ಮದುವೆಯಾಗಿ ಕೆಲವು ತಿಂಗಳಲ್ಲೇ ಪತ್ನಿ ಮುನಿಸಿಕೊಂಡು ತವರಿಗೆ ಹೋಗಿದ್ದಾಳೆ, ವಿವಾಹವಾಗಿ ವರ್ಷವಾಗಿಲ್ಲ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ ಇತ್ಯಾದಿ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ, ಕೆಲವು ನವಜೋಡಿಗಳು ಜೀವನವನ್ನು ಸುಂದರವಾಗಿಸಿಕೊಳ್ಳುವ ಮಾರ್ಗದಲ್ಲಿ ಸಾಗುತ್ತಾರೆ. ಜತೆಯಾಗಿ ಬೆಳೆಯುತ್ತಾರೆ, ಕುಟುಂಬದ ಸೊಗಸನ್ನು ಹೆಚ್ಚಿಸುತ್ತಾರೆ. ಅಂತಹ ಜೋಡಿಗಳು ಏನು ಮಾಡುತ್ತಾರೆ ಗೊತ್ತಾ?
ಪ್ರೀತಿಸಿದವರನ್ನು ವಿವಾಹವಾಗುವ ಸಮಯದಲ್ಲಿ ಜೀವನವೆಲ್ಲ ಸುಂದರ ಸುಂದರ ಎನಿಸುತ್ತದೆ. ವಿವಾಹದ ದಿನಾಂಕ ನಿಶ್ಚಯವಾಗಿ ಜೋಡಿಯಾಗಿ ಎಲ್ಲಿ ಬೇಕೋ ಅಲ್ಲೆಲ್ಲ ಓಡಾಡಿ, ಸಿದ್ಧತೆಗಳೆಲ್ಲ ಮುಗಿದು ಕೊನೆಗೆ ಒಂದು ಒಳ್ಳೆಯ ಮುಹೂರ್ತದಲ್ಲಿ ವಿವಾಹವೂ ಸಂಪನ್ನಗೊಳ್ಳುತ್ತದೆ. ಕೊನೆಗೆ ಹನಿಮೂನ್ ಎಂದು ಕೆಲ ದಿನಗಳು ಅದೇ ಗುಂಗಿನಲ್ಲಿ ಕಳೆದು ಹೋಗಿರುತ್ತವೆ. ಇದು ಸಂಬಂಧದ ಹನಿಮೂನ್ ಪೀರಿಯೆಡ್. ಈ ಸಮಯ ಮುಗಿದ ಬಳಿಕ ಎದುರಾಗುವುದೇ ರಿಯಾಲಿಟಿ ಶೋ. ನೈಜವಾದ ಜೀವನ ಆರಂಭವಾಗುವುದೇ ಈ ಸಮಯದ ನಂತರ. ವಾಸ್ತವದ ಜೀವನ ಅದುವರೆಗಿನ ಕನಸುಗಳಿಗಿಂತ ಭಿನ್ನವಾಗಿರುತ್ತದೆ. ಅದೇ ಕಚೇರಿ, ಅದೇ ಮನೆ, ಅದೇ ದೈನಂದಿನ ಆಗುಹೋಗುಗಳು, ಬೆಳಗಿನ ತಿಂಡಿ, ಮಧ್ಯಾಹ್ನ-ಸಂಜೆಯ ಊಟಗಳಲ್ಲಿ ಜೀವನ ಕಳೆದುಹೋಗುತ್ತಿರುತ್ತದೆ.
ಇದೇ ಹಂತದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ. ಅತೃಪ್ತಿ ಕಾಡಲು ಶುರುವಾಗುತ್ತದೆ. ಮಗುವನ್ನು ಮಾಡಿಕೊಳ್ಳುವುದೋ ಬೇಡವೋ ಎನ್ನುವ ಗೊಂದಲ ಕಾಡುತ್ತದೆ. ಆದರೆ, ಇವೆಲ್ಲ ಕಿರಿಕಿರಿಗಳನ್ನು ಮೀರಿದ ಕೆಲವು ಜೋಡಿಗಳು ಜತೆಯಾಗಿ ಜೀವನದ ಸೊಗಸನ್ನು ಕಾಣಲು ಮುಂದಾಗುತ್ತಾರೆ. ಜತೆಯಾಗಿ ಬೆಳೆಯುತ್ತಾರೆ. ಬದುಕಿನ ಸೌಂದರ್ಯವನ್ನು ಆಸ್ವಾದಿಸುತ್ತ ಸಾಗುತ್ತಾರೆ. ಅವರು ಅಭಿವೃದ್ಧಿ ಹೊಂದುತ್ತಿದ್ದಾರೆ ಎನ್ನುವುದನ್ನು ಕೆಲವು ಲಕ್ಷಣಗಳಿಂದ ಪತ್ತೆ ಮಾಡಬಹುದು.
