ಜೀವನದಲ್ಲಿ ಯಶಸ್ಸು ಹೊಂದಲು ಭಾವನಾತ್ಮಕ ಪ್ರಬುದ್ಧತೆ ಅಗತ್ಯ. ಭಾವನಾತ್ಮಕವಾಗಿ ಮೆಚ್ಯೂರಿಟಿ ಹೊಂದಿರುವ ಜನ ಎಲ್ಲೇ ಇದ್ದರೂ ನೆಮ್ಮದಿಯಿಂದ ಜೀವಿಸಬಲ್ಲರು. ಮಕ್ಕಳಲ್ಲಿ ಈ ಗುಣ ಹೆಚ್ಚಿಸಲು ಹಾಗೂ ಬೆಳೆಸಲು ಪಾಲಕರು ಶ್ರಮವಹಿಸಬೇಕು.
ಯಶಸ್ಸಿಗೆ ಏನು ಅಗತ್ಯ? ಐಕ್ಯೂ ಮಟ್ಟ ಹೆಚ್ಚಾಗಿರುವುದೇ? ಇಕ್ಯೂ ಮಟ್ಟ ಚೆನ್ನಾಗಿರುವುದೇ ಅಥವಾ ಕಷ್ಟಪಟ್ಟು ದುಡಿಯುವ ಗುಣವೇ ಅಥವಾ ಏನು? ಈ ಪ್ರಶ್ನೆಗೆ ಹಲವು ಮಗ್ಗಲುಗಳಲ್ಲಿ ಹಲವಾರು ಉತ್ತರ ಸಿಗುತ್ತವೆ. ಆದರೆ, ಅಧ್ಯಯನಗಳ ಪ್ರಕಾರ, ಮಕ್ಕಳು ಬೆಳೆದು ದೊಡ್ಡವರಾದಾಗ ಅವರ ಯಶಸ್ಸಿಗೆ ಐಕ್ಯೂಗಿಂತ ಹೆಚ್ಚಾಗಿ ಭಾವನಾತ್ಮಕವಾಗಿ ಪ್ರಬುದ್ಧತೆ ಅಗತ್ಯವಾಗಿರುತ್ತವೆ. ಎಷ್ಟೇ ಬುದ್ಧಿವಂತರಾಗಿದ್ದರೂ ಭಾವನಾತ್ಮಕ ಮೆಚ್ಯೂರಿಟಿ ಇಲ್ಲವಾದರೆ ಅವರು ಮೇಲೆ ಏಳುವ ಸಾಧ್ಯತೆ ಕಡಿಮೆ. ಮಕ್ಕಳಲ್ಲಿ ಭಾವನಾತ್ಮಕ ಪ್ರಬುದ್ಧತೆ ಬೆಳೆಸುವಲ್ಲಿ ಪಾಲಕರ ಜವಾಬ್ದಾರಿ ಸಾಕಷ್ಟಿರುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾವನಾತ್ಮಕ ಪ್ರಬುದ್ಧತೆ ಅಥವಾ ತಿಳಿವಳಿಕೆ ಇಲ್ಲವಾದರೆ ಏನಾದರೂ ಸಂಭವಿಸಿಬಿಡಬಹುದು. ಬಾಲ್ಯ, ಯೌವನ, ವಯಸ್ಕ ಎಲ್ಲ ಹಂತದಲ್ಲೂ ಇದು ಅಗತ್ಯ. ಹೀಗಾಗಿ, ಪಾಲಕರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಪಾಲಕರು ತಮ್ಮ ವರ್ತನೆ, ಅಭ್ಯಾಸಗಳ ಮೂಲಕವೂ ಮಕ್ಕಳಲ್ಲಿ ಭಾವನಾತ್ಮಕ ಪ್ರಬುದ್ಧತೆ ಬೆಳೆಸಬಹುದು.
