ವ್ಯಾಲೆಂಟೈನ್ಸ್ ಡೇ ದಿನ ಪ್ರೇಮಿಗಳೇನೋ ಹಬ್ಬದಂತೆ ಸಂಭ್ರಮದಲ್ಲಿರುತ್ತಾರೆ. ಆದರೆ ಸಿಂಗಲ್ಸ್‌ಗಳ ಕತೆಯೇನು? ಈ ಪ್ರೇಮಿಗಳ ಸಂಭ್ರಮ ಅವರನ್ನು ಮತ್ತಷ್ಟು ಒಂಟಿತನಕ್ಕೆ ತಳ್ಳುತ್ತದೆ. ಸಿಂಗಲ್ಸ್‌ಗಳ ಈ ಸಮಸ್ಯೆ ಮನಗಂಡ ಗುರುಗ್ರಾಮದ ಈ ಯುವಕ ಬಾಡಿಗೆ ಬಾಯ್‌ಫ್ರೆಂಡ್ ಯೋಜನೆ ಆರಂಭಿಸಿದ್ದಾನೆ!
ವ್ಯಾಲೆಂಟೈನ್ಸ್ ಡೇ ಎಲ್ಲರಿಗೂ ಒಂದೇ ರೀತಿಯ ಸಂತೋಷ ತರುವುದಿಲ್ಲ. ದಂಪತಿಗಳು, ಪ್ರೇಮಿಗಳು ತಮ್ಮ ಪ್ರೇಮೋತ್ಸಾಹದಲ್ಲಿ ಮೆರೆಯುವಾಗ ಸಿಂಗಲ್ಸ್‌ಗಳು ಮಾತ್ರ ಅವನ್ನೆಲ್ಲ ನೋಡಿ ಮತ್ತಷ್ಟು ಒಂಟಿತನ ಅನುಭವಿಸುತ್ತಾರೆ. ಯಾರಾದರೂ ಕನಿಷ್ಠ ಮಾತನಾಡಲು ಜೊತೆಯಿದ್ದಿದ್ದರೆ, ನಂಗೂ ಬಾಯ್‌ಫ್ರೆಂಡ್ ಇದ್ದು ಈ ದಿನ ಲಾಂಗ್ ಡ್ರೈವ್ ಕರೆದುಕೊಂಡು ಹೋಗುವಂತಿದ್ದರೆ, ನನ್ನನ್ನು ಕೂರಿಸಿ, ನನ್ನ ಮಾತುಗಳನ್ನು ಕೇಳುತ್ತಾ ಅಡುಗೆ ಮಾಡಿ ಬಡಿಸುವ ಬಾಯ್‌ಫ್ರೆಂಡ್ ಇದ್ದಿದ್ದರೆ ಎಂದು ಅದೆಷ್ಟೋ ಹುಡುಗಿಯರು ಕನಸು ಕಂಡು ನಿರಾಶರಾಗುತ್ತಾರೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ದಿನ ಒಂಟಿಯಾಗಿರುವವರಿಗೆ ಮತ್ತಷ್ಟು ಒಂಟಿತನ ಕಾಡುತ್ತದೆ. ನಂಗೂ ಒಬ್ಬ ಗೆಳೆಯ ಬೇಕು- ಎಂದು ಚಡಪಡಿಸುವ ಹುಡುಗಿಯರ ಮನದಾಳದ ಇಂಗಿತ ಅರಿತ ಯುವಕನೊಬ್ಬ 'ಬಾಡಿಗೆ ಬಾಯ್‌ಫ್ರೆಂಡ್' ಆಗುವ ಸ್ಟಾರ್ಟಪ್ ಆರಂಭಿಸಿದ್ದಾನೆ!
ಹೌದು, ಕೇಳೋಕೆ ವಿಚಿತ್ರವೆನಿಸಬಹುದು. ಆದರೆ, ಈ ಯುವಕನ 'ಬಾಯ್‌ಫ್ರೆಂಡ್ ಆನ್ ರೆಂಟ್' ಸ್ಟಾರ್ಟಪ್ ಮಾತ್ರ ಬಹಳ ಚೆನ್ನಾಗಿ ಟೇಕಾಫ್ ಆಗಿರುವುದನ್ನು ನೋಡಿದರೆ, ಒಂಟಿಗಳ ಒಂಟಿತನ ಯಾವ ಮಟ್ಟಿಗಿರಬೇಕೆಂಬುದು ಅರಿವಾಗುತ್ತದೆ.
