ಆತ್ಮರತಿ ಕೆಟ್ಟ ಗುಣಗಳಲ್ಲಿ ಒಂದು ಎನ್ನುವುದು ನಮ್ಮ ಅನುಭವಕ್ಕೆ ಬಂದಿರುತ್ತದೆ. ಆದರೆ, ಈ ಗುಣದಿಂದಾಗಿ ಮತ್ತೊಬ್ಬರನ್ನು ನಿಯಂತ್ರಿಸುವ ಪ್ರವೃತ್ತಿ ಹೆಚ್ಚುತ್ತದೆ. ಹೀಗಾಗಿ, ಆತ್ಮರತಿಯುಳ್ಳ ಜನ ತಮ್ಮ ಸಂಗಾತಿಯನ್ನು ಗೋಳಾಡಿಸುವುದು ಸಾಮಾನ್ಯ.
ವ್ಯಕ್ತಿತ್ವದ ಬಗೆಗಳು ಭಿನ್ನ. ಕೆಲವರು ಸ್ವಾರ್ಥರಹಿತವಾಗಿದ್ದರೆ, ಮತ್ತೆ ಕೆಲವರು ನಿಃಸ್ವಾರ್ಥಿಗಳು. ಪ್ರೀತಿಯೇ ಜೀವ ಎಂದು ಕೆಲವರು ಹೇಳಿದರೆ, ಕೆಲವರಿಗೆ ಅದೆಲ್ಲ ವಿಚಾರವೇ ಅಲ್ಲ. ಹಾಗೆಯೇ, ಕೆಲವರು ಮ್ಯಾನಿಪ್ಯುಲೇಟಿವ್ ಅಂದರೆ, ಇತರರನ್ನು ಪ್ರಚೋದನೆಗೆ ಒಳಪಡಿಸುವ ಗುಣ ಹೊಂದಿರುತ್ತಾರೆ. ಪ್ರೀತಿಪಾತ್ರರೊಂದಿಗೂ ಇಂತಹ ಗುಣ ಪ್ರದರ್ಶಿಸುತ್ತಾರೆ. ಆತ್ಮರತಿ ಹೊಂದಿರುವ ಜನ ಇದರಲ್ಲಿ ಇನ್ನಷ್ಟು ಪಳಗಿರುತ್ತಾರೆ. ತಿಳಿದೋ ತಿಳಿಯದೆಯೋ ಇಂಥವರ ಬಲೆಯಲ್ಲಿ ಸಿಲುಕಿದರೆ ಜೀವನ ನರಕವಾಗುತ್ತದೆ. ಇಂಥವರು ನಿಮ್ಮ ಲವರ್ ಆಗಿದ್ದರೆ ಹೇಗೆಲ್ಲ ನಿಮ್ಮನ್ನು ಆಟವಾಡಿಸಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕು. ಅದರಿಂದ ಹೇಗೆ ಬಚಾವಾಗಬೇಕು ಎನ್ನುವುದನ್ನು ಅರಿತುಕೊಳ್ಳಬೇಕು. ಆತ್ಮರತಿಯುಳ್ಳ ಜನ ತಮ್ಮ ಸಂಗಾತಿಯನ್ನು ಸಿಕ್ಕಾಪಟ್ಟೆ ನಿಯಂತ್ರಿಸಲು ಬಯಸುತ್ತಾರೆ. ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಾರೆ. ಅವರ ಸಾಂಗತ್ಯ ನಿಮ್ಮ ದೌರ್ಬಲ್ಯವಾಗಬಹುದು. ಅವರೊಂದಿಗೆ ಖುಷಿಯಾಗಿರಲು ಸಾಧ್ಯವಾಗದೆ, ಸಂಬಂಧದಿಂದ ಹೊರಬರಲೂ ಸಾಧ್ಯವಾಗದೆ ಒದ್ದಾಡುವಂತಾಗಬಹುದು. ಆತ್ಮರತಿಯುಳ್ಳವರ ಭಾವನೆ ಮತ್ತು ಉದ್ದೇಶಗಳ ಬಗ್ಗೆಯೇ ಯೋಚನೆ ಮಾಡುತ್ತ ಬಸವಳಿಯುವಂತಾಗಬಹುದು. ಹೀಗಾಗಿ, ಎಚ್ಚರಿಕೆ ಅಗತ್ಯ.
