
ಆತ್ಮಕ್ಕೆ ಸಾವಿಲ್ಲ, ಅನೇಕರಿಗೆ ಹಲವು ಅಸೆಗಳಿರುತ್ತವೆ. ಪ್ರಪಂಚ ಸುತ್ತಬೇಕು, ವಿಮಾನದಲ್ಲಿ ಸಾಗಬೇಕು, ವಿದೇಶ ಪ್ರಯಾಣ ಮಾಡಬೇಕು ಹೀಗೆ ಒಬ್ಬೊಬ್ಬರ ಆಸೆ ಒಂದೊಂದು, ಕೆಲವೊಮ್ಮೆ ಈ ಆಸೆಗಳಲ್ಲಿ ಅರ್ಧದಷ್ಟೂ ಕೂಡ ಈಡೇರಿಸಲಾಗುವುದಿಲ್ಲ, ಕೆಲವರು ತಮ್ಮ ಈ ಆಸೆಗಳನ್ನು ಮಕ್ಕಳ ಬಳಿ ಆತ್ಮೀಯರ ಬಳಿ ಹೇಳಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕೆಲವರು ತಮ್ಮ ಪ್ರೀತಿಪಾತ್ರರ ಆಸೆಯನ್ನು ಅವರು ಬದುಕಿರುವಾಗಲೇ ಈಡೇರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಎಲ್ಲರಿಗೂ ಆ ಯೋಗ ಕೂಡಿ ಬರುವುದಿಲ್ಲ, ಕೆಲವರು ತಮ್ಮ ಆಸೆ ಈಡೇರುವ ಮೊದಲೇ ಬದುಕಿನ ಯಾತ್ರೆ ಮುಗಿಸಿ ಬಿಡುತ್ತಾರೆ. ಇದರಿಂದಾಗಿ ಬದುಕಿರುವ ಅವರ ಪ್ರೀತಿಪಾತ್ರರಾಗಿ ಛೇ ಅವರಾಸೆ ಈಡೇರಿಸಲಾಗಲಿಲ್ಲ ಎಂಬ ಕೊರಗೊಂದು ತಾವು ಬದುಕಿರುವವರೆಗೂ ಕಾಡುತ್ತಲೇ ಇರುತ್ತದೆ. ಅದೇ ರೀತಿ, ಇಲ್ಲೊಂದು ಕಡೆ ತಾಯಿಯ ಆಸೆ ಅವರು ಬದುಕಿರುವಾಗಲೇ ಈಡೇರಿಸಲಾಗದ ಮಗಳೊಬ್ಬಳು, ಅಮ್ಮ ಹೋದ ಮೇಲೂ ಆಕೆಯ ಆಸೆ ಈಡೇರಿಸುವ ಸಣ್ಣ ಪ್ರಯತ್ನ ಮಾಡಿದ್ದಾಳೆ. ಆಕೆಯ ಈ ಸಾಹಸದ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ.
ಅಂದಹಾಗೆ ತಾಯಿಯ ಆಸೆಯನ್ನು ಈಡೇರಿಸುವ ಪ್ರಯತ್ನ ಮಾಡಿದ ಯುವತಿಯ ಹೆಸರು ಕಾರಾ ಮೆಲಿಯಾ ಯುಕೆಯ ಓಲ್ಡ್‌ಹ್ಯಾಮ್‌ನ 24 ವರ್ಷದ ಕಾರಾ ಮೆಲಿಯಾ ಅವರ ತಾಯಿ ವೆಂಡಿ ಚಾಡ್ವಿಕ್ ಅವರಿಗೆ ಪ್ರಪಂಚ ಸುತ್ತಬೇಕು ಎನ್ನುವ ಅಗಾಧವಾದ ಬಯಕೆ ಇತ್ತಂತೆ. ಆದರೆ ಐದು ಮಕ್ಕಳ ತಾಯಿಯಾದ ಇವರ ಆಸೆಯನ್ನು ಮಕ್ಕಳು ಈಡೇರಿಸುವ ಮೊದಲೇ ತಾಯಿ ಇಹದ ಯಾತ್ರೆ ಮುಗಿಸಿ ಆಗಿತ್ತು. ಹೀಗಾಗಿ ಅವರ ಪ್ರಯಾಣದ ಆಸೆಯನ್ನು ಗೌರವಿಸಿ ಅವರ ಮಗಳಾದ ಕಾರಾ ಮೆಲಿಯಾ ಅವರ ಚಿತಾಭಸ್ಮವನ್ನು ಗಾಜಿನ ಬಾಟಲೊಂದಕ್ಕೆ ತುಂಬಿಸಿ ಅದರ ಜೊತೆಗೆ ಪುಟ್ಟದಾದ ಭಾವುಕ ಪತ್ರವನ್ನು ಬರೆದು ಸಮುದ್ರಕ್ಕೆ ಎಸೆದಿದ್ದಾರೆ.
