
ಅಮ್ಮನಾಗುವುದು ಎಂದರೆ ಮಹಿಳೆಯ ಬಾಳಲ್ಲಿ ಅದೊಂದು ಹೊಸ ಅನುಭೂತಿ. ಒಂದು ಪ್ರಾಣವನ್ನು ಈ ಭೂಮಿಯ ಮೇಲೆ ಸೃಷ್ಟಿಸುವ ಆ ಅನುಭವವೇ ಬೇರೆ. ಇದು ತಾಯ್ತನವನ್ನು ಅನುಭವಿಸುವ ಪ್ರತಿಯೊಬ್ಬ ಹೆಣ್ಣೂ ಅನುಭವಿಸುವ ಅಪರೂಪದ ಅನುಭೂತಿಯಾಗಿದೆ. ಮೊದಲ ಬಾರಿಗೆ ತಾಯಿಯಾಗುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಹೆಣ್ಣುಮಕ್ಕಳಿಗೆ ಏನೇನೋ ಡೌಟ್ ಬರುವುದು ಉಂಟು. ಕೆಲವೊಮ್ಮೆ ಚಿತ್ರ-ವಿಚಿತ್ರ ಡೌಟ್ಗಳೂ ಹತ್ತಿರ ಸುಳಿಯುವುದು ಉಂಟು. ಅದರಲ್ಲಿಯೂ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಆಗಿರೋ ಈ ಜಮಾನಾದಲ್ಲಿ ಒಂದಿಷ್ಟು ಲೈಕ್ಸ್, ವ್ಯೂವ್ಸ್ಗಾಗಿ ಎಗ್ಗಿಲ್ಲದೇ ಬಾಯಿಗೆ ಬಂದಂತೆ ವಿಡಿಯೋ ಮಾಡಿ ಹಾಕುವವರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ, ಎಲ್ಲರೂ ಜಾಲತಾಣದ ವೈದ್ಯರಾಗುತ್ತಿರುವ ಕಾರಣದಿಂದ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಸಂಕಷ್ಟ ಹಲವರಲ್ಲಿ ಇರುತ್ತದೆ. ಇದು ಗರ್ಭಿಣಿಯರಿಗೂ ಅನ್ವಯ.
ಗರ್ಭಾವಸ್ಥೆಯಲ್ಲಿ ಅವರವರ ದೇಹ ಪ್ರಕೃತಿಗೆ ತಕ್ಕಂತೆ ಆಹಾರಗಳ ಬಗ್ಗೆ, ವ್ಯಾಯಾಮಗಳ ಕುರಿತು... ಹೀಗೆ ವಿಭಿನ್ನ ವೈದ್ಯರು ವಿಭಿನ್ನರೀತಿಯ ಪ್ರಿಸ್ಕ್ರಿಪ್ಷನ್ ಕೊಡುವುದು ಇದೆ. ಆದರೆ ಕೆಲವೊಂದು ಮಾತುಗಳು ಮಾತ್ರ ಎಲ್ಲರಿಗೂ ಅನ್ವಯ ಆಗುತ್ತದೆ. ಗರ್ಭಿಣಿಯಾಗಿದ್ದಾಗ ಆರೋಗ್ಯಕರ ಮಗು ಹುಟ್ಟುಬೇಕು ಎಂದೇ ಎಲ್ಲಾ ಅಮ್ಮಂದಿರೂ, ಅವರ ಕುಟುಂಬದವರೂ ಬಯಸುವುದು. ಹಲವರು ತಮಗೆ ಹುಟ್ಟುವ ಮಗುವಿನ ಬಣ್ಣದ ಬಗ್ಗೆ ಯೋಚನೆ ಮಾಡುವುದು ಇದ್ದೇ ಇದೆ. ಇದೇ ಕಾರಣಕ್ಕೆ ತಮ್ಮ ಮಗು ಸುಂದರವಾಗಿ ಹುಟ್ಟಲು ಏನು ತಿನ್ನಬೇಕು, ಏನು ಕುಡಿಬೇಕು, ಏನು ತಿನ್ನಬಾರದು ಎಂದೆಲ್ಲಾ ಜಾಲತಾಣದಲ್ಲಿ ತಡಕಾಡುವುದು ಇದೆ. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಹೇಳುವುದರಿಂದ ಕನ್ಫ್ಯೂಸ್ ಆಗುತ್ತಾರೆ. ಈ ಬಗ್ಗೆ ಪ್ರಸೂತಿ ತಜ್ಞೆ ಡಾ.ಶಿಲ್ಪಾ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಕಾಫಿ ಕುಡಿದರೆ ಹುಟ್ಟುವ ಮಗು ಕಪ್ಪಾಗಿ ಹುಟ್ಟುತ್ತದೆ ಎನ್ನುವ ಭಯ ಹಲವರಲ್ಲಿ ಇದ್ದರೆ, ಕೇಸರಿ ತಿಂದರೆ ಬಿಳಿಯಾಗಿ ಹುಟ್ಟುತ್ತದೆ, ಇದು ತಿಂದರೆ, ಅದನ್ನು ಕುಡಿದರೆ ಹೀಗೆ ಹುಟ್ಟುತ್ತದೆ, ಹಾಗೆ ಹುಟ್ಟುತ್ತದೆ ಎನ್ನುವ ಕಲ್ಪನೆ ಇದೆ ಎಂದಿರುವ ವೈದ್ಯೆ, ಈ ಕುರಿತು ತಮ್ಮ ಯುಟ್ಯೂಬ್ನಲ್ಲಿ ಮಾಹಿತಿ ನೀಡಿದ್ದಾರೆ. ಹಲವರು ನನಗೆ ಬಂದು ಇದರ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಗರ್ಭಾವಸ್ಥೆಯಲ್ಲಿ ಕಾಫಿ ಕುಡಿದರೆ ಮಗು ಕಪ್ಪಗೆ ಹುಟ್ಟುತ್ತದೆ ಎನ್ನುತ್ತಾರೆ, ಇದು ನಿಜವೇ ಎಂದು ಪ್ರಶ್ನಿಸುತ್ತಾರೆ ಎಂದಿರುವ ವೈದ್ಯೆ, ಈ ಬಗ್ಗೆ ಉತ್ತರ ನೀಡಿದ್ದಾರೆ.
ಮಗುವಿನ ಬಣ್ಣ ಜೆನೆಟಿಕ್ ಮೇಲೆ ಬರುವುದು. ಅದು ಅರಿಶಿಣಿ, ಕೇಸರಿ, ಕಾಫಿ, ಟೀಯಿಂದ ಬರುವಂಥದ್ದಲ್ಲ. ಕಾಫಿ ಕುಡಿದರೆ ಕಪ್ಪಗೆ ಹುಟ್ಟುತ್ತದೆ, ಕೇಸರಿ ತಿಂದರೆ ಬಿಳಿಯಾಗಿ ಹುಟ್ಟುತ್ತದೆ ಎನ್ನುವುದೆಲ್ಲವೂ ಸುಳ್ಳು. ಅಪ್ಪ-ಅಮ್ಮನ ಜೆನೆಟಿಕ್ (ಅನುವಂಶೀಯತೆ)ಯಿಂದ ಅದು ಬರುವುದೇ ವಿನಾ ಕುಡಿಯುವುದರಿಂದ ಅಲ್ಲ ಎಂದಿರುವ ಅವರು, ನೀವು ಗರ್ಭಿಣಿಯಾಗಿದ್ದಾಗ ಮೊದಲೇ ಏನನ್ನು ಸೇವನೆ ಮಾಡುತ್ತಿದ್ದರೋ ಅದನ್ನು ಮಿತಿಯಲ್ಲಿ ಇಟ್ಟುಕೊಂಡು ಸೇವಿಸಿದರೆ ಏನೂ ಸಮಸ್ಯೆ ಇಲ್ಲ. ಅದು ಮಗುವಿನ ಬಣ್ಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.