ಹೇಗೆ ಮಾತಾಡಿದ್ರೆ (How to Talk) ಇಷ್ಟ ಅಂತ ಗೊತ್ತಾಗಿದೆ: ಪತಿಯೊಂದಿಗೆ (Husband) ಅಥವಾ ಪತ್ನಿಯೊಂದಿಗೆ (Wife) ಹೇಗೆ ಮಾತನಾಡಿದರೆ ಸೂಕ್ತವಾಗಿ ಸಂವಹನ (Communication) ನಡೆಸಬಹುದು ಎನ್ನುವುದು ನಿಮಗೆ ತಿಳಿಯುತ್ತಿರುತ್ತದೆ. ಮದುವೆಯಾದ (Marriage) ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ. ಮನಸ್ಸಿಗೆ ಬಂದಿದ್ದನ್ನೆಲ್ಲ ಮಾತನಾಡುವುದು, ಏನಾದರೂ ಬೇಸರ ಪಟ್ಟುಕೊಳ್ಳುವುದು ಆಗ ಸಾಮಾನ್ಯವಾಗಿತ್ತು. ಆದರೆ, ಈಗ ಹಾಗಲ್ಲ. ಇಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ಮಾತನಾಡುವುದು, ಹೇಗೆ, ಏನು ಮಾತನಾಡಬೇಕೆಂದು ತಿಳಿದಿದ್ದೀರಿ. ಜಗಳವಾಡುವುದು ಪ್ರಯೋಜನಕಾರಿಯಲ್ಲ ಎನ್ನುವುದು ನಿಮಗೀಗ ಅರ್ಥವಾಗಿದೆ. ಬೇಸರ, ಕೋಪ ಬಂದರೂ ಸುಮ್ಮನಿರುವುದನ್ನು, ನಿಭಾಯಿಸುವುದನ್ನು ಕಲಿತಿದ್ದೀರಿ.
ದೀರ್ಘಕಾಲದವರೆಗೆ ಸಂಗಾತಿಯನ್ನು ಸೆಕ್ಸ್‌ಗೆ ಕಾಯಿಸೋದು ಮಾನಸಿಕ ಕ್ರೌರ್ಯ: ಅಲಹಾಬಾದ್ ಹೈಕೋರ್ಟ್!
ಸಂಘರ್ಷಗಳನ್ನು (Conflicts) ಸಮರ್ಥವಾಗಿ ಎದುರಿಸ್ತಾರೆ: ಜೀವನದಲ್ಲಿ (Life) ಏನಾದರೊಂದು ಸವಾಲು (Challenges), ಸಂಘರ್ಷಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ಜತೆಯಾಗಿ ಎದುರಿಸುವುದು ಅಗತ್ಯ. ನಿಮಗೆ ಉತ್ತಮ ಸಂವಹನ ಮಾಡುವ ಕಲೆ ಒದಗಿದೆ ಎಂದಾದರೆ, ಸಂಘರ್ಷಗಳನ್ನೂ ಸೂಕ್ತವಾಗಿ ನಿಭಾಯಿಸಬಲ್ಲಿರಿ. ಸಂಗಾತಿಯ (Partner) ಅಭಿಪ್ರಾಯಗಳನ್ನು ಗೌರವಿಸುವುದು, ಆಯ್ಕೆಯ ವಿಚಾರದಲ್ಲಿ ಇಬ್ಬರೂ ಹೊಂದಾಣಿಕೆ (Adjustment) ಮಾಡಿಕೊಳ್ಳುವ ಮೂಲಕ ಬಿಕ್ಕಟ್ಟು ಸೃಷ್ಟಿಯಾಗದಂತೆ, ಸೃಷ್ಟಿಯಾದರೆ ಎದುರಿಸುವುದನ್ನು ಕಲಿತಿದ್ದರೆ ಖಂಡಿತವಾಗಿ ನೀವು ಬೆಳೆಯುತ್ತಿದ್ದೀರಿ ಎಂದರ್ಥ.