ಪತ್ರದಲ್ಲಿ ಬರೆದಿರೋದೇನು?
ಹೀಗೆ ಚಿತಾಭಸ್ಮವಿದ್ದ ಬಾಟಲನ್ನು ಸಮುದ್ರಕ್ಕೆಸೆಯುವ ಮೊದಲು ಕಾರಾ ಮೆಲಿಯಾ ಪತ್ರದಲ್ಲಿ ಹೀಗೆ ಬರೆದಿದ್ದಾರೆ. ಈಕೆ ನನ್ನ ಅಮ್ಮ, ಅವಳು ನಿಮಗೆ ಸಿಕ್ಕರೆ ಆಕೆಯನ್ನು ಮತ್ತೆ ಸಮುದ್ರಕ್ಕೆ ಎಸೆಯಿರಿ, ಆಕೆ ಪ್ರಪಂಚ ಪರ್ಯಟನೆ ಮಾಡುತ್ತಿದ್ದಾಳೆ. ಧನ್ಯವಾದಗಳು, ಕಾರಾ ಮೆಲಿಯಾ ಯುಕೆ ಎಂದು ಬರೆದು ಅವರು ಪತ್ರವನ್ನು ಚಿತಾಭಸ್ಮದ ಜೊತೆ ಬಾಟಲ್‌ಗೆ ತುಂಬಿದ್ದಾರೆ.
ಬಿಬಿಸಿ ವರದಿಯ ಪ್ರಕಾರ ಕಾರಾ ಮೆಲಿಯಾ ಈ ಬಾಟಲನ್ನು ಸ್ಕೆಗ್ನೆಸ್ ಬೀಚ್‌ನಲ್ಲಿ ಸಮುದ್ರಕ್ಕೆ ಬಿಟ್ಟಿದ್ದರು. ಕಾರಾ ಅವರ ತಾಯಿ 51 ವರ್ಷದ ಚಾಡ್ವಿಕ್ ರೋಗನಿರ್ಣಯ ಮಾಡಲಾಗದ ಹೃದಯ ಸಂಬಂಧಿ ಸಮಸ್ಯೆಯಿಂದ ಇತ್ತೀಚೆಗೆ ಹಠಾತ್ ನಿಧನರಾಗಿದ್ದರು. ಹೀಗೆ ಬಾಟಲ್ ಎಸೆದ ಕೇವಲ 12 ಗಂಟೆಗಳ ನಂತರ ಈ ಬಾಟಲಿಯು ಮತ್ತೆ ದಡಕ್ಕೆ ಮರಳಿತು ಹಾಗೂ ಈ ಬಾಟಲು ಕುಟುಂಬವೊಂದಕ್ಕೆ ಸಿಕ್ಕಿದ್ದು, ಅವರು ಈ ಭಾವುಕ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.