• ಭಾವನೆಗಳ ಬಗ್ಗೆ ಮಾತುಕತೆ (Talk about Emotions)
ಮಕ್ಕಳೊಂದಿಗೆ (Children) ಭಾವನೆಗಳ ಬಗ್ಗೆ ಏನು ಮಾತನಾಡುವುದು ಎನಿಸಬಲ್ಲದು. ಆದರೆ, ಮುಕ್ತವಾಗಿ ಮಾತನಾಡುವ ಅಭ್ಯಾಸ ಮಾಡಿಕೊಂಡಷ್ಟೂ ಉತ್ತಮ. ಅವರಿಗೆ ಅರ್ಥವಾಗುವಂತೆ, ಅವರ ಭಾಷೆಯಲ್ಲಿ, ಬೇರೆ ಬೇರೆ ಉಪಮೆಗಳೊಂದಿಗೆ ಭಾವನೆಗಳ (Feelings) ಬಗ್ಗೆ ವಿವರಿಸುವುದು ಉತ್ತಮ. ಮಕ್ಕಳಿಗೆ ಯಾವುದಾದರೊಂದು ವಿಚಾರದಲ್ಲಿ ಬೇಸರವಾಗುತ್ತದೆ. ಅದರ ಬಗ್ಗೆಯೇ ಮಾತನಾಡಿ ಅವರಲ್ಲಿ ಅರಿವು ಮೂಡಿಸಬಹುದು. ಬೇಸರವಾದಾಗ (Bore) ಏನು ಮಾಡಬೇಕು, ಯಾಕೆ ಬೇಸರವಾಗುತ್ತದೆ, ಕೆಲವೊಮ್ಮೆ ಬೇಸರ ಅನಿವಾರ್ಯ ಹೇಗಾಗುತ್ತದೆ ಇತ್ಯಾದಿ ಮಾತನಾಡಬಹುದು. ಉಪದೇಶದ ಮಾದರಿಯಲ್ಲಿ ಹೇಳಿದರೆ ಅವರ ತಲೆಗೆ ಹೋಗುವುದಿಲ್ಲ. ಆಪ್ತ ಮಾತುಕತೆ (Open Conversation) ಮುಖ್ಯ.
Parenting Tips : ಎಷ್ಟೇ ಕಿರುಚಿದ್ರೂ ಮಕ್ಕಳು ಮಾತು ಕೇಳ್ತಿಲ್ವಾ? ಅದಕ್ಕಿಲ್ಲಿದೆ ಸೂಪರ್, ಸಿಂಪಲ್ ಟಿಪ್ಸ್
• ಮಕ್ಕಳ ಭಾವನೆಗಳಿಗೆ ದೃಢೀಕರಣ
ಮಕ್ಕಳಲ್ಲೂ ಸಹ ತಮ್ಮನ್ನು ಗೌರವಿಸಬೇಕು (Respect), ತಮ್ಮ ಭಾವನೆಗಳಿಗೆ ಮನ್ನಣೆ ದೊರೆಯಬೇಕು ಎನ್ನುವ ಬಯಕೆ ಇರುತ್ತದೆ. ಅದನ್ನು ನೇರವಾಗಿ ಹೇಳಲು ಅವರಿಂದ ಆಗುವುದಿಲ್ಲವಷ್ಟೆ. ಅವರ ಭಾವನೆಗಳನ್ನು ಗೌರವಿಸುವ ಮೂಲಕ, ಕೆಲವು ವಿಚಾರಗಳಲ್ಲಿ ಅವರಿಗೆ ತಿಳಿಹೇಳುವ ಮೂಲಕ ಅವರಲ್ಲಿ ಸ್ವಯಂ ಪ್ರೀತಿ (Self Compassion) ಬೆಳೆಸಬೇಕು. ತಮ್ಮ ಭಾವನೆಗಳಿಗೆ ಮನ್ನಣೆ ದೊರೆತಾಗ ಅವರಲ್ಲಿ ಸ್ವಯಂ ಕಾಳಜಿ (Care) ಹೆಚ್ಚುತ್ತದೆ. ಅವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದು, ಪ್ರಾಮಾಣಿಕವಾಗಿರುವುದು, ಭಾವನಾತ್ಮಕ ಸನ್ನಿವೇಶಗಳಲ್ಲಿ ಅವರನ್ನು ನಿರ್ಲಕ್ಷ್ಯ ಮಾಡದಿರುವುದು, ಅವರ ಉತ್ಸಾಹಕ್ಕೆ ತಣ್ಣೀರೆರಚದೆ ಇರುವುದು ಮುಖ್ಯ. ಅವರ ಸಮಸ್ಯೆಗಳನ್ನು (Problems) ಆಲಿಸುವಾಗ ಎಷ್ಟೇ ಟೆಂಪ್ಟ್ ಆದರೂ ಕೋಪೋದ್ರೇಕಕ್ಕೆ ಅವಕಾಶ ಇಲ್ಲದಂತೆ ಬಗೆಹರಿಸಬೇಕು.