• ಅಧಿಕ ಗಮನ (Over Attention)
ಆತ್ಮರತಿಯ (Narcissist) ಜನ ನಿಮ್ಮ ಬಗ್ಗೆ ಅಧಿಕ ಗಮನ ನೀಡುತ್ತ ಉಡುಗೊರೆ ನೀಡಬಹುದು. ದುಬಾರಿ ಜಾಗಕ್ಕೆ ಕರೆದುಕೊಂಡು ಹೋಗಬಹುದು. ಈ ಮೂಲಕ ಭಾವನಾತ್ಮಕವಾಗಿ (Emotional) ನಿಮ್ಮನ್ನು ಪ್ರಚೋದಿಸಲು (Manipulate) ಯತ್ನಿಸಬಹುದು. ಯಾವುದೇ ಕಾರಣವಿಲ್ಲದೆ ಅತಿಯಾಗಿ ಆದ್ಯತೆ ನೀಡುವ ಮೂಲಕ ನಿಮ್ಮನ್ನು ಕಟ್ಟಿಹಾಕಿದಂತೆ ಮಾಡಬಹುದು. ಇಂತಹ ವರ್ತನೆ ಸಂಬಂಧಕ್ಕೆ ಅನಾರೋಗ್ಯಕರ.
ಆತ್ಮವಿಶ್ವಾಸ ತುಂಬಿ ತುಳಕೋ ಮಹಿಳೆ ಬಗ್ಗೆ ಗಂಡಸ್ಯಾಕೆ ಹೀಗ್ ಯೋಚಿಸುತ್ತಾನೆ?
• ಅತಿಯಾದ ಆತ್ಮೀಯತೆ (Intimacy)
ಸಾಮಾನ್ಯವಾಗಿ ಆತ್ಮರತಿಯುಳ್ಳ ಜನ ಬಹುಬೇಗ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನಿಮ್ಮ ಬಗ್ಗೆ ಅತಿಯಾದ ಆತ್ಮೀಯತೆ ತೋರುತ್ತ ನಿಮಗೆ ನಿಮ್ಮ ಆತ್ಮದ ಗೆಳೆಯ (Soul mate) ದೊರಕಿದ ಭಾವನೆ ಮೂಡುವಂತೆ ವರ್ತಿಸಬಹುದು. ಬಹುಬೇಗ ಮದುವೆಯಾಗುವಂತೆ ಒತ್ತಾಯಿಸಬಹುದು.
• ಪ್ರತಿಬಿಂಬದ (Mirror) ವರ್ತನೆ
ನೀವೇನು ಮಾಡುತ್ತೀರೋ ಹಾಗೆಯೇ ತಾವೂ ಇರಲು ಯತ್ನಿಸಬಹುದು. ಸಾಮಾನ್ಯವಾಗಿ ಆತ್ಮರತಿಯ ಜನ ನಿಮ್ಮನ್ನು ಹೇಗಾದರೂ ನಿಯಂತ್ರಿಸಲು ಬಯಸುತ್ತಾರೆ. ಇದರಿಂದ ಆರಂಭದಲ್ಲಿ ಪರ್ಫೆಕ್ಟ್ ಮ್ಯಾಚ್ ನಂತೆ ಕಂಡರೂ ಕ್ರಮೇಣ ಇದು ಮ್ಯಾನಿಪ್ಯುಲೇಟಿವ್ ವರ್ತನೆ ಎನ್ನುವುದು ಅರಿವಾಗುತ್ತದೆ. ನಿಮ್ಮೊಂದಿಗೆ ಆಳವಾದ ಬಾಂಧವ್ಯ (Relation) ಹೊಂದಲು ಸಹ ಹೀಗೆ ಮಾಡುವ ಸಾಧ್ಯತೆ ಇರುತ್ತದೆ. ಆದರೆ, ಅವರು ಹೇಗಾದರೂ ನಿಮ್ಮನ್ನು ನಿಯಂತ್ರಿಸಲು ಯತ್ನಿಸುತ್ತಲೇ ಇರುತ್ತಾರೆ.