undefined
ಬಾಯ್‌ಫ್ರೆಂಡ್ ಆನ್ ರೆಂಟ್
ಗುರುಗ್ರಾಮ್‌ನ 31 ವರ್ಷದ ಶಕುಲ್ ಗುಪ್ತಾ ಎಂಬಾತನೇ ಈ 'ಬಾಯ್‌ಫ್ರೆಂಡ್ ಆನ್ ರೆಂಟ್' ಯೋಜನೆ ಪ್ರಾರಂಭಿಸಿರುವುದು. ಇದೇನು ಈ ವರ್ಷ ಆರಂಭವಾಗುತ್ತಿರುವುದಲ್ಲ, ಈತನ ಈ ಬಾಡಿಗೆ ಬಾಯ್‌ಫ್ರೆಂಡ್ ಯೋಜನೆಗೀಗ 5 ವರ್ಷ. ತಾನು ಬಹಳಷ್ಟು ವರ್ಷ ಒಂಟಿತನ ಅನುಭವಿಸಿದ ಬಳಿಕ, ತಾನು ಪ್ರೀತಿಸಿದವರೆಲ್ಲ ತನ್ನನ್ನು ಕೇವಲ 'ಫ್ರೆಂಡ್' ಎಂದು ಪರಿಗಣಿಸಿದ್ದರಿಂದ- ತನ್ನಂತೆಯೇ ಸಾಕಷ್ಟು ಜನ ಯುವಕ ಯುವತಿಯರು ಈ ಒಂಟಿತನ ಅನುಭವಿಸುತ್ತಿರುತ್ತಾರೆ ಎಂಬುದನ್ನು ಅರಿತ ಶಕುಲ್, ಈ ಕಾರಣಕ್ಕಾಗಿ 'ಬಾಯ್‌ಫ್ರೆಂಡ್ ಆನ್ ರೆಂಟ್' ಯೋಜನೆ ಪ್ರಾರಂಭಿಸಿದ್ದಾಗಿ ಹೇಳುತ್ತಾರೆ. ಈತ ಸ್ವತಃ ತನ್ನನ್ನೇ ಸಿಂಗಲ್ಸ್‌ಗೆ ಬಾಡಿಗೆಗೆ ನೀಡುತ್ತಿದ್ದಾನೆ.
Valentine's Day 2023: ಪ್ರೇಮಿಗೆ ಈ ದಿನವನ್ನು ವಿಶೇಷವಾಗಿಸಲು ನೀವೇನು ಮಾಡಬಹುದು?
ಹಾಗಂಥ ಇದೇನು ಲೈಂಗಿಕತೆಯ ಬಯಕೆಯದ್ದಲ್ಲ. ಡೇಟಿಂಗ್‌ನಲ್ಲಿ ಕೇವಲ ಭಾವನಾತ್ಮಕ ಒಡನಾಟ, ಹುಡುಗಿಯೇ ಬಯಸಿದರೆ ಅವರಿಗೊಂದು ಪ್ರೀತಿಯ ಅಪ್ಪುಗೆ, ಮೆಚ್ಚುಗೆ ಮಾತುಗಳು, ಅವರ ಮಾತುಗಳನ್ನು ಆಲಿಸುವುದು, ಅವರನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗುವುದು ಅಥವಾ ಅಡುಗೆ ಮಾಡಿ ಬಡಿಸುವುದು- ಇಂಥ ಭಾವನಾತ್ಮಕವಾಗಿ ರೊಮ್ಯಾಂಟಿಕ್ ಸಾಂಗತ್ಯ ನೀಡುವುದು ಮಾತ್ರ ಶಕುಲ್ ಉದ್ದೇಶ.
'ನೀವು ಒಂಟಿತನವನ್ನು ಅನುಭವಿಸುತ್ತಿದ್ದರೆ ಅಥವಾ ಒಡನಾಟದ ಅಗತ್ಯವಿದ್ದಲ್ಲಿ, ನನ್ನನ್ನು ಬಾಡಿಗೆಗೆ ತೆಗೆದುಕೊಳ್ಳಲು ನಾಚಿಕೆಪಡಬೇಡಿ. ಇದರಿಂದ ನಾನು ನಿಮ್ಮ ಜೀವನದ ಅತ್ಯುತ್ತಮ ಡೇಟ್ ನೀಡುತ್ತೇನೆ!' ಎಂದು ತನ್ನ Instagram ಪೋಸ್ಟ್‌ನಲ್ಲಿ ಶಕುಲ್ ಗುಪ್ತಾ ತಿಳಿಸಿದ್ದಾರೆ.
