ಆತನ ಅಕ್ಕ ಮೃತಪಟ್ಟಳು; ಅವಳ ಕೈ ದಾನ ಪಡೆದಾಕೆ ಈ ಅಣ್ಣನಿಗೆ ರಾಖಿ ಕಟ್ಟಿದಳು: ಧರ್ಮ ಮೀರಿದ ಭಾವುಕ ಸ್ಟೋರಿ

Published : Aug 29, 2026, 10:04 PM IST
Raksha Bandhan

ಸಾರಾಂಶ

ಅಪಘಾತದಲ್ಲಿ ಕೈ ಕಳೆದುಕೊಂಡ ಮುಸ್ಲಿಂ ಯುವತಿ ಅನಮ್ತಾಗೆ, ಮೃತಪಟ್ಟ ಹಿಂದೂ ಬಾಲಕಿಯ ಕೈಯನ್ನು ಕಸಿ ಮಾಡಲಾಗುತ್ತದೆ. ರಕ್ಷಾ ಬಂಧನದ ದಿನ ಅನಮ್ತಾ, ಆ ಬಾಲಕಿಯ ಅಣ್ಣನಿಗೆ ಅದೇ ಕೈಯಿಂದ ರಾಖಿ ಕಟ್ಟಿ, ಧರ್ಮವನ್ನು ಮೀರಿದ ಸಹೋದರ-ಸಹೋದರಿ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತಾಳೆ. ಈ ಕಥೆಯು ಕೋಮು ಸೌಹಾರ್ದತೆಯ ಅಪರೂಪದ ಸಂದೇಶವನ್ನು ಸಾರುತ್ತದೆ.

ದೇಶದೆಲ್ಲೆಡೆ ನಿನ್ನೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಹೋದರ ಪ್ರೇಮವನ್ನು ಮೆರೆಯುವ, ಅಣ್ಣ-ತಂಗಿಯ ಬಾಂಧವ್ಯವನ್ನು ಬೆಸೆಯುವ ಈ ರಕ್ಷಾ ಬಂಧನಕ್ಕೆ ಅದರದ್ದೇ ಆದ ಮಹತ್ವವಿದೆ. ಅದರದ್ದೇ ಆದ ಪಾವಿತ್ರ್ಯತೆಯೂ ಇದೆ. ಆದರೆ ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ವೈಮನಸ್ಸು, ರಾಜಕಾರಣಿಗಳೇ ಮುಂದಾಗಿ ಮತಕ್ಕಾಗಿ ವಿಷ ಬೀಜ ಬಿತ್ತುವುದು... ಇವೆಲ್ಲವುಗಳ ನಡುವೆ, ಮುಸ್ಲಿಂ ಮತ್ತು ಹಿಂದೂ ಅಣ್ಣ-ತಂಗಿಯ ಸ್ಟೋರಿ ಮಾತ್ರ ಎಂಥವರ ಕಣ್ಣಿನಲ್ಲಿಯೂ ನೀರು ತರಿಸುವಂತಿದೆ.