• ಒಬ್ಬಂಟಿಯಾಗಿಸಲು (Isolate) ಯತ್ನ
ನಿಮ್ಮ ಸ್ನೇಹ ವಲಯ, ಕುಟುಂಬದವರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತ ಭಾವನಾತ್ಮಕವಾಗಿ ನಿಮ್ಮನ್ನು ಒಂಟಿಯಾಗಿಸಲು ಯತ್ನಿಸಬಹುದು. ಅವರಿಂದ ನಿಮ್ಮನ್ನು ದೂರ ಮಾಡಲು ನೋಡಬಹುದು. ಭಾವನಾತ್ಮಕ ಬೆಂಬಲಕ್ಕೆ ತಮ್ಮನ್ನೇ ಆಧರಿಸುವಂತೆ ಮಾಡುವುದು ಅವರ ಉದ್ದೇಶವಾಗಿರುತ್ತದೆ. ನಿಮ್ಮ ಕುಟುಂಬದವರು, ಸ್ನೇಹಿತರ ನೆಗೆಟಿವ್ ಗುಣ ಅಥವಾ ದೌರ್ಬಲ್ಯ, ಕೆಟ್ಟ ಘಟನೆಗಳನ್ನೇ ಹೇಳುತ್ತ ನಿಮ್ಮನ್ನು ಕುಗ್ಗಿಸಲು ನೋಡಬಹುದು.
• ಭವಿಷ್ಯದ ಕನಸು (Future Faking)
ಸಂಬಂಧದಲ್ಲಿ ಎಲ್ಲರೂ ಸುಂದರವಾದ ಭವಿಷ್ಯದ ಕನಸುಗಳನ್ನು ಕಾಣುತ್ತಾರೆ. ಆತ್ಮರತಿಯುಳ್ಳ ಜನರೂ ಇದಕ್ಕೆ ಹೊರತಲ್ಲ. ಆದರೆ, ಇವರು ಅತಿಯಾಗಿ ಭವಿಷ್ಯದ ಬಗ್ಗೆ ಕನಸುಗಳನ್ನು (Dream) ಬಿತ್ತುತ್ತಾರೆ. ಮದುವೆ, ಮನೆ, ಭವಿಷ್ಯವೆಂದು ನಿಮ್ಮೊಳಗೆ ಕನಸನ್ನು ಬಿತ್ತುತ್ತಾರೆ. ನೀವು ದೂರವಾಗದಂತೆ ಮಾಡುವುದೊಂದೇ ಅವರ ಉದ್ದೇಶ. ಸಂಬಂಧದಲ್ಲಿ ಪ್ರಚೋದಿಸುವಂತಹ ವರ್ತನೆಗಳನ್ನು ಗುರುತಿಸಲು ಖಂಡಿತವಾಗಿ ಕಷ್ಟವಾಗುತ್ತದೆ. ಏನೊಂದೂ ತಳಹದಿ ಇಲ್ಲದೇ ನಿಮಗೆ ಅದ್ಭುತ ಭವಿಷ್ಯದ ಗ್ಯಾರೆಂಟಿ ನೀಡುತ್ತಾರೆ ಎಂದರೆ ಅಲ್ಲೊಂದು ಪೊಳ್ಳು ಪ್ರಪಂಚ ಇರಬಹುದು ಎನ್ನುವ ಎಚ್ಚರಿಕೆಯಿರಲಿ.
Personality Tips: ವ್ಯಕ್ತಿತ್ವಕ್ಕೆ ತಕ್ಕಂತೆ ವೃತ್ತಿ ಆಯ್ಕೆ ಮಾಡಿಕೊಳ್ಳೋದು ಹೇಗೆ?
• ಅಪರಾಧಿ ಪ್ರಜ್ಞೆ (Guilt)
ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಜತೆಗೆ, ನೀವು ಅದನ್ನು ಪ್ರಶ್ನಿಸಿದರೆ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಮೂಡಿಸಲು ಯತ್ನಿಸಬಹುದು. ನಿಮಗಾಗಿ ಇಷ್ಟು ಕಷ್ಟಪಟ್ಟೆ, ಸಹಾಯ (Help) ಮಾಡಿದೆ ಎಂದೆಲ್ಲ ನೆನಪಿಸಲು ಯತ್ನಿಸುತ್ತಾರೆ. ಜತೆಗೆ, ಭಾವನಾತ್ಮಕ ಏರಿಳಿತ ಉಂಟಾಗುವಂತೆ ಮಾಡಬಹುದು. ಒಮ್ಮೆ ನಿಮ್ಮನ್ನು ಅತ್ಯುತ್ತಮ ಸಂಗಾತಿ ಎಂದು ಹೇಳಿದರೆ, ಮತ್ತೊಮ್ಮೆ ಕಟುವಾಗಿ ಟೀಕಿಸಬಹುದು.