ಗುಡ್‌ಬೈ 2019: ಈ ವರ್ಷ ಕಾಲೇಜು ಹುಡುಗ- ಹುಡುಗಿಯರ ಇಷ್ಟಕಷ್ಟಗಳಿವು!

By Suvarna News  |  First Published Dec 26, 2019, 3:35 PM IST

2019 ಕ್ಕೆ ಗುಡ್‌ಬೈ ಹೇಳುವ ಸಮಯ ಹತ್ತಿರವಾಗಿದೆ. ಕಾಲೇಜು ಕ್ಯಾಂಪಸ್ಸಲ್ಲಿ ಈ ವರ್ಷ ಹುಡುಗ, ಹುಡುಗಿಯರು ಏನೇನು ಮಾತಾಡಿದರು, ಯಾವುದಕ್ಕೆಲ್ಲಾ ಕೋಪಿಸಿಕೊಂಡರು, ಕಾ ಯಾರನ್ನು ಇಷ್ಟಪಟ್ಟರು ಎಂಬ ಪುಟ್ಟ ಲಿಸ್ಟು.


ವರ್ಷಗಳು ಉರುಳುವುದು ಭಾರೀ ಮಹತ್ವದ ಸಂಗತಿಯೇನಲ್ಲ. 365 ಹಗಲು, ರಾತ್ರಿಗಳ ಬದಲಾವಣೆ ಆಟದಲ್ಲಿ ಒಂದಿಡೀ ವರ್ಷವೇ ನುಸುಳಿ ತಪ್ಪಿಸಿಕೊಳ್ಳುತ್ತದೆ. ಆದರೆ, ಈ ಅವಧಿಯಲ್ಲಿ ನಾವು ಅದೆಷ್ಟು ವಿಚಾರಗಳೆಡೆಗೆ ಗಮನ ಹರಿಸುತ್ತೇವೆ, ಏನೇನೆಲ್ಲಾ ಚರ್ಚಿಸುತ್ತೇವೆ, ಯಾವುದಕ್ಕೆಲ್ಲಾ ತಲೆ ಕೆಡಿಸಿಕೊಂಡಿರುತ್ತೇವೆ ಎಂದು ಪಟ್ಟಿ ಮಾಡಿದರೆ ಒಂದಷ್ಟು ವಿಷಯಗಳು ಸರತಿಯಲ್ಲಿ ನಿಲ್ಲುತ್ತವೆ.

ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳು ವರ್ಷದ ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುವುದರಿಂದ ಅಲ್ಲಿ ಮಾತನಾಡುವ ಸಂಗತಿಗಳೇ ನಮಗೆ ಮುಖ್ಯವೆನಿಸುತ್ತವೆ. ಈ ವರ್ಷ ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆದ ಕೆಲವು ವಿಷಯಗಳು ಇಲ್ಲಿವೆ.

Tap to resize

Latest Videos

undefined

ಈ ವರ್ಷ ಸ್ಟಾರ್ ನಟರನ್ನೇ ಹಿಂದಿಕ್ಕಿ ಸದ್ದು ಮಾಡಿದ ನಟಿಮಣಿಯರಿವರು

ಕೆಜಿಎಫ್

ಕೆಜಿಎಫ್ 2018 ರಲ್ಲಿ ಹುಟ್ಟಿ, 2019 ರಲ್ಲಿ ಹರಿದ ನದಿಯಂತಹ ಸಿನಿಮಾ. ಬಹುಭಾಷೆಗಳಲ್ಲಿ ತೆರೆ ಕಂಡಿದ್ದ ಕನ್ನಡ ನೆಲದ ಸಿನಿಮಾ ಸಹಜವಾಗಿಯೇ ಕಾಲೇಜು ಕ್ಯಾಂಪಸ್ಸುಗಳಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿತ್ತು. ಕೆಜಿಎಫ್ ಸಿನಿಮಾದ ಹಾಡು, ಡೈಲಾಗುಗಳು ವಿದ್ಯಾರ್ಥಿಗಳ ಬಾಯಲ್ಲಿ ಓಡಾಡುವ ಮೂಲಕ ಕ್ಯಾಂಪಸ್‌ಗಳಲ್ಲೂ ಹವಾ ಸೃಷ್ಟಿಸಿತ್ತು.