ರಾಖಿಯು ಎಂದಿಗೂ ಯಾರು ಯಾವ ಧರ್ಮವನ್ನು, ಯಾವ ಜಾತಿಯನ್ನು, ಯಾವ ನಂಬಿಕೆಯನ್ನು ಅನುಸರಿಸುತ್ತಾರೆ ಎಂದು ಕೇಳುವುದೇ ಇಲ್ಲ. ಇಲ್ಲಿರುವುದು ಕೇವಲ ಆರೈಕೆ, ರಕ್ಷಣೆ ಮತ್ತು ಕುಟುಂಬದ ಭರವಸೆಯ ಸೂಚನೆ. ಮುಂಬೈನ ಅನಮ್ತಾ ಅಹ್ಮದ್‌ ಎಂಬ ಯುವತಿಗೆ, ಆ ಭರವಸೆ ಅನಿರೀಕ್ಷಿತ ರೂಪವನ್ನು ಪಡೆದುಕೊಂಡಿತು. ಅವಳು ಸಹೋದರನೊಂದಿಗೆ ಬೆಳೆಯಲಿಲ್ಲ. ನಂತರ, ಜೀವನವನ್ನು ಬದಲಾಯಿಸುವ ಅಪಘಾತದ ಬಳಿಕ ಆಕೆಗೆ ತನಗೊಬ್ಬ ಹಿಂದೂ ಅಣ್ಣ ಸಿಗುತ್ತಾನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ಈ ಸ್ಟೋರಿ ಶುರುವಾಗುವುದು 2022 ರಲ್ಲಿ. ಅನಮ್ತಾ 13 ವರ್ಷದವಳಿದ್ದಾಗ ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಚಿಕ್ಕಮ್ಮನನ್ನು ಭೇಟಿ ಮಾಡುತ್ತಿದ್ದಳು. ಆ ಸಮಯದಲ್ಲಿ ಅವಳಿಗೆ ಅಪಘಾತ ಆಗಿ ಹೋಯ್ತು. ಅವಳು ಸ್ಥಳೀಯ ಆಸ್ಪತ್ರೆಯಲ್ಲಿ ಎಚ್ಚರವಾದಾಗ, ಅವಳ ಪೋಷಕರು ಅಳುತ್ತಿದ್ದರು. ಮೈಯೆಲ್ಲಾ ಉರಿಯುತ್ತಿತ್ತು. ಕೊನೆಗೆ ಗೊತ್ತಾಗಿದ್ದು, ಆಕೆಯ ಬಲಗೈ ಕಟ್​ ಮಾಡಲಾಗಿದೆ ಎನ್ನುವುದು! ಅಪಘಾತಕ್ಕೆ ಕೈಗಳು ಸುಟ್ಟು ಹೋಗಿದ್ದವು. ಆಕೆಯ ಬಲಗೈಯನ್ನು ಉಳಿಸಲು ಸಾಧ್ಯವಿಲ್ಲ ಮತ್ತು ಅದನ್ನು ಕತ್ತರಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದಾಗ 13 ವರ್ಷದ ಬಾಲೆಯ ಸ್ಥಿತಿ ಭಯಾನಕವಾಗಿತ್ತು. ಆಕೆಯ ಎಡಗೈ ಕೂಡ ತೀವ್ರವಾಗಿ ಸುಟ್ಟುಹೋಗಿತ್ತು ಮತ್ತು ಕೇವಲ 20% ಮಾತ್ರ ಕಾರ್ಯನಿರ್ವಹಿಸುತ್ತಿತ್ತು.

ಬಹುಮುಖ ಪ್ರತಿಭೆಯ ಬಾಲಕಿ

ಅಪಘಾತಕ್ಕೂ ಮೊದಲು, ಅನಮ್ತಾ ಈಜುವುದು, ಸ್ಕೇಟಿಂಗ್ ಮತ್ತು ನೃತ್ಯವನ್ನು ಇಷ್ಟಪಟ್ಟಿದ್ದಳು. ತನ್ನ ತೋಳನ್ನು ಕಳೆದುಕೊಂಡರೂ ಅವಳು ಅವುಳನ್ನು ಬಿಟ್ಟುಕೊಡಲಿಲ್ಲ. ಅವಳು ಈಜುವುದು, ನೃತ್ಯ ಮಾಡುವುದು ಮತ್ತು ಸ್ಕೇಟಿಂಗ್ ಮಾಡುವುದನ್ನು ಮುಂದುವರಿಸಿದಳು, ಒಂದು ತೋಳಿನಿಂದ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಳು. ಆದಾಗ್ಯೂ, ಬರೆಯುವುದು ಬೇರೆಯದೇ ಸವಾಲಾಗಿ ಪರಿಣಮಿಸಿತು. ವೈದ್ಯರು ಸದ್ಯ ಶಿಕ್ಷಣ ಮುಂದುವರೆಸದಿದ್ದರೆ ಒಳ್ಳೆಯದು ಎಂದರೂ ಅನಮ್ತಾ ಅದನ್ನು ಕೇಳಲಿಲ್ಲ. "ನನಗೆ ಯಾವುದೇ ಸಹಾನುಭೂತಿ ಬೇಡ. ನಾನು ಎಲ್ಲವನ್ನೂ ಮಾಡಬಲ್ಲೆ ಎಂದಳು. ಆಕೆ ಇನ್ನೂ ಚೇತರಿಸಿಕೊಳ್ಳುತ್ತಿರುವಾಗ ತಮ್ಮ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸಿದರು ಮತ್ತು ಅಂತಿಮವಾಗಿ ತಮ್ಮ ICSE ಮಂಡಳಿಗಳಲ್ಲಿ 92% ಅಂಕಗಳನ್ನು ಗಳಿಸಿದರು, ಅದರಲ್ಲಿ ಒಂದು ವಿಷಯದಲ್ಲಿ 98% ಅಂಕಗಳು ಸೇರಿವೆ.

