
ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಏರಿಳಿತ, ಭಿನ್ನಾಭಿಪ್ರಾಯಗಳು ಸಹಜ. ಆದರೆ ಪ್ರತಿಯೊಂದು ವಿಚಾರವೂ ದೊಡ್ಡ ಸಮಸ್ಯೆಯಾಗಿ ಬದಲಾಗಬೇಕೆಂದಿಲ್ಲ. ಕೆಲವೊಮ್ಮೆ ದಂಪತಿಗಳ ನಡುವಿನ ಜಗಳಕ್ಕೆ ಯಾವುದೇ ಗಂಭೀರ ಕಾರಣವಿರುವುದಿಲ್ಲ. ಬದಲಾಗಿ, ಪ್ರತಿದಿನ ಎದುರಾಗುವ ಸಾಮಾನ್ಯ ಪ್ರಶ್ನೆಯೇ ಇದಕ್ಕೆ ಕಾರಣವಾಗಬಹುದು ‘ಇಂದು ಊಟಕ್ಕೆ ಏನು ಮಾಡೋಣ?’ ಎನ್ನುವ ಪ್ರಶ್ಗೆಯೇ ಜಗಳಕ್ಕೆ ಕಾರಣವಾಗುತ್ತದೆ. ಹಾಗಂತ ‘ಫುಡ್ ಡಿವೋರ್ಸ್’ ಎಂದರೆ ಗಂಡ-ಹೆಂಡತಿ ಅಥವಾ ಪ್ರೇಮಿಗಳು ಪರಸ್ಪರ ದೂರವಾಗುವುದು ಅಲ್ಲ. ಊಟದ ವಿಚಾರದಲ್ಲಿ ಪ್ರತಿಬಾರಿಯೂ ಒಬ್ಬರಿಗಾಗಿ ಮತ್ತೊಬ್ಬರು ತಮ್ಮ ಇಷ್ಟವನ್ನು ಬಿಟ್ಟುಕೊಡಬೇಕಾದ ಅಗತ್ಯವಿಲ್ಲ ಎಂಬುದೇ ಇದರ ಮುಖ್ಯ ಉದ್ದೇಶ. ಉದಾಹರಣೆಗೆ, ಒಬ್ಬರಿಗೆ ರೊಟ್ಟಿ-ಪಲ್ಯ ಇಷ್ಟವಿದ್ದರೆ ಮತ್ತೊಬ್ಬರಿಗೆ ನೂಡಲ್ಸ್ ತಿನ್ನಬೇಕು ಎನ್ನಿಸಬಹುದು. ಇಂತಹ ಸಂದರ್ಭದಲ್ಲಿ ಇಬ್ಬರೂ ಒಂದೇ ಆಹಾರಕ್ಕೆ ಒಪ್ಪಿಕೊಳ್ಳಲೇಬೇಕು ಎಂಬ ನಿಯಮವಿಲ್ಲ. ಒಬ್ಬರು ತಮ್ಮ ಇಷ್ಟದ ಆಹಾರ ತಿನ್ನಬಹುದು, ಮತ್ತೊಬ್ಬರು ತಮ್ಮ ಆಯ್ಕೆಯ ಆಹಾರವನ್ನು ತಿನ್ನಬಹುದು. ಜೊತೆಗೆ ಇಬ್ಬರು ಒಂದೇ ಸಮಯದಲ್ಲಿ ಊಟ ಮಾಡಬೇಕು ಎನ್ನುವ ಒತ್ತಡವೂ ಇರೋದಿಲ್ಲ.
ಬಹುತೇಕ ಮನೆಗಳಲ್ಲಿ ಸಂಜೆ ಆಗುತ್ತಿದ್ದಂತೆ ಒಂದು ಸಾಮಾನ್ಯ ಪ್ರಶ್ನೆ ಶುರುವಾಗುತ್ತದೆ—‘ಇಂದು ಏನು ತಿನ್ನೋಣ?’ ಅದಕ್ಕೆ ‘ನನಗೆ ಗೊತ್ತಿಲ್ಲ, ನೀನೇ ಹೇಳು’ ಎಂಬ ಉತ್ತರ ಬರುತ್ತದೆ. ನಂತರ ಪಾಸ್ತಾ ಬೇಕೋ, ಅನ್ನ ಬೇಕೋ, ಮನೆಯ ಊಟ ಮಾಡಬೇಕೋ ಅಥವಾ ಹೊರಗಿನಿಂದ ಆರ್ಡರ್ ಮಾಡಬೇಕೋ ಎಂಬ ಚರ್ಚೆ ಶುರುವಾಗುತ್ತದೆ. ಒಂದು-ಎರಡು ದಿನ ಈ ರೀತಿಯ ಭಿನ್ನಾಭಿಪ್ರಾಯ ಸಾಮಾನ್ಯ. ಆದರೆ ಇದೇ ವಿಚಾರ ಪ್ರತಿದಿನ ಜಗಳಕ್ಕೆ ಕಾರಣವಾದರೆ, ಊಟದಂತಹ ಸರಳ ವಿಷಯವೂ ಮಾನಸಿಕ ಒತ್ತಡ ಉಂಟುಮಾಡಬಹುದು.
