
ಎಲ್ಲರಲ್ಲೂ ಒಂದಾಗಿ ನಿನ್ನ ನೀ ಅರಿ ಎಂದ ಡಿವಿಜಿ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆ ಆಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ನೀ ಮಂಕುತಿಮ್ಮ
ಡಿವಿಜಿ ಅವರು ತಮ್ಮ ಕಗ್ಗದಲ್ಲಿ ಹೇಳ್ತಾರೆ ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆ ಆಗು ಎಂದು, ಅಂದರೆ ನಾವು ಜೀವನದಲ್ಲಿ ಹುಲ್ಲಿನ ರೀತಿಯಲ್ಲಿ ಎಷ್ಟು ವಿನಮ್ರದಿಂದ ಇರುತ್ತೆವೆವೋ ಅಷ್ಟು ನಮ್ಮ ಜೀವನ ಸರಾಗವಾಗಿ ನಡೆಯುತ್ತದೆ. ಉದಾಹರಣೆಗೆ ಮಳೆ ಬಂದಂತಹ ಸಂದರ್ಭದಲ್ಲಿ ಬೃಹತ್ ಗಾತ್ರದ ಮರಗಳು ಗಾಳಿ ಮಳೆಗೆ ಬೀಳುವಂತಹ ಸಾಧ್ಯತೆ ಇರುತ್ತದೆ. ಆದರೆ ಹುಲ್ಲು ಮಳೆ ಬಂದಾಗ ಬಾಗುತ್ತದೆ. ದೀರ್ಘ ಕಾಲದ ವರೆಗೆ ತನ್ನ ಅಸ್ಥಿತ್ವವನ್ನ ಕಾಪಾಡಿಕೊಳ್ಳುವುದರ ಜೊತೆಗೆ ಪ್ರಾಣಿಗಳಿಗೆ ಆಹಾರವಾಗುತ್ತದೆ. ಹಾಗೆ ಒಬ್ಬ ವ್ಯಕ್ತಿ ಎಷ್ಟು ಸರಳವಾಗಿ ಸಜ್ಜನನಾಗಿ ಬದುಕುತ್ತಾನೊ ಅವನ ಬದುಕು ಸಮೃದ್ಧತೆಯಿಂದ ಕೂಡಿರುತ್ತದೆ. ಹಾಗೆ ಮನೆಗೆ ಮಲ್ಲಿಗೆ ಆಗಿರಬೇಕು ಮಲ್ಲಿಗೆ ಹೇಗೆ ತನ್ನ ಸುವಾಸನೆಯಿಂದ ಎಲ್ಲರನ್ನ ಸೆಳೆಯುತ್ತದೆಯೊ, ತನ್ನ ಸುಗಂಧದಿಂದ ಉತ್ತಮ ವಾತಾವರಣವನ್ನ ಸೃಷ್ಟಿಸುವ ಹಾಗೆ ವ್ಯಕ್ತಿ ವರ್ತನೆ ಜನರನ್ನ ಸೆಳೆಯುವ ರೀತಿಯಲ್ಲಿ ಇರಬೇಕು.