ಎಲೆಕ್ಷನ್, ಅರ್ಹ- ಅನರ್ಹ

ಸರ್ಕಾರ, ಲೀಡರ್ಸ್, ರಾಜಕಾರಣ ಎಂದೆಲ್ಲಾ ಮಾತನಾಡುವವರಿಗೆ ಈ ಬಾರಿ ರಾಜಕೀಯ ಸುದ್ದಿಗಳಿಗಂತೂ ಕೊರತೆಯೇ ಇರಲಿಲ್ಲ. ಮೇ ತಿಂಗಳ ತನಕ ಲೋಕಸಭಾ ಚುನಾವಣೆಯ ಗುಂಗು, ನಂತರ ಕರ್ನಾಟಕದಲ್ಲಿ ಶಾಸಕರ  ರಾಜೀನಾಮೆ ಪರ್ವ, ಅದಾದ ಮೇಲೆ ಅನರ್ಹರ ಗದ್ದಲ, ಸಮ್ಮಿಶ್ರ ಸರ್ಕಾರದ ಪತನ, ಹೊಸ ಸರ್ಕಾರದ ರಚನೆ ಸೇರಿದಂತೆ ದಿನಕ್ಕೊಂದು ರಾಜಕೀಯ ಕತೆಗಳು ಪ್ರತ್ಯಕ್ಷವಾಗುತ್ತಿದ್ದವು.ಕ್ಲಾಸಿನಲ್ಲಿ ಬೇರೆ ಬೇರೆ ಪಕ್ಷದ ಅಭಿಮಾನಿಗಳು, ಸಿದ್ಧಾಂತದ ಹಿಂಬಾಲಕರು ಇದ್ದರಂತೂ ಮಿನಿವಿಧಾನಸೌಧವೇ ಕಣ್ಮುಂದೆ ಬಂದು ನಿಂತಂತೆ ಆಗುತ್ತಿತ್ತು. ಇದರ ನಡುವಲ್ಲೇ ಆದ ಐ.ಟಿ, ಇ.ಡಿ ದಾಳಿಗಳು ಕೂಡ ಕ್ಯಾಂಪಸ್ಸಿನಲ್ಲಿ ಒಂದಷ್ಟು ಸಂಚಲನ ಮೂಡಿಸಿದ್ದವು.

2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು!

ಚಂದ್ರಯಾನ 2

ಇಸ್ರೋ ವಿಜ್ಞಾನಿಗಳ ‘ಚಂದ್ರಯಾನ ೨’ ಯೋಜನೆ ಇಡೀ ದೇಶದ ಗಮನ ಸೆಳೆದಿತ್ತು. ಹಲವು ಕಾಲೇಜು ಕ್ಯಾಂಪಸ್ಸುಗಳಲ್ಲಿ ಈ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅತ್ಯಂತ ಕುತೂಹಲ, ಸಂಭ್ರಮ, ಹೆಮ್ಮೆಗೆ ಕಾರಣವಾಗಿದ್ದ ಚಂದ್ರಯಾನ ೨ ಯೋಜನೆ ಕೊನೆಯ ಹಂತದಲ್ಲಿ ವಿಫಲವಾದಾಗ ಯುವ ಸಮುದಾಯದ ಎದೆಯೂ ಭಾರವಾಗಿತ್ತು.

ಉನ್ನಾವೋ ಪ್ರಕರಣ 

ಹೈದರಾಬಾದ್, ಉನ್ನಾವೋ ಪ್ರಕರಣ ಒಟ್ಟೊಟ್ಟಿಗೇ ನಡೆದ ಈ ಎರಡು ಘಟನೆಗಳು ಯುವ ಸಮೂಹದಲ್ಲಿ ಆತಂಕ, ಆಕ್ರೋಶಗಳನ್ನು ಹುಟ್ಟುಹಾಕಿಸಿತು. ಅತ್ಯಾಚಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಿತು, ಕಾಲೇಜು ಕ್ಯಾಂಪಸ್ಸುಗಳಲ್ಲಿ ವಿರೋಧದ ಧ್ವನಿ ಮೊಳಗಿತು. ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ನಡೆದಾಗಲೂ ಈ ವಿಷಯದ ಕುರಿತು ವ್ಯಾಪಕ ಚರ್ಚೆ ನಡೆದು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಯಾಗಲಿ ಎಂಬ ಒತ್ತಾಯ ಮೂಡಲು ಕಾರಣವಾಯಿತು.