ತೋಳಿನ ಆಪರೇಷನ್​

ತನ್ನ ತೋಳನ್ನು ಕಳೆದುಕೊಂಡ ಸುಮಾರು ಎರಡು ವರ್ಷಗಳ ನಂತರ, ಅನಮ್ತಾಗೆ ತೋಳು ಕಸಿ ಮಾಡಿಸಿಕೊಳ್ಳಬಹುದು ಎಂದು ವೈದ್ಯರು ತಿಳಿದುಕೊಂಡರು. ಅದೇ ವೇಳೆ ಅಲ್ಲೊಂದು ಹಿಂದೂ ಕುಟುಂಬ. 9 ವರ್ಷದ ಪುಟಾಣಿ ರಿಯಾ ಮಿಸ್ತ್ರಿ ಅಪಘಾತದಲ್ಲಿ ಸಾವನ್ನಪ್ಪಿದಳು. ಆಕೆಯ ಅಂಗಾಂಗಗಳನ್ನು ದಾನ ಮಾಡುತ್ತಿದ್ದಾರೆ ಎಂದು ಅನಮ್ತಾ ಪೋಷಕರಿಗೆ ತಿಳಿಯಿತು. ಮಾತುಕತೆಯ ಬಳಿಕ ಹಾಗೂ ವೈದ್ಯಕೀಯ ಪರೀಕ್ಷೆಯ ಬಳಿಕ, ಆಪರೇಷನ್​ ಸಕ್ಸಸ್​ ಕೂಡ ಆಯಿತು.

ಮರೆಯದ ಆ ಕ್ಷಣ

ಅಲ್ಲಿ ರಿಯಾಳ ಅಣ್ಣ ಶಿವಂ ಮಿಸ್ತ್ರಿ ರಕ್ಷಾ ಬಂಧನದ ಸಂದರ್ಭದಲ್ಲಿ ತನ್ನ ತಂಗಿ ಬದುಕಿಲ್ಲವಲ್ಲ ಎಂದು ಕಂಬನಿ ಮಿಡಿಯುತ್ತಿದ್ದ. ಆದರೆ ಅನಮ್ತಾ, ತನಗೆ ಕೈ ದಾನ ಮಾಡಿದ ಕುಟುಂಬವನ್ನು ಹುಡುಕಿ ಹೊರಟಳು. ತನಗೆ ಕೈ ದಾನ ಮಾಡಿದ ರಿಯಾಳ ಅಣ್ಣ ಶಿವಂಗೆ ಅದೇ ಕೈಗಳಿಂದ ರಾಖಿ ಕಟ್ಟಿದಾಗ, ಮನೆಯಲ್ಲಿ ಸಂಭ್ರಮದ ವಾತಾವರಣ. ಆಕೆಯನ್ನು ತಮ್ಮ ಸ್ವಂತ ಮಗಳಂತೆಯೇ ರಿಯಾ ಅಪ್ಪ-ಅಮ್ಮ ಅನಮ್ತಾಳಿಗೆ ಪ್ರೀತಿ ತೋರಿದರು. ಈ ಪರಿಯ ಪ್ರೀತಿಯನ್ನು ತಾನು ನಿರೀಕ್ಷಿಸಿಯೇ ಇರಲಿಲ್ಲ ಎನ್ನುತ್ತಾಳೆ ಅನಮ್ತಾ. ಒಟ್ಟಿನಲ್ಲಿ ಎಲ್ಲೆಡೆ ಕೋಮು ಜ್ವಾಲೆ ಹರಡುತ್ತಿರುವಾಗ ಈ ಅಪರೂಪದ ಅಣ್ಣ-ತಂಗಿಯ ಸಂಬಂಧ ಮಾತ್ರ ಎಂದೆಂದಿಗೂ ಅಜರಾಮರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗ್ನಿಪರೀಕ್ಷೆ ಸ್ಪರ್ಧಿಗೆ ಅಣ್ಣನಾದ 'ಬಿಗ್‌ ಬಾಸ್‌ ಆನೆ'.. ಪ್ರಾಮಿಸ್ ಉಳಿಸಿಕೊಂಡ ವಿನಯ್ ಗೌಡ!
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ಚಿಕ್ಕಣ್ಣ: ಎಂಗೇಜ್​ಮೆಂಟ್​ ಕ್ಯೂಟ್​ ಫೋಟೋಸ್​ ವೈರಲ್​