ಏನು ಅಡುಗೆ ಮಾಡಬೇಕು, ಸಾಮಗ್ರಿಗಳನ್ನು ಯಾರು ತರಬೇಕು, ಯಾರು ಅಡುಗೆ ಮಾಡಬೇಕು ಮತ್ತು ಯಾರ ಇಷ್ಟಕ್ಕೆ ಆದ್ಯತೆ ನೀಡಬೇಕು ಎಂಬ ವಿಚಾರಗಳೂ ದಿನನಿತ್ಯದ ಜವಾಬ್ದಾರಿಯಾಗಿ ಬದಲಾಗಬಹುದು. ಇಂತಹ ಸಂದರ್ಭಗಳಲ್ಲಿ ‘ಫುಡ್ ಡಿವೋರ್ಸ್’ ಕೆಲವು ಜೋಡಿಗಳಿಗೆ ಈ ಒತ್ತಡವನ್ನು ಕಡಿಮೆ ಮಾಡುವ ಮಾರ್ಗವಾಗಬಹುದು.
‘ಫುಡ್ ಡಿವೋರ್ಸ್’ ಎಂದರೆ ಎಂದಿಗೂ ಒಟ್ಟಿಗೆ ಊಟ ಮಾಡಬಾರದು ಎಂಬ ಅರ್ಥವಲ್ಲ. ಇಬ್ಬರಿಗೂ ಇಷ್ಟವಿದ್ದಾಗ ಒಟ್ಟಿಗೆ ಊಟ ಮಾಡಬಹುದು. ವಾರಾಂತ್ಯದಲ್ಲಿ ಒಟ್ಟಿಗೆ ಬ್ರೇಕ್‌ಫಾಸ್ಟ್ ಮಾಡಬಹುದು ಅಥವಾ ವಿಶೇಷ ದಿನಗಳಲ್ಲಿ ಹೊರಗೆ ಡಿನ್ನರ್‌ಗೆ ಹೋಗಬಹುದು. ಆದರೆ ಯಾವುದಾದರೂ ದಿನ ಇಬ್ಬರ ಆಹಾರದ ಆಯ್ಕೆ ಸಂಪೂರ್ಣ ಭಿನ್ನವಾಗಿದ್ದರೆ, ಅದಕ್ಕಾಗಿ ಜಗಳ ಮಾಡುವ ಅಗತ್ಯವಿಲ್ಲ. ಒಬ್ಬರು ತಮ್ಮ ಇಷ್ಟದ ಆಹಾರವನ್ನು ತಿನ್ನಬಹುದು ಮತ್ತು ಮತ್ತೊಬ್ಬರು ತಮ್ಮ ಆಯ್ಕೆಯ ಆಹಾರ ತಿನ್ನಬಹುದು.
ಬೇರೆಬೇರೆ ಊಟ ಮಾಡುವುದು ಸಂಬಂಧಕ್ಕೆ ಕೆಟ್ಟದ್ದೇ?
ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ನಿಯಮಗಳು ಮತ್ತು ಹೊಂದಾಣಿಕೆಯ ವಿಧಾನಗಳಿರುತ್ತವೆ. ದಂಪತಿಗಳು ಪ್ರತಿಯೊಂದು ಕೆಲಸವನ್ನೂ ಒಟ್ಟಿಗೆ ಮಾಡಲೇಬೇಕು ಎಂಬ ನಿಯಮವಿಲ್ಲ. ಕೆಲವು ಜೋಡಿಗಳ ಮಲಗುವ ಮತ್ತು ಎದ್ದೇಳುವ ಸಮಯ ವಿಭಿನ್ನವಾಗಿರಬಹುದು. ಕೆಲವರ ಹವ್ಯಾಸಗಳು ಬೇರೆಬೇರೆ ಇರಬಹುದು. ಕೆಲವರು ತಮ್ಮ ಬಿಡುವಿನ ಸಮಯವನ್ನು ತಮ್ಮದೇ ಆದ ರೀತಿಯಲ್ಲಿ ಕಳೆಯಲು ಇಷ್ಟಪಡಬಹುದು. ಹಾಗೆಯೇ ಆಹಾರದ ವಿಚಾರದಲ್ಲೂ ಭಿನ್ನತೆ ಇರಬಹುದು. ಕೆಲವರಿಗೆ ಒಟ್ಟಿಗೆ ಕುಳಿತು ಊಟ ಮಾಡುವುದು ಸಂಬಂಧದ ಪ್ರಮುಖ ಭಾಗವಾಗಿರಬಹುದು. ಇನ್ನು ಕೆಲವರಿಗೆ ಅದು ಅಷ್ಟೊಂದು ಮುಖ್ಯವಾಗಿರದಿರಬಹುದು. ಹೀಗಾಗಿ, ಇಬ್ಬರೂ ಬೇರೆಬೇರೆ ಊಟ ಮಾಡುತ್ತಾರೆ ಎಂಬ ಕಾರಣಕ್ಕೆ ಮಾತ್ರ ಅವರ ಸಂಬಂಧದಲ್ಲಿ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.