2018ರಿಂದ ಸೇವೆ
ಗುಪ್ತಾ 2018 ರಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. 'ವಿ-ಡೇ ದಿನದಂದು ದಂಪತಿಗಳು ಪರಸ್ಪರ 'ಐ ಲವ್ ಯೂ' ಎಂದು ಹೇಳುವುದನ್ನು ಕೇಳುವುದು ನನ್ನನ್ನು ದುಃಖಕ್ಕೆ ದೂಡುತ್ತಿತ್ತು. ಏಕೆಂದರೆ ಇದು ಗೆಳತಿಯನ್ನು ಹೊಂದಲು ನನ್ನ ಅಸಮರ್ಥತೆಯನ್ನು ನೆನಪಿಸುತ್ತಿತ್ತು. ಈ ಒಂಟಿತನದ ಅನುಭವದಿಂದ ಬಾಡಿಗೆಗೆ ಬಾಯ್‌ಫ್ರೆಂಡ್ ಆಗಬೇಕೆಂಬ ಕಲ್ಪನೆ ಹುಟ್ಟಿತು' ಎನ್ನುತ್ತಾರೆ ಗುಪ್ತಾ.
ಈಗ ಅವರ ಸೇವೆಯೇನು ಕೇವಲ ಪ್ರೇಮಿಗಳ ದಿನಕ್ಕೆ ಸೀಮಿತವಾಗಿಲ್ಲ. ಐದು ವರ್ಷಗಳ ಹಿಂದೆ ಗುಪ್ತಾ ತನ್ನನ್ನು ಬಾಡಿಗೆಗೆ ನೀಡುವುದಾಗಿ ಹೇಳಿದಾಗ 1000ಕ್ಕೂ ಹೆಚ್ಚು ಸಂದೇಶಗಳು ಅವರಿಗೆ ಬಂದಿದ್ದವಂತೆ. ಬಾಡಿಗೆಗೆ ಬಾಯ್‌ಫ್ರೆಂಡ್ ಎಂದು ಜಾಹೀರಾತು ನೀಡಿದಾಗಿನಿಂದ, ಟೆಕ್ಕಿಗಳು ಸೇರಿದಂತೆ ಹಲವಾರು ಡೇಟ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಮಹಿಳೆಯು, 'ನಾನು ಕೆಲಸದಲ್ಲಿ ಕಷ್ಟದ ದಿನಗಳನ್ನು ಹೊಂದಿದ್ದೇನೆ, ದಯವಿಟ್ಟು ನನ್ನನ್ನು ತಬ್ಬಿಕೊಳ್ಳಬಹುದೇ?' ಎಂದು ಕೇಳಿದರಂತೆ. ಮತ್ತೊಬ್ಬಾಕೆ ಅಳುತ್ತಾ - 'ನನ್ನ ತೂಕದ ಕಾರಣದಿಂದ ಹುಡುಗರು ನನ್ನನ್ನು ಕೇಳದಿರುವುದು ನೋವುಂಟು ಮಾಡುತ್ತದೆ. ನನ್ನನ್ನು ಜಜ್ ಮಾಡದಿದ್ದಕ್ಕೆ ಧನ್ಯವಾದಗಳು,' ಎಂದರಂತೆ.
'ಒಂದು ಅಭಿನಂದನೆಯು ಯಾರಿಗಾದರೂ ತಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸುತ್ತದೆ, ಅಪ್ಪುಗೆಯು ಯಾರಿಗಾದರೂ ಬೇಕು ಎಂದು ಅನಿಸುತ್ತದೆ ಮತ್ತು ವ್ಯಕ್ತಿಯ ಕೈಯನ್ನು ಹಿಡಿದಿಟ್ಟುಕೊಳ್ಳುವುದು ಅವರಿಗೆ ಹೇಗೆ ಭರವಸೆ ನೀಡುತ್ತದೆ ಎಂಬುದು ಗಮನಾರ್ಹವಾಗಿದೆ' ಎನ್ನುತ್ತಾರೆ ಗುಪ್ತಾ.
Valentine Day : 40 ವರ್ಷ ದಾಟಿದ್ಮೇಲೆ ಹೀಗಿರಲಿ ನಿಮ್ಮ ಪ್ರೇಮಿಗಳ ದಿನ
ಇದೀಗ ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಗುಪ್ತಾ ಮತ್ತೊಮ್ಮೆ ತಮ್ಮ ಇನ್ಸ್ಟಾಗ್ರಾಂನಲ್ಲಿ 'ಬಾಯ್‌ಫ್ರೆಂಡ್ ಆನ್ ರೆಂಟ್' ಜಾಹಿರಾತು ನೀಡಿದ್ದಾರೆ. ಆದರೆ, ಒಂದು ಡೇಟ್‌ಗೆ ಗುಪ್ತಾ ಎಷ್ಟು ಚಾರ್ಜ್ ಮಾಡುತ್ತಾರೆಂಬುದನ್ನು ಬಹಿರಂಗಗೊಳಿಸಿಲ್ಲ.