ಹಾಗೆ ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ, ಜೀವನದಲ್ಲಿ ಮನುಷ್ಯನ ಜನ್ಮದಲ್ಲಿ ಹುಟ್ಟಿದ ಮೇಲೆ ಕಷ್ಟಗಳು ಸಾಮಾನ್ಯ. ಕಷ್ಟಗಳು ಬಂದಂತಹ ಸಂದರ್ಭದಲ್ಲಿ ಮನುಷ್ಯ ಕಲ್ಲಿನ ಹಾಗೆ ವರ್ತಿಸಬೇಕು. ಕಲ್ಲು ಎಷ್ಟೇ ಮಳೆ, ಗಾಳಿ, ಬಿಸಿಲು ಬಂದರು ಜಗ್ಗದೆಯೆ ಕಟ್ಟಿಯಾಗಿ ನಿಂತಿರುತ್ತದೆ. ಹಾಗೆ ಮನುಷ್ಯ ಎಷ್ಟೇ ಕಷ್ಟಗಳು ಎದುರಾದರು, ಎಷ್ಟೆ ಸಮಸ್ಯೆಗಳು ಸುತ್ತುವರೆದರೂ ಮನುಷ್ಯ ಕುಗ್ಗಬಾರದು. ಕಲ್ಲಿನಂತೆ ಗಟ್ಟಿಯಾದಂತಹ ಮನೋಸ್ಥಿತಿಯನ್ನ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಮನೋಬಲ ಹೇಗಾಗಿದೆ ಎಂದರೆ ಒಂದು ಸಣ್ಣ ಸಮಸ್ಯೆ ಎದುರಾದರೂ ಅದನ್ನ ಎದುರಿಸಲು ಆಗದೇ ಕುಗ್ಗಿಹೋಗುತ್ತಿದ್ದೇವೆ. ಕೆಲವೊಮ್ಮೆ ಸಮಸ್ಯೆಯನ್ನ ಎದುರಿಸಲು ಸಾಧ್ಯವಾಗದೇ ಸಾವಿನ ಕಡೆ ಮುಖ ಮಾಡಿ ನಿಲ್ಲುತ್ತೇವೆ. "ಮನುಷ್ಯ ಜನ್ಮ ಶ್ರೇಷ್ಠವಾದುದ್ದು ಅದನ್ನ ಹಾಳು ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ" ಎಂದ ಪುರಂದರ ದಾಸರ ವಾಣಿಯಂತೆ ಸಾವಿರ ಜೀವ ಜಂತುಗಳ ಮೇಲೆ ಮನುಷ್ಯ ಜನ್ಮ ಸಿಕ್ಕಿರುತ್ತದೆ. ಅದನ್ನ ಕ್ಷುಲಕ್ಷ ಕಾರಣಕ್ಕೆ ಹಾಳುಮಾಡಿಕೊಂಡರೆ ಅಂತ ದುರ್ವಿಧಿ ಮತ್ತೊಂದಿಲ್ಲ.
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ನಾವು ಕೆಲವೊಮ್ಮೆ ಸಾವಿರಾರು ರೂಪಾಯಿ ಹಣವನ್ನ ಅನಾವಶ್ಯಕವಾಗಿ ಹಾಳುಮಾಡುತ್ತೇವೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂತೆ ನಮ್ಮಿಂದ ಎಷ್ಟು ಇನ್ನೊಬ್ಬರಿಗೆ ಕೊಡುವುದಕ್ಕೆ ಸಾಧ್ಯವಾಗುತ್ತದೆಯೋ ಅಷ್ಟನ್ನ ದಾನದ ರೂಪದಲ್ಲಿ ಕೊಟ್ಟುಬಿಡಬೇಕು. ನಾವು ಮಾಡಿದಂತಹ ದಾನ ಮುಂದೊಂದು ದಿನ ನಮ್ಮ ಜೀವಿತಾವಧಿಯಲ್ಲಿ ಯಾವುದಾದರೊಂದು ರೀತಿಯಲ್ಲಿ ಫಲ ಕೊಟ್ಟೆ ಕೊಡುತ್ತದೆ. ಅನ್ನದಾನ, ವಿದ್ಯಾದಾನ, ಭೂಮಿದಾನ ಹೀಗೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ನಮ್ಮಿಂದ ಏನು ಕೊಡುವುದಕ್ಕೆ ಸಾಧ್ಯವೊ ದಾನದ ರೂಪದಲ್ಲಿ ಕೊಟ್ಟುಬಿಡಬೇಕು.
ಹಾಗೇ ಎಲ್ಲರೊಳಗೊಂದಾಗು ನೀ ಮಂಕುತಿಮ್ಮ, ಜೀವನದಲ್ಲಿ ನಾನು ನನ್ನದು, ಎಲ್ಲವೂ ನನ್ನಿಂದಲೇ ಎಂಬ ಅಹಂನ ತೊರೆದು ಎನಿಲ್ಲವಾದರೆ ಎನಂತೆ ಮೊದಲು ಮಾನವನಾಗು ಎಂಬಂತೆ ಎಲ್ಲರೊಳಗೆ ನಾನು ಒಬ್ಬ ಎಂಬ ಮನೊಸ್ಥಿತಿಯನ್ನ ಬೆಳೆಸಿಕೊಳ್ಳಬೇಕು ಎಂದು ಡಿವಿಜಿ ತಮ್ಮ ಕಗ್ಗದಲ್ಲಿ ಹೇಳ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.