುವ ನಿರ್ಧಾರ ನಿಮ್ಮದೇ ಆಗಿರಲಿ. ಚಿಕ್ಕಪುಟ್ಟ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸುವ ಬದಲು ನೀವೇ ಮಾಡಿ.

-ಯಾರಾದರೂ ಏನಾದರೂ ಕೆಟ್ಟದಾಗಿ ಮಾತನಾಡಿದರೆ ಅಥವಾ ವರ್ತಿಸಿದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಸದಾ ಆ ಬಗ್ಗೆ ಯೋಚಿಸುತ್ತ ಕೊರಗಲು ಹೋಗಬೇಡಿ. 

-ಈ ಜಗತ್ತಿನಲ್ಲಿ ನಮ್ಮ ಮೇಲೆ ನಮಗಿರುವ ನಂಬಿಕೆ ಎಲ್ಲಕ್ಕಿಂತ ದೊಡ್ಡದು. ನಿಮ್ಮನ್ನು ನೀವು ನಂಬಿ. ಆಗ ಎಂಥದ್ದೇ ಪರಿಸ್ಥಿತಿ ಎದುರಾದರೂ ಅದರಿಂದ ಹೊರಬರಲು ಸಾಧ್ಯವಿದೆ.

click me!