“ನಾನುʼ ಹೋಗಿ ನಾವು (We): ಸಾಮಾನ್ಯವಾಗಿ ವಿವಾಹಕ್ಕೂ ಮುನ್ನ ನಮ್ಮದೇ ವಿಚಾರಗಳಲ್ಲಿ ನಾವು ಮುಳುಗಿರುತ್ತೇವೆ. “ನನಗೆ ಅದು ಇಷ್ಟ, ನಾನು ಇದನ್ನು ಮಾಡುತ್ತೇನೆʼ ಎನ್ನುವುದು ವಿವಾಹದ ಬಳಿಕ ಕಡಿಮೆಯಾಗುತ್ತದೆ. ಆ ಸ್ಥಳದಲ್ಲಿ ನಾವು ಎನ್ನುವ ಶಬ್ದ ಬಂದಿರುತ್ತದೆ. “ನಿನ್ನ ನೆಂಟರು, ನಿನ್ನ ಅಪ್ಪ-ಅಮ್ಮʼ ಎನ್ನುವ ಶಬ್ದಗಳು ಕಡಿಮೆಯಾಗಿ “ನಮ್ಮ ನೆಂಟರು, ನಮ್ಮ ಪಾಲಕರುʼ ಇಂತಹ ಮಾತುಗಳು ಹೆಚ್ಚಾಗಿದ್ದರೆ ನಿಮ್ಮ ಮಾನಸಿಕ ಹಾಗೂ ಕೌಟುಂಬಿಕ ಸ್ವಾಸ್ಥ್ಯಕ್ಕೆ ಬೇಕಾದ ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೀರಿ.
ಹತ್ತಿರವಿರುವಾಗ ಕಂಫರ್ಟ್ (Comfort), ಸದಾಕಾಲ ಜತೆಯಾಗಿರಲೇ ಬೇಕೆಂದಿಲ್ಲ!: ಕೆಲವರನ್ನು ನೋಡಿ. ಯಾರು ಎಲ್ಲಿಗೇ ಹೊರಟರೂ ಇಬ್ಬರೂ ಇರಲೇಬೇಕು. ಮತ್ತೊಬ್ಬರಿಗೆ ಇಷ್ಟವಿದೆಯೋ ಇಲ್ಲವೋ ಗೊತ್ತಿಲ್ಲ. ಕೆಲವೊಮ್ಮೆ ಇದು ಬಲವಂತದ ಕೆಲಸವಾಗುತ್ತದೆ. ಹೀಗೆ ಮಾಡುವ ಬದಲು ಸಂಗಾತಿಗೆ ಸಾಧ್ಯವಿಲ್ಲದ ಸಮಯದಲ್ಲಿ ಒಬ್ಬರೇ ಸಮಾರಂಭಗಳನ್ನು ಅಟೆಂಡ್ ಮಾಡುವುದು ಬೆಟರ್. ಜತೆಯಾಗಿರುವ ಸನ್ನಿವೇಶಗಳಲ್ಲಿ ಖುಷಿಯಾಗಿರುವುದು ಮುಖ್ಯ. ಇಂತಹ ಜೋಡಿ ನೀವಾಗಿದ್ದರೆ ನಿಮ್ಮ ಸಂಬಂಧ ಚೆನ್ನಾಗಿದೆ, ನೀವು ಮತ್ತೊಬ್ಬರ ಸ್ಪೇಸ್ ಅನ್ನು ಗೌರವಿಸುತ್ತೀರಿ ಎಂದರ್ಥ.
Relationship Tips: ನೀವು ಹೀಗೆ ಮಾಡೋದ್ರಿಂದಾನೇ ಸಂಬಂಧ ಮುರಿದು ಬೀಳೋದು
ಸಂಗಾತಿಯೆದುರು ದೌರ್ಬಲ್ಯ (Weakness) ತೋರ್ಪಡಿಸಲು ಹಿಂದೇಟು ಹಾಕದಿರುವುದು, ಒಬ್ಬರನ್ನೊಬ್ಬರು ಖುಷಿಪಡಿಸಲು ಯತ್ನಿಸುವುದು, ಪರಸ್ಪರ ನಂಬಿಕೆ (Trust) ಹೊಂದಿರುವುದು, ಸ್ನೇಹಿತರು, ಕುಟುಂಬಸ್ಥರು ನಿಮ್ಮನ್ನು ನೋಡಿ ಮೆಚ್ಚಿಕೊಳ್ಳುವುದು, ಸಂಬಂಧದಲ್ಲಿ ಸುರಕ್ಷಾ (Secure) ಭಾವ ಹೊಂದಿರುವುದು ಇವೆಲ್ಲ ನೀವು ಜತೆಯಾಗಿ ಬೆಳೆಯುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತವೆ.