ಓ ಲೈಫೇ , ನೀನು ನಂಗೇನೂ ಕೊಡ್ಲಿಲ್ವಲ್ಲಾ, ನಡು ನೀರಲ್ಲಿ ನಿಲ್ಲಿಸಿ ಮಜಾ ತಗೋತಿದ್ದೀಯಲ್ಲಾ.... ಬದುಕಿನ ಯಾವುದೋ ಒಂದು ಗಳಿಗೆಯಲ್ಲಿ ಪ್ರತಿಯೊಬ್ಬರೂ ಇಂಥದ್ದೊಂದು ಡೈಲಾಗ್ ಹೇಳೋರೇ. ಆದರೆ, ನಿಮ್ಗೆ ಗೊತ್ತಿರಲಿಕ್ಕಿಲ್ಲ, ಗೇಮ್ ಆಗಷ್ಟೇ ಶುರುವಾಗಿರುತ್ತೆ.ಫೈನಲ್ ವಿಶಲ್ ಹೊರಬೀಳೋಕೆ ಇನ್ನೂ ಟೈಮ್ ಇರುತ್ತೆ!
ಅದೊಂದು ಚಿಕ್ಕ ಹಳ್ಳಿ. ಆ ಊರಿನ ಮಧ್ಯೆ ಒಂದು ದೊಡ್ಡ ಮೈದಾನ. ಸಂಜೆ ಹೊತ್ತು ಅಲ್ಲಿ ಹುಡುಗರು ಕ್ರಿಕೆಟ್, ವಾಲಿಬಾಲ್ ಆಡ್ತಾ ಇರುತ್ತಾರೆ. ಹೀಗಿರುವಾಗ ಒಮ್ಮೆ ಆ ಊರಿನ ಹುಡುಗರಿಗೂ ಪಕ್ಕದೂರಿನ ಹುಡುಗರಿಗೂ ಮಧ್ಯೆ ಕ್ರಿಕೆಟ್ ಮ್ಯಾಚ್ ನಡಿಯುತ್ತೆ, ಅದೇ ದೊಡ್ಡ ಮೈದಾನದಲ್ಲಿ. ದೊಡ್ಡ ಹುಡುಗರು ಆಡುತ್ತಿದ್ದರೆ ಚಿಕ್ಕ ಹುಡುಗರಿಗೆ ಕೇಕೆ ಹಾಕುತ್ತಾ ಅವರನ್ನು ಹುರಿದುಂಬಿಸುವ ಕೆಲಸ,
ಒಬ್ಬ ಚಿಕ್ಕ ಹುಡುಗ ಮರದ ಬೊಡ್ಡೆಯ ಮೇಲೆ ಕುಕ್ಕರಗಾಲಿನಲ್ಲಿ ಕೂತು ತದೇಕ ಚಿತ್ತದಿಂದ ಮ್ಯಾಚ್ ನೋಡ್ತಾ ಇದ್ದಾನೆ. ಅವನ ಮುಖದಲ್ಲಿ ನಗುವಿದೆ. ಆಗಾಗ ಕ್ಲಾಪ್ ಮಾಡ್ತಾ ಇದ್ದಾನೆ. ಆಗಷ್ಟೇ ಬಂದ ಊರಿನ ಯುವಕನೊಬ್ಬ ಈ ಹುಡುಗನ ಬಳಿ ಬಂದು ಕೂರ್ತಾನೆ. ಅವನ ಹೆಗಲಿಗೆ ಕೈಹಾಕಿ, ಮಗಾ ಎಷ್ಟಾಯ್ತೋ ಸ್ಕೋರು?’ ಅಂತ ಕೇಳ್ತಾನೆ. ಹುಡುಗ ಅದೇ ನಗುವಲ್ಲಿ , ‘ನಮ್ಮವರದೇ ಬ್ಯಾಟಿಂಗ್ ಆಗ್ಲೇ ಐದು ಜನ ಹೋದ್ರು, ಹತ್ತು ಓವರ್ ಆಯ್ತು, 25 ರನ್ ಆಯ್ತಷ್ಟೇ’ ಅಂದ.
ಲೈಫ್ ಸ್ಕ್ರಿಪ್ಟೆಡ್ ಎನಿಸುತ್ತಿದ್ಯಾ?
ಆ ಯುವಕನ ಮುಖದಲ್ಲಿ ಆಶ್ಚರ್ಯ. ‘ಅಲ್ಲೋ ಮಚ್ಚಾ, ನಮ್ ಟೀಂ ಇಷ್ಟು ಕೆಟ್ಟದಾಗಿ ಆಡ್ತಿದೆ, ಆದ್ರೂ ನಗ್ತಾನೇ ಹೇಳ್ತಿದ್ದೀಯಲ್ಲಾ, ನಿಂಗೆ ಟೆನ್ಶನ್ ಆಗಲ್ವಾ?’ ಅಂದ. ‘ಹೇ, ಟೆನ್ಶನ್ ಯಾಕೆ, ನಂಗೊತ್ತು ನಮ್ ಟೀಮೇ ಗೆಲ್ಲೋದು ಅಂತ. ಅಂಪೇರ್ ಇನ್ನೂ ಫೈನಲ್ ವಿಶಲ್ ಹೊಡ್ದಿಲ್ಲ. ಆಗ ತಾನೇ ಸೋಲು ಗೆಲುವು ಡಿಕ್ಲೇರ್ ಆಗೋದು?’ ಅಂದ. ಅದೇ ತಲ್ಲೀನತೆಯಲ್ಲಿ ಮ್ಯಾಚ್ ನೋಡೋದು ಮುಂದುವರಿಸಿದ. ಈ ಯುವಕ ‘ಏನ್ ಹುಚ್ಚು ಹುಡ್ಗ ಇದ್ದಾನಿವ ಅಂದುಕೊಳ್ಳುತ್ತಲೇ ಮ್ಯಾಚ್ ನೋಡುತ್ತಾ ನಿಂತ. ಸ್ವಲ್ಪ ಹೊತ್ತಿಗೇ ಗೇಮ್ ಸಂಪೂರ್ಣ ಟರ್ನ್ ಆಯ್ತು. ಉಳಿದ ಹುಡುಗರು ಅದ್ಭುತವಾಗಿ ಆಡಿದರು. ಫೀಲ್ಡಿಂಗ್‌ನಲ್ಲೂ ಸಖತ್ತಾಗಿ ಆಡಿ ಮ್ಯಾಚ್ ಗೆದ್ದರು. ಹುಡುಗನ ಮಾತನ್ನು ಮೊದಲಿಗೆ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳದಿದ್ದ ಆ ಯುವಕನ ಮುಖದಲ್ಲಿ ಈಗ ಬೆರಗು. ಅರೆ, ಆ ಹುಡುಗನಿಗೆ ತನ್ನ ಟೀಂ ಬಗ್ಗೆ ಎಷ್ಟು ಕಾನ್ಫಿಡೆನ್ಸ್ ಇದೆ. ತನಗೇ ಇಲ್ವಲ್ಲಾ.. ಅಂತ ಯೋಚಿಸುತ್ತಲೇ ಇದ್ದ.
ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಮಾತನಾಡಿ
ಈ ಕಥೆ ನಮಗೂ ಅನ್ವಯವಾಗುತ್ತೆ. ಎಷ್ಟೋ ಸಲ ಬದುಕಿನಲ್ಲಿ ಏರುಪೇರುಗಳಾದಾಗ ಕತೆ ಇಲ್ಲಿಗೆ ಮುಗಿದೇ ಹೋಯ್ತು ಅಂತ ಅಧೀರರಾಗಿ ಬಿಡ್ತೀವಿ. ಎಲ್ಲಾ ಭರವಸೆಗಳನ್ನೂ ಕಳೆದುಕೊಂಡು ಆತಂಕದಲ್ಲಿ ಒದ್ದಾಡುತ್ತೀವಿ. ಆದರೆ ಆಗಷ್ಟೇ ಗೇಮ್ ಶುರುವಾಗಿರುತ್ತೆ. ನಾವು ನಡು ನೀರಲ್ಲಿ ಬಿದ್ದು ಒದ್ದಾಡುತ್ತಿರುತ್ತೀವಿ ನಿಜ. ಹಾಗಂತ ಟೆನ್ಶನ್ ಮಾಡ್ಕೊಂಡು ಇರೋಬರೋ ಶಕ್ತಿಯನ್ನೂ ಕಳೆದುಕೊಂಡರೆ ಮುಳುಗೋದು ಗ್ಯಾರೆಂಟಿ. ಅದರ ಬದಲು ನಮ್ಮ ಶಕ್ತಿ ಇದ್ದಷ್ಟು ಕೈಕಾಲು ಬಡಿಯುತ್ತಿದ್ದರೆ ನಮ್ಮನ್ನು ಸ್ವಾಗತಿಸಲು ಯಾವುದಾದರೊಂದು ತೀರ ಇದ್ದೇ ಇರುತ್ತದೆ. ಆ ತೀರದತ್ತ ನಿಮ್ಮನ್ನು ಯಾವುದೋ ಶಕ್ತಿ ತಲುಪಿಸಿಯೇ ತಲುಪಿಸುತ್ತೆ. ಆದರೆ ಕೈಕಾಲು ಬಡಿದು ಅಲ್ಲಿಯವರೆಗೆ ಹೋಗುವ ಧೈರ್ಯ ನಮಗಿರಬೇಕು ಅಷ್ಟೇ. ಅದ್ಯಾವುದೋ ಒಂದು ಶಕ್ತಿ ನಾವಿಟ್ಟ ಭರವಸೆಯನ್ನು ಹುಸಿ ಮಾಡೋದೇ ಇಲ್ಲ.