ಫ್ರೀ ಕಾಲ್ ಕಟ್, ಡೇಟಾ ದರ ಏರಿಕೆ

ಕಳೆದ ಎರಡು ಮೂರು ವರ್ಷಗಳಿಂದ ಅನ್ ಲಿಮಿಟೆಡ್ ಡೇಟಾ, ಫ್ರೀ ಕಾಲ್ ಎಂದು ಅದರಲ್ಲೇ ಮುಳುಗಿಹೋಗಿದ್ದ ಯುವ ಜನತೆಗೆ ಈ ವರ್ಷ ಭರ್ಜರಿ ಶಾಕ್ ಹೊಡೆದಿದೆ. ಏರ್‌ಟೆಲ್, ವೊಡಾಫೋನ್, ಐಡಿಯಾ, ಜಿಯೋ ಎಲ್ಲವೂ ತಮ್ಮ
ಟೆಲಿಕಾಂ ದರಗಳನ್ನು ಒಂದೇ ಸಲಕ್ಕೆ ಏರಿಸಿ, ಇಷ್ಟು ದಿನ ಕಡಿಮೆ ದರದಲ್ಲಿ ಕೊಟ್ಟದ್ದನ್ನೆಲ್ಲಾ ಮುಂಬರುವ ದಿನಗಳಲ್ಲಿ ವಸೂಲಿ ಮಾಡುವ ಸೂಚನೆ ಕೊಟ್ಟಿವೆ. ಟೆಲಿಕಾಂ ಕಂಪನಿಗಳ ಈ ನಡೆ ಕ್ಯಾಂಪಸ್ ಕಾರ್ನರ್‌ಗಳಲ್ಲೂ ಚರ್ಚೆಯಾಗಿದ್ದನ್ನು ಗಮನಿಸಿದರೆ ಯುವಜನತೆ ಯಾವ ಮಟ್ಟಿಗೆ ‘ಡಿಜಿಟಲೈಜ್’ ಆಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು.

ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

ಸಿಎಎ, ಎನ್‌ಆರ್‌ಸಿ

2019 ರ ಬೇರೆಲ್ಲಾ ವಿದ್ಯಮಾನಗಳಿಗೆ ಹೋಲಿಸಿದರೆ ಇದು ಅತ್ಯಂತ ಬಿಸಿ ವಿಚಾರ. ಸದ್ಯಕ್ಕೆ ಸಿಎಎ, ಎನ್‌ಆರ್‌ಸಿ ಕಾವು ಇನ್ನೂ ತಣಿದಿಲ್ಲ. ದೇಶದೆಲ್ಲೆಡೆ ಇದರ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ವಲಯದಲ್ಲಷ್ಟೇ ಅಲ್ಲದೇ ಕ್ಯಾಂಪಸ್ಸಿನ ಒಳಗೂ ಈ ವಿಚಾರ ಸಂಚಲನ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್ಸುಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಶ್ರೇಯಸ್ಸು ಸಿಎಎ, ಎನ್‌ಆರ್‌ಸಿ ಕಾಯ್ದೆಗಳಿಗೆ ಸಲ್ಲುತ್ತದೆ.

ಅವನೇ ಶ್ರೀಮನ್ನಾರಾಯಣ

ಕೆಜಿಎಫ್ ಹವಾದೊಂದಿಗೆ ಶುರುವಾದ 2019 ನೇ ಇಸವಿಯನ್ನು ಈಗ ಇನ್ನೊಂದು ದೊಡ್ಡ ಸಿನಿಮಾದೊಂದಿಗೆ ಬೀಳ್ಕೊಡುವಂತಾಗಿದೆ. ಈಗಲೂ ಕನ್ನಡ ನೆಲದ ಬಹುನಿರೀಕ್ಷಿತ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಲು ಕಾದು ಕುಳಿತಿದೆ. ಕನ್ನಡದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಸದ್ಯ ಕ್ಯಾಂಪಸ್ಸು, ಕಾರಿಡಾರುಗಳಲ್ಲಿ ಸದ್ದು ಮಾಡುತ್ತಿದೆ. ೨೦೧೯ನೇ ಇಸವಿಯಲ್ಲಿ ಹುಟ್ಟಿ, ೨೦೨೦ರಲ್ಲಿ ಹರಿಯಲು ಸಿದ್ದವಾಗಿರುವ ಈ ನದಿಯಂತಹಾ ಸಿನಿಮಾ ಯಶಸ್ವಿಯಾಗಲಿ ಎಂಬುದೇ ಸದ್ಯದ ಹಾರೈಕೆ.

ಹೀಗೆ ಪ್ರತಿವರ್ಷವೂ ಹಲವು ವಿಚಾರಗಳು ಘಟಿಸುತ್ತಲೇ ಇರುತ್ತವೆ. ಇಲ್ಲಿ ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಇನ್ನುಳಿದ ವಿಷಯಗಳು ಅಮುಖ್ಯ ಎಂದೇನಲ್ಲ. ಸದ್ಯಕ್ಕೆ ಈ ವರ್ಷ ಕ್ಯಾಂಪಸ್ಸಿನಲ್ಲಿ ಚರ್ಚೆಯಾದ ವಿಷಯಗಳು ಎಂದ ತಕ್ಷಣ ನೆನಪಿಗೆ ಬಂದದ್ದು ಇವಿಷ್ಟು.

- ಸ್ಕಂದ ಆಗುಂಬೆ 

click me!