ಹೀಗೆ ಪತ್ರ ಬರೆದ ಭಾವುಕ ಮಗಳಾದ ಯುಕೆಯ ಓಲ್ಡ್‌ಹ್ಯಾಮ್‌ನ ಕಾರಾಳನ್ನು ಪತ್ತೆ ಮಾಡುವುದಕ್ಕಾಗಿ ದಯವಿಟ್ಟು ಈ ಪೋಸ್ಟನ್ನು ಹಂಚಿಕೊಳ್ಳಿ ಎಂದು ಈ ಬಾಟಲ್ ಸಿಕ್ಕ ಕುಟುಂಬವೂ ಫೇಸ್‌ಬುಕ್‌ನಲ್ಲಿ ಬರೆದಿತ್ತು. ಇಂದು ಮುಂಜಾನೆ ಸ್ಕೆಗ್ನೆಸ್ ಬೀಚ್‌ನ ಬಟ್ಲಿನ್ಸ್‌ನಲ್ಲಿ ನಾವು ಈ ಸುಂದರ ಮಹಿಳೆಯನ್ನು ಕಂಡುಕೊಂಡೆವು. ಆಕೆ ವಿನಂತಿಸಿದಂತೆ ಆಕೆಯ ತಾಯಿಯನ್ನು ಮತ್ತೆ ಸಮುದ್ರಕ್ಕೆ ಎಸೆಯಲಾಗಿದೆ. ಕಾರಾಳ ಅಮ್ಮನಿಗೆ ಶುಭಾ ಪ್ರಯಾಣ, ಎಂದು ಕೆಲ್ಲಿ ಶೆರಿಡನ್ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಕೆಲ್ಲಿ ಶೆರಿಡನ್ ಅವರ ಫೇಸ್‌ಬುಕ್ ಪೋಸ್ಟ್ ಕೊನೆಗೂ ಕಾರಾ ಮೆಲಿಯಾ ಅವರನ್ನು ತಲುಪಿದ್ದು, ಈ ಪೋಸ್ಟ್‌ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇದು ನಾನೇ ಅವಳನ್ನು ಮತ್ತೆ ಸಮುದ್ರಕ್ಕೆ ಸೇರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಕಾರಾ ಮೆಲಿಯಾ ಪೋಸ್ಟ್‌ಗೆ ಉತ್ತರಿಸಿದ್ದಾರೆ. ಆಕೆ ಸ್ಕೆಗ್ನೆಸ್‌ನಿಂದ ಪ್ರಯಾಣ ಆರಂಭಿಸಿದ್ದಾಳೆ ಹಾಗೂ ಆಕೆ ಇನ್ನೂ ಮರಳಲು ಬಯಸಿಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಆಕೆ ಹಿಂದಿರುಗಿದರೆ ಅಥವಾ ಬೇರೆಡೆ ಹೋದರೆ ಆ ಬಗ್ಗೆ ಮಾಹಿತಿ ಸಿಗಬಹುದು ಎಂದು ನಾವು ಆಶಿಸುತ್ತೇವೆ ಎಂದು ಕಾರಾ ಮೆಲಿಯಾ ಬರೆದುಕೊಂಡಿದ್ದಾರೆ.
ಮಗಳ ಈ ಭಾವುಕ ಪೋಸ್ಟ್ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ. ತನ್ನ ತಾಯಿಯ ಚಿತಾಭಸ್ಮವು ಬಾರ್ಬಡೋಸ್ ಅಥವಾ ಸ್ಪೇನ್‌ನಂತಹ ದೂರದ ತೀರಗಳಿಗೆ ತಲುಪುತ್ತದೆ ಎಂದು ಬಯಸುತ್ತೇನೆ ಏಕೆಂದರೆ ಅವು ನನ್ನ ತಾಯಿ ತುಂಬಾ ಇಷ್ಟಪಡುತ್ತಿದ್ದ ಸ್ಥಳಗಳು ಎಂದು ಕಾರಾ ಹೇಳಿದ್ದಾರೆ. ಆಕೆಯ ಜೀವನ ಹಠಾತ್ ಆಗಿ ಮುಗಿದು ಹೋಯ್ತು, ನನ್ನ ತಾಯಿಗೆ ಆಕೆಯ ಕನಸುಗಳನ್ನು ಈಡೇರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ ಎಂದು ಅವರು ಭಾವುಕರಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.