• ಮಕ್ಕಳಲ್ಲಿ ಸ್ವಯಂ ಪ್ರೇರಣೆ ತುಂಬುವುದು
ಮಕ್ಕಳನ್ನು ಪದೇ ಪದೆ ಟೀಕಿಸುವ ಪಾಲಕರಿರುತ್ತಾರೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ (Confidence) ಕುಸಿಯುತ್ತದೆ. ಟೀಕಿಸುವ ಬದಲು ಅವರಿಗೆ ವಿಷಯ ಮನದಟ್ಟು ಮಾಡಿಸಲು ಯತ್ನಿಸಬಹುದು. ಅವರ ದೌರ್ಬಲ್ಯಗಳನ್ನು (Weakness) ಹೈಲೈಟ್ ಮಾಡಬಾರದು. ತಮ್ಮ ಕೆಲಸ ಮಾಡುವ ಸಮಯದಲ್ಲಿ ಅವರನ್ನು ಉತ್ತೇಜಿಸಬೇಕು, ಭರವಸೆ ವ್ಯಕ್ತಪಡಿಸಬೇಕು. ತಪ್ಪುಗಳನ್ನೇ (Mistakes) ಮಾಡದಂತೆ ರಕ್ಷಿಸುವ ಪರಿಪಾಠ ಒಳ್ಳೆಯದಲ್ಲ.
• ಸ್ವಯಂ ಅರಿವು
ಮಕ್ಕಳಲ್ಲಿ ಸ್ವಯಂ ಅರಿವು ಮೂಡಿಸುವುದು ಏಕಾಏಕಿ ಆಗುವ ಕೆಲಸವಲ್ಲ. ಬಾಲ್ಯದಿಂದಲೂ ನಿಧಾನವಾಗಿ ಆಗುವ ಕಾರ್ಯ ಇದು. ಓದುವ ಅಭ್ಯಾಸ ಬೆಳೆಸುವುದು ಇದರಲ್ಲಿ ಒಂದು. ಓದುವ ಮಕ್ಕಳಲ್ಲಿ ಮತ್ತೊಂದು ಮುಖ್ಯವಾದ ಇಕ್ಯೂ (EQ) ಕೌಶಲ ಬೆಳೆಯುತ್ತದೆ ಎಂದು ಅಧ್ಯಯನಗಳು ಹೇಳಿವೆ.
Twitter Post : ಪೋಷಕರ ಸಭೇಲಿ 27 ಅಮ್ಮಂದಿರು, ಬಂದಿದ್ದು ಒಬ್ಬ ಅಪ್ಪ, ಇದೆಂಥಾ ಭಾರತದ ಪೇರೆಂಟಿಂಗ್?
• ಜೀವನಪಾಠ (Lesson from Life)
ಒತ್ತಡದ (Stress) ಸನ್ನಿವೇಶಗಳಲ್ಲಿ ಪಾಲಕರು ಅಥವಾ ಹಿರಿಯರು ಹೇಗೆ ವರ್ತಿಸುತ್ತಾರೆ ಎನ್ನುವುದು ಮಕ್ಕಳ ಮೇಲೆ ಗಾಢ ಪ್ರಭಾವ ಬೀರುತ್ತದೆ. ಹೀಗಾಗಿ, ಯಾವುದೇ ಸನ್ನಿವೇಶದಲ್ಲಿ ದೃಢಚಿತ್ತದಿಂದ ವರ್ತಿಸುವ ಅಭ್ಯಾಸವನ್ನು ಮೊದಲು ಪಾಲಕರು ರೂಢಿಸಿಕೊಳ್ಳಬೇಕು. ಮಕ್ಕಳೆದುರು ಪಾಲಕರು ಜಗಳವಾಡುವುದು, ಅಳುವುದು ಅವರನ್ನು ದುರ್ಬಲಗೊಳಿಸುತ